ಕನ್ನಡ ನಾಡು | Kannada Naadu

ಧರೆಯಲ್ಲಿ ನ್ಯಾಯದ ಸ್ಥಾಪನೆಗಾಗಿ ಧರೆಗೆ ಬಂದಿದ್ದ ಮಹಾವಿಷ್ಣು...

26 Aug, 2024




  •    ದುರುಳರ ಸಂಹಾರ, ಸಜ್ಜನರ ಉದ್ಧಾರದ  ಉದ್ದೇಶದಿಂದ ಶ್ರೀಮಹಾವಿಷ್ಣು ವಾಸುದೇವ ನಾಗಿ ಧರೆಗಿಳಿದ ದಿನ..
  •   ಈ ಸುದಿನದಂದು, ಶಿಷ್ಟರ ರಕ್ಷಕನಾಗಿ, ದುಷ್ಟರ ಶಿಕ್ಷಕನಾಗಿ ದ್ವಾಪರಯುಗದಲ್ಲಿ ನ್ಯಾಯಭಾರ ಮಾಡಿದ ಪ್ರಭುವನ್ನು ನೆನೆಯೋಣ ಬನ್ನಿ...

 ಹೌದು, ಈತ ನೆನೆದವರ ಮನದಲ್ಲಿ ತಂಪೆರದವ. ಕಷ್ಟ ಎಂದವರ ಕಾಪಾಡಿದವ, ಧಾರ್ಷ್ಟ್ಯ ತೋರಿದವರ ಕಾಡಿದವ. ಅಣ್ಣ ಎಂದವಳ ಮಾನ ಕಾಪಾಡಿದವ, ಪ್ರಭು ಎಂದವರ ಕೈ ಹಿಡಿದವ. ಅಷ್ಟೈಶ್ವರ್ಯದ ಅಹಂಕಾರದಿಂದ ಮೆರೆದ ದುರ್ಯೋಧನನ ಅರಮನೆಯತ್ತ ಕಣ್ಣೆತ್ತಿ ನೋಡದವ, ಗುಡಿಸಿಲಲ್ಲಿದ್ದ ಭಕ್ತ ವಿದುರನ ಕುಟೀರದಲ್ಲಿ ಔತಣ ಪಡೆದವ. ತಾಯಿಗೆ ಬಾಯಲಿ ಜಗವ ತೋರಿದವ, ಬಡವನಾದರೂ ಪ್ರೀತಿಯೆಂಬ ಅವಲಕ್ಕಿಯ ಗಂಟು ತಂದ ಸುಧಾಮ ನ ಪಾದಕ್ಕೆ ಸಂಕೋಚವಿಲ್ಲದೆ ನೀರೆರೆದವ. ನಾರಿಯರನು ನರಕದಂತಹ ಸೆರೆಯಲ್ಲಿರಿಸಿದ್ದ ನರಕಾಸುರನ ನೆತ್ತರು ಹರಿಸಿದವ..ಹೀಗೆ ಒಂದೇ ಎರಡೇ. ಶ್ರೀರುಕ್ಮಿಣಿಪತಿಯ ಸುಕಾರ್ಯಗಳ ಹೊಗಳಲು ಸಹಸ್ರಫಣಿ(ಸಾವಿರ ಹೆಡೆ) ಶೇಷನಿಗೂ ಸಾಧ್ಯವಿಲ್ಲವಂತೆ, ಇನ್ನು ನಾನಾದರೋ ನಾಲ್ಕಕ್ಷರ ಬಾರದವ, ನಿತ್ಯವೂ ನನ್ನನು ಅಕ್ಕರೆಯಿಂದ ಕಾಯೆಂದು ಕಾಯಜನಯ್ಯನ ಬೇಡುವ ನನ್ನ ನಾಲಿಗೆಯಿಂದ ಸಾಧ್ಯವೇ... ಆದರೂ, ತನ್ನನು
ನುತಿಸುವ ತನ್ನವರಿಗೆ ಮುಕ್ತಿ ಕರುಣಿಸುವ ಕಂಜದಳಾಯತಾಕ್ಷ ನ ಕರುಣೆ ಪಡೆಯಲೋಸುಗ, ನಾಲ್ಕಕ್ಷರ ಬರೆಯುವೆ..

  ಇಂತಹಾ ಪ್ರಭುವ ಕಾಣೆನೋ, ಲೋಕದಲ್ಲಿ ಅತಿಸುಂದರನು, ಲೋಕ ವಿಖ್ಯಾತೆ ಸುಂದರಿಯ ವರಿಸಿದವನು, ಸಖನ ಪ್ರಾಣ ಉಳಿಸಲೆಂದೇ ಪ್ರಾಣನನ್ನು ರಥದ ಮೇಲಿರಿಸಿಕೊಂಡವನು. ಅಷ್ಟ ಮಹಿಷಿಯರ ಪಟ್ಟದರಸನು, ಪೊಡವಿಗೊಡೆಯನು, ಶ್ರೀಮದಾಚಾರ್ಯರಿಗೆ ಒಲಿದು, ಕಡಲ ತಡಿಯಲಿ ನಿಂತವನು. ಸದಾ ಸಜ್ಜನರನು ಅನುಗ್ರಹಿಸುತ್ತಿರುವ, ಶ್ರೀಮಧ್ವಪತಿ ಶ್ರೀಕೃಷ್ಣನನ್ನು ದೇವಾದಿ ದೇವತೆಗಳು, ಋಷಿ ಮುನಿಗಳು, ಯತಿಗಳು, ದಾಸರು ಹಾಡಿ ಹೊಗಳಿದ್ದಾರೆ. 
 ವ್ಯಾಸ(ವೇದವ್ಯಾಸರು) ಸಾಹಿತ್ಯ ಹಾಗೂ ದಾಸ (ಶ್ರೀಮದಾಚಾರ್ಯರು)ಸಾಹಿತ್ಯವನ್ನು  ವ್ಯಾಸಪೀಠದ ಮೇಲಿಟ್ಟು ಪೂಜಿಸಿದ ಶ್ರೀವ್ಯಾಸರಾಜರಂತೂ,
        ಕೃಷ್ಣ ಕೃಷ್ಣ ಕೃಷ್ಣಯೆಂದು ಮೂರುಬಾರಿ ನೆನೆಯಿರೊ | 
ಸಂತುಷ್ಟವಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನೋ||  ಎಂದಿದ್ದಾರೆ.
      ದಾಸ ಶ್ರೇಷ್ಠರಾದ ಶ್ರೀಪುರಂದರ ದಾಸರು,  
ನರಜನ್ಮ ಬಂದಾಗ |
ನಾಲಿಗೆ ಇದ್ದಾಗ ಕೃಷ್ಣ ಎನಬಾರದೆ||
 ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ|
ಕೃಷ್ಣ ಎನಬಾರದೆ ||
ಎನ್ನುತ್ತಾರೆ ಮತ್ತೊಬ್ಬ ದಾಸ ಶ್ರೇಷ್ಠರಾದ ಶ್ರೀಕನಕದಾಸರಾದರೋ,  
ಬಾರೋ ಕೃಷ್ಣಯ್ಯಾ ನಿನ್ನ ಭಕ್ತರ ಮನೆಗೀಗ ರಂಗಯ್ಯ|
ಬಾರೋ ನಿನ್ನ ಮುಖ ತೋರೊ ನಿನ್ನ ಸರಿಯಾರೋ ಜಗಧರ ಶೀಲನೇ|
ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ ಧಿಮಿ ಧಿಮಿ ಧಿಮಿಕೆನುತ ಪೊಂಗೊಳಲನೂದುತ ಬಾರಯ್ಯ|| ಎಂದು ನೇರವಾಗಿ ಭಕ್ತರ ಮನೆಗೇ ಕರೆದಿದ್ದಾರೆ.
 ಹೀಗೆ ಜಗದಗಲಕ್ಕೂ ಸಂತರು, ಸಜ್ಜನರಿಂದ ವಂದಿತನಾಗಿ ಸ್ತುತಿ ಮಾಡಿಸಿಕೊಳ್ಳುವ ಜಗದಾನಂದಕರನಾದ ಜಗದ್ಗುರುವಾದ ಮಹಾಪ್ರಭುವಿನ ನಾಮ ನೆನೆಯದ ಜಿಹ್ವೆ(ನಾಲಿಗೆ) ಇದ್ದು ಸುಡುಗಾಡಿನಂತೆ ಅಲ್ಲವೇ. 
 ಹಾಗಾಗಿ ಈ ದಿನ ವಿಶೇಷವಾಗಿ, ಉಳಿದಂತೆ ಸಾಮಾನ್ಯವಾಗಿ, ಹರಿ ಯನ್ನು ಸ್ಮರಿಸೋಣ, ಹರಿನಾಮ ಪಾಡೋಣ, ಶ್ರೀಹರಿ ಸೇವೆ ಮಾಡೋಣ....

 ಭೂ ಭಾರ ಹರಣ ಮಾಡಲು ಭುವಿಯಲ್ಲವತರಿಸಿದ ಭೂ ರಮಾ ರಮಣ  ನಾದ ಶ್ರೀಕೃಷ್ಣ ದೇವರು ನಮ್ಮೆಲ್ಲರನ್ನು ಅನುಗ್ರಹಿಸಲಿ.

ವಸುದೇವ ಸುತಂ ದೇವಂ ಕಂಸ ಚಾಣೂರಮರ್ದನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥ 

   ದುರಹಂಕಾರ ಹಾಗೂ ಕ್ರೂರ ಗುಣವೇ ಮೈವೆತ್ತಂತಿದ್ದ ಮಾನವ ರೂಪದ ಅನೇಕ ದುರುಳರು, ಭೂಮಿಯ ಮೇಲೆ ಹುಟ್ಟಿ ಧರಣಿಗೆ ಭಾರವಾಗಿದ್ದರು. ಇಂತಹ ದುಷ್ಟರ ಮರ್ದನ, ಶಿಷ್ಟರ ವರ್ಧನಕ್ಕಾಗಿ ಶ್ರೀಹರಿ ಅವತರಿಸಿದ ದಿನವಿದು.

   ವಿಧಿ ಲಿಖಿತದಂತೆ ವಸುದೇವ ಹಾಗೂ ದೇವಕಿಯರ ಗರ್ಭದಲ್ಲಿ, ಶ್ರಾವಣಮಾಸ ಬಹುಳ ಅಷ್ಟಮಿ, ರೋಹಿಣಿ ನಕ್ಷತ್ರದಿಂದ ಕೂಡಿದ ದಿನ ಮಧ್ಯರಾತ್ರಿ ಶ್ರೀಹರಿ ವಾಸುದೇವ(ಶ್ರೀಕೃಷ್ಣ)ನಾಗಿ ಭುವಿಯಲ್ಲಿ ಅವತರಿಸಿದ. ಈ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. 

  ಶ್ರೀಮಹಾವಿಷ್ಣು ದುಷ್ಟರ ಸಂಹಾರಕ್ಕಾಗಿ ಎತ್ತಿದ ದಶಾ(ಹತ್ತು)ವತಾರಗಳಲ್ಲಿ ಶ್ರೀಕೃಷ್ಣ ದೇವರ ಅವತಾರ ಎಂಟನೆಯದು. 

   ಮಥುರಾ ನಗರದಲ್ಲಿ ರಾಜ ಉಗ್ರಸೇನ ಆಡಳಿತ ನಡೆಸುತ್ತಿದ್ದ. ಆದರೆ ಈತನ ಮಗ ದುಷ್ಟನಾದ ಕಂಸ, ದುರಾಸೆಯಿಂದ ತಂದೆಯನ್ನೇ ಬಂಧನದಲ್ಲಿಟ್ಟು ತಾನೇ ರಾಜನಾದ.
  ಒಂದು ದಿನ ಕಂಸ ತನ್ನ ತಂಗಿ ಹಾಗೂ ಭಾವನನ್ನು ರಥದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ. ಆಗ ಆಶರೀರವಾಣಿಯೂ, ನಿನ್ನ ತಂಗಿ ದೇವಕಿ ಯ ಗರ್ಭದಲ್ಲಿ ಹುಟ್ಟುವ ಎಂಟನೇ ಗಂಡು ಶಿಶುವಿನಿಂದ ನಿನಗೆ ಮೃತ್ಯು ಎಂದು ಹೇಳಿತು. ಇದನ್ನು ನಂಬಿದ ಕಂಸ,: ಸಹೋದರಿ ದೇವಕಿ ಮತ್ತು ಆಕೆಯ ಪತಿ ವಸುದೇವ ರನ್ನು ಬಂಧಿಸಿ ಕಾರಾಗೃಹದಲ್ಲಿ ಇಡುತ್ತಾನೆ. 
  ಈ ದಂಪತಿಗೆ ಹುಟ್ಟಿದ ಏಳು ಮಕ್ಕಳನ್ನು ಕ್ರೂರಿ ಕಂಸ ನಿರ್ದಯೆಯಿಂದ ಕೊಂದು ಹಾಕಿದ. ಎಳೆ ಕೂಸನ್ನು ಮೇಲಕ್ಕೆ ಎಸೆಯುತ್ತಿದ್ದ ಖೂಳ, ಆ ಮಗು ಭುವಿಯತ್ತ ಬರುತ್ತಿದ್ದಂತೆ ತನ್ನ ಹರಿತವಾದ ಕತ್ತಿಯನ್ನು ಅಡ್ಡ‌ಹಿಡಿಯುತ್ತಿದ್ದ. ಕತ್ತಿಯ ಮೇಲೆ ಬಿದ್ದ ಹಸುಕಂದನ ದೇಹ ಛಿದ್ರಗೊಳ್ಳುತ್ತಿತ್ತು.

  ಏಳು ಮಂದಿ ಹಸುಗೂಸುಗಳ ಹತ್ಯೆ ಕಣ್ಣ ಮುಂದೆಯೇ ನಡೆದದ್ದನ್ನು ಕಂಡ ದೇವಕಿ, ವಸುದೇವರು ಮಮ್ಮಲ ಮರುಗಿದರು. ಇದರಿಂದ ಸಾಕಷ್ಟು ಯಾತನೆ ಅನುಭವಿಸಿದ ದಂಪತಿ, ಶ್ರೀಹರಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರು. ಎಂಟನೇ ಮಗುವನ್ನು ಉದ್ಧರಿಸುವಂತೆ ಬೇಡಿದರು.
   ಶ್ರೀಹರಿ, ಭಕ್ತರ ಮೇಲಿನ ಕರುಣೆಯಿಂದ ತಾನೇ ಎಂಟನೇ ಭ್ರೂಣವಾಗಿ ದೇವಕಿ ಗರ್ಭ ಸೇರಿದ. ಹುಟ್ಟಿದ ಎಂಟನೇ ಮಗು ತನಗೆ ಕಂಟಕನಾಗುವನೆಂಬ ಆತಂಕದಿಂದ ಕಂಸ ಈ ದಂಪತಿಯಿದ್ದ ಸೆರೆಮನೆಗೆ ಭದ್ರತೆ ಹೆಚ್ಚಿಸಿದ. 
    ದೇವಕಿ ದೇವಿಯ ಗರ್ಭಕ್ಕೆ ನವಮಾಸ ತುಂಬಿತು. ಅಂದು ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮಿಯ ದಿನ. ಎಲ್ಲೆಡೆ ಧೋ ಎಂದು ಸುರಿಯುವ ಜೋರು ಮಳೆ. ವಸುದೇವ ದೇವಕಿಯರಿದ್ದ ಕೋಣೆಯಲ್ಲಿ ದೀಪವಿಲ್ಲದೆ ಕತ್ತಲೆ, ನೀರವ ಮೌನ. ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆಯೇ ದೇವಕಿ ದೇವಿಗೆ ಪ್ರಸವ ವೇದನೆ ಆರಂಭವಾಯಿತು. ಇತ್ತ ಮಳೆ ಕಡಿಮೆಯಾಯಿತು, ಅತ್ತ ಚಂದ್ರೋದಯವಾಗುತ್ತಿದ್ದಂತೆ ಕೊಣೆಯಲ್ಲಿ ಅರುಣ ಕಿರಣ ದಂತೆ ಪ್ರಕಾಶಮಾನವಾದ ಬೆಳಕು ಮೂಡಿತು.
   ಭಾಗವತರ ಭಾಗ್ಯೋದಯ ಎಂಬಂತೆ ಭಗವಂತ ದೇವಕಿ ಗರ್ಭದಿಂದ ಹೊರ ಬಂದಿದ್ದ. ಇದೇ ವೇಳೆ ಹೆತ್ತವರ ಅಂತಃ ಚಕ್ಷುಗಳಿಗೆ, ಸಶಂಖ ಚಕ್ರ, ಗದಾ, ಪದ್ಮ ಸಹಿತ ಚತುರ್ಭುಜ ರೂಪಿಯಾಗಿ ಪರಮಾತ್ಮ ದರ್ಶನ ನೀಡಿ ಅನುಗ್ರಹಿಸಿದ್ದ. 
    ಶ್ರೀಹರಿಯ ಅಮೋಘವಾದ ಅತ್ಯದ್ಭುತ ನಯನ ಮನೋಹರ ರೂಪ ಕಂಡು, ಮಾತಾಪಿತೃಗಳು ಆನಂದ ತುಂದಿಲರಾಗುತ್ತಾರೆ. ಸುರ ಸುಂದರನಾದ ಸ್ಫುರದ್ರೂಪಿ ಮಗು ಜನಿಸಿದ್ದರಿಂದ ಮನಸ್ಸು ಪುಳಕಗೊಂಡಿತ್ತು. ಆದರೆ ಪುತ್ರೋತ್ಸವದ ಸಂಭ್ರಮದಲ್ಲಿದ್ದವರಿಗೆ ಮರುಕ್ಷಣವೇ, ಆಸೆ ಕಮರಿ ಹೋಯಿತು. ಒಂದೆಡೆ ಮಗುವೆಂಬ ಮಮಕಾರ ಹೆಚ್ಚುತ್ತಿದ್ದೆ, ಮತ್ತೊಂದೆಡೆ ಕಂಸ ಮರುದಿನ ಮಗನನ್ನು ವಧಿಸುವನೆಂಬ ಆತಂಕ ಮನೆ ಮಾಡುತ್ತಿದೆ. ಹಸುಗೂಸಿನ ಸಾವನ್ನು ಮತ್ತೊಮ್ಮೆ ಕಣ್ಣಮುಂದೆಯೇ ನೋಡಬೇಕಲ್ಲವೇ ಎಂಬ ತೊಳಲಾಟ ಆರಂಭವಾಯಿತು. 

 ಆದರೆ ಹರಿಚಿತ್ತ ಸತ್ಯ ಎಂಬಂತೆ ಆಶರೀರವಾಣಿಯೂ, ಗೋಕುಲದಲ್ಲಿ ನಂದನ ಸತಿ ಯಶೋಧೆ ಗರ್ಭದಿಂದ ಇದೀಗ ತಾನೆ ಮಗು ಜನಿಸಿದೆ. ಇನ್ನೂ ಮಗುವಿನ ಲಿಂಗ ಪರಿಶೀಲನೆಯೂ ನಡೆದಿಲ್ಲ. ಈ ಮಗುವನ್ನು ಕೊಂಡೊಯ್ದು, ಅಲ್ಲಿಟ್ಟು ಆ ಮಗುವನ್ನು ತಾ ಎಂದು ಹೇಳಿತು. 


 ಈ ವೇಳೆಗಾಗಲೇ ಪವಾಡವೆಂಬಂತೆ ಕಾವಲುಗಾರರು ಮೈಮರೆತಿದ್ದರು. ವಸುದೇವ ದಂಪತಿಗೆ ತೊಡಿಸಿದ್ದ ಸಂಕೋಲೆಗಳು ಕಳಚಿ ಬಿದ್ದಿದ್ದವು. ಬಂಧೀಖಾನೆಯ ಬೀಗ ತನ್ನಂತಾನೆ ಬಿಚ್ಚಿಕೊಂಡಿತು, ಬಾಗಿಲು ಅದಾಗಿಯೇ ತೆರೆದುಕೊಂಡಿತು. ದೃತಿಗೆಡದ ವಸುದೇವ, ತಕ್ಷಣ, ಹಸುಗೂಸನ್ನು ಅಲ್ಲಿಯೇ ಇದ್ದ ಬುಟ್ಟಿಯಲ್ಲಿಟ್ಟುಕೊಂಡು ಹೊರನಡೆದ. ಹೊರಗಡೆ ಸಣ್ಣ ಮಳೆ, ಶ್ರೀಕೃಷ್ಣ ದೇವರ ಸೇವೆಗೆಂದೇ ಆಗಸದಲ್ಲಿ ಮೂಡಿದ ಚಂದಿರ ಸೊಗಸಾಗಿ ಬೆಳಗಲಾರಂಭಿಸಿದ.(ಈ ಋಣ ತೀರಿಸಲು ಭಾಗವತರು, ಕೃಷ್ಣಾಷ್ಟಮಿಯ ದಿನ ಚಂದ್ರನಿಗೆ ಅರ್ಘ್ಯ ನೀಡುತ್ತಾರೆ).

  ಚಂದ್ರನಿಗೆ ಧನ್ಯವಾದ ಹೇಳಿದ ವಸುದೇವ ಮುಂದಡಿಯಿಡುತ್ತಿದ್ದಂತೆ, ಮಳೆಹನಿಯಿಂದ ತಂದೆ ಮಗ ತೊಯ್ಯದಂತೆ ಆದಿಶೇಷ ಕೊಡೆಯಂತೆ ಹೆಡೆಯನ್ನೆತ್ತಿಕೊಂಡು ಹಿಂಬಾಲಿಸಿದ. ಯಮುನಾನದಿಯ ಉಬ್ಬರ ಇಳಿಯಿತು, ನೀರಲ್ಲೆ ನಡೆದು ಸಾಗಿದ ವಸುದೇವ ಗೋಕುಲ ಸೇರುವಷ್ಟರಲ್ಲಿ ಅಲ್ಲಿನವರೆಲ್ಲ ಮಾಯೆಯಿಂದ ಮೋಹಿತರಾಗಿದ್ದರು. ನೇರವಾಗಿ ಅರಮನೆಗೆ ತೆರಳಿ, ತನ್ನ ಗಂಡು ಕೂಸನ್ನು ಯಶೋಧೆಯ ಪಕ್ಕದಲ್ಲಿ ಮಲಗಿಸಿ. ಅಲ್ಲಿ ಮಲಗಿದ್ದ ಕೂಸನ್ನು ಬುಟ್ಟಿಯಲ್ಲಿಟ್ಟುಕೊಂಡು ಮಥುರಾನಗರದ ಬಂಧೀಖಾನೆಗೆ ಮರಳಿ ಬಂದು ಮಗುವನ್ನು ದುಃಖಿತಳಾಗಿದ್ದ ತನ್ನ ಪತ್ನಿಯ ಪಕ್ಕದಲ್ಲಿ ಮಲಗಿಸಿದ. 

 ಮಗು ಚೀರಿತು. ಆ ಕ್ಷಣವೇ, ಕೂಡಲೇ ಬಂಧೀಖಾನೆಯ ಬೀಗ ತನ್ನಷ್ಟಕ್ಕೆ ತಾನೆ ಹಾಕಿಕೊಂಡಿತು. ದಂಪತಿಯ ಕೈಗೆ ಸಂಕೋಲೆ(ಬೇಡಿ)ಗಳು ಬಿಗಿದುಕೊಂಡವು. ಭಟರು ಎಚ್ಚರಗೊಂಡರು, ಮಗು ಜನಿಸಿರುವ ವಿಚಾರ ಕಂಸನಿಗೆ ತಿಳಿಸಲು ಕೆಲವರು ಅರಮನೆಯತ್ತ ಓಡಿದರು. ಸುದ್ದಿ ತಿಳಿದ ಕಂಸ ಸ್ಥಳಕ್ಕೆ ಬಂದ, ಮಗುವನ್ನು ಕೊಡುವಂತೆ ಅಬ್ಬರಿಸಿ ಬೊಬ್ಬಿರಿದ. ತಕ್ಷಣ ಮಗುವಿನ ಲಿಂಗ ಪರಿಶೀಲನೆ ಮಾಡಿದ ದೇವಕಿ " ಅಣ್ಣಾ, ಇದು ಹೆಣ್ಣು ಮಗು. ಗಂಡು ಮಗುವಿನಿಂದ ನಿನಗೆ ಸಾವು ಎಂಬ ಆತಂಕ ಅಲ್ಲವೇ ಬಿಟ್ಟುಬಿಡು" ಎಂದು ಅಂಗಲಾಚಿ ಬೇಡಿದಳು.
 
   ಸಹೋದರಿಯ ಮಾತನ್ನು ಆಲಿಸದ ಕಂಸ ಮಗುವನ್ನು ಆಕೆಯಿಂದ ಕಸಿದುಕೊಂಡು ಕೊಲ್ಲಲು ಆಗಸದತ್ತ ಎಸೆದ. ಮೇಲೆ ಹಾರಿದ ಮಗು ಮತ್ತೆ ಕೆಳಗೆ ಬೀಳಲಿಲ್ಲ. ಇದರಿಂದ ಕಂಸನ ಆತಂಕ ಹೆಚ್ಚಿತು. ಈ ವೇಳೆ ಆ ಮಗು ಅಟ್ಟಹಾಸದಿ ನಗುತ್ತಾ  " ಎಲೈ ದುರುಳ ಕಂಸ, ನಾನು ಮಾಯಾ ಸ್ವರೂಪಳಾದ ಶ್ರೀದುರ್ಗೆ. ನಿನ್ನಿಂದ ನನ್ನನ್ನು ಕೊಲ್ಲಲು‌ ಸಾಧ್ಯವಿಲ್ಲ. ನಿನ್ನನ್ನು ಹತ ಮಾಡುವ ಮಗು ಗೋಕುಲದಲ್ಲಿ ಬೆಳೆಯುತ್ತಿದೆ. ನಿನ್ನ ಸಾವು ಖಚಿತ" ಎಂದು ಹೇಳಿ ಥಟ್ಟನೆ ಮಾಯವಾಯಿತು.


    ಇದು ಕಂಸನಲ್ಲಿ ಆತಂಕ ಹೆಚ್ಚಿಸಿತು. ಗೋಕುಲದ ನಂದನ ಸತಿ ಯಶೋಧೆ ಗಂಡು ಶಿಶುವಿಗೆ ಜನ್ಮ ನೀಡಿದ್ದಾಳೆಂಬ ಸುದ್ದಿಯನ್ನು ಗೂಢಾಚಾರರ ಮೂಲಕ ಅರಿತ. ಮಗುವನ್ನು ಕೊಲ್ಲಲು ಸಾಕಷ್ಟು ವಾಮಮಾರ್ಗಗಳ ಮೂಲಕ ಯತ್ನಿಸಿದ‌. ಕೊನೆಗೆ ಈ ಎಲ್ಲ ಹತ್ಯಾ ಪ್ರಯತ್ನಗಳಿಂದ ಸುಲಭವಾಗಿ ಪಾರಾದ ಪರಮಾತ್ಮ ತನ್ನ ಅಣ್ಣ ಯಶೋಧಾ ತನಯ ಬಲರಾಮ ದೇವರೊಂದಿಗೆ ಮಥುರೆಗೆ ಬಂದು ಕಂಸನನ್ನು ಕೊಂದು ಹಾಕಿದ. 
ಸೆರೆಯಲ್ಲಿದ್ದ ತಾತ ಉಗ್ರಸೇನನನ್ನು ಬಿಡುಗಡೆ ಮಾಡಿದ.

 ಮುಂದೆ ನಡೆದದ್ದೆಲ್ಲ ಪವಾಡಗಳೇ. ಚಾಣೂರ, ಮಲ್ಲ, ಶಿಶುಪಾಲರ ಹತ್ಯೆ ಮಾಡಿದ, ಪಾಂಡವರಿಗೆ ಅಭಯ ನೀಡಿದ, ದ್ರೌಪದಿ ಮಾನ ರಕ್ಷಿಸಿದ, ಅಧರ್ಮೀಯರಾದ ಕೌರವರ ಕುಲನಾಶ ಮಾಡಿದ, ಭೀಷ್ಮರಿಗೆ ಸದ್ಗತಿಯ ಕಾರುಣ್ಯ ಅನುಗ್ರಹಿಸಿದ. ಹಿಡಿಯವಲಕ್ಕಿ ಮೆದ್ದು ಮಿತ್ರ ಸುಧಾಮನಿಗೆ ಮಹೋನ್ನತ ಸಂಪತ್ತು ಕರುಣಿಸಿದ. ಒಂದೇ ಎರಡೇ, ಪರಮಾತ್ಮನ ಲೀಲೆಗಳನ್ನು ಹೊಗಳುವುದಿರಲಿ ಸ್ಮರಿಸಲೇ‌ ಸಾಧ್ಯವಿಲ್ಲ. ಇಂತಹ‌ ಅಸಹಾಯಕರ ಮಾನರಕ್ಷಕನಾಗಿ, ನಂಬಿದವರ ಪ್ರಾಣರಕ್ಷಕನಾಗಿ, ಅನಾಥರಿಗೆ ನಾಥನಾಗಿ, ಧೂರ್ತರ ದುರ್ಬುದ್ಧಿಗೆ‌ ದಂಶಕನಾಗಿ, ತನ್ನೊಲುಮೆಯ ಭಕ್ತರನ್ನು ಸಲಹುತ್ತಿರುವ ರುಕ್ಮಿಣಿ‌ ಪತಿಯ ಜನ್ಮದಿನ. ಈ ಸುದಿನ.

   ನರಕಾಸುರನನ್ನು ಸಂಹರಿಸಿ, ನಾರಿಯರಿಗೆ ಮುಕ್ತಿ ನೀಡಿದ ಮುರಾರಿ, ನಮ್ಮಲ್ಲಿನ‌ ಶತ್ರುಗಳಂತಿರುವ ಆರು ದುರ್ಗುಣಗಳನ್ನು ದೂರ ಮಾಡಲಿ. "ಇಂದು ಎನಗೆ ಗೋವಿಂದಾ ನಿನ್ನ ಪಾದವ ತೋರೋ" ಎಂದ ಪರಿಮಳಾಚಾರ್ಯ(ರಾಯರು)ರ ಹೃತ್ಕಮಲದಲ್ಲಿ ನೆಲೆ ನಿಂತ ಮುಕುಂದಾ. ಮದಿಸಿದ ಮದಗಜದಂತಿದ್ದ ಭೀಮಸೇನರ ದಮನಿಯಲ್ಲಿ ನಿಂತು ಮದವೇರಿದ ಕೌರವಾಗ್ರಣಿಗಳನ್ನು ಯಮಸದನಕ್ಕೆ ಅಟ್ಟಿದ ದಾಮೋದರ. ಶ್ರೀಮದಾನಂದ ತೀರ್ಥರ ಮಸ್ತಕದಲ್ಲಿ ಮಲಗಿ,‌ಪರಮಾದರದಿ ಸಚ್ಚಾಸ್ತ್ರಗಳನ್ನು ಸಜ್ಜನರಿಗೆ ಸುಲಭದಿ ಭೋದಿಸಿ ಸಲಹುತ್ತಿರುವ ಪೊಡವಿಗೊಡೆಯ‌ ಉಡುಪಿಯ ಶ್ರೀಕೃಷ್ಣಾ, ಪಾಮರರಾದ ನಮ್ಮನ್ನು  ಸದಾ ಸಲಹೆಂದು ಬೇಡೋಣ.

ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ|
ಪ್ರಣತಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ||

ಕೃಷ್ಣಾಯ ಯಾದವೇಂದ್ರಾಯ ಜ್ಞಾನಮುದ್ರಾಯ ಯೋಗಿನೇ|
ನಾಥಾಯ ರುಕ್ಮಿಣೇಶಾಯ ನಮೋ ವೇದಾಂತ ವೇದಿನೇ||

ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ|
ನಂದ ಗೋಪಕುಮಾರಾಯ ಗೋವಿಂದಾಯ ನಮೋ ನಮಃ|| ....

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ:

 ಈ ದಿನ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಬೇಕು. ಬೆಳಗ್ಗೆ ಎದ್ದು, ದೇವರ ಮನೆ ಬಳಿ ತೆರಳಿ ಪ್ರಾರ್ಥಿಸಬೇಕು. ನಂತರ ಸ್ನಾನ‌ಮುಗಿಸಿ ಶುಚಿರ್ಭೂತರಾಗಿ ವ್ರತ ಹಿಡಿಯಬೇಕು. ಶ್ರದ್ಧಾಳುಗಳು ದಿನವಿಡೀ ಉಪವಾಸ ಇರಬೇಕು. ದೇವರ ಮನೆಯ ಮೂರ್ತಿಗಳಿಗೆ ಹಿಂದಿನ ದಿನ ಅರ್ಪಿಸಿದ್ದ‌ ಪುಷ್ಪ(ನಿರ್ಮಾಲ್ಯ) ತೆಗೆಯಬೇಕು. ಶ್ರೀಕೃಷ್ಣ ಲೀಲಾವಳಿಯಾದ ಭಾಗವತ, ಭಗವದ್ಗೀತೆ, ಕೃಷ್ಣಾಷ್ಟಕ ಮತ್ತಿತರ ಸದ್ಗ್ರಂಥಗಳನ್ನು ಪಠಿಸಬೇಕು. 
 
 ಶಾಸ್ತ್ರ ಪ್ರಕಾರ ಈ ದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ‌ಸ್ನಾನ ಮಾಡಬೇಕು. ರಾತ್ರಿ ಹತ್ತುಗಂಟೆ ಸಮೀಪಿಸುತ್ತಿದ್ದಂತೆ ಶುದ್ದ ಸ್ನಾನ ಮಾಡಿ, ದೇವರ ಪೂಜೆ ಆರಂಭಿಸಬೇಕು. ಬೇರೆ ದಿನಗಳಲ್ಲಿ ಈ ಅವೇಳೆ ಪೂಜೆ ನಿಷಿದ್ಧ, ಆದರೆ‌ ಶ್ರೀಕೃಷ್ಣ ಪರಮಾತ್ಮ ಜನಿಸಿದ ಸಮಯವಾದ್ದರಿಂದ ಅವಶ್ಯ ಷೋಡಶೋಪಚಾರ ಪೂಜೆ ಮಾಡಬೇಕು. ಹಾಲು, ಮೊಸರಿನ‌ ಬದಲಿಗೆ ಬೆಣ್ಣೆ ತೆಗೆದ ಮಜ್ಜಿಗೆ, ತುಪ್ಪ, ಜೇನು, ಸಕ್ಕರೆ, ಎಳನೀರಿನಿಂದ ಪಂಚಾಮೃತ‌ ಅಭಿಷೇಕ ಮಾಡಬೇಕು. ಗಂಧೋದಕದಿಂದ ಸ್ನಾನ ಮಾಡಿಸಿ, ತುಲಸಿ, ಪುಷ್ಪಗಳಿಂದ ಅರ್ಚಿಸಬೇಕು. ನಂತರ ನೈವೇದ್ಯ ಸಮರ್ಪಿಸಬೇಕು. ಬಾಲಕೃಷ್ಣನಿಗೆ ಪ್ರಿಯವಾದ ಲಡ್ಡುಗೆ, ಚಕ್ಕುಲಿ, ಅತಿರಸ‌ ಮತ್ತಿತರ ಪದಾರ್ಥಗಳನ್ನು ನಿವೇದಿಸಬೇಕು. ಪೂಜೆಯ ನಂತರ ಚಂದ್ರೋದಯದ ವೇಳೆಗೆ ಸರಿಯಾಗಿ‌ ದೇವಕಿ ಸಹಿತ ಶ್ರೀಕೃಷ್ಣ ದೇವರಿಗೆ ಹಾಗೂ ಚಂದ್ರನಿಗೆ ಅರ್ಘ್ಯ ನೀಡಬೇಕು. ನಂತರ ತೀರ್ಥ‌ಸ್ವೀಕರಿಸಿ ಮಲಗಿ ನಿದ್ರಿಸಬೇಕು. ಮರುದಿನ ಪಾರಣೆ, ದೇವರ ಪೂಜೆ ನಡೆಸಿ ತೀರ್ಥ ಸ್ವೀಕರಿಸಿ ಪ್ರಸಾದ(ಭೋಜನ) ಸ್ವೀಕರಿಸಬೇಕು.

ಅರ್ಘ್ಯ ವಿಧಾನ:

ಶ್ರೀಕೃಷ್ಣ ದೇವರಿಗೆ ನೀರಿನಿಂದ ದೇವರ ಮನೆಯಲ್ಲಿ ಹಾಗೂ ಚಂದ್ರನಿಗೆ ಹಾಲಿನಿಂದ ಮನೆಯ ಹೊರಗಡೆ ಅರ್ಘ್ಯ ಪ್ರದಾನ ಮಾಡಬೇಕು.

  ಶಂಖದಲ್ಲಿ ಗಂಧೋದಕ ಅಥವಾ ಶುದ್ಧೋದಕ ತುಂಬಬೇಕು. ನಂತರ ಎಡಗೈಯ್ಯಲ್ಲಿ ಒಂದು‌ವಸ್ತ್ರ ತೆಗೆದುಕೊಂಡು ಅದರಲ್ಲಿ ಶಂಖವನ್ನು ಹಿಡಿದುಕೊಳ್ಳಬೇಕು. ಬಲಗೈಯ್ಯಲ್ಲಿ ಬಂಗಾರ ಅಥವಾ ಬೆಳ್ಳಿಯ ನಾಣ್ಯ, ತೆಂಗಿನ ಕಾಯಿ ಹೋಳು ಹಾಗೂ ಪೂಜೆಗೆ ಬಳಸದ ಪುಷ್ಪಗಳನ್ನು ಹಿಡಿದು ಶಂಖುವಿನಲ್ಲಿನ ನೀರನ್ನು ಬಲಗೈಗೆ ಹಾಕಿಕೊಂಡು ಬಂಗಾರ, ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಅರ್ಘ್ಯ ನೀಡಬೇಕು. ಇದೇ ರೀತಿ ಮನೆಯ ಹೊರಗಡೆ ಸಾರಿಸಿ ರಂಗವಲ್ಲಿ ಹಾಕಿದ ಸ್ಥಳದಲ್ಲಿ ನೀರಿನ ಬದಲು ಹಾಲಿನಿಂದ ಚಂದ್ರನಿಗೆ ಅರ್ಘ್ಯ ಕೊಡಬೇಕು.



ಶ್ರೀಕೃಷ್ಣಾರ್ಘ್ಯ ಮಂತ್ರ:

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ|
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ||

ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ|
ಗೃಹಾಣರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ||

ದೇವಕಿ ಸಹಿತ ಶ್ರೀಕೃಷ್ಣಯಾ ಇದಮರ್ಘ್ಯಂ ಸಮರ್ಪಯಾಮಿ.

ಚಂದ್ರಾರ್ಘ್ಯ ಮಂತ್ರ:

ಕ್ಷೀರೋದಾರ್ಣವಸಂಭೂತ ಅತ್ರಿನೇತ್ರ ಸಮುದ್ಭವ|
ಗರಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾಸಹಿತಃ ಶಶಿನ್||
ರೋಹಿಣೀಸಹಿತಚಂದ್ರಾಯ ನಮಃ|
ಇದಮರ್ಘ್ಯಂ ಸಮರ್ಪಯಾಮಿ|

|| ಶ್ರೀಕೃಷ್ಣಾರ್ಪಣಮಸ್ತು ||




ಶ್ರೀಶ ಚರಣಾರಾಧಕ
ಕೆ.ವಿ.ಲಕ್ಷ್ಮೀನಾರಾಯಣಚಾರ್ಯ,
ಆನೇಕಲ್.

Publisher: ಕನ್ನಡ ನಾಡು | Kannada Naadu

Login to Give your comment
Powered by