ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವತಿಯಿಂದ ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ನಿಯಮ ಮತ್ತು ನಿಬಂಧನೆಗಳನ್ನು ಅನುಷ್ಠಾನಗೊಳಿಸಲ ಕ್ರಮವಹಿಸಲಾಗಿರುತ್ತದೆ.
ಆಹಾರ ಪದಾರ್ಥಗಳ ಕಚ್ಚಾ ಸಾಮಾಗ್ರಿಗಳು/ ತಯಾರಾದ ಆಹಾರ ಪದಾರ್ಥಗಳು ಸೇವಿಸಲು ಸುರಕ್ಷಿತವಾಗಿದೆಯೇ ಎಂಬುದನ್ನು ಅವುಗಳನ್ನು ಸ್ಥಳದಲ್ಲಿಯೇ ಖಾತ್ರಿ ಪಡಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಎಫ್‍ಎಸ್‍ಎಸ್‍ಎಐ ರವರು ಅನುಮೋದಿಸಿರುವ ಮ್ಯಾಜಿಕ್ ಬಾಕ್ಸ್ ಮತ್ತು ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಬಳಸಿ ಕೆಲವು ಸುಲಭ ತ್ವರಿತ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ಬೆಂಗಳೂರಿನ ಕೆಲವು ಪ್ರತಿಷ್ಠಿತ ಮಾಲ್‍ಗಳಲ್ಲಿ ಅಕ್ಟೋಬರ್ 25 ರಿಂದ ಪ್ರಾರಂಭಿಸಲು ತೀರ್ಮಾನಿಸಿದೆ.
ಬೆಂಗಳೂರಿನ ಮಾಲ್‍ಗಳಾದ ವೈಷ್ಣವಿ ಸಫೈರ್ ಸೆಂಟರ್ ತುಮಕೂರು ರಸ್ತೆ, ಎಲಿಮೆಂಟ್ಸ್ ಮಾಲ್ ಥಣಿಸಂದ್ರ, ಫೀನಿಕ್ಸ್ ಮಾಲ್ ಆಫ್ ಏಷ್ಯಾ ಬಳ್ಳಾರಿ ರಸ್ತೆ, ಮೀನಾಕ್ಷಿ ಮಾಲ್ ಬನ್ನೇರುಘಟ್ಟ ರಸ್ತೆ, ಶೋಭಾ ಮಾಲ್ ಚರ್ಚ್ ಸ್ಟ್ರೀಟ್, ಸೆಂಟ್ರಲ್ ಮಾಲ್ ಬೆಳ್ಳಂದೂರು, ಗೋಪಾಲನ್ ಸಿಗ್ನೇಚರ್ ಮಾಲ್ ಬೆನ್ನಿಗಾನಹಳ್ಳಿ, ನೆಕ್ಸಸ್ ಫೋರಂ ಮಾಲ್ ಕೋರಮಂಗಲ, ಭಾರತೀಯ ಮಾಲ್ ಆಫ್ ಬೆಂಗಳೂರು ಥಣಿಸಂದ್ರ ಹಾಗೂ ಜಿಟಿ ವಲ್ರ್ಡ್ ಮಾಲ್ ಮಾಗಡಿ ರಸ್ತೆ ಇಲ್ಲಿ ಪ್ರಾಯೋಗಿಕವಾಗಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕರು ಈ ಮಾಲ್‍ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಸ್ಥಾಪಿಸಲಾಗುತ್ತಿರುವ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನ ಬಳಸುವ ಆಹಾರ ಪದಾರ್ಥಗಳಾದ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ ಟೀ-ಪುಡಿ, ಉಪ್ಪು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಪನೀರ್, ಬೆಣ್ಣೆ, ತರಕಾರಿಗಳು, ಧನಿಯಾಪುಡಿ, ಕುಡಿಯುವ ನೀರು ಇತ್ಯಾದಿ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಗಳಿಂದ ಖಚಿತಪಡಿಸಿಕೊಳ್ಳಬಹುದಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಈ ಕುರಿತಂತೆ ಜನಸಾಮಾನ್ಯರಲ್ಲಿ ಜಾಗೃತಿಯೂ ಸಹ ದಿನದಿಂದ ದಿನಕ್ಕೆ, ಹೆಚ್ಚಾಗುತ್ತಾ ಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಸಮಯ ಮತ್ತು ಹಣದ ಉಳಿತಾಯದ ಕಡೆ ಗಮನಕೊಟ್ಟು ಆಹಾರ ತಯಾರಿಕೆಗೆ ದಿನ ನಿತ್ಯ ಬೇಕಾಗುವ ಕಚ್ಚಾ ವಸ್ತುಗಳು ಒಂದೇ ಕಡೆ ಸಿಗುವಂತಹ ದೊಡ್ಡ ದೊಡ್ಡ ಆಹಾರ ಮಳಿಗೆಗಳಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯವಾಗಿದೆ. ಶುದ್ಧವಾದ ಆಹಾರ ಪಡೆಯುವುದು ಪ್ರತಿ ಗ್ರಾಹಕರ ಹಕ್ಕಾಗಿದ್ದರೂ ಸಹ ನಾವು ಸೇವಿಸುವ ಆಹಾರದ ಸುರಕ್ಷತೆಯ ಬಗ್ಗೆ, ಮಾಹಿತಿ ಇಲ್ಲದೆ ದಿನ ನಿತ್ಯ ಸೇವಿಸುತ್ತಿದ್ದೇವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವತಿಯಿಂದ ಜನಸಾಮಾನ್ಯರಲ್ಲಿ ಜಾಗೃತಿ, ಅರಿವು ಮತ್ತು ಆತ್ಮವಿಶ್ವಾಸ ತುಂಬಲು ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿನೂತನವಾಗಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಸಹಕಾರ, ಪೆÇ್ರೀತ್ಸಾಹದೊಂದಿಗೆ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಂಡು, ಆಹಾರ ಕಲಬೆರಕೆಯ ನಿರ್ಮೂಲನೆಗಾಗಿ ಕೈ ಜೋಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu