ಕನ್ನಡ ನಾಡು | Kannada Naadu

11 ವರ್ಷಗಳ ಹಿಂದೆ ಕಂಡ ಕನಸು ಈಗ ನನಸಾಗಲಿದೆ....

22 Aug, 2024

 
 
ಬೆಂಗಳೂರು: ಕ್ರೀಡಾ ನಗರ ಪರಿಕಲ್ಪನೆಗೆ ಸಿಲಿಕಾನ್‌ ಸೀಟಿ ಇನ್ನು ಮುಂದೆ ಸಾಕ್ಷಿಯಾಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.   ರಾಜಧಾನಿಯಲ್ಲಿ ಕ್ರೀಡಾ ನಗರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.  11 ವರ್ಷಗಳ ಹಿಂದೆ ಕಂಡ ಕನಸು ಈಗ ನನಸಾಗಲಿದೆ.  ಇದಕ್ಕಾಗಿ ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿ ಜಾಗ ಗುರುತಿಸಲಾಗಿದೆ.
     ಬೆಂಗಳೂರಿನಿಂದ 80ಕಿ.ಮೀ ವ್ಯಾಪ್ತಿಯಲ್ಲಿ ಕ್ರೀಡಾ ನಗರ ನಿರ್ಮಾಣ ಮಾಡಲು 2013ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು 2024-25ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ70 ಎಕರೆಯಲ್ಲಿಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯವನ್ನೊಳಗೊಂಡ ಕ್ರೀಡಾ ನಗರವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಈಗ ಯಲಹಂಕ ತಾಲೂಕಿನ ಮಾವಳ್ಳಿಪುರದಲ್ಲಿನ ಭೂಭರ್ತಿ ಘಟಕದ ಜಾಗದಲ್ಲೇ ಕ್ರೀಡಾ ನಗರ ನಿರ್ಮಿಸಲು ತೀರ್ಮಾನಿಸಲಾಗಿದೆ. ಕ್ರೀಡಾ ನಗರ ನಿರ್ಮಾಣಕ್ಕೆ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುಷ್ಠಾನಗೊಳಿಸಲು ತಾತ್ವಿಕ ಒಪ್ಪಿಗೆಯನ್ನೂ ಸರಕಾರ ಈಗಾಗಲೇ ನೀಡಿದೆ.
      ಜಗತ್ತಿನಾದ್ಯಂತ ನಗರ ಪ್ರದೇಶಗಳಲ್ಲಿ ಕ್ರೀಡಾ ನಗರ ಪರಿಕಲ್ಪನೆಯು ಮನ್ನಣೆ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಕೋಟಿಗೂ ಮೀರಿ ಜನಸಂಖ್ಯೆ ಹೊಂದಿರುವ ಸಿಲಿಕಾನ್‌ ಸಿಟಿಯಲ್ಲೂ ಕ್ರೀಡಾಪಟುಗಳು, ಕ್ರೀಡಾಸಕ್ತರಿಗೆ ಅನೂಕೂಲವಾಗುವಂತೆ ಸುಸಜ್ಜಿತ ಕ್ರೀಡಾ ನಗರ ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಅತ್ಯಾಧುನಿಕ ಸೌಲಭ್ಯದೊಂದಿಗೆ ಎಲ್ಲ ಕ್ರೀಡೆಗಳಿಗೂ ಒಂದೇ ಸೂರಿನಡಿ ಅವಕಾಶ ಕಲ್ಪಿಸಲು ಕ್ರೀಡಾ ಸಮುಚ್ಚಯವನ್ನು ಒಳಗೊಂಡ ಕ್ರೀಡಾ ನಗರ ನಿರ್ಮಿಸಲು ಮಾವಳ್ಳಿಪುರ ಗ್ರಾಮದ ಸರ್ವೇ ನಂ.8 ರಲ್ಲಿ 60 ಎಕರೆ ಜಾಗವನ್ನು ಗುರುತಿಸಲಾಗಿದೆ.
 
ಕ್ರೀಡಾ ನಗರ ನಿರ್ಮಾಣಕ್ಕೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈಗಾಗಲೇ ಯೋಜನೆಗೆ ಗುರುತಿಸಿರುವ ಭೂಮಿಯನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವಂತೆ ಕಂದಾಯ ಇಲಾಖೆಗೆ ಕೋರಲಾಗಿದೆ. ಜಮೀನು ಹಸ್ತಾಂತರದ ಬಳಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲಾಗುತ್ತದೆ. ಅನುದಾನ ಲಭ್ಯತೆ ಆಧರಿಸಿ ಯೋಜನೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಯುವಜನ ಇಲಾಖೆಯ ಮೂಲಗಳು ತಿಳಿಸಿವೆ.
       ಕ್ರೀಡಾನಗರದಲ್ಲಿಒಂದೇ ಕಡೆ ಒಳಾಂಗಣ ಮತ್ತು ಹೊರಾಂಗಣ ಎರಡೂ ಬಗೆಯ ಕ್ರೀಡೆಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಲಭ್ಯವಿರಲಿದೆ. ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಕೋರ್ಟ್‌ಗಳು, ಟ್ರ್ಯಾಕ್‌ಗಳು, ಪರಿಕರ, ತರಬೇತಿ, ಕ್ರೀಡಾ ಮತ್ತು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ಅಕಾಡೆಮಿ, ಕ್ರೀಡಾ ಪ್ರವಾಸೋದ್ಯಮ, ಕ್ರೀಡಾ ಸಂಸ್ಕೃತಿ ಮತ್ತು ತಂತ್ರಜ್ಞಾನ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಎಲ್ಲಜ್ಞಾನ ಪಡೆಯಲು ಅವಕಾಶ ಕಲ್ಪಿಸಲಿದೆ.
ಬೆಂಗಳೂರಿನಿಂದ 80 ಕಿ.ಮೀ ವ್ಯಾಪ್ತಿಯಲ್ಲಿಕ್ರೀಡಾ ನಗರ ನಿರ್ಮಿಸಲು 2013ರಲ್ಲಿಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜು ನೇತೃತ್ವದಲ್ಲಿವಿವಿಧ ಕ್ರೀಡಾ ಸಂಘಗಳು ಅಂದಿನ ಕ್ರೀಡಾ ಮತ್ತು ಯುವಜನ ಸಚಿವರಾಗಿದ್ದ ಅಭಯಚಂದ್ರ ಜೈನ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಿದ್ದರು. ಚಿಕ್ಕಬಳ್ಳಾಪುರ, ಮೈಸೂರು ರಸ್ತೆ ಹಾಗೂ ಕೋಲಾರ ಸಮೀಪ ಕ್ರೀಡಾ ನಗರಕ್ಕೆ ಸೂಕ್ತವಾದ ಜಾಗ ಗುರುತಿಸಲು ತಿರ್ಮಾನಿಸಲಾಗಿತ್ತು. ಇದಾಗಿ 11 ವರ್ಷಗಳ ಬಳಿಕ ಕ್ರೀಡಾ ನಗರಕ್ಕೆ ಜಾಗ ಗುರುತಿಸಿ, ಯೋಜನೆ ಕಾರ್ಯಗತಗೊಳಿಸುವ ಪ್ರಕ್ರಿಯೆ ಶುರುವಾಗಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by