ಕನ್ನಡ ನಾಡು | Kannada Naadu

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್‌ ಶೋ

16 Aug, 2024

       ಬೆಂಗಳೂರು: ಬೆಂಗಳೂರಿನಲ್ಲಿ ರಜೆ ಬಂದರೆ ಸಾಕು ಜನ ಮನೆ ಬಿಟ್ಟು ಹೊರ ಹೋಗಲು ಕಾತುರದಿಂದ ಕಾಯುತ್ತಾರೆ. ಈ ಸಮಯದಲ್ಲಿ ಏನಾದರೂ ವಿಶೇಷತೆ ಇದ್ದರೆ ಮುಗಿದೇ ಹೋಯ್ತು. ಆ ಸ್ಥಳಕ್ಕೆ ಸಾಗರೋಪಾದಿಯಲ್ಲಿ ಜನ ಭೇಟಿ ನೀಡುತ್ತಾರೆ. ಹೀಗೆ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಬೆಂಗಳೂರು ಲಾಲ್‌ಬಾಗ್ ಫ್ಲವರ್‌ ಶೋಗೆ ಜನ ತಂಡೋಪ ತಂಡವಾಗಿ ಭೇಟಿ ನೀಡಿ ಬಣ್ಣ ಬಣ್ಣದ ಹೂವುಗಳನ್ನು ಕಂಡು ಆನಂದಿಸುತ್ತಿದ್ದಾರೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.

        ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಿನ್ನಲೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್‌ ಶೋ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಈ ದಿನ ಜನ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಸಾಲು ಸಾಲು ರಜೆಗಳು ಇರುವುದರಿಂದ ಲಾಲ್‌ಬಾಗ್‌ಗೆ ಭೇಟಿ ನೀಡಿ ಜನ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಈವರೆಗೆ ಒರೋಬ್ಬರಿ 1,3,76,000 ಸಾವಿರ ರೂಪಾಯಿ ಆದಾಯ ಸಂಗ್ರಹವಾಗಿದೆ. ಕಳೆದ ಎಂಟು ದಿನದಲ್ಲಿ ಮೂರು ಲಕ್ಷ ಜನರು ಭೇಟಿ ನೀಡಿದ್ದಾರೆ.
         ಅದರಲ್ಲೂ ವಿಶೇಷವಾಗಿ ನಿನ್ನೆ ಒಂದೇ ದಿನ 1,15,000 ಜನ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೇಳಿದ್ದಾರೆ. ಅಲ್ಲದೆ ಸಾಲು ಸಾಲು ರಜೆ ಇರುವುದರಿಂದ ಆಗಸ್ಟ್ 19ರವರೆಗೂ ಲಾಲ್‌ಬಾಗ್‌ ಫ್ಲವರ್ ಶೋವನ್ನು ಜನ ಕಣ್ತುಂಬಿಕೊಳ್ಳಬಹುದು. 

       ಆಗಸ್ಟ್ 15ರಂದು ಫ್ಲವರ್ ಶೋಗೆ ಭಾರೀ ಜನ ಆಗಮಿಸಿದ್ದರಿಂದ ಮೆಟ್ರೋದಲ್ಲಿ ಜನದಟ್ಟಣೆ ಕಂಡು ಬಂದಿದೆ. ಮೆಟ್ರೋದಲ್ಲಿ ಒಳಗೆ ಹೋಗಲೂ ಕೂಡ ಜನ ಹರಸಾಹಸ ಪಡಬೇಕಾಯಿತು. ಸರತಿ ಸಾಲಿನಲ್ಲಿ ನಿಂತು ಜನ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಜನ ಸಾಗರವೇ ಕಂಡು ಬಂದಿದೆ. ಇದರಿಂದಾಗಿ ಲಾಲ್ಬಾಗ್‌, ಸೌತ್‌ ಎಂಡ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜನರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

            ಮತ್ತೊಂದು ವಿಚಾರ ಅಂದರೆ ಆಗಸ್ಟ್ 15ರಂದು ಫ್ಲವರ್ ಶೋಗೆ ಭೇಟಿ ನೀಡುವವರಿಗೆ ಉಚಿತ ಮೆಟ್ರೋ ಪ್ರಯಾಣ ಇದೆ ಎಂಬ ಸುಳ್ಳು ಸುದ್ದಿ ಹಬ್ಬಿದ್ದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ.
ಈ ಬಾರಿ ಪ್ರದರ್ಶನದಲ್ಲಿ ಪ್ರವಾಸಿಗರನ್ನ ಮನರಂಜಿಸಲು ತರಕಾರಿ ಕೆತ್ತನೆ, ಹಣ್ಣು ಕೆತ್ತನೆ, ಜಾನೂರ್ ಆರ್ಟ್, ಹೂಗಳಿಂದ ಅಲಂಕಾರ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನದ ಅಲಂಕಾರಕ್ಕಾಗಿ ಒಟ್ಟು 2.5 ಕೋಟಿ ರೂ.ಗಳನ್ನು ಹೂಡಲಾಗಿದ್ದು, ಹೆಚ್ಚಿನ ಹೂವುಗಳನ್ನು ಲಾಲ್‌ಬಾಗ್‌ನಲ್ಲಿಯೇ ಬೆಳೆಸಲಾಗಿದೆ. ಕೆಲವು ಹೆಚ್ಚುವರಿ ತಳಿಗಳನ್ನು ಪುಣೆಯಿಂದ ತರಿಸಲಾಗಿದೆ. ವಾರದ ದಿನಗಳಲ್ಲಿ ಟಿಕೆಟ್ ದರವನ್ನು ವಯಸ್ಕರಿಗೆ 80 ಮತ್ತು ಮಕ್ಕಳಿಗೆ 30 ರೂಪಾಯಿಯಂತೆ ವಿಧಿಸಲಾಗಿದೆ. ವಾರಾಂತ್ಯದಲ್ಲಿ ದೊಡ್ಡವರಿಗೆ 100 ರೂ. ಹಾಗೂ ಮಕ್ಕಳಿಗೆ 30 ರೂಪಾಯಿ ಇರುತ್ತದೆ. ಸಮವಸ್ತ್ರದಲ್ಲಿರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಪುಷ್ಪ ಪ್ರದರ್ಶನ ಬೆಳಿಗ್ಗೆ 7:00 ರಿಂದ ಸಂಜೆ 7:00 ರವರೆಗೆ ಇರುತ್ತದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by