ಕನ್ನಡ ನಾಡು | Kannada Naadu

ದೆಹಲಿ ಕರ್ನಾಟಕ ಸಂಘಕ್ಕೆ ನೋಯ್ಡಾದಲ್ಲಿ ಜಾಗ: ಹೆಚ್ ಡಿ ಕುಮಾರಸ್ವಾಮಿ

03 Aug, 2024

ನವದೆಹಲಿ: ಉತ್ತರ ಪ್ರದೇಶದ ನೋಯ್ಡಾದಲ್ಲಿ ದೆಹಲಿ ಕರ್ನಾಟಕ ಸಂಘಕ್ಕೆ ಜಾಗ ಕೊಡಿಸುವ ಬಗ್ಗೆ ಆ ರಾಜ್ಯದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರ ಜತೆ ಚರ್ಚೆ ಮಾಡಲಾಗುವುದು ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ರಾಜ್ಯದ ಕೇಂದ್ರ ಸಚಿವರು, ಸಂಸದರಿಗೆ ದೆಹಲಿ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಈಗಾಗಲೇ ನೋಯ್ಡಾದಲ್ಲಿ ಜಾಗ ಪಡೆಯುವ ಬಗ್ಗೆ ಸಂಘದ ವತಿಯಿಂದ ಪ್ರಯತ್ನಗಳು ನಡೆದಿವೆ. ಹೀಗಾಗಿ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಸಚಿವರು, ಸಂಸದರ ಜತೆ ಸೇರಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಮನವಿ ಮಾಡಲಾಗುವುದು ಇಂದು ಅವರು ಹೇಳಿದರು.

ನಾವು ಎಲ್ಲಿಯೇ ಇದ್ದರೂ ಕನ್ನಡಿಗರಿಗೆ ಉಳಿಯಬೇಕು. ನಮ್ಮ ಭಾಷೆ, ಸಂಸ್ಕೃತಿ, ನಾಡು ನುಡಿಯನ್ನು ಬಿಟ್ಟು ಬದುಕಬಾರದು. ಈ ನಿಟ್ಟಿನಲ್ಲಿ ದೆಹಲಿ ಕನ್ನಡಿಗರ ಬದ್ಧತೆ, ಕನ್ನಡತನದ ಬಗ್ಗೆ ನನಗೆ ಸಂತಸವಿದೆ. ನಾಡು ನುಡಿ, ನೆಲ ಜಲದ ವಿಷಯ ಬಂದಾಗ ರಾಜಿ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಾಗಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಹೇಳಿದರು. ಅಲ್ಲದೆ, ದೆಹಲಿ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದ ಹೆಚ್.ಡಿ.ಕುಮಾರಸ್ವಾಮಿ ಅವರೂ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಸಂಸದರಾದ ಸಿ.ಎನ್.ಮಂಜುನಾಥ್, ಮಲ್ಲೇಶ್ ಬಾಬು, ಸುಧಾಕರ್, ಮಲ್ಲೇಶ್ ಬಾಬು, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ.ಮೋಹನ್, ಸಾಗರ ಖಂಡ್ರೆ, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಢಗೆ ಅವರನ್ನು ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಸಿ.ಪಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಸೇರಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by