ಉಡುಪಿ ಜಿಲ್ಲೆಯ ʻಮಾಂಜಿʼ ಈ ಗೊವೀಂದಣ್ಣ...!
16 May, 2024
ಉಡುಪಿ ಜಿಲ್ಲೆಯ ʻಮಾಂಜಿʼ ಈ ಗೊವೀಂದಣ್ಣ...!
ಸರಕಾರವೇ ನಾಚುವ ಕೆಲಸ ಮಾಡಿದ ಭೂಪ..!!
ರಸ್ತೆ ನಿರ್ಮಿಸಿ ಜನಮೆಚ್ಚುಗೆ ಗಳಿಸಿದ ಕಾರ್ಕಳದ ಶ್ರಮ ಜೀವಿ..!!!
ಉಡುಪಿ : ಸರಕಾರದ ಕೆಲಸ ಎಂದರೆ ದೇವರ ಕೆಲಸ ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಸರಕಾರ ಮಾಡಬೇಕಿದ್ದ ಜನಪರ ಕೆಲಸವನ್ನು ವ್ಯಕ್ತಿಯೊಬ್ಬ ತನ್ನ ತೋಳಬಲದಿಂದ ಮಾಡಿ ಮುಗಿಸಿದ್ದಾನೆ. ಸ್ವಂತ ಪರಿಶ್ರಮದಿಂದ ಜನಪರ ಕೆಲಸ ಮಾಡಿದ ಆತ ಮಹಾನ್ ವ್ಯಕ್ತಿಯಾಗುತ್ತಾನೆ. ಹಾಗೇಯೆ ಇಂದು ಎಲ್ಲರ ಗೌರವಕ್ಕೆ ಪಾತ್ರರಾಗಿರುವ ವ್ಯಕ್ತಿಯೇ ʻಗೋವಿಂದಣ್ಣʼ...!

ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಮಾಳ ಗ್ರಾಮದ ಪೇರಡ್ಕ ಗಿರಿಜನ ಕಾಲೋನಿ ನಿವಾಸಿ ʻಗೋವಿಂದ ಮಲೆಕುಡಿಯʼ ಅವರು ಸರಕಾರ, ಜನಪ್ರತಿನಿಧಿಗಳು ನಾಚುವಂತೆ ತಮ್ಮ ತೋಳಬಲದಿಂದ ತಮ್ಮ ಊರಿಗೆ ರಸ್ತೆ ನಿರ್ಮಾಣ ಮಾಡಿ ʻಬಿಹಾರದ ದಶರಥ ಮಾಂಜಿʼಯಂತೆ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ರಸ್ತೆ ಸಂಪರ್ಕ ಇಲ್ಲದೆ ತನ್ನ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗದೇ ಇದ್ದ ಬಿಹಾರದ ದಶರಥ ಮಾಂಜಿ ಏಕಾಂಗಿಯಾಗಿ ಕಲ್ಲಿನ ಪರ್ವತವನ್ನೇ ಕಡಿದು ರಸ್ತೆ ನಿರ್ಮಿಸಿದ ಮಹಾನ್ ಗಟ್ಟಿಗ..! ದಶರಥ ಮಾಂಜಿ ಯಂತೆ ಪರೋಪಕಾರದ ಕೆಲಸ ಮಾಡಿದ ಗೋವಿಂದ ಮಲೆಕುಡಿಯ ಈಗ ಉಡುಪಿ ಜಿಲ್ಲೆಯ ಕಣ್ಣಮಣಿಯಾಗಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಿರಿಜನ ಕಾಲೋನಿ ಪೇರಡ್ಕದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿವೆ. ಆದರೆ ಅಲ್ಲಿಗೆ ತೆರಳು ಸೂಕ್ತ ಸಮರ್ಪಕ ರಸ್ತೆಯೇ ಇರಲಿಲ್ಲ. ಕಿರಿದಾದ ಕಾಲು ದಾರಿಯೇ ಗತಿಯಾಗಿತ್ತು ಇಲ್ಲಿನ ಜನರಿಗೆ. ಪೇರಡ್ಕದ ಜನರು ಕೇವಲ ಕಾಲ್ನಡಿಗೆ ಸೀಮಿತವಾಗಿದ್ದ ತಮ್ಮೂರ ರಸ್ತೆಯನ್ನು ಅಭಿವೃದ್ಧಿಪಡಿಸಿ ಎಂದು ಅನೇಕ ಬಾರಿ ಸರಕಾರಕ್ಕೆ ಮನವಿ ನೀಡಿ, ಅಂಗಲಾಚುತ್ತಲೇ ಬಂದಿದ್ದರು. ಆದರೆ ಇಲ್ಲಿನ ಜನರ ಬೇಡಿಕೆಗಳು ಕೇವಲ ಸರಕಾರಿ ಪೈಲುಗಳಲ್ಲಿ ದೂಳು ತಿಂದವೇ ಹೋರತು ಕಾರ್ಯಗತವಾಗಿರಲಿಲ್ಲ. ಜನರ ಬೇಡಿಕೆಗೆ ಕವಡೆಕಾಸಿನ ಕಿಮ್ಮತ್ತು ನೀಡಿದ ಅಧಿಕಾರಿಗಳ ವರ್ತನೆಗೆ ಬೇಸತ್ತ ಪೇರಡ್ಕದ ಗೋವಿಂದಣ್ಣ ತಾನೇ ರಸ್ತೆ ನಿರ್ಮಿಸಲು ಸಂಕಲ್ಪ ಮಾಡಿ ಹಾರೆ- ಪಿಕ್ಕಾಸಿ ಹಿಡಿದು ನಿಂತು ಬಿಟ್ಟಿದ್ದರು.
ಹಾರೆ- ಪಿಕ್ಕಾಸಿ ಹಿಡಿದು ಹಲವಾರು ವರ್ಷಗಳ ಕಾಲ ತಪಸ್ಸಿನಂತೆ ನಿತ್ಯ ಶ್ರಮದಾನ ಮಾಡಿ ಮಾಳ ಗ್ರಾಮದ ಗಿರಿಜನ ಕಾಲೋನಿಯ ಬುಗಟುಗುಂಡಿ ಒಂದನೇ ವಾರ್ಡ್ ರಸ್ತೆವರೆಗೆ ಒಟ್ಟು ಸುಮಾರು ಒಂದೂವರೆ ಕಿಲೋ ಮೀಟರ್ವರೆಗೆ ಸ್ವಂತ ಪರಿಶ್ರಮ ವಹಿಸಿ ರಸ್ತೆಯನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ಚರಂಡಿ ವ್ಯವಸ್ಥೆ ಯನ್ನುಸಹ ಗೋವಿಂದ ಮಲೆಕುಡಿಯ ಅವರು ಮಾಡಿ ಮುಗಿಸಿದ್ದಾರೆ.
ಪರಿಸರ ಪ್ರೇಮಿಯಾಗಿರುವ ಗೋವಿಂದ ಅವರಿಗೆ ಈಗ 55ರ ಪ್ರಾಯ. ಕಳೆದ ಮೂವತ್ತು ವರ್ಷಗಳಿಂದ ಕೂಲಿ ಕೆಲಸವನ್ನೆ ನಂಬಿದ ಇವರು, ಅರಣ್ಯ ಇಲಾಖೆಯ ಜತೆ ಕೈ ಜೋಡಿಸಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಗಿಡನೆಟ್ಟು ಪೋಷಿಸಿ ಬೆಳೆಸುತ್ತಿರುವ ಪರಿಸರ ರಕ್ಷಕನೂ ಹೌದು. ಕೊರೋನ ಸಂಕಷ್ಟದ ಕಾಲದಲ್ಲಿಯೂ ತಾನು ನಂಬಿದ ಕೂಲಿ ಕೆಲಸವನ್ನು ಬಿಟ್ಟು, ತನ್ನ ಮನೆಗೆಲಸ ಜತೆ, ಈ ರಸ್ತೆ ನಿರ್ಮಾಣ ಕೆಲಸದಲ್ಲಿ ನಿರಂತರಾಗಿದ್ದರು.

ಸ್ಥಳೀಯ ಆಡಳಿತಕ್ಕೆ , ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಮ್ಮೂರಿಗೊಂದು ಪಕ್ಕಾ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ನೀಡಿ ನೀಡಿ ಸುಸ್ತಾದ ಮಾಳ ಗ್ರಾಮದ ಪೇರಡ್ಕ ಗಿರಿಜನ ಕಾಲೋನಿ ನಿವಾಸಿಗಳು ಒಂದು ಹಂತದಲ್ಲಿ ರಸ್ತೆಯ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ ತನ್ನ ಶ್ರಮ ಹಾಗೂ ಛಲವನ್ನೇ ನಂಬಿದ ಗೋವಿಂದ ಮಲೆಕುಡಿಯ ಅವರು ಮಾತ್ರ ತಮ್ಮೂರಿಗೆ ರಸ್ತೆ ನಿಮಾರ್ಣ ಮಾಡಿಯೇ ಮಾಡ್ತಿನಿ ಎಂದು ಪಣತೊಟ್ಟು ಏಕಾಂಗಿ ಸಾಹಸ ಕೈಗೊಂಡಿದ್ದರು. ಪ್ರತಿನಿತ್ಯ ದಶರಥ ಮಾಂಜಿ ಕಲ್ಲು ಕೊರೆದು ರಸ್ತೆ ಮಾಡುತ್ತಿದ್ದರೆ ಗೋವಿಂದಣ್ಣ ಮಣ್ಣು ಅಗೆದು, ಸಮತಟ್ಟು ಮಾಡಿ, ಉಭಯ ಬದಿಯಲ್ಲಿ ಗಟಾರು ನಿರ್ಮಾಣ ಮಾಡುತ್ತ, ತಾನು ಕಂಡ ಕನಸನ್ನು ನನಸು ಮಾಡಿಯೇ ಬೀಟ್ಟಿದ್ದಾರೆ. ಪರಿಣಾಮ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಗೋವಿಂದ ಮಲೆಕುಡಿಯ ಅವರು ರಸ್ತೆ ನಿರ್ಮಿಸಿರುವುದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ತಮ್ಮ ಜನಪರ ಕಾರ್ಯದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಗೋವಿಂದ ಮಲೆಕುಡಿಯ ಅವರು ʻʻಎಲ್ಲರಿಗೂ ನೆರವಾಗುವ ಉದ್ದೇಶದಿಂದ ರಸ್ತೆಯನ್ನು ಅಗಲೀಕರಣಗೊಳಿಸಿ ಸೂಕ್ತ ರೀತಿಯಲ್ಲಿ ನಿರ್ಮಿಸುವ ಕಾರ್ಯ ಮಾಡಿದ್ದೇನೆ. ಹಲವಾರು ವರ್ಷಗಳ ತನ್ನ ಕನಸು ನನಸು ಮಾಡುವುದಕ್ಕೆ ನಾನು ಹಾಕಿದ ಶ್ರಮ ಇದರ ಹಿಂದಿದೆ. ನಮ್ಮ ಬೇಡಿಕೆಗೆ ಸ್ಪಂದಿಸದ ಸರಕಾರ ಇನ್ನಾದರೂ ನಮ್ಮ ಬೇಡಿಕೆಗೆ ಸ್ಪಂದಿಸಿ, ಈಗಾಗಲೇ ಮಾಡಿದ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಹಕರಿಸಲಿ. ನನಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲ.. ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಿದ್ದೇನೆ. ರಸ್ತೆಗೆ ಡಾಂಬರೀಕರಣ ಆಗಬೇಕಿದೆ. ಅದನ್ನಾದರೂ ಸರಕಾರ ಮಾಡಿಕೊಡಲಿʼʼ ಎನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
Publisher: ಕನ್ನಡ ನಾಡು | Kannada Naadu