ಕನ್ನಡ ನಾಡು | Kannada Naadu

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿದೇಶಗಳಲ್ಲಿ ಪ್ರವಾಸಿ ಮೇಳಗಳ ಆಯೋಜನೆ: ಕೆ.ವಿ.ರಾಜೇಂದ್ರ

17 Aug, 2024

 

ಯಶಸ್ವಿಯಾಗಿ ನಡೆದ ಪ್ರವಾಸೋದ್ಯಮ ಮಧ್ಯಸ್ಥಿಕೆದಾರರ ಸಮಾವೇಶ

ಬೆಂಗಳೂರು : ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತು ಆ ಮೂಲಕ ರಾಜ್ಯದತ್ತ ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಯು ದೇಶ ವಿದೇಶಗಳಲ್ಲಿ ಮೇಳಗಳನ್ನು ಆಯೋಜಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಇಲಾಖೆ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ ಅವರು ತಿಳಿಸಿದರು.

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅವಲಂಭಿಸಿ ವ್ಯವಹಾರ ವಹಿವಾಟುಗಳನ್ನು ನಡೆಸುತ್ತಿರುವ ಕ್ಷೇತ್ರದ ಮಧ್ಯಸ್ಥಿಕೆದಾರರೊಂದಿಗೆ ಸಂವಾದ ನಡೆಸಿದ ಅವರು, ಪ್ರವಾಸಿಗರನ್ನು ರಾಜ್ಯದತ್ತ ಆಕರ್ಷಿಸುವ ಸಲುವಾಗಿ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರಣೆ ನೀಡಿದರು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಬ್ಯಾಂಕ್‌ಗಳಿಂದ ಸಿಗುವ ಆರ್ಥಿಕ ಸಹಾಯ ಮತ್ತು ಇತರೆ ಉತ್ತೇಜಕ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಕೈಗೊಳ್ಳಲು ಮತ್ತು ಪ್ರವಾಸೋದ್ಯಮ ವಹಿವಾಟಿನಲ್ಲಿ ತೊಡಗಿಕೊಂಡಿರುವ ಉದ್ದಿಮೆ ಮತ್ತು ಉದ್ಯಮಿಗಳ ಸಲಹೆ ಸೂಚನೆಗಳನ್ನು ಆಲಿಸುವ ಮೂಲಕ ಮುಂದಡಿ ಇರಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಸೋಸೈಟಿ ಜತೆಗೂಡಿ ವಿವಿಧೆಡೆ ಇಂತಹ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದೂ ರಾಜೇಂದ್ರ ತಿಳಿಸಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತದಿಂದ ಆಗಮಿಸಿದ್ದ ಟ್ರಾವೆಲ್‌ ಏಜೆಂಟರುಗಳು, ಬ್ಲಾಗ್‌ ಬರಹಗಾರರು, ಇವೆಂಟ್‌ ಸಂಯೋಜಕರು, ಮೈಸ್ ಸಂಯೋಜಕರು, ಪ್ರವಾಸೋದ್ಯಮ ಮಾಧ್ಯಮ ಸಲಹೆಗಾರರು, ಉದ್ಯಮಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್‌, ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್.‌ ತ್ಯಾಗರಾಜನ್‌, ಉದ್ಯಮಿ ವಿಠಲ ಹೆಗಡೆ, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮನು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by