ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಬಹುತೇಕ ಈ ಸ್ಥಳ ಅಂತಿಮ..
19 Oct, 2024
ಬೆಂಗಳೂರು: ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕು ಎನ್ನಲಾದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಈಗ ವೇಗ ಪಡೆದುಕೊಂಡಿದೆ. ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿ ಮಾಡಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ, ಡಿಸಿಎಂ ಡಿ.ಕೆ. ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ನಗರದಲ್ಲಿ ಐದು ವಿವಿಧ ಕಡೆಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದ್ದು, ಮುಂದಿನ ವಾರದೊಳಗೆ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಡಾಬಸ್ ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಐದು ಸ್ಥಳಗಳನ್ನು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ. ಇಂದು ನಡೆದ ಸಭೆಯಲ್ಲಿ ಮತ್ತೊಂದು ಸ್ಥಳದ ಬಗ್ಗೆ ಕೂಡ ಚರ್ಚೆ ನಡೆಸಲಾಗಿದ್ದು, ಇನ್ನೊಂದು ವಾರದಲ್ಲಿ ಸ್ಥಳ ನಿಗದಿ ಮಾಡಲಾಗುವುದು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಈಗ ಗುರುತಿಸಿರುವ ಐದು ಸ್ಥಳಗಳಲ್ಲಿ ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75 ಪಕ್ಕದಲ್ಲಿರುವ ಸ್ಥಳವನ್ನೇ ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಲ್ಲಾ ದೃಷ್ಟಿಯಿಂದಲೂ ಈ ಸ್ಥಳವೇ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಬೆಂಗಳೂರಿಗೆ ಉತ್ತಮ ರಸ್ತೆ ಸಂಪರ್ಕವಿದ್ದು, ನೆಲಮಂಗಲದವರೆಗೆ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಕೂಡ ಇರುವುದರಿಂದ ಸಂಪರ್ಕ ಕೂಡ ಸುಲಭವಾಗಲಿದೆ. ಇಲ್ಲಿ ಗುರುತಿಸಿರುವ ಸ್ಥಳದಲ್ಲಿ ಸರ್ಕಾರಿ ಜಮೀನು ಕೂಡ ಹೆಚ್ಚಾಗಿರುವ ಕಾರಣ, ಖಾಸಗಿ ಜಮೀನಿಗೆ ನೀಡಬೇಕಾದ ವೆಚ್ಚದ ಪ್ರಮಾಣ ಕೂಡ ಕಡಿಮೆಯಾಗುವುದರಿಂದ ಸರ್ಕಾರ ಈ ಸ್ಥಳವನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರು ತುಮಕೂರು ಬಳಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿ ಎಂದು ಒತ್ತಾಯಿಸಿದ್ದಾರೆ. ತುಮಕೂರು ಈಗಾಗಲೇ ಏಷ್ಯಾದ ಅತಿದೊಡ್ಡ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ, ಹಂತ ಹಂತವಾಗಿ 20,000 ಎಕರೆಗಳಲ್ಲಿ ಕೈಗಾರಿಕಾ ಪ್ರದೇಶ ಹರಡಿಕೊಂಡಿದೆ. ಈಗಾಗಲೇ 150ಕ್ಕೂ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗಿದೆ. ಜಪಾನಿಸ್ ಟೌನ್ ಶಿಪ್ ಕೆಲಸ ಕೂಡ ನಡೆಯುತ್ತಿದೆ. ಎಚ್ ಎಎಲ್ ನ ಹೆಲಿಕಾಪ್ಟರ್ ಕಾರ್ಖಾನೆ ಮತ್ತು ಉತ್ಪಾದನೆ ನಿಟ್ಟೂರು ಬಳಿ ಪ್ರಾರಂಭವಾಗಿದೆ ಇದೆಲ್ಲವನ್ನೂ ಪರಿಗಣಿಸಿ ತುಮಕೂರು ಸಮೀಪ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಉದ್ದಕ್ಕೂ ನೆಲಮಂಗಲ ಮತ್ತು ಕುಣಿಗಲ್ ನಡುವಿನ ಪ್ರದೇಶವನ್ನು ಹೊಸ ವಿಮಾನ ನಿಲ್ದಾಣಕ್ಕೆ ಅತ್ಯಂತ ಸೂಕ್ತ ಸ್ಥಳವೆಂದು ಗುರುತಿಸಲಾಗಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಬೇಕಾಗಿದೆ ಎಂದು ಹೇಳಿದರು. ಬೆಂಗಳೂರು, ಭಾರತದ ಮೂರನೇ ಅತಿದೊಡ್ಡ ನಗರವಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳು ಮುಂದಿನ ವರ್ಷದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ತೆರೆಯಲು ಸಿದ್ಧವಾಗಿದೆ, ಬೆಂಗಳೂರು ಕೂಡ ಇದೇ ರೀತಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಬೇಕಾಗಿದ್ದು ಈಗಿನಿಂದಲೇ ಯೋಜನೆ ರೂಪಿಸಲಾಗುತ್ತಿದೆ.
Publisher: ಕನ್ನಡ ನಾಡು | Kannada Naadu