ʻಚುಟುಕು ಕ್ರಿಕೆಟ್ʼನ ವಿಶ್ವ ಚಾಂಪಿಯನ್ ಆಗಿದ್ದು ‘ಪೊಯಟಿಕ್ ಜಸ್ಟೀಸ್’....!
03 Jul, 2024
ʻದ್ರಾವಿಡ್ಗೆ ಇಂತಹದೊಂದು ಗೆಲುವಿನ ವಿದಾಯದ ಅಗತ್ಯವಿತ್ತು..ʼ ಎಂದು ಅನೇಕರು ಬರೆಯುತ್ತಿದ್ದಾರೆ..
ಅಂತಿಮ ಪಂದ್ಯಕ್ಕಿಂತಲೂ ಮುಂಚೆ ‘ದ್ರಾವಿಡ್ಗಾಗಿ ಗೆಲುವು’ ಎಂಬ ಟ್ರೆಂಡ್ ಕೂಡ ಸೃಷ್ಟಿಯಾಗಿತ್ತು. ಒಮ್ಮೆ ಸೋತಿದ್ದರೆ..! ನನಗೆ ಅನ್ನಿಸುವ ಮಟ್ಟಿಗೆ ದ್ರಾವಿಡ್ ವಿಷಯದಲ್ಲಿ ಅದೇನು ವ್ಯತ್ಯಾಸವಾಗುತ್ತಿರಲಿಲ್ಲ. ಏಕೆಂದರೆ ಗೆದ್ದಾಗ ಬೀಗದ, ಸೋತಾಗ ಬಾಗದ.. ಸೋಲನ್ನೇ ಗೆಲುವುಗಳ ಮೆಟ್ಟಿಲಾಗಿಸಿ ಕೊಳ್ಳುವ ಜೀವನ ಪಾಠವನ್ನು ನಮಗೆ ಕಲಿಸಿದವರೇ ರಾಹುಲ್ ದ್ರಾವಿಡ್.
ದ್ರಾವಿಡ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದಾಗ ನೀಡಿದ ಹೇಳಿಕೆಯ ಈ ಸಾಲುಗಳು ನನಗೆ ಪ್ರಿಯವಾದದ್ದು. ʻʻಕ್ರಿಕೆಟ್ ಕುರಿತ ನನ್ನ ಧೋರಣೆ ಸರಳವಾದದ್ದು, ಸಹಜವಾದದ್ದು, ತಂಡಕ್ಕೆ ಸರ್ವಸ್ವವನ್ನೂ ಕೊಡುವುದು, ಆಟದ ಘನತೆಯನ್ನು ಕಾಪಾಡುವುದು, ಕ್ರೀಡಾಸ್ಪೂರ್ತಿಯನ್ನು ಎತ್ತಿ ಹಿಡಿಯುವುದು, ನಾನು ಇದಕ್ಕಾಗಿ ನಿರಂತರವಾಗಿ ಪ್ರಯತ್ನಿಸಿದ್ದೇನೆ, ಕೆಲವು ಸಲ ಈ ದಿಸೆಯಲ್ಲಿ ಗೆದ್ದಿದ್ದೇನೆ, ಬಹಳ ಸಲ ಸೋತಿದ್ದೇನೆ, ಆದರೆ ಪ್ರಯತ್ನವನ್ನು ನಾನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ವಿದಾಯ ಹೇಳುವಲ್ಲಿ ನನಗೆ ಬೇಸರವಿದೆ. ಹಾಗೆಯೇ ಕ್ರಿಕೆಟ್ನ ಘನತೆಯನ್ನು ಎತ್ತಿ ಹಿಡಿದಿದ್ದೇನೆ ಎಂಬ ಸಂತೃಪ್ತಿಯೂ ಇದೆʼʼ ಎಂದು ಹೇಳಿದ್ದು.

ಈ ಸಾಲುಗಳನ್ನು ಬಹಳ ಸೂಕ್ಷ್ಮವಾಗಿ ಓದ ಬೇಕು, ದ್ರಾವಿಡ್ ನಿವೃತ್ತಿಯ ಕಾಲಕ್ಕೆ ಕ್ರಿಕೆಟ್ಗೆ ಉದ್ಯಮದ ಸ್ವರೂಪ ಬಂದಿತ್ತು. ಹಾಗಾದರೂ ಗೆಲುವು ಎನ್ನುವ ಮನೋಭಾವ ಬೆಳೆದಿತ್ತು. ಮುಂದಿನ ಎಷ್ಟೋ ಗೆಲುವುಗಳ ಹಿಂದೆ ಮ್ಯಾಚ್ ಫಿಕ್ಸಿಂಗ್ನ ಕರಿನೆರಳು ಇರುವುದು ಸುಳ್ಳಲ್ಲ. ನಿವೃತ್ತಿ ನಂತರ ಕೂಡ ದ್ರಾವಿಡ್ ಕ್ರಿಕೆಟ್ನ ಘನತೆಯನ್ನು ಎತ್ತಿ ಹಿಡಿಯಲು ಶ್ರಮಿಸಿದರು. 19 ವರ್ಷದೊಳಗಿನವರ ಭಾರತ ತಂಡವನ್ನು 2016ರಲ್ಲಿ ವಿಜಯದ ಅಂಚಿಗೆ ತಂದು ನಿಲ್ಲಿಸಿದರೆ, 2018ರಲ್ಲಿ ಚಾಂಪಿಯನ್ ಆಗಿಸಿದರು. ಅವರಿಗೆ ಗೆಲ್ಲುವದಕ್ಕಿಂತ ಕ್ರಿಕೆಟ್ ಆಟದ ಘನತೆಯನ್ನು ಎತ್ತಿ ಹಿಡಿಯುವುದು ಮುಖ್ಯವಾಗಿತ್ತು.
ದ್ರಾವಿಡ್ ಎಂದಿಗೂ ಚರ್ಚೆ ತಮ್ಮ ಸುತ್ತ ಬೆಳೆಯಲಿ ಎಂದು ನಿರೀಕ್ಷಿಸಲಿಲ್ಲ. ಅದಕ್ಕಾಗಿ ಹಿಂಬಾಲಕರನ್ನು ಬೆಳೆಸಿ ಅವರ ಮೂಲಕ ಹೇಳಿಕೆಗಳನ್ನು ಕೊಡಿಸಲಿಲ್ಲ. ಹತ್ತಿರದವರು ಷಡ್ಯಂತರ ಹೂಡಿದರೂ, ಅವಮಾನ ಮಾಡಿದರೂ ವಿಚಲಿತರಾಗಲಿಲ್ಲ. ಈ ನೆಲೆಯಲ್ಲಿಯೇ ಅವರನ್ನು ‘ಗೋಡೆ’ಎಂದು ಕರೆದಿದ್ದು ಸಾರ್ಥಕ ರೂಪಕ. ಕ್ರಿಕೆಟ್ ಅಂಗಣದಲ್ಲಿ 44,123 ನಿಮಿಷಗಳನ್ನು ಕಳೆದ ದಾಖಲೆಯನ್ನು ಇಂದಿಗೂ ಹೊಂದಿರುವ ದ್ರಾವಿಡ್ ಆಟದ ಪ್ರತಿಕ್ಷಣವನ್ನು ಕಾವ್ಯವಾಗಿಸಿದರು. ಹೇಗಾದರೂ ರನ್ ಎನ್ನುವ ಕಡೆ ‘ಹೀಗೇ ರನ್ನು’ ಎಂದು ತೋರಿಸಿ ಕೊಟ್ಟರು.
ಗ್ಯಾರಿ ಸೋಬರ್ಸ್ ಹೇಳುವಂತೆ ʻʻಟೆಸ್ಟ್ ಕ್ರಿಕೆಟ್ ಅನ್ನು ಮಾತ್ರ ಕಾವ್ಯವೆಂದು ಕರೆಯಲಾಗುತ್ತಿತ್ತು. ಏಕದಿನ ಟ್ವಂಟಿ-ಟ್ವಂಟಿ ಕ್ರಿಕೆಟ್ ಗೆ ಕೂಡ ಕಾವ್ಯದ ಸ್ಪರ್ಶ ನೀಡಿದ್ದರೆ ಅದು ರಾಹುಲ್ ದ್ರಾವಿಡ್ ಮಾತ್ರʼʼ ಎಂದಿದ್ದು ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ.
ಈಗ ದ್ರಾವಿಡ್ ಕೋಚ್ ಪಟ್ಟದಿಂದಲೂ ಇಳಿದಿದ್ದಾರೆ. ಆದರೆ ಅವರು ಬೆಳೆಸಿದ ಹುಡುಗರು ಆತ್ಮವಿಶ್ವಾವಸದಿಂದ ಆಡುತ್ತಿದ್ದಾರೆ. ಅವರಲ್ಲಿ ಕೆಲವರಾದರೂ ದ್ರಾವಿಡ್ ಕಲಿಸಿದ ಕ್ರೀಡಾಸ್ಪೂರ್ತಿಯನ್ನು ಅಳವಡಿಸಿ ಕೊಂಡರೆ ಕ್ರಿಕೆಟ್ ಆಟದ ಘನತೆ ಮುಂದಿನ ದಿನಗಳಲ್ಲಿಯೂ ಉಳಿದು ಕೊಂಡೀತು.
‘ಚುಟುಕು ಕ್ರಿಕೆಟ್’ಗೆ ಅನರ್ಹ ಎಂದು ಪರಿಗಣಿಸಲ್ಪಟ್ಟ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಚುಟುಕು ಕ್ರಿಕೆಟ್ ನ ವಿಶ್ವೊ ಚಾಂಪಿಯನ್ ಆಗಿದ್ದು ನನಗೆ ‘ಪೊಯಟಿಕ್ ಜಸ್ಟೀಸ್’ ಎಂದನ್ನಿಸುತ್ತದೆ.
ಎನ್.ಎಸ್.ಶ್ರೀಧರ ಮೂರ್ತಿ
ಹಿರಿಯ ಬರಹಗಾರರು
Publisher: ಕನ್ನಡ ನಾಡು | Kannada Naadu