ಕನ್ನಡ ನಾಡು | Kannada Naadu

ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಕಮಲಾ ಹಂಪಾನಾ – ನುಡಿ ನಮನ

22 Jun, 2024

ಕಮಲಾ ಹಂಪಾನ  ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು.  ಅವರು ಶೈಕ್ಷಣಿಕ ವಲಯದಲ್ಲಿ  ಚಿರಪರಿಚಿತರು. ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿದ ಹೆಸರು. ಕಮಲಾ ಎಂದರೆ ತಾವರೆ, ಅದು ಕೆಸರಿನಲ್ಲಿ ಹುಟ್ಟಿದರೂ ಆಕಾಶದೆಡೆ ಮುಖ ಚಾಚಿದ್ದು ಕಮಲಾ ಹಂಪನಾ ಕೂಡ ಸಿರಿತನದಲ್ಲಿ ಹುಟ್ಟಿದ್ದರೂ ತಂದೆಯ ಸಾವಿನಿಂದ ಬಡತನದ ಬೆಂಕಿಗೆ ಬಿದ್ದು ನರಳಿದವರು. ಹೋರಾಟದಿಂದಲೇ ಸಿದ್ದಿಯನ್ನು ಪಡೆದವರು. ಕಥೆ, ಕಾವ್ಯ, ನಾಟಕ, ಸಂಶೋಧನೆ, ಸಂಪಾದನೆ, ವಿಮರ್ಶೆ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ  ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.
       ಬಿ.ಎ, ಆನರ್ಸ್ ಓದುವ ಸಮಯದಲ್ಲಿ ಅವರಿಗೆ ಗುರುಗಳಾಗಿದ್ದವರು ಪ್ರೊ. ತೀ.ನಂ.ಶ್ರೀ,  ಡಿ. ಎಲ್. ನರಸಿಂಹಾಚಾರ್, ತ. ಸು. ಶಾಮರಾಯರು, ಕೆ. ವೆಂಕಟರಾಮಪ್ಪ, ಎಸ್. ವಿ. ಪರಮೇಶ್ವರ ಭಟ್ಟರು, ಡಾ. ಎಸ್. ಶ್ರೀಕಂಠಶಾಸ್ತ್ರಿ  ಮುಂತಾದವರು.  ಜೊತೆಗಾರರಾಗಿ,  ಸಹಪಾಠಿಗಳಾಗಿದ್ದ, ಅ.ರಾ ಮಿತ್ರ, ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್. ಜಿ. ಸಣ್ಣಗುಡ್ಡಯ್ಯ ಮೊದಲಾದವರು ಇಂದು ಸಾಹಿತ್ಯ ಲೋಕದಲ್ಲಿ ಹೆಸರಾದವರು ಎಂಬ ಹೆಮ್ಮೆಯ ಭಾವ ಅವರದಾಗಿತ್ತು.  ಕಾಲೇಜಿನ ದಿನಗಳಿಂದಲೇ ಸಹಪಾಠಿಗಳಾಗಿ ಪರಸ್ಪರ ಪರಿಚಯದೊಂದಿಗೆ ದಂಪತಿಗಳಾದವರು ಎಚ್. ಪಿ. ನಾಗರಾಜಯ್ಯ ಮತ್ತು ಕಮಲಾ.  ಕಮಲಾ ಹಂಪನ ಅವರು 1959ರಿಂದ ಕನ್ನಡ ಅಧ್ಯಾಪಕರಾಗಿ ವೃತ್ತಿರಂಗ ಪ್ರವೇಶಿಸಿದರು.  18ನೆಯ ಶತಮಾನದ ಪರಮದೇವ ಕವಿಯ ‘ತುರಂಗ ಭಾರತ – ಒಂದು ಅಧ್ಯಯನ’ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದರು.  ಪರಮದೇವನ ಕುರಿತು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಚ್ಚು ಕೆಲಸಗಳಾಗದಿರುವುದನ್ನು ಗಮನಿಸಿದ ಕಮಲಾ ಹಂಪನಾ ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ. 
ಕಮಲಾ ಹಂಪನಾ ಅವರ ವ್ಯಕ್ತಿತ್ವವನ್ನು ನಾಲ್ಕು ಮುಖಗಳಾಗಿ ವಿಂಗಡಿಸ ಬಹುದು. ಶೈಕ್ಷಣಿಕ, ಕೌಟುಂಬಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ. ಈ ನಾಲ್ಕೂ ನೆಲೆಯಲ್ಲಿಯೂ ಅವರು ಸಮರ್ಪಕತೆ ಮತ್ತು ಸಮಾನತೆಯನ್ನು ಸಾಧಿಸಿದ್ದಾರೆ. ವ್ಯಕ್ತಿಚಿತ್ರಣಗಳನ್ನು ರಚಿಸುವಲ್ಲಿ ಅವರು ಸಿದ್ದಹಸ್ತರು. ‘ಮುಡಿಮಲ್ಲಿಗೆ’ ಮತ್ತು ‘ಆಮುಖ’  ಅವರ ಎರಡು ಗಮನ ಸೆಳೆಯುವಂತಹ ಕೃತಿಗಳು. ಮುಡಿಮಲ್ಲಿಗೆ 1966-81ರವರೆಗೆ ಬರೆದ ನುಡಿಚಿತ್ರಣಗಳನ್ನು ಒಳಗೊಂಡಿದೆ. ಹಿರಿಯರಾದ ಡಿ.ಎಲ್.ನರಸಿಂಹಾಚಾರ್, ಗಳಗನಾಥ, ಪುತಿನ, ಮಾತೃಶ್ರೀ ರತ್ನಮ್ಮ ಮೊದಲಾದವರ ಹಿರಿತನವು ಇಲ್ಲಿ ಚಿತ್ರಿತವಾಗಿದ್ದರೆ ‘ಆಮುಖ’ ದಲ್ಲಿ ಸಾಧಕರ ಪತ್ನಿಯರ ವ್ಯಕ್ತಿ ಚಿತ್ರಣಗಳು ಮೂಡಿ ಬಂದಿವೆ. ಆಕಾಶವಾಣಿಯಲ್ಲಿ ಚಿಂತನ, ರೂಪಕ, ನಾಟಕ ಹೀಗೆ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಕಮಲಾ ಹಂಪನಾ ಅವರು ನೀಡಿದ್ದಾರೆ. ಅದನ್ನು ಪುಸ್ತಕ ರೂಪದಲ್ಲಿಯೂ ತಂದಿದ್ದಾರೆ. ಇಲ್ಲೊಂದು ವಿಶೇಷತೆ ಇದೆ. ತಮ್ಮ ಪಿ.ಎಚ್.ಡಿ ಮಾರ್ಗದರ್ಶಕರಾದ ಡಾ.ಹಾಮಾ ನಾಯರು ‘ಸ’ಕಾರದಿಂದ ಆರಂಭವಾಗುವ ಕೃತಿಗಳನ್ನು ಹೊರ ತಂದರೆ ಕಮಲಾ ಅವರು ಬೆಳ್ಳಕ್ಕಿ, ಬಾಂದಳ, ಬಣವೆ, ಬಕುಳ, ಭೂಮಿಕ ಹೀಗೆ ‘ಬ’ಕಾರದಿಂದ ಆರಂಭವಾಗುವ ಕೃತಿಗಳನ್ನು ಹೊರ ತಂದರು, 

ಕಮಲಾ ಹಂಪನಾ ಅವರು ಪ್ರಕಟಿಸಿರುವ 50ಕ್ಕೂ ಹೆಚ್ಚು ಕೃತಿಗಳಲ್ಲಿ ‘ಸುಕುಮಾರ ಚರಿತ್ರೆಯ ಸಂಗ್ರಹ’, ‘ಭರತೇಶ ವೈಭವ’, ‘ಶ್ರೀ ಪಚ್ಚೆ’, ‘ಕೆ. ಎಸ್.ಧರಣೀಂದ್ರಯ್ಯನವರ ಸ್ಮೃತಿ ಗ್ರಂಥ’, ‘ಸಹಸ್ರಾಭಿಷೇಕ’, ‘ಚಾವುಂಡರಾಯ ಪುರಾಣ’, ‘ಡಾ. ಡಿ. ಎಲ್. ಎನ್. ಅವರ ಆಯ್ದ ಲೇಖನಗಳು’, ‘ಹಳೆಯ ಗದ್ಯ ಸಾಹಿತ್ಯ’, ‘ದಾನಚಿಂತಾಮಣಿ ಸ್ಮರಣ ಸಂಚಿಕೆ’ ಇವೆಲ್ಲವೂ ಸಂಪಾದಿತ ಕೃತಿಗಳಾಗಿವೆ.  ‘ಆದರ್ಶ ಜೈನ ಮಹಿಳೆಯರು’ ಎಂಬ ಕೃತಿ,  ಯಾರ ಗಮನಕ್ಕೋ ಬರದೆ ಅಜ್ಞಾತರಾಗಿ ಉಳಿದು ತಮ್ಮ ಶೌರ್ಯ, ಸಾಹಸ, ತ್ಯಾಗ, ಬಲಿದಾನ, ಪ್ರತಿಭೆ, ದಾನಗುಣ, ಇತ್ಯಾದಿಗಳಿಂದ ಆದರ್ಶಪ್ರಾಯರೆನಿಸಿಕೊಂಡ ಜೈನಮಹಿಳೆಯರಾದ ಕಾಳಲಾದೇವಿ, ಚಂಪಾದೇವಿ, ಅತ್ತಿಮಬ್ಬೆ ಮುಂತಾದವರನ್ನು ಪ್ರಾಕೃತ, ಸಂಸ್ಕೃತ, ಹಳಗನ್ನಡ ಕಾವ್ಯ, ಶಾಸನಗಳಿಂದ ಹೆಕ್ಕಿ ತೆಗೆದು ಅವರ ಉದಾತ್ತ ಚಿತ್ರಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ.  ‘ಮಹಾವೀರರ ಜೀವನ ಸಂದೇಶ’ 24ನೆ ತೀರ್ಥಂಕರರಾದ ಮಹಾವೀರರ ಕುರಿತಾಗಿದೆ.  ‘ಅನೇಕಾಂತಾವಾದ’ವು ಜೈನಧರ್ಮಕ್ಕೆ ಸಂಬಂಧಿಸಿದೆ.   

ಮಕ್ಕಳ ಸಾಹಿತ್ಯದ ಬಗ್ಗೆ ಹೇಳುವುದಾದರೆ,  ಕಮಲಾ ಅವರು ರಮ್ಯ, ರೋಚಕ, ಸರಳ ಶೈಲಿಯ ಮೂಲಕ ಓದುಗರಿಗೆ ಪ್ರಿಯವೆನಿಸುವಂತೆ ಅಕ್ಕಮಹಾದೇವಿ, ವೀರವನಿತೆ ಓಬವ್ವ, ಹೆಳವನಕಟ್ಟೆ ಗಿರಿಯಮ್ಮ, ಡಾ.ಅಂಬೇಡ್ಕರ್, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ, ಮುಳುಬಾಗಿಲು ಇತ್ಯಾದಿ ಸುಂದರವಾದ ಕಥೆಗಳನ್ನು ರಚಿಸಿದ್ದಾರೆ. ಪ್ರಾಚೀನ ಕಾಲದಿಂದ ಇಂದಿನವರೆಗಿನ ಕನ್ನಡ ಕಾವ್ಯ ಕವಿಗಳ ಒಂದು ಸ್ಥೂಲ ಪರಿಚಯವನ್ನು ಸಹಾ ನೀಡಿದ್ದಾರೆ.  ಇವರ ಸಮಸ್ತ ಕೃತಿಗಳಲ್ಲಿ ಬದುಕಿನ ವಿವಿಧ ಮುಖಗಳ ಎಲ್ಲ ರೀತಿಯ ಚಿತ್ರಣಗಳೂ ಸಿಗುತ್ತವೆ.  ‘ಅಕ್ಷತೆ ಸುರಿದ ಕೈಲೇ ಸೀಮೆ ಎಣ್ಣೆ ಸುರಿವರಯ್ಯ, ಅರಿಸಿನ ಹಚ್ಚಿದ ಕೈಲೇ ಬೆಂಕಿ ಹಚ್ಚಿ ಸುಡುವರಯ್ಯ’ ಎಂಬ ಸಾಲುಗಳು ಹೆಣ್ಣಿನ ಸ್ಥಿತಿಗತಿಗಳ ಬಗೆಗಿನ ಅವರ ಕಾಳಜಿಗಳನ್ನು ಬಿಂಬಿಸುತ್ತವೆ.ರನ್ನ ಕವಿಗೆ ಆಶ್ರಯಕೊಟ್ಟು ಪೋಷಿಸಿದ ಅತ್ತಿಮಬ್ಬೆಯ ಬಗ್ಗೆ ಬೆಳೆಸಿಕೊಂಡ ಅಗಾಧ ಪ್ರೀತಿ, ಗೌರವ, ಭಕ್ತಿ, ಶ್ರದ್ಧೆಗಳಿಂದ ಅತ್ತಿಮಬ್ಬೆಯ ಹೆಸರು ಎಲ್ಲೆಲ್ಲೂ ಕೇಳಿ  ಬರುವಂತೆ ಶ್ರಮಿಸಿದ್ದರು.  ದಲಿತ ಸಮಸ್ಯೆ, ಭಾಷಾ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದರು.  ಚಳುವಳಿಗಳಿಗೆ ಸಕ್ರಿಯವಾಗಿ ಸ್ಪಂದಿಸಿದ್ದರು. 

ಕನ್ನಡ ಸಾಹಿತ್ಯಕ್ಕೆ ಮೆರಗು ನೀಡಿದ ಕೆಲವು ಸಾಹಿತ್ಯ ದಂಪತಿ ಇದ್ದಾರೆ. ಇವರಲ್ಲಿ ಹಂಪನಾ ಮತ್ತು ಕಮಲಾ ಹಂಪನಾ ಜೋಡಿ ಮುಖ್ಯವಾದದ್ದು. ಅವರು ನೀಡಿದ ಕೊಡುಗೆ ದೊಡ್ಡದು. ಈಗ ಹಂಪನಾ ಒಂಟಿಯಾಗಿದ್ದಾರೆ.  ಸದಾ ಕನ್ನಡದ ಕುರಿತಾದ ಅಪಾರ ಪ್ರೀತಿ ತುಂಬಿ ತುಳುಕಿಸಿಕೊಂಡು ಅದನ್ನು ತನ್ನ  ಬಳಿ ಬಂದವರಿಗೆಲ್ಲ ಸಿಹಿ ಹಂಚುವಂತೆ ಆಪ್ತವಾಗಿ ನೀಡುತ್ತಿದ್ದ ಕಮಲಾ ಹಂಪನಾ  ಹೊರಟು ಬಿಟ್ಟಿದ್ದಾರೆ. ಅವರಿಗೆ  ಅಂತಿಮ ನಮನಗಳು



ಎನ್.ಎಸ್.ಶ್ರೀಧರ ಮೂರ್ತಿ 
  ಹಿರಿಯ ಬರಹಗಾರು

Publisher: ಕನ್ನಡ ನಾಡು | Kannada Naadu

Login to Give your comment
Powered by