ಕನ್ನಡ ನಾಡು | Kannada Naadu

ನವೆಂಬರ್ 14 ರಿಂದ 20ರ ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹ : ಸಹಕಾರ ಸಚಿವ ಕೆ.ಎನ್.ರಾಜಣ್ಣ

23 Oct, 2024



ಬೆಂಗಳೂರು : ನವೆಂಬರ್ 14 ರಿಂದ 20ರ ವರೆಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮನ್ನು ಪ್ರತಿ ವರ್ಷದಂತೆ ಈ ವರ್ಷವು ಸಹ  ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕುರಿತ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ದೇಶದ ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರು ಹುಟ್ಟು ಹಬ್ಬದ ಅಂಗವಾಗಿ  ರಾಜ್ಯದಲ್ಲಿ ಎಲ್ಲಾ ಸಹಕಾರಿಗಳು ಸೇರಿ ಹಬ್ಬದ ರೀತಿಯಲ್ಲಿ ಸಹಕಾರ ಸಪ್ತಾಹವನ್ನು ಆಚರಿಸಲಾಗುವುದು ಎಂದರು.

ಏಳು ದಿನ ನಡೆಯುವ ಈ ಸಹಕಾರ ಸಪ್ತಾಹದಲ್ಲಿ ಪ್ರತಿ ದಿನ ಸಹಕಾರಿ ಸಪ್ತಾಹದ ಬಗ್ಗೆ ಪ್ರಸ್ತಾಪಿಸಿ, ಪರಿಣಿತರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು ಹಾಗೂ ರಾಜ್ಯದ ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯದ ಸಹಕಾರಿಗಳು ಉನ್ನತ ಮಟ್ಟದಲ್ಲಿ ರಾಜ್ಯದ ಜನತೆಯ ಸೇವೆ ಮಾಡಬೇಕು. ಎಲ್ಲಾ ಗ್ರಾಮದವರಿಗೂ ಸಹಕಾರ  ಸಪ್ತಾಹದ  ಬಗ್ಗೆ ಅರಿವು ಮೂಡಿಸಬೇಕು. ಸಹಕಾರಿ ಆಂದೋಲನ ಜನರ ಆಂದೋಲನವಾಗಿ ಪರಿವರ್ತನೆಯಾಗಬೇಕೆಂದರು.

ಕಾರ್ಯಕ್ರಮಕ್ಕೆ ಸರ್ಕಾರ ಹಣವನ್ನು ವೆಚ್ಚ ಮಾಡುವುದಿಲ್ಲ.  ಸಹಕಾರಿಗಳೇ ಕಾರ್ಯಕ್ರಮದ ವೆಚ್ಚವನ್ನು ಭರಿಸಿ ಕಾರ್ಯಕ್ರಮ ಆಯೋಜಿಸಲಿರುವರು. ಈ ಸಹಕಾರ ಸಪ್ತಾಹದಲ್ಲಿ ಮಾನ್ಯ  ಮುಖ್ಯಮಂತ್ರಿಗಳು ಸಹ ಭಾಗವಹಿಸಲಿದ್ದು, ಕಾರ್ಯಕ್ರಮದ ಸ್ಥಳವನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕರು, ಮಾಜಿ ಸಚಿವರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by