12ನೇ ಅಕ್ಕ ವಿಶ್ವ ಸಮ್ಮೇಳನಕ್ಕೆ ದಿನ ನಿಗದಿ...! ವಿಭಿನ್ನ ವಿಶೇಷತೆಯುಳ್ಳ ಜಾಗತಿಕ ಮಟ್ಟದ ಕನ್ನಡ ಸಮ್ಮೇಳನ..!!
15 Jun, 2024
ಬೆಂಗಳೂರು : ಜಾಗತಿಕ ಮಟ್ಟದಲ್ಲಿರುವ ಸಮಸ್ತ ಕನ್ನಡಿಗರ ಹೆಮ್ಮೆಯ ʻಅಕ್ಕ ವಿಶ್ವ ಸಮ್ಮೇಳನʼದ ದಿನಾಂಕ ಫಿಕ್ಸ್ ಆಗಿದ್ದು, ಕನ್ನಡದ ಡಿಂಡಿಮ ಬಾರಿಸುವದಕ್ಕೆ ಅಮೆರಿಕಾ ಕನ್ನಡ ಕೂಟ ಸಜ್ಜಾಗಿದೆ. ಕನ್ನಡದ ಕಂಪನ್ನು ಕಳೆದ ಶತಮಾನಗಳಿಂದ ವಿಶ್ವದಾಧ್ಯಂತ ಪಸರಿಸುವ ಕಾಯಕದ ಪೈಕಿ ಈ ಸಮ್ಮೇಳನವು ಒಂದು.

ಕನ್ನಡ ನಾಡಿನ ಶ್ರೀಮಂತ ಭಾಷೆ, ಕಲೆ, ಪರಂಪರೆ, ಸಂಸ್ಕೃತಿಯನ್ನು ಸಪ್ತ ಸಾಗರದಾಚೆ ಉತ್ತಿ ಬಿತ್ತಿ ಬೆಳೆಸುವ 12ನೇ ಅಕ್ಕ ವಿಶ್ವ ಸಮ್ಮೇಳನ – 2024 ಅನ್ನು ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಅದ್ಧೂರಿಯಾಗಿ ನಡೆಸಲು ತಿರ್ಮಾನಿಸಲಾಗಿದೆ. ಅಗಷ್ಟ್ 30 ರಿಂದ ಸಪ್ಟೆಂಬರ್ 1ರವರೆಗೆ ಮೂರು ದಿನಗಳ ಕಾಲ 12ನೇ ಅಕ್ಕ ವಿಶ್ವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಅಮೆರಿಕ ಕನ್ನಡ ಕೂಟಗಳ ಒಕ್ಕೂಟದ (ಅಕ್ಕ) ಅಧ್ಯಕ್ಷರಾದ ರವಿ ಬೋರೆಗೌಡ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳನ್ನು ಉದೇಶಿಸಿ ಮಾತನಾಡಿದ ಅವರು, ಅಮೆರಿಕದಲ್ಲಿ ಇರುವ ಒಟ್ಟು 42 ಕನ್ನಡ ಸಂಘಗಳು ಸೇರಿ ಈ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಸಮ್ಮೇಳನದ ವೈಶಿಷ್ಟ್ಯಗಳು:
ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಗಟ್ಟಿಗೊಳಿಸುವ ಕಾರಣಕ್ಕೆ ಹಲವು ಸಾಹಿತಿಕ, ಸಾಂಸ್ಕೃತಿಕ ಹಾಗೂ ಸ್ಪರ್ಧಾಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ಅಮೆರಿಕಾದಲ್ಲಿ ನೆಲೆ ನಿಂತ ಎಲ್ಲಾ ವಯೋಮಾನದ ಕನ್ನಡಿಗರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಕರ್ನಾಟಕದಿಂದ ಆಗಮಿಸಲಿರುವ ಗಣ್ಯರಿಂದ ಗೌರವಿಸಲಾಗುವುದು. ಕನ್ನಡ ನಾಡಿನ ಕಲೆ, ಸಂಸ್ಕೃತಿ, ಜನ ಜೀವನವನ್ನು ಬಿಂಬಿಸುವ ವಿವಿಧ ಮಾದರಿಯ ವಸ್ತ್ರ ವಿನ್ಯಾಸಗಳನ್ನೊಳಗಂಡ ಫ್ಯಾಶನ್ ಶೊ ನಡೆಯಲಿದೆ. ಸಮ್ಮೇಳನವು ಅರ್ಥಪೂರ್ಣವಾಗಿಸುವ ಹಿನ್ನೆಲೆಯಲ್ಲಿ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಲಾಗಿದೆ. ಈ ಸಾಹಿತ್ಯ ಗೋಷ್ಟಿಯಲ್ಲಿ ಅಮೆರಿಕಾ ಮತ್ತು ಕರ್ನಾಟಕದ ಸಾಹಿತಿಗಳ ನಡುವಿನ ಸಮ್ಮಿಲನ ಮತ್ತು ಸಾಹಿತಿಕ ವಿಚಾರ ವಿನಿಮಯಗಳು ನಡೆಯಲಿವೆ.
ಅಮೆರಿಕಾದಲ್ಲಿ ನೆಲೆಸಿ ಅಲ್ಲಿಯೇ ತಮ್ಮ ವಾಣಿಜ್ಯೋದ್ಯಮವನ್ನು ಸ್ಥಾಪಿಸಿ ಯಶಶ್ವಿ ಉದ್ಯಮಿಗಳಾಗಲು ಇರುವ ವಿವಿಧ ಅವಕಾಶಗಳು, ಅದಕ್ಕೆ ಬೇಕಿರುವ ವ್ಯವಸ್ಥೆಗಳ ಕುರಿತು ವಿಶೇಷ ಚರ್ಚೆನಡೆಸುವ ಮೂಲಕ ಅಮೆರಿಕಾದ ಕನ್ನಡ ಬಿಜಿನೆಸ್ ಫೊರಂ ಗಟ್ಟಿಗಳಿಸುವ ಮಹತ್ವದ ಉದ್ದೇಶ ಈ ಬಾರಿಯ 12ನೇ ಅಕ್ಕ ವಿಶ್ವ ಸಮ್ಮೇಳನ ಇಟ್ಟುಕೊಂಡಿದೆ. ಅದರೊಂದಿಗೆ ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಕನ್ನಡ ನಾಡನ್ನು ಪ್ರತಿನಿಧಿಸುವ ವಿಶೀಷ್ಠ ತಿಂಡಿ ತಿನಿಸುಗಳು, ಭಕ್ಷ ಭೋಜನಗಳು ಇರಲಿದ್ದು, ಅಮೇರಿಕಾದಲ್ಲಿಯೂ ಕನ್ನಡ ತಿಂಡಿಗಳು ಲಭ್ಯವಾಗಲಿದೆ. ಕನ್ನಡ ನಾಡಿನ ಬಹುತೇಕ ಎಲ್ಲಾ ಮಾದರಿಯ, ಎಲ್ಲಾ ವಲಯಗಳ ಪಾಕ ಪದ್ದತಿಯ ಪರಿಣಿತರು ಅಕ್ಕ ಸಮ್ಮೇಳನದಲ್ಲಿ ತಮ್ಮ ತಮ್ಮ ಅಡುಗೆ ಕೈಚಳಕವನ್ನು ಪ್ರದರ್ಶಿಸಲಿದ್ದಾರೆ. ಸಮ್ಮೇಳನದ ಮೂರು ದಿನಗಳನ್ನು ಅರ್ಥ ಪೂರ್ಣವಾಗಿಸುವ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ನಡೆಸಲಾಗುವುದು. ಅದರಲ್ಲಿಅಮೆರಿಕ, ಭಾರತ ಮತ್ತು ಕರ್ನಾಟಕದ ವಿವಿಧ ಸರಕಾರಿ ಇಲಾಖೆಗಳು, ಉದ್ಯಮಿಗಳು, ಕರಕುಶಲ ಕಲಾವಿದರು ಭಾಗವಹಿಸಿ ತಮ್ಮ ಉತ್ಪನಗಳನ್ನು, ಯೋಜನೆಗಳ ಪ್ರದರ್ಶವನ್ನು ಮಾಡಲಿದ್ದಾರೆ ಎಂದು ರವಿ ಬೋರೆಗೌಡ್ರು ತಿಳಿಸಿದ್ದಾರೆ.
12ನೇ ಅಕ್ಕ ವಿಶ್ವ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮ:
ಈ ಬಾರಿಯ 12ನೇ ಅಕ್ಕ ವಿಶ್ವ ಸಮ್ಮೇಳನವು ಜಾಗತಿಕ ಮಟ್ಟದಲ್ಲಿ ಆಕರ್ಷಣೆಯಾಗುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೂರು ದಿನಗಳ ಪ್ರಸ್ತುತ ಸಮ್ಮೇಳನದಲ್ಲಿ ಪ್ರತಿದಿನವೂ ಕನ್ನಡ ನೆಲ ಜಲದ ಸೊಗಡನ್ನು ಬಿಂಬಿಸುವ ಸಂಗೀತ, ಜಾನಪದ, ಸಾಹಿತ್ಯ ಕಾರ್ಯಕ್ರಮದ ಜೊತೆಗೆ ಕನ್ನಡ ಸಿನಿಮಾಗಳ ಕುರಿತ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಡಿನ ಪಾರಂಪರಿಕ ನೃತ್ಯ ರೂಪಗಳು, ಯಕ್ಷಗಾನ, ಡೊಳ್ಳು ಕುಣಿತ ಮತ್ತು ವೀರಗಾಸೆ ಸೇರಿದಂತೆ ಇತರ ಜನಪದ ಕಾರ್ಯಕ್ರಮಗಳು ಅಮೆರಿಕಾ ನೆಲದಲ್ಲಿ ಮೆಳೈಸಲಿದೆ. ಕನ್ನಡ ಕಲಾವಿದರು ರಚಿಸಿದ ಚಿತ್ರಗಳು, ಶಿಲ್ಪಿಗಳ ಮತ್ತು ಕರಕುಶಲ ತಜ್ಞರು ತಯಾರಿಸಿದ ವಸ್ತುಗಳ ಪ್ರದರ್ಶನ ಹಮ್ಮಿಕೊಂಡಿದ್ದು, ದೇಶದ ಖ್ಯಾತ ಗಾಯಕ ಹಾಗೂ ಕನ್ನಡಿಗರ ಹೆಮ್ಮೆಯ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣ, ನವೀನ್ ಸಜ್ಜು, ಅನುರಾಧ ಭಟ್ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡಿಗರ ಹೃದಯ ಮಂದಿರದಲ್ಲಿ ನಿತ್ಯ ನಿರಂತರವಾಗಿ ನೆಲೆ ನಿಂತ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ವಿಶೇಷ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಕನ್ನಡದ ಪ್ರಶಿದ್ಧ ರಂಗಭೂಮಿಯಲ್ಲಿ ಪಳಗಿದ ರಂಗ ತಂಡಗಳಿಂದ ನಾಟಕ ಪ್ರದರ್ಶನಗಳು ನಡೆಯಲಿವೆ ಎನ್ನುವ ಮಹತ್ವದ ಮಾಹಿತಿಯನ್ನು 12ನೇ ಅಕ್ಕ ವಿಶ್ವ ಸಮ್ಮೇಳನದ ಆಯೋಜಕರು ತಿಳಿಸಿದ್ದಾರೆ.

ಈ ಬಾರಿಯ ಅತಿಥಿಮಾನ್ಯರು:
12ನೇ ಅಕ್ಕ ವಿಶ್ವ ಸಮ್ಮೇಳನದಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡ ಗಣ್ಯರು, ಸರಕಾರದ ವಿವಿಧ ಇಲಾಖೆಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿರುವ ಸಚಿವರು, ನಾಡಿನ ಆಧ್ಯಾತ್ಮಿಕ ಚೇತನಗಳು, ಮಠ ಪರಂಪರೆಯ ಯತಿಗಳು, ಸಾಹಿತಿಗಳು, ಬರಹಗಾರರು, ಕವಿಗಳು, ಉದ್ಯಮಿಗಳು, ಚಲನಚಿತ್ರ ತಾರೆಯರು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ .
ವಿಶೇಷ ಆಕರ್ಷಣೆಗಳು:
ಪ್ರಸ್ತುತ ಸಮ್ಮೇಳನದಲ್ಲಿ ಯುವಕ, ಯುವತಿಯರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳೊಂದಿಗೆ, ತಂತ್ರಜ್ಞಾನದಲ್ಲಿ ನಾವಿನ್ಯತೆಗಳು, ನವೀನ ತಂತ್ರಜ್ಞಾನ ಉತ್ಪನ್ನಗಳ ಪರಿಚಯ ಮತ್ತು ಅವರ ಸಾಧನೆಗಳ ಅನಾವರಣ ಮಾಡಲಾಗುವುದು. ಹೊಸ ತಂತ್ರಜ್ಞಾನಗಳಿಂದ ಕನ್ನಡಿಗರಿಗೆ ಹಾಗೂ ಕನ್ನಡ ನಾಡಿಗೆ ಯಾವ ರೀತಿಯ ಪರಿಣಾಮಗಳಾಗಬಹುದು ಎನ್ನುವ ಕುರಿತ ಚರ್ಚೆಗಳು ಸಮ್ಮೇಳನ ಮೂರು ದಿನಗಳಲ್ಲಿಯೂ ನಡೆಯಲಿವೆ. ಇದರೊಂದಿಗೆ ಆರೋಗ್ಯ ಮತ್ತು ಆಯುಷ್ಯ, ಶಿಕ್ಷಣ ಮತ್ತು ಕನ್ನಡಿಗರಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳ ಕುರಿತ ಸಂವಾದಗಳು. ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಸಂಪರ್ಕಿಸಲು ನೆಟ್ ವರ್ಕಿಂಗ್ ಕಾರ್ಯಕ್ರಮಗಳನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಾಗಿದೆ.

ಕನ್ನಡ ಕಲಿಯೋಣ:
ಬನ್ನಿ ಕನ್ನಡ ಕಲಿಯೋಣ ಎಂಬ ವಿಶೇಷ ಕಾರ್ಯಕವನ್ನು ಅಮೆರಿಕಾ ಕನ್ನಡ ಸಂಘಗಳ ಒಕ್ಕೂಟವು ಆಯೋಜಿಸಿದೆ. ಈ ವಿಶೇಷ ಕಾರ್ಯಕ್ರಮದ ಅಡಿಯಲ್ಲಿಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಮತ್ತು ಕನ್ನಡ ಭಾಷೆಯ ಕಲಿಕೆಯಲ್ಲಿ ಆಸಕ್ತಿ ತೋರಿಸುವ ಎಲ್ಲರಿಗೂ ಕನ್ನಡವನ್ನು ಕಲಿಸುವ ಉದ್ದೇಶ ಹೊಂದಲಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವ್ಯಸ್ಥಯನ್ನು ಮಾಡಲಾಗಿದೆ ಎನ್ನುವ ಮಹತ್ವದ ಮಾಹಿತಿಯನ್ನು 12ನೇ ಅಕ್ಕ ವಿಶ್ವ ಸಮ್ಮೇಳನದ ಪದಾಧಿಕಾರಿಗಳು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ 12ನೇ ಅಕ್ಕ ವಿಶ್ವ ಸಮ್ಮೇಳನದ ಕಾರ್ಯದರ್ಶಿ ಮಾದೇಶ ಬಸವರಾಜು, ಸಂಚಾಲಕ ಡಾ. ನವೀನ್ ಕೃಷ್ಣ, ಅಕ್ಕ ಭಾರತದ ಸಂಚಾಲಕರಾದ ತಿಮ್ಮಪ್ಪಗೌಡ, ಮಾಧ್ಯಮ ಸಂಚಾಲಕ ಸಿ.ಆರ್. ಮಂಜುನಾಥ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu