ಕನ್ನಡ ನಾಡು | Kannada Naadu

ಉಪ್ಪರಿಗೆ ಏರಬೇಕಿದ್ದ ʻಉಪ್ಪಗೆʼ  ತೆಪ್ಪಗಾಗುತ್ತಿದೆ..! 

03 Jul, 2024


ಪ್ರಕೃತಿ ಮನುಕುಲಕ್ಕೆ ನೀಡಿದ ಕೊಡುಗೆಗಳೆ ಆದಿ ಅಂತ್ಯವಿಲ್ಲ. ಆದರೆ ಮನುಷ್ಯ ಮರಳಿ ಪ್ರಕೃತಿಗೆ ಕೊಡುತ್ತಿರುವುದು ಏನು..? ಎನ್ನುವ ಪ್ರಶ್ನೆಗೆ ಉತ್ತರಿಸಲು ವಾಸ್ತವದಲ್ಲಿ ನಾಚಿಕೆಯಾಗುತ್ತದೆ. ದಿನ ಬೆಳಗಾದರೆ ನಾವು ಕಾಡು ಮೇಡು, ಹೊಲ ಗದ್ದೆಯನ್ನು ನಂಬಿದವರು.  ಭೂಮಿತಾಯ ಅಚಲ ಮಮತೆಯ ಕೊಡುಗೆಗಳನ್ನು ಮರೆಯುವುದುಕ್ಕೆ ಸಾಧ್ಯವೇ ಇಲ್ಲ. ಭೂಮಿಗೆ ಬೀಜ ಬಿತ್ತಿ ಬೆಳೆತೆಗೆಯವ ನಮಗೆ ಪ್ರಕೃತಿಯೇ ತನ್ನ ಮಡಿಲಲ್ಲಿ ಬೆಳೆಸಿಕೊಂಡ ಅದೇಷ್ಟೋ ಬೆಲೆಬಾಳುವ ಅನರ್ಘ್ಯರತ್ನಗಳನ್ನು ನಾವು ಮರೆಯುತ್ತಿದ್ದೇವೆ.  


 ಕಾಡಿನಲ್ಲಿ ಬೆಳೆಯವು ಬೆಲೆಬಾಳುವ ಮರಗಳು, ಕಾಡು ಹಣ್ಣಿನ ಬೆಳೆ, ಔಷಧದ ಸಸ್ಯಗಳು, ಜೇನು, ದೂಪ, ಸೀಗೆ, ಮಸಾಲೆ ಪದಾರ್ಥಗಳು ಹೀಗೆ ಒಂದಾ ಎರಡಾ..! ಹೆಸರಿಸುತ್ತ ಹೋದರೆ ಅದಕ್ಕೆ ಅಂತ್ಯ ಎನ್ನುವುದೇ ಇಲ್ಲ ಎನಿಸುತ್ತದೆ. ಅವುಗಳ ಪೈಕಿ  ಪ್ರಕೃತಿ ನೀಡಿದ ಅಪರೂಪದ ರತ್ನವೇ ʻಉಪ್ಪಗೆʼ...

ಉಪ್ಪಾಗೆ ಅಥವಾ ಉಪ್ಪಗೆ  ಎಂದು ಸಾಮಾನ್ಯವಾಗಿ ಕರೆಸಿಕೊಳ್ಳುವ ಇದು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಒಂದು ಮರ. ಸಹ್ಯಾದ್ರಿ ಬೆಟ್ಟದ ಸಾಲುಗಳು ಸೇರಿದಂತೆ ಕೊಡಗು, ಚಿಕ್ಕಮಗಳುರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡದ ಘಟ್ಟದ ಪ್ರದೇಶ, ಮಂಗಳೂರು ಸೇರಿದಂತೆ ಕೇರಳ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಈ ಉಪ್ಪಗೆ ಉತ್ತಮ ಔಷಧೀಯ ಗುಣಗಳುಳ್ಳ ಹಣ್ಣುಗಳನ್ನು ಬಿಡುತ್ತವೆ. ಸಸ್ಯಶಾಸ್ತ್ರದಲ್ಲಿ ಗಾರ್ಸಿನಿಯಾ ಕುಟುಂಬಕ್ಕೆ ಸೇರಿರುವ ಇದಕ್ಕೆ  ʻಗಾರ್ಸಿನೀಯಾ ಗಮ್ಮಿಗಟ್ಟʼ (Garcenia gummi-gutta) ಎಂಬ ವೈಜ್ಞಾನಿಕ ಹೆಸರಿನಿಂದ ಗುರತಿಸಿಕೊಂಡಿದೆ. ಬಹುತೇಕ ನಾವೆಲ್ಲಾ ಉಪ್ಪಗೆ ಅಥವಾ ಉಪ್ಪಾಗೆ ಎಂದು ಕರೆಯುವ ಈ ಅಪರೂಪದ ಫಲಕ್ಕೆ ʻಗಾಂಬೋಜ್ʼ, ʻಕಾಚ್‍ಪುಳಿʼ, ʻಕಾಚಂಪುಳಿʼ, ʻಪಣಪ್ಪುಳಿʼ, ʻಮಂತುಹುಳಿʼ, ʻಮಂತುಳ್ಳಿʼ  ಹೀಗೆ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರಿನಲ್ಲಿ ಕರೆಯುತ್ತಾರೆ. ಇದಕ್ಕೆ ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಹೆಸರಿಸುತ್ತಾರೆ.

 ಶುದ್ಧ ಭಾರತೀಯ ಪ್ರಭೇದವಾಗಿರುವ ಈ ಉಪ್ಪಾಗೆ ತಮಿಳುನಾಡಿನ ನೀಲಗಿರಿ, ಕೇರಳದ ತಿರುವಾಂಕೂರು, ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಉಪ್ಪಾಗೆ ಜಾತಿಯ ಮರಗಳಲ್ಲಿ  ಒಟ್ಟು 35 ಪ್ರಬೇಧಗಳನ್ನು ನಮ್ಮ ದೇಶದಲ್ಲಿ ಕಾಣಬಹುದು. ಕರ್ನಾಟಕ ಮತ್ತು ಕೇರಳದ ಪಶ್ಚಿಮಘಟ್ಟದ ಕಾಡುಗಳಲ್ಲದೇ, ಇಂಡೋನೇಷ್ಯಾ ಮತ್ತು ಆಫ್ರಿಕಾದಲ್ಲೂ ಇವುಗಳನ್ನು ಬೆಳೆಯಲಾಗುತ್ತದೆ. ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಥೇಚ್ಛವಾಗಿ ಉಪ್ಪಾಗೆ ಕಾಡು ಪ್ರದೇಶದಲ್ಲಿ ಪ್ರಾಕೃತಿಕವಾಗಿಯೇ ಬೆಳೆಯುವುದನ್ನು ನಾವು ಗಮನಿಸಬಹುದು. ಇನ್ನೂ ನಮ್ಮ ದೇಶದ ಪಶ್ಚಿಮಘಟ್ಟ ಭಾಗದಲ್ಲಿ ಸುಮಾರು 10 ಪ್ರಬೇಧಗಳು ನೋಡುವುದಕ್ಕೆ ಸಿಗುತ್ತದೆ. 
 ಇನ್ನೂ ಉತ್ತರ ಕನ್ನಡ ಜಿಲ್ಲೆಯ ಅರಣ್ಯಗಳಲ್ಲಿ ಸಿಗುವ ಉಪ್ಪಗೆಯಲ್ಲಿ ಪ್ರಮುಖವಾಗಿ  ಮುರಗಲು, ಅರಿಸಿಣಗುರಗಿ, ಜಾಣಗೆ, ಕಾಡುಮುರಗಲು ಪ್ರಬೇಧಗಳಿವೆ. ನಿತ್ಯಹರಿದ್ವರ್ಣ ಮತ್ತು ಸೋಲಾ ಕಾಡುಗಳ ತಂಪು ಹಾಗೂ ತೇವಾಂಶ ಹೆಚ್ಚಾಗಿ ಇರುವ ತಂಪು ವಾತಾವರಣದಲ್ಲಿ ಈ ಸಸಿಯನ್ನು ನೆಟ್ಟು ಮರವಾಗಿ ಬೆಳೆಸಿ  ಉಪ್ಪಾಗೆಯ ಕೃಷಿಯನ್ನು ಸಹ ಮಾಡಬಹುದು. ದೊಡ್ಡಗಾತ್ರದ ಮರವಾಗಿ ಬೆಳೆಯವುದು ಇದು  ಸರಿಸುಮಾರು 10 ರಿಂದ 20 ಮೀಟರ್ ಬೆಳೆಯುತ್ತದೆ. ಕೆಲವು ಪ್ರದೇಶಗಳಲ್ಲಿ ಉಪ್ಪಗೆ ಮರಗಳು 30 ಮೀವರೆಗೂ ಬೆಳೆದಿರುವುದು ನೋಡಲು ಸಿಗುತ್ತವೆ. ಇದರಲ್ಲಿ ಅಭಿಮುಖ ವೃಂತಪರ್ಣರಹಿತ ಎಲೆಗಳು ಇರುತ್ತವೆ.  ಇನ್ನೂ ವಿಶೇಷ ಎಂದರೆ ಉಪ್ಪಾಗೆ ಜಾತಿಯಮರಗಳ ಪೈಕಿ ಗಂಡು ಮರ ಮತ್ತು ಹೆಣ್ಣು ಮರ ಎಂಬ ಪ್ರಭೇದಗಳಿವೆ. ಅದರಲ್ಲಿ  ಹೆಣ್ಣುಮರಗಳು ಮಾತ್ರ ಹಣ್ಣುಗಳನ್ನು ಬಿಡುತ್ತವೆ. ಹೂಗಳು ಕೆಂಪು ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತವೆ. ಫೆಬ್ರುವರಿ-ಮಾರ್ಚನಲ್ಲಿ ಹೂ ಬಿಡುವ ಉಪ್ಪಾಗೆ ಹಣ್ಣಾಗುವುದು ಜೂನ್-ಜುಲೈ ತಿಂಗಳ ಮಳೆಗಾಲದಲ್ಲಿ ಹಣ್ಣುಗಳು ಪಕ್ವವಾಗುತ್ತವೆ. ಸೇಬಿನ ಗಾತ್ರದ ಫಲಗಳನ್ನು ಬಿಡುವ ಈ ಹಣ್ಣುಗಳು ತಿಳಿಹಳದಿ ಬಣ್ಣದಿಂದ ಕೂಡಿದ್ದು ಉಬ್ಬು ತಗ್ಗಿನ ಮೇಲ್ಮೈ ಹೊಂದಿ ಚಿಕ್ಕ ಕುಂಬಳಕಾಯಿಯ ರೂಪ ಅಕಾರ ಇರುತ್ತದೆ. ಹಣ್ಣಿನ ಮೇಲ್ಭಾಗ 6-8 ಉಬ್ಬಿದ ಗೆರೆಗಳಿಂದ ಕೂಡಿದ್ದು ಒಂದು ಹಣ್ಣಿನಲ್ಲಿ ೬-೮ ಬೀಜಗಳಿರುತ್ತವೆ. ಅತೀ ಹೆಚ್ಚಿನ  ಔಷಧೀಯ ಗುಣಗಳನ್ನು ಹೊಂದಿರುವ ಉಪ್ಪಾಗೆ ಹಣ್ಣುಗಳನ್ನು  ಆಹಾರ ಬಳಕೆಗಾಗಿ ಹಾಗೂ ಕೆಲವು ಕಡೆಗಳಲ್ಲಿ ಬಣ್ಣ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನೈಸರ್ಗಿಕವಾಗಿ ಬೆಳೆದ ಗಿಡ ಮರವಾಗಿ ಬೆಳೆ ಕೊಡುವುದಕ್ಕೆ ಸರಿ ಸುಮಾರು  ಹತ್ತು-ಹನ್ನೆರಡು ವರ್ಷಗಳು ಬೇಕಾಗುತ್ತೆ. ಅದೇ ಕಸಿ ಮಾಡಿದ ಸಸಿಗಳಿದ್ದರೆ ಮೂರ ರಿಂದ ನಾಲ್ಕು ವರ್ಷಕ್ಕಾಗಲೇ ಬೆಳೆ ನೀಡಲು ಶುರುವಾಗುತ್ತದೆ. 
ಕೊಡುಗಿನಲ್ಲಿ ಹೆಚ್ಚಾಗಿ ಜನರು ಇಷ್ಟಪಡುವ ಇದನ್ನು  ಕಾಚಂಪುಳಿ ಅಥವಾ ಮಂತಪುಳಿ ಎಂದು ಕರೆಯಲಾಗುತ್ತದೆ. 

ಉಪ್ಪಾಗೆ ಹಣ್ಣುಗಳು ಆಹಾರ ಮತ್ತು ಔಷಧೀಯ ಕಾರಣಕ್ಕಾಗಿ ಬಳಸಲ್ಪಡುತ್ತವೆ. ಬೀಜದ ಗಿಡ ಬೆಳೆ ಕೊಡಲು ಹತ್ತು-ಹನ್ನೆರಡು ವರ್ಷ ತೆಗೆದುಕೊಳ್ಳುತ್ತದೆ. ಕಸಿ ಗಿಡಕ್ಕೆ ಮೂರು ವರ್ಷ ಸಾಕು. ಇದು ಕಾಚಂಪುಳಿ ಅಥವಾ ಮಂತಪುಳಿ ಎಂದು ಕೊಡಗು ಜಿಲ್ಲೆಯಲ್ಲಿ ಹೆಸರಾಗಿದೆ. ಕೊಡಗಿನ ಪ್ರದೇಶಗಳಲ್ಲಿ ಸುಮಾರು 30-40 ಪ್ರಭೇದಗಳು ಕಂಡು ಬರುತ್ತದೆ. ಕೊಡಗು ಸೇರಿದಂತೆ ಚಿಕ್ಕಮಗಳೂರಿನ ಕಾಫಿಯ ತೋಟಗಳ ನಡುವೆ ಅಲ್ಲಲ್ಲಿ ಕಂಡುಬರುವ ಉಪ್ಪಾಗೆಯ ಮರಗಳು 60-80 ಅಡಿ ಎತ್ತರ ಹಾಗೂ ಅದಕ್ಕೆ ಸಮನಾದ ದಪ್ಪ ಮತ್ತು ವಿಸ್ತಾರವನ್ನು ಹೊಂದಿರುತ್ತವೆ.  ಒಂದು ದೊಡ್ಡ ಮರಕ್ಕೆ ಉತ್ತಮ ಫಸಲು ಬಂದರೆ  ವಾರ್ಷಿಕವಾಗಿ ಸರಾಸರಿ 15 ರಿಂದ 20 ಕ್ವಿಂಟಲ್ ಹಣ್ಣುಗಳು ದೊರೆಯುತ್ತವೆ.

  ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ.  ಬಿದ್ದ ಅಥವಾ ಕೊಯ್ಲು ಮಾಡಿದ ಉಪ್ಪಾಗೆ ಹಣ್ಣು ಕಾಯಿಗಳನ್ನು ಅದರ ಬೀಜಗಳನ್ನು ತೆಗೆದು ಹೆಣೆದ ಬಿದಿರುವಿನ ತಟ್ಟಿ, ಕಬ್ಬಿಣದ ಪರದೆ ಮೇಲೆ ಬೆಂಕಿಯ ಶಾಖದಿಂದ ಒಣಗಿಸಲಾಗುತ್ತದೆ.  ಹೀಗೆ ಒಣಗಿಸಿದ ಸಿಪ್ಪೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಕೆಲವರು ಮನೆಮನೆಗೆ ತೆರಳಿ ಖರೀದಿಸಿದರೆ, ಉಳಿದಂತೆ ನಗರಗಳಲ್ಲಿ ವ್ಯಾಪಾರಸ್ಥರು ಖರೀದಿ ಮಾಡುತ್ತಾರೆ.  ಹಣ್ಣಿನ ನೀರನ್ನು ಇಂಗಿಸಿ ತಯಾರಿಸಿದ ಹುಳಿನೀರು ಕೂಡ ಹೆಚ್ಚಾಗಿ ಬಳಸುತ್ತಾರೆ. ಕೊಡಗು, ಕೇರಳ  ಭಾಗದಲ್ಲಿ ತಯಾರಿಸುವ ಮಾಂಸಹಾರದಲ್ಲಿಇದನ್ನು ಬಳಸಲಾಗುತ್ತದೆ. ಇನ್ನೂ ಹಂದಿ ಮಾಂಸದ ವ್ಯಂಜನಗಳನ್ನು ತಯಾರಿಕೆಯಲ್ಲಿ ಈ ಕಾಚಂಪುಳಿಯದ್ದೆ ಪ್ರಧಾನ ಪಾತ್ರ. ಜೊತೆಗೆ ಕೊಡಗಿನ ಭಾಗದಲ್ಲಿ ತಯಾರಿಸುವ ಇನ್ನಿತರ ಪದಾರ್ಥಗಳಲ್ಲಿ ಅಂದರೆ, ಮೀನು, ಮಾಂಸಗಳ ಅಡುಗೆಯಲ್ಲಿ ಹುಳಿ ಪದಾರ್ಥಕ್ಕಾಗಿ ಇದನ್ನೇ ಬಳಸಲಾಗುತ್ತದೆ. ಬಹುತೇಕ ಜನರು  ಮುಂಗಾರು ಆರಂಭವಾಗುತ್ತಿದ್ದಂತೆಯೇ ಪಣಂಪುಳಿ ಅಥವಾ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ, ಅದರ ಸಿಪ್ಪೆಯನ್ನು ಒಣಗಿಸಿ, ಅದರ ರಸವನ್ನು ಸಂಗ್ರಹಿಸಿ ಕುದಿಸಿ ಕಾಚಂಪುಳಿ  ತಯಾರು ಮಾಡಿ ಶೇಖರಿಸಿ ಇಟ್ಟುಕೊಂಡಿರುತ್ತಾರೆ. ಒಂದು ಕಿಲೋ ಒಣಸಿಪ್ಪೆ ಆಗಲು ಸುಮಾರು ಮೂರು ಕಿಲೋ ಹಣ್ಣುಗಳು ಬೇಕಾಗುತ್ತವೆ. ಸರಿಯಾಗಿ ಒಣಗಿದೆ ಸಿಪ್ಪೆಯನ್ನು ಎರಡು ವರ್ಷಗಳ ಕಾಲ ಕೆಡದೇ ಇಡಬಹುದು. ಉಪ್ಪು ಸೇರಿಸಿ ಗಾಳಿಯಾಡದಂತೆ ಕಟ್ಟಿಟ್ಟರೆ ಇನ್ನೂ ಹೆಚ್ಚಿನ ಕಾಲ ಇಡಬಹುದು.
ಇನ್ನು ಇದರಿಂದ ತಯಾರು ಮಾಡುವ ಕಾಚಂಪುಳಿಗೆ ಹೆಚ್ಚಿನ ಬೆಲೆಯಿದೆ.
 
ಉಪ್ಪಾಗೆಯಿಂದ ಕಾಚಂಪುಳಿ ತಯಾರು ಮಾಡುವುದು ಸಹ ಒಂದು ರೀತಿಯ ಸಾಹಸವೇ. ಮರದಿಂದ ನೆಲಕ್ಕೆ ಉದುರಿದ ಅಥವಾ ಕೊಯ್ಲು ಮಾಡಿದ ಹಣ್ಣುಗಳನ್ನು ಶೇಖರಿಸಿ, ತೊಳೆದು ಅದನ್ನು ಬಿದಿರಿನ ದೊಡ್ಡದಾದ ಬುಟ್ಟಿಯಲ್ಲಿ ಹಾಕಿ ಅದರ ರಸ ಸುರಿದು ಸಂಗ್ರಹವಾಗಲು ಮಣ್ಣಿನ ಅಥವಾ ಪ್ಲಾಸ್ಟಿಕ್ ನ ಪಾತ್ರೆಗಳನ್ನು ಕೆಳಗೆ ಇಡಲಾಗುತ್ತದೆ. ರಸವೆಲ್ಲವೂ ಅದರಲ್ಲಿ ಸಂಗ್ರಹವಾದ ಬಳಿಕ ಅದನ್ನು ಒಂದು ಮಣ್ಣಿನ ಮಡಿಕೆಯಲ್ಲಿ ಸುರಿದು ಉರಿಯಲ್ಲಿ ಚೆನ್ನಾಗಿ ಕುದಿಸಲಾಗುತ್ತದೆ. ನೀರು ಇಂಗಿ ರಸ ಮಂದವಾಗಿ ಕಪ್ಪು ಬಣ್ಣಕ್ಕೆ ತಿರುಗುವಂತೆ ನೋಡಿಕೊಳ್ಳಲಾಗುತ್ತದೆ. ತಣಿಸದ ಕಾಚಂಪುಳಿಯನ್ನು ಸೀಸದ ಬಾಟಲಿಯಲ್ಲಿ ತುಂಬಿಸಿಟ್ಟರೆ, ವರ್ಷಾನುಗಟ್ಟಲೆ ಬಳಕೆ ಯೋಗ್ಯವಾಗಿರುತ್ತದೆ. ತುಸು ಹದ ತಪ್ಪಿದರೂ ಕಾಚಂಪುಳಿಯ ಹದಗೆಟ್ಟುಹೋಗುತ್ತದೆ. ವಿವಿಧ ಗಾತ್ರದಲ್ಲಿ ಲಭ್ಯವಾಗುವ ಇದರಲ್ಲಿ ಹಲವು ಜೀವಸತ್ವಗಳು ಇರುವುದರಿಂದ ಆರೋಗ್ಯಕ್ಕೆ ತುಂಬಾ ಸಹಕಾರಿ ಎನ್ನಲಾಗಿದೆ. ಇದರಲ್ಲಿರುವ 'ಹೈಡಾಕ್ಸಿ ಸಿಟ್ರಿಕ್' ಎಂಬ ರಸಾಯನಿಕ ವಸ್ತುವು  ಮನುಷ್ಯನಲ್ಲಿ ದೇಹದಲ್ಲಿ ಇರುವ ಕೊಬ್ಬಿನಾಂಶವನ್ನು ಕರಗಿಸುವ ಗುಣವನ್ನು ಹೊಂದಿರುತ್ತದೆ. ಉಪ್ಪಾಗೆ ಹಣ್ಣಿನ ಸೇವನೆಯಿಂದ ಮಲಬದ್ಧತೆ, ಮುಟ್ಟಿನ ತೊಂದರೆ, ಜಂತುಹುಳದ ಬಾಧೆ ಮುಂತಾದವುಗಳನ್ನು ನಿವಾರಿಸಬಹುದು. ಕಣ್ಣುಉರಿ, ಕಾಲಿನ ಒಡಕಿಗೂ ಇದು ಮದ್ದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. 
ಹಣ್ಣಿನ ಬೀಜವು ಕೊಬ್ಬಿನಂಶ ಹೊಂದಿದ್ದು ಇದರಿಂದ ತುಪ್ಪವನ್ನು ತೆಗೆಯಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ ಕುಟ್ಟಿ ಬೇಯಿಸಿದರೆ ಇದರ ಕೊಬ್ಬು ಖಾದ್ಯ ತೈಲವಾಗಿ ಲಭ್ಯ. ಇದು ಹಳದಿ ಬಣ್ಣದಿಂದ ತುಪ್ಪದಂತೆ ಗಟ್ಟಿಯಾಗುವ ಗುಣವನ್ನು ಹೊಂದಿದ್ದು ತಿಂಡಿತಿನಿಸುಗಳ ತಯಾರಿಗೆ ಯೋಗ್ಯವಾಗಿದೆ. ಮಲೆನಾಡಿನಲ್ಲಿ ಇದು ಉಪ್ಪಾಗೆ ತುಪ್ಪ ಎಂದು ಬಳಸಲ್ಪಡುತ್ತದೆ. ಈ ಮರದ ಚೌಬೀನೆಯನ್ನು ಪೆಟ್ಟಿಗೆ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಮರದಿಂದ ಬರುವ ರೆಸಿನ್ನಿನಿಂದ ಹಳದಿ ಬಣ್ಣದ ಮೆರುಗೆಣ್ಣೆ ತಯಾರಿಸಲಾಗುತ್ತದೆ. ಹಣ್ಣಿನ ಸಿಪ್ಪೆಯ ಕಷಾಯ ಸಂಧಿವಾತಕ್ಕೆ ಮದ್ದು. ಪಶುಗಳ ಬಾಯಿ ಕಾಯಿಲೆಯಲ್ಲಿ ಹಣ್ಣಿನ ರಸವನ್ನು ಕೊಡುವುದುಂಟು.

  ಹಿಂದೆಲ್ಲಾ ಉಪ್ಪಾಗೆ  ಹಣ್ಣಿನ ಬೀಜಕ್ಕೆ ಬೂದಿಮಿಶ್ರ ಮಾಡಿ ಒಣಗಿಸಿಡುತ್ತಿದ್ದರು.  ನಂತರ ಬೀಜದ ಸಿಪ್ಪೆ ಸುಲಿದು, ತಿರುಳನ್ನು ಅರೆದು ದೊಡ್ಡ ದೊಡ್ಡ ಪಾತ್ರೆಯಲ್ಲಿ ಹಾಕಿ ಕುದಿಸಿ ಅದರಿಂದ ಬರುವ ತುಪ್ಪವನ್ನು  ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ವಿಶಿಷ್ಟ ರುಚಿ ಮತ್ತು ಸುವಾಸನೆಯನ್ನು ಹೊಂದಿರುವ ಈ ಉಪ್ಪಗೆ ಬೀಜದಿಂದ ತಯಾರಾದ ತುಪ್ಪವನ್ನು ನಿತ್ಯದ ಬಳಕೆಗೆ ಬಳಸಲಾಗುತ್ತಿತ್ತು. ಈ ಉಪ್ಪಗೆ ಸಂಸ್ಕರಣೆಗೆ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ ಜೊತೆಗೆ ಒಣಗಿದ ಮರ ಮೊಟ್ಟುಗಳು. ಸದ್ಯದ ಸ್ಥಿತಿಯಲ್ಲಿ ತಾಳ್ಮೆ ಎನ್ನುವುದು ನಾಪತ್ತೆಯಾಗಿ ಬಿಟ್ಟದೆ. ಇನ್ನೂ ಈ ಉಪ್ಪಾಗೆ ಹುಳಿ, ಕಾಚಂಪುಳಿ, ತುಪ್ಪ ಏನೆ ತಯಾರಿಸಬೇಕು ಎಂದರೆ ಮುಖ್ಯವಾಗಿ  ಬೇಕಾಗಿರುವ ಉರುವಲಿಗೆ ಬಳಸುವ ಒಣ ಕಟ್ಟಿಗೆ ಇಲ್ಲಾವಾಗಿದೆ. 

ಇಂದಿನ ಯುವ ಪೀಳಿಗೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲದಿರುವುದರಿಂದ ಉಪ್ಪಗೆ ಸಂಸ್ಕರಣೆಯ ಪದ್ಧತಿಗಳು ಮಾಯವಾಗುತ್ತಿದೆ. ಇನ್ನೂ ಕೆಲವು ಭಾಗದಲ್ಲಿ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಈ ಉಪ್ಪಗೆಯ ಸಿಪ್ಪೆ ಸಂಸ್ಕರಿಸುವುದನ್ನುಹಾಗೂ ಕಾಚಂಪುಳಿಯನ್ನು ಮಾಡುವುದು ಕಾಣಲು ಸಿಗುತ್ತದೆ, ಬಿಟ್ಟರೆ ಉಪ್ಪಗೆ ತುಪ್ಪ ಎನ್ನುವುದು ಇಂದಿನ ದಿನದಲ್ಲಿ ಮಾಯವಾಗಿದೆ. 







ಶ್ರೀನಾಥ್‌ ಜೋಶಿ ಸಿದ್ದರ
9060188081

Publisher: ಕನ್ನಡ ನಾಡು | Kannada Naadu

Login to Give your comment
Powered by