ಈ ಬಾರಿ ಮದ್ಯ ಪ್ರಿಯರ ಮೊದಲ ಆಯ್ಕೆ ಬಿಯರ್...!
17 May, 2024
ಬೆಂಗಳೂರು : ನಾಡಿನ ಹಲವೆಡೆ ಸದ್ಯ ಮಳೆಯಾಗುತ್ತಿದ್ದರೂ, ಈ ಬಾರಿಯ ಬಿಸಿಲನ್ನು ನೆನೆದು ಕೊಂಡಾಗಲೆಲ್ಲ ಒಮ್ಮೆ ಮೈ ಬೆವರುದಂತೂ ಸತ್ಯ...! ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟ ಸೇರಿದಂತೆ ಬಹುತೇಕ ಭಾಗಗಳಲ್ಲಿ ಈ ಬಾರಿ ಸಕತ್ ತಾಪಮಾನ ಏರಿಕೆಯಾಗಿತ್ತು. ಆದರೆ ಕಳೆದ ಒಂದು ವಾರದಲ್ಲಿ ಅಲ್ಲಲ್ಲಿ ಒಂದಿಷ್ಟು ಮಳೆಯಾಗಿರುವುದರಿಂದ ನಾಡಿನ ವಾತಾವರಣ ತುಸು ಹಿತವಾಗುತ್ತಿದೆ. ಆದರೆ ಬಿಸಿಲ ನಾಡು ಎಂದೇ ಕರೆಸಿಕೊಳ್ಳುವ ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಬಿಸಿಯ ಝಳ ಕಮ್ಮಿಯಾಗುವ ಲಕ್ಷಣವೇ ಇಲ್ಲ.

ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ರಾಜ್ಯದಾಧ್ಯಂತ ಬಿಯರ್ ಮಾರಾಟದಲ್ಲಿ ಶೇ 45ರಷ್ಟು ಏರಿಕೆ ಕಂಡಿದೆ. ಈ ಬಾರಿಯ ಬಿಸಿಲ ತಾಪದ ಜೊತೆಗೆ ಲೋಕಸಭಾ ಚುನಾವಣೆಯ ಎಫೆಕ್ಟ್ ಸಹ ಇದಕ್ಕೆ ಕಾರಣ ಇರಬಹುದು. ಒಟ್ಟಾರೆಯಾಗಿ ಈ ಬಾರಿ ರಾಜ್ಯದೆಲ್ಲೆಡೆ ಬಿಯರ್ ಹಾಗೂ ದೇಶೀಯ ಮದ್ಯದ (ಐಎಂಎಲ್) ಮಾರಾಟ ಜೋರಾಗಿ ಸಾಗಿದೆ.

ಇನ್ನೂ ಕಲ್ಯಾಣ ಕರ್ನಾಟಕ ಬಿಸಿಲಿನಲ್ಲಿ ಇನ್ನೂ ಸುಡುತ್ತಿದ್ದು, ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ವರದಿಯಾಗುತ್ತಿದೆ. ಅಲ್ಲಿಯ ಜಿಲ್ಲೆಗಳ ಪೈಕಿ ಅತಿಹೆಚ್ಚು ಬಿಸಿಲು ಇರುವುದು ರಾಯಚೂರು ಜಿಲ್ಲೆಯಲ್ಲಿ...! ಬಿಸಿಲಿನ ತಾಪಕ್ಕೆ ಜನರು ತಂಪು ಪಾನಿಯ ಸೇರಿದಂತೆ ಚಿಲ್ಡ್ ಬಿರಯ್ ಮೊರೆಹೊಗುತ್ತಿದ್ದಾರೆ. ಪರಿಣಾಮ ರಾಯಚೂರು ಜಿಲ್ಲೆಯ ಮದ್ಯ ಪ್ರಿಯರು ದಾಖಲೆಯ ಬಿಯರ್ ಸೇವಿಸಿ ದೇಹ ತಂಪು ಮಾಡಿಕೊಂಡಿರುವ ಬಗ್ಗೆ ಅಬಕಾರಿ ಇಲಾಖೆಯ ದಾಖೆಲೆಯಿಂದ ಅರ್ಥವಾಗುತ್ತಿದೆ.
ರಾಯಚೂರು ಜಿಲ್ಲೆ ಒಂದರಲ್ಲಿ ಕಳೆದ ಒಂದು ವರ್ಷದಲ್ಲಿ ಜನರು ಕುಡಿದಷ್ಟು ಬಿಯರ್ ಅನ್ನು ಈ ವರ್ಷದ ಬೇಸಿಗೆಯ ಅಂತ್ಯದೊಳಗೆ ಕುಡಿದು ಮುಗಿಸಿ ಜಿಲ್ಲೆಯಲ್ಲಿ ದಾಖಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ರಾಯಚೂರು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ಕಾರಣ ಪಕ್ಕದ ರಾಜ್ಯಗಳ ಮದ್ಯ ಇಲ್ಲಿ ಕಡಿಮೆ ದರದಲ್ಲಿ ದೊರೆಯುತ್ತಿದೆ. ಮತ್ತೊಂದೆಡೆ ಹೊರ ರಾಜ್ಯದಿಂದ ಕಲಬೆರಕೆ ಮದ್ಯವು ಬಹುತೇಕ ಕೆಲವು ಕಡೆಯಲ್ಲಿ ಮಾರಾಟವಾಗುತ್ತದೆ. ಹೀಗಾಗಿ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಈ ಕಳಪೆ ಮದ್ಯ ಬಿಟ್ಟು, ಬಿಯರ್‌ನ ಮೊರೆಹೊಗುತ್ತಿದ್ದಾರೆ ಎನ್ನುವುದು ಪಾನಪ್ರಿಯರ ಅಭಿಪ್ರಾಯವಾಗಿದೆ.
ರಾಯಚೂರು ಜಿಲ್ಲೆಯಲ್ಲಿ 2023ರ ಜೂನ್‌ನಲ್ಲಿ 69,488 ಬಾಕ್ಸ್‌ಗಳು ಹಾಗೂ ಡಿಸೆಂಬರ್‌ನಲ್ಲಿ 62,164 ಬಿಯರ್ ಬಾಕ್ಸ್ ಮಾರಾಟವಾಗಿದ್ದವು. ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳೊಂದರಲ್ಲೇ 70,209 ಬಾಕ್ಸ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿವೆ. ಮಾನ್ವಿ, ರಾಯಚೂರು ಹಾಗೂ ದೇವದುರ್ಗ ತಾಲ್ಲೂಕು ರಾಯಚೂರು ಡಿಪೊ ವ್ಯಾಪ್ತಿಯಲ್ಲಿವೆ. ಮೂರು ತಾಲ್ಲೂಕುಗಳಲ್ಲಿ ಏಪ್ರಿಲ್‌ನಲ್ಲಿ ಒಟ್ಟು 94,957 ಬಾಕ್ಸ್ ಮದ್ಯ ಹಾಗೂ 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. 2023ರ ಏಪ್ರಿಲ್‌ನಲ್ಲಿ 94,896 ಬಾಕ್ಸ್ ಮದ್ಯ ಹಾಗೂ 46,553 ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಜಿಲ್ಲೆಯಲ್ಲಿ ಫೆಬ್ರುವರಿಯಿಂದಲೇ ರಣ ಬಿಸಿಲು ಕಾಣಸಿಕೊಂಡಿರುವುದರಿಂದ, ಮದ್ಯಪ್ರಿಯರು ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ತೆರಳುವ ಬದಲು ಪರ್ಯಾಯ ಸ್ಥಳಗಳನ್ನು ಹುಡುಕಿಕೊಂಡು ತಂಡೋಪತಂಡವಾಗಿ ತೆರಳಿ ಮದ್ಯ ಪಾನ ಮಾಡುವುದು ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.
2024ರ ಫೆಬ್ರುವರಿಯಲ್ಲಿ 63,464, ಮಾರ್ಚ್‌ನಲ್ಲಿ 62,679 ಹಾಗೂ ಏಪ್ರಿಲ್‌ನಲ್ಲಿ 70,209 ಬಾಕ್ಸ್ ಬಿಯರ್ ಮಾರಾಟವಾಗಿದೆ. ಫೆಬ್ರುವರಿಯಲ್ಲಿ1,10,527, ಮಾರ್ಚ್‌ನಲ್ಲಿ1,03,888 ಹಾಗೂ ಏಪ್ರಿಲ್‌ನಲ್ಲಿ 94957 ಬಾಕ್ಸ್‌ಗಳಷ್ಟು ಮದ್ಯ ಮಾರಾಟವಾಗಿದೆ. ಇದನ್ನು ಕಳೆದ ವರ್ಷಕ್ಕೆ ಮಾರಾಟವಾದ ಬಿಯರ್‌ಗೆ ಹೊಲಿಸಿದರೆ, 2023ರಲ್ಲಿ ಜನವರಿಯಲ್ಲಿ47,379, ಫೆಬ್ರುವರಿಯಲ್ಲಿ 62,417, ಮಾರ್ಚ್‌ನಲ್ಲಿ58,190, ಏಪ್ರಿಲ್‌ನಲ್ಲಿ46553 ಹಾಗೂ ಮೇ ನಲ್ಲಿ 53,965 ಬಿಯರ್ ಮಾರಾಟವಾಗಿತ್ತು.
ಅಂತೆಯೇ ಕಳೆದ ಡಿಸೆಂಬರ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಕಾಲದಲ್ಲಿ 1,25,497 ಗರಿಷ್ಠ ಮದ್ಯ ಮಾರಾಟವಾದರೆ, 62,164 ಬಾಕ್ಸ್ ಬಿಯರ್‌ನ್ನು ಪಾನಪ್ರಿಯರು ಹಿರಿದ್ದರು. 2023 ವರ್ಷದ ಆರ್ಥಿಕ ವರ್ಷದಲ್ಲಿ 52,522 ಲಕ್ಷ ರೂ. ಮದ್ಯ ದಿಂದ ಹಾಗೂ 1,087 ಲಕ್ಷ ರೂ. ಬಿಯರ್ ನಿಂದ ಅಬಕಾರಿ ಇಲಾಖೆಯ ಖಜಾನೆಗೆ ಸೇರಿದೆ ಎನ್ನುವುದು ಅಬಕಾರಿ ಇಲಾಖೆ ನೀಡಿರುವ ಮಾಹಿತಿ.

ಅಬಕಾರಿ ಇಲಾಖೆಯ ಲೆಕ್ಕಾಚಾರದಂತೆ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಂತ ಗ್ರಾಮಾಂತರ ಪ್ರದೇಶದಲ್ಲಿ ಬಿಯರ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಇದಕ್ಕೆ ಇಲಾಖೆ ಅಧಿಕಾರಿಗಳನ್ನು ಅಧಿಕಾರಿಗಳು ಉದಾರಣೆಯ ಸಹಿತ ವಿವರಣೆ ನೀಡುತ್ತಿದ್ದಾರೆ. ಉದಾರಣೆಗೆ ತುಮುಕೂರು, ಚಾಮರಾಜನಗರ, ರಾಯಚೂರು ಜಿಲ್ಲೆಯ ಗುಂಡುಪ್ರಿಯರು ಈಗ ಮದ್ಯದಿಂದ ಸಿಫ್ಟ್ ಆಗಿ ಬಿಯರ್ ನತ್ತ ಮುಖಮಾದ್ದಾರಂತೆ. ಅಬಕಾರಿ ಇಲಾಖೆಯ ಅಂಕಿ - ಅಂಶದ ಪ್ರಕಾರ 2023 ಡಿಸೆಂಬರ್ ಹಾಗೂ ಕಳೆದ ಜನವರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಬಿಯರ್ ಮಾರಾಟಗೊಂಡ ಜಿಲ್ಲೆಗಳಲ್ಲಿ ತುಮುಕೂರು ಮೊದಲ ಸ್ಥಾನದಲ್ಲಿ ಇದ್ದರೆ ಚಾಮರಾಜನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬೇಸಿಗೆ ಸಂದರ್ಭದಲ್ಲಿ ಮಾತ್ರ ಬಿಯರ್ ಮಾರಾಟ ಚೇತರಿಕೆ ಕಾಣುತ್ತಿದ್ದ ಚಾಮರಾಜನಗರ, ತುಮುಕೂರುಗಳಲ್ಲಿ, ಎಲ್ಲಾ ಸಮಯದಲ್ಲಿಯೂ ಈಗ ಬಿಯರ್ ಮಾರಾಟವಾಗುವುದು ಅಧಿಕವಾಗಿದೆ. ಪರಿಣಾಮ ಇತರ ದೇಶಿಯ ಮದ್ಯಕ್ಕಿಂತ ಬಿಯರ್ ನಾಗಾಲೋಟದಲ್ಲಿ ಮುನ್ನುಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಎಂಬ ಒಟ್ಟು 4 ವಲಯಗಳಿದ್ದು 2022-23 ರಲ್ಲಿ 2,63,756 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2023-24 ರಲ್ಲಿ ಇದು 3,42,414ಕೇಸ್ ಮಾರಾಟವಾಗಿ ಶೇ.30 ರಷ್ಟು ಬಿಯರ್ ಸೇಲ್ ಅಧಿಕವಾಗಿದೆ. ಅಂದರೆ, 78,658 ಲಕ್ಷ ಕೇಸ್ ಹೆಚ್ಚು ಮಾರಾಟಗೊಂಡು ದಾಖಲೆಯಾಗಿದೆ.

ರಾಜ್ಯದಲ್ಲಿ ಬಿಯರ್ ಅಷ್ಟೇ ಅಲ್ಲ, ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ದೇಶೀಯ ಮದ್ಯಗಳ ಮಾರಾಟವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತಿದೆ. ಕಳೆದ ವರ್ಷ ಏ. 1ರಿಂದ 18ರವರೆಗೆ 217.81 ಲಕ್ಷ ಲೀಟರ್ (25.21 ಲಕ್ಷ ಪೆಟ್ಟಿಗೆಗಳು) ಐಎಂಎಲ್ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 244.25 ಲಕ್ಷ ಲೀಟರ್ (28.27 ಲಕ್ಷ ಪೆಟ್ಟಿಗೆಗಳು) ಐಎಂಎಲ್ ಮಾರಾಟವಾಗಿದೆ. ಇದರೊಂದಿಗೆ 26.44 ಲಕ್ಷ ಲೀಟರ್ (3.06 ಲಕ್ಷ ಪೆಟ್ಟಿಗೆಗಳು) ಮಾರಾಟ ಹೆಚ್ಚಳವಾಗಿದೆ. ಈ ಮೂಲಕ ಐಎಂಎಲ್ ಮಾರಾಟವು ಶೇ 12ರಷ್ಟು ವೃದ್ಧಿಯಾಗಿದೆ.
ರಾಜ್ಯದಲ್ಲಿ ಈ ಬಾರಿ ಬಿಯರ್ ಮಾರಾಟದಲ್ಲಿ ಈ ರೀತಿಯಾದ ಏರಿಕೆಗೆ ಮುಖ್ಯವಾಗಿ ತಾಪಮಾನ ಹೆಚ್ಚಳ ಕಾರಣವಾಗಿದೆ. ಜತೆಗೆ, ಲೋಕಸಭಾ ಚುನಾವಣಾ ಸಮಯವೂ ಸೇರಿಕೊಂಡಿರುವುದರಿಂದ ಮಾಮೂಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಮಾರಾಟವಾಗುತ್ತಿದೆ. ಅದರ ಜೊತೆ ಹಲವು ಬಹುರಾಷ್ಟ್ರೀಯ ಕಂಪನಿಗಳ ಬಿಯರ್‌ಗಳು ರಾಜ್ಯದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಗ್ರಾಹಕರ ಎದುರು ಹಲವು ಆಯ್ಕೆಗಳಿದ್ದು, ಬಿಯರ್ ಬೇಡಿಕೆ ಹೆಚ್ಚಾಗಲು ಇದೂ ಸಹ ಕಾರಣವಾಗಿದೆ ಎನ್ನುವುದು ಅಬಕಾರಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಈ ಮಧ್ಯ ಸರಕಾರ ಫೆ 1ರಿಂದ ಜಾರಿಗೆ ಬರುವಂತೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ 185 ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಇದರಿಂದಾಗಿ ಎಇಡಿ ಶೇ 10ರಷ್ಟು ಹೆಚ್ಚಳವಾಗಿದೆ. ಎಇಡಿ ಏರಿಕೆಯಿಂದಾಗಿ ಪ್ರತಿ ಬಾಟಲಿ ಬಿಯರ್ ದರವು ಬ್ರ್ಯಾಂಡ್‌ಗಳ ಆಧಾರದಲ್ಲಿ ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿದೆ. ಇದರೊಂದಿಗೆ ಕಳೆದ ಕೆಲವು ತಿಂಗಳ ಅವಧಿಯಲ್ಲಿ ಬಿಯರ್ ಬೆಲೆ ಪ್ರತಿ ಬಾಟಲ್‌ಗೆ ಸರಾಸರಿ ಸುಮಾರು 40 ರೂ.ವರೆಗೆ ಹೆಚ್ಚಳವಾಗಿದೆ. ಆದರೂ ಬಿಯರ್ ಖರೀದಿ ಮಾತ್ರ ತಗ್ಗಿಲ್ಲ. ಇದರ ಜೊತೆಗೆ ಜನರು ತಂಪು ಪಾನೀಯ, ಎಳನೀರು ಸೇವನೆ ಮಾಡುವುದು ಸಹಜವಾಗಿದೆ. ಆದರೂ ಈ ಬಾರಿ ಮದ್ಯ ಪ್ರಿಯರ ಮೊದಲ ಆಯ್ಕೆ ಬಿಯರ್ ಆಗಿದೆ..!
Publisher: ಕನ್ನಡ ನಾಡು | Kannada Naadu