ನಾಗರ ಪಂಚಮಿ ನಾಡಿಗೆ ದೊಡ್ಡದು... ನಾಗರ ಚಿತ್ರವು ರಂಗಕ್ಕೆ ದೊಡ್ಡದ್ದು....
09 Aug, 2024
ಪ್ರಕೃತಿ ಸೇರಿದಂತೆ ಚರಾಚರ ಜೀವಿಗಳಿಗೂ ಗೌರವಿಸುವ ಹಿಂದು ಧರ್ಮಿಯರಿಗೆ ನಾಗರ ಪಂಚಮಿ ಅತೀ ವಿಶೇಷವಾದ ಹಬ್ಬ. ನಾಗ ಸಂಕುಲಕ್ಕೆ ದೈವಿ ಸ್ಥಾನ ನೀಡುವ ಮೂಲಕ ಪ್ರಕೃತಿಯನ್ನು ಗೌರವಿಸುವ ಹಬ್ಬವಿದು.
ವಾಸ್ತವದಲ್ಲಿ ಸಾಮಾನ್ಯರಿಗೂ ಅರ್ಥವಾಗುಂತೆ ʻʻನಾಗದೇವರಿಗೆ ಹಾಲೆರೆಯಿರಿʼʼ ಎಂದು ಹೇಳುವ ಮೂಲಕ ಭೂಮಿಯ ಋಣ ತೀರಿಸುವುದಕ್ಕೆ ನಮ್ಮ ಹಿರಿಯರು ಕಂಡ ಮಾರ್ಗವದು. ಜನರಲ್ಲಿ ಭಕ್ತಿ ಉಕ್ಕಿ ಬರಬೇಕು ಎಂದಾದರೆ ಭಯ ಎನ್ನುವುದು ಇರಲೆ ಬೇಕು ಎನ್ನುವ ಸಾಮಾನ್ಯ ಲಾಜಿಕ್ ಇಟ್ಟುಕೊಂಡು ನಮ್ಮ ಹಿರಿಯರು ಅನೇಕ ಆಚರಣೆಗಳನ್ನು ಆಚರಿಸುತ್ತ ಬಂದಿದ್ದಾರೆ. ಅದರ ಪರಿಣಾಮ ನಮ್ಮ ಕಥೆ ಕಾದಂಬರಿ, ನಾಟಕಗಳು ಸೇರಿದಂತೆ ಸಿನಿಮಾ ರಂಗದಲ್ಲಿಯೂ ದೈವ ದೇವತೆಗಳ ಆಚರಣೆ, ಅವುಗಳ ಮಹತ್ವ, ದೈವಾಚರಣೆಯ ಮಹಾತ್ಮೆಗಳ ಆಧಾರಿತ ಕಥೆಗಳು ಎಲ್ಲರ ಮನಸ್ಸನ್ನು ಗೆದ್ದುಕೊಂಡಿದೆ. ಆ ಪೈಕಿ ಸಾರ್ವತ್ರಿಕವಾಗಿ ಕಾಣಸಿಗುವುದು ನಾಗದೇವತೆ..!
ಪ್ರಕೃತಿಯ ಸಮತೋಲನ ಕಾಯ್ದು ಕೊಳ್ಳುವ ಸರ್ಪ ಸಂತತಿಯನ್ನೆ ಕೇಂದ್ರವಾಗಿರಿಕೊಂಡು ಅವುಗಳಿಗೆ ದೈವಿ ಸ್ವರೂಪ ನೀಡುವ ಮೂಲಕ ಆಚರಿಸುವ ನಾಗರ ಪಂಚಮಿಯಂದು ನಾವೇಲ್ಲಾ ವಿಶೇಷವಾಗಿ ನಾಗಕ್ಷೇತ್ರಗಳು, ನಾಗಸ್ಥಾನಗಳ ಬಗ್ಗೆ ಮಾತನಾಡುತ್ತೇವೆ. ಅವುಗಳನ್ನು ಹೊರತು ಪಡಿಸಿಯೂ ನಮ್ಮ ನಾಡಿನಲ್ಲಿ ನಾಗರ ಹಾವನ್ನೇ ಕೇಂದ್ರವಾಗಿರಿಸಿಕೊಂಡು ಅದೇಷ್ಟೋ ಕಥೆಗಳಿವೆ. ಅಂತಹ ಕಥೆಗಳು ಚಲನಚಿತ್ರವಾಗಿ ತೆರೆಕಂಡಿವೆ. ನಾಟಕಗಳಾಗಿ ವೇದಿಕೆ ಕಂಡಿವೆ. ದಾರಾವಾಹಿಗಳಾಗಿ ತೆರೆಕಂಡಿವೆ. ಬಹುತೇಕ ಎಲ್ಲವೂ ಜನಮಾನಸವನ್ನು ಗೆದ್ದಿವೆ. ಅದಕ್ಕೆ ಕಾರಣ ಶೇ.೫೦ ರಷ್ಟು ಕಥಾವಸ್ತುಗಳಾದರೆ ಮಿಕ್ಕ ಶೇ. ೫೦ ರಷ್ಟು ನಾಗನ ಮೇಲಿರುವ ದೈವಿ ಭಕ್ತಿ.
ನಾಗನ ಆಧಾರಿತ ಕನ್ನಡದಲ್ಲಿ ಮೂಡಿಬಂದ ಬಹುತೇಕ ಚಲನಚಿತ್ರಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಒಟ್ಟುಮಾಡಿವೆ. ಶ್ರಾವಣದ ಶುಕ್ಲ ಪಂಚಮಿಯಂದು ನಾಗಪಂಚಮಿಯೆಂದು, ಶ್ರಾವಣದ ಮಾಸದ ಮೊದಲ ಹಬ್ಬ ಎಂದು ಆಚರಿಸಲಾಗುತ್ತದೆ. ಜೊತೆಗೆ ಇದನ್ನು ಹೆಣ್ಮಕ್ಕಳ ಹಬ್ಬವೆಂದೂ ಗುರುತಿಸಿಕೊಂಡಿದೆ. ಇಷ್ಟೊಂದು ಮಹತ್ವ ಹೊಂದಿರುವ ಈ ನಾಗರ ಪಂಚಮಿ ಮತ್ತು ನಾಗದೇವತೆಯನ್ನೆ ಕೇಂದ್ರವಾಗಿರಿಸಿಕೊಂಡು ಸಾಕಷ್ಟು ಕಥೆಗಳನ್ನು ಸಿದ್ದಪಡಿಸಿ, ಆ ಮೂಲಕ ಚಲನ ಚಿತ್ರಗಳನ್ನು ಮಾಡಲಾಗಿದೆ. ನಾಗದೇವತೆ ಹಾಗೂ ನಾಗರಹಾವಿನ ಮಹತ್ವಗಳನ್ನೆ ಮುಂದಿಟ್ಟುಕೊಂಡು ಸಾಕಷ್ಟು ಸಿನಿಮಾಗಳ ನಿರ್ಮಾಣ ನಮ್ಮ ಕನ್ನಡದಲ್ಲಿ ನಡೆದಿದೆ.


ನಾಗದೇವತೆ, ನಾಗಮಂಡಲ, ಶ್ರೀ ನಾಗ ಶಕ್ತಿ, ಶಿವನಾಗ, ನಾಗಿಣಿ, ಬಳ್ಳಾರಿ ನಾಗ, ನಾಗಕನ್ಯೆ, ಗರುಡರೇಖೆ, ಖೈದಿ, ಬೆಳ್ಳಿನಾಗ ಹೀಗೆ ಸಾಕಷ್ಟು ಚಲನ ಚಲನಚಿತ್ರಗಳು ನಮ್ಮ ಕನ್ನಡ ಚಿತ್ರರಂಗವನ್ನು ಸೇರಿಕೊಂಡಿವೆ. ಸರ್ಪಸಂತತಿ, ನಾಗದೇವತೆ, ನಾಗಬನದಂತಹ ವಸ್ತುಗಳನ್ನು ಕೇಂದ್ರವಾಗಿರಿಸಿಕೊಂಡ ಬಹುತೇಕ ಚಿತ್ರಗಳು ಜನಮನವನ್ನು ಗೆಲ್ಲವಲ್ಲಿ ಮುಂದಾಗಿವೆ. 1975ರಲ್ಲಿ ತೆರೆಕಂಡ ‘ನಾಗಕನ್ಯೆ’ಚಲನ ಚಿತ್ರವು ಪ್ರೇಕ್ಷರಲ್ಲಿ ಒಂದು ರೀತಿಯ ಸಂಚಲನಕ್ಕೆ ಕಾರಣವಾಗಿತ್ತು. ಎಸ್ವಿ ರಾಜೇಂದ್ರ ಸಿಂಗ್ ಬಾಬು ಅವರ ಚೊಚ್ಚಲ ನಿರ್ದೇಶಿಸನ ಈ ಚಿತ್ರದಲ್ಲಿ ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.
ಪಿ.ಎಸ್ ಪ್ರಕಾಶ್ ನಿರ್ದೇಶನದ ಗರುಡರೇಖೆ ಚಿತ್ರವು 1982ರಲ್ಲಿ ತೆರೆಗೆ ಬಂದಿತ್ತು. ಮೂಲವಾಗಿ ನಾಗಮಣಿ ಅಥವಾ ನಾಗಮುತ್ತು ಎಂದು ಗುರುತಿಸಿಕೊಳ್ಳುವ ಅನರ್ಗ್ಯ ವಸ್ತುವನ್ನೇ ಕೇಂದ್ರವಾಗಿಸಿಕೊಂಡು, ಗರುಡ ರೇಖೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಸಿದ್ದಪಡಿಸಲಾದ ಈ ಚಿತ್ರದಲ್ಲಿ ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಹಲವು ನಟಿಸಿದ್ದರು. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಸೇರಿದಂತೆ ಇತರರು ನಟಿಸಿರುವ ʻಬೆಳ್ಳಿನಾಗʼ ಚಿತ್ರವು 1986ರಲ್ಲಿ ಬಂದಿತ್ತು. 1991ರಲ್ಲಿ ಶ್ರೀಪ್ರಿಯ ನಿರ್ದೇಶನದ ‘ನಾಗಿಣಿ’ ಚಿತ್ರ ಬಂದಿತ್ತು. ಅದರಲ್ಲಿ ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದರು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ ಅದಾಗಿತ್ತು. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದು ಮರೆಯುವಂತಿಲ್ಲ.


1992ರಲ್ಲಿ ಕೆ.ಎಸ್ ಆರ್ ದಾಸ್ ನಿರ್ದೇಶನ ಮಾಡಿರುವ ಚಿತ್ರ ‘ಶಿವನಾಗ’ ಪ್ರೇಕ್ಷಕರ ಮನಗೆದ್ದಿತ್ತು. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಈ ಸಿನಿಮಾದಲ್ಲಿ ಮನೆದೇವರು ನಾಗದೇವತೆ ತನ್ನ ನಂಬಿದ ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ತಿಳಿಸುವ ಕಥಾಹಂದರವನ್ನು ಹೊಂದಿದ ಸಿನಿಮಾ ಅದಾಗಿತ್ತು. ʻತಾಳೆ ಹೂವು ಎದೆಯಿಂದʼ ಎನ್ನುವ ಜನಪ್ರೀಯ ಹಾಡು ಕೇಳಿದಾಗಲೇಲ್ಲಾ ಕಣ್ಣಮುಂದೆ ಬರುವುದು ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ‘ಖೈದಿ’ ಸಿನಿಮಾ. ಈ ಚಿತ್ರದಲ್ಲಿ ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ ಮರೆಯುವಂತೆ ಇಲ್ಲ. 1997ರಲ್ಲಿ ತೆರೆಗೆ ಬಂದ ಗಿರೀಶ್ ಕಾರ್ನಾಡ್ ನಾಟಕ ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿ.ಎಸ್. ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆಯನ್ನೇ ವಸ್ತುವಾಗಿರಿಸಿಕೊಂಡು ರಚಿಸಲಾದಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದು ಎಲ್ಲರ ಮನಸ್ಸು ಗೆದ್ದಿತ್ತು. 2000ರಲ್ಲಿ ತೆರೆಕಂಡ ಸಿನಿಮಾ ʻನಾಗದೇವತೆʼ. ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ನಟಿ ಪ್ರೇಮ, ಚಾರುಲತಾ, ಸೌಂದರ್ಯ, ಸಾಯಿ ಕುಮಾರ್ ಸೇರಿದಂತೆ ಹಲವರು ನಟಿಸಿದ್ದರು. ನಟಿ ಸೌಂದರ್ಯ ನಾಗದೇವತೆ ಪಾತ್ರ ನಿರ್ವಹಿಸಿದ್ದರು. ಓಂ ಸಾಯಿ ಪ್ರಕಾಶ್ ಅವರ ಭಕ್ತಿಪ್ರಧಾನ ಕಥೆಯನ್ನು ಆಧಾರಿತ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಶ್ರೀನಾಗಶಕ್ತಿ. ನಟಿ ಶೃತಿ, ರಾಮ್ಕುಮಾರ್ ಹಾಗೂ ಚಂದ್ರಿಕಾ ಮುಖ್ಯ ಭೂಮಿಕೆಯಲ್ಲಿ ಇದ್ದ ಚಿತ್ರದಲ್ಲಿ ಚಂದ್ರಿಕಾ ಹಾವಿನ ಪಾತ್ರ ಮಾಡಿದ್ದರು. 2011ರಲ್ಲಿ ಈ ಸಿನಿಮಾಗೆ ತೆರೆಗೆ ಬಂದಿತ್ತು.

1992ರಲ್ಲಿ ತೆರೆಕಂಡ ಕೆ.ಎಸ್.ಆರ್ ದಾಸ್ ನಿರ್ದೇಶನದ ʻಶಿವನಾಗʼ ಸಿನಿಮಾ ಕೂಡ ನಾಗದೇವತೆಯ ಮಹತ್ವವನ್ನು ಜನರಿಗೆ ತಿಳಿಸಿತ್ತು. ಆ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ನಾಗನು ಮನೆದೇವರಾದ ಆ ಕುಟುಂಬವನ್ನು ಹೇಗೆ ಕಾಯುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿತ್ತು. 1986ರಲ್ಲಿ ತೆರೆಕಂಡ ಬೆಳ್ಳಿನಾಗ ಸಿನಿಮಾದಲ್ಲಿ ಟೈಗರ್ ಪ್ರಭಾಕರ್, ನಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ಎನ್.ಎಸ್ ಧನಂಜಯ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿ ಲಕ್ಷ್ಮಣ ಅವರ ಸಿನಿಮಾಟೋಗ್ರಫಿಯಲ್ಲಿ ನಾಗನನ್ನು ಅದ್ಭುತವಾಗಿ ತೋರಿಸಲಾಗಿದೆ. 1991ರಲ್ಲಿ ಬಿಡುಗಡೆಯಾದ ನಾಗಿಣಿ ಸಿನಿಮಾ ಬಹುತೇಕರಿಗೆ ನೆನಪಿನಲ್ಲಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದ ಸಿನಿಮಾವಿದು. ಶ್ರೀಪ್ರಿಯ ನಿರ್ದೇಶನದ ಈ ಚಿತ್ರ ಸೇಡಿನ ಕಥೆ ಹೊಂದಿತ್ತು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ ಹೊಂದಿದ್ದ ಈ ಚಿತ್ರದಲ್ಲಿ ನಟಿ ಗೀತಾ ನಾಗಿಣಿಯಾಗಿ ಅಭಿನಯಿಸಿದ್ದರು.
ಇವುಗಳ ಹೊರತಾಗಿಯೂ ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ನಾಗದೇವತೆ ಅಥವಾ ನಾಗನ ಹೆಸರಿನಲ್ಲಿ ಸಾಕಷ್ಟು ಚಲನಚಿತ್ರಗಳು ಕನ್ನಡದಲ್ಲಿ ಬಂದಿವೆ. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಕಾಳಿಂಗ ಹೀಗೆ ಹಲವು ಚಿತ್ರಗಳು ಪ್ರಬುದ್ಧ ಕನ್ನಡಿಗರ ಮನಸ್ಸನ್ನು ಗೆದ್ದಿವೆ.
Publisher: ಕನ್ನಡ ನಾಡು | Kannada Naadu