ಶಿವಮೊಗ್ಗೆಯಲ್ಲಿ ಶುರುವಾಯ್ತು ತಾಯಿ ಎದೆ ಹಾಲ ಬ್ಯಾಂಕ್
15 May, 2024
ಶಿವಮೊಗ್ಗ : ಅಮೃತಕ್ಕೆ ಸರಿ ಸಮನಾಗಿರುವುದು ತಾಯಿಯ ಎದೆ ಹಾಲು.. ! ಪ್ರತಿ ಮಗುವಿಗೂ ತಾಯಿ ಹಾಲು ಅಮೃತ. ಆದರೆ ಎಲ್ಲ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ತಾಯಿ ಎದೆ ಹಾಲು ಸಿಕ್ಕೆ ಬಿಡುತ್ತದೆ ಎಂದಿಲ್ಲ. ಯಾವುದೇ ಮಗುವೂ ತಾಯಿಯ ಎದೆ ಹಾಲಿನಿಂದ ವಂಚಿತವಾಗಬಾರದು ಎನ್ನುವುದ ಉದ್ದೇಶದಿಂದ ʻಅಮೃತಧಾರೆʼ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಇಷ್ಟು ದಿನಗಳ ವರೆಗೆ ರಾಜಧಾನಿಯಲ್ಲಿ ಮಾತ್ರ ಸಿಮಿತವಾಗಿದ್ದ ಈ ಯೋಜನೆ ಈಗ ನಾಡಿನ ಮಲೆನಾಡಿನ ಹೆಬ್ಬಾಗಿಲಲ್ಲಿಯೂ ಸಿಗುವಂತಾಗಿದೆ.
ಶಿವಮೊಗ್ಗದಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ 'ಅಮೃತಧಾರೆ'ಯನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಮಾರ್ಚ್ 8, 2022ರಲ್ಲಿ ರಾಜ್ಯದ ಮೊದಲ 'ಅಮೃತಧಾರೆ' ಬ್ಯಾಂಕ್ ಆರಂಭವಾಯಿತು.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ 'ಅಮೃತಧಾರೆ' ತೆರೆಯಲಾಗಿದೆ. ಈ ಬ್ಯಾಂಕ್ ಅನ್ನು ಸಿಮ್ಸ್ ನಿರ್ದೇಶಕ ಡಾ. ವಿ. ವಿರೂಪಾಕ್ಷ ಅವರು ಚಾಲನೆ ನೀಡಿದರು.

ಎಲ್ಲಾ ಆರೋಗ್ಯವಂತ ತಾಯಿಯಂದಿರು ತಮ್ಮ ಮಗುವಿಗೆ ಉಣಿಸಿ ಹೆಚ್ಚಾದ ಎದೆ ಹಾಲನ್ನು 'ಅಮೃತಧಾರೆ' ಸಂಗ್ರಹ ಕೇಂದ್ರಕ್ಕೆ ದಾನ ನೀಡಬಹುದಾಗಿದ್ದು, ಕೆಲವು ತಾಯಂದಿರಲ್ಲಿ ಹಾಲು ಉತ್ಪತ್ತಿಯಾಗದಿದ್ದರೆ, ತೀವ್ರ ನಿಗಾ ಘಟಕದ ಕೇಂದ್ರದಲ್ಲಿ ದಾಖಲಾದ ತಾಯಿಯ ಮಗುವಿಗೆ ಅಥವಾ ನವಜಾತ ಶಿಶು ಕೇಂದ್ರದಲ್ಲಿದ್ದ ಮಗುವಿಗೆ ಅಥವಾ ಹೆರಿಗೆ ಸಮಯದಲ್ಲಿ ತಾಯಿ ಮೃತರಾದ ಮಗುವಿಗೆ ಹಾಲನ್ನುಈ ಬ್ಯಾಂಕ್ ಮೂಲಕ ಪಡೆದು ಉಪಯೋಗಿಸುವ ವ್ಯವಸ್ಥೆ ಇದಾಗಿದೆ.
ಎದೆಹಾಲು ನೀಡುವುದರಿಂದ ನವಜಾತ ಶಿಶುವಿಗೆ ನೀಡುವ ಫಾರ್ಮುಲ ಫೀಡ್ ತಪ್ಪಿಸಬಹುದಾಗಿದೆ. ಇದರಿಂದ ಕರುಳಿನ ಬೇನೆ, ನಂಜು, ಕಣ್ಣಿನ ದೋಷ, ಮಕ್ಕಳಿಗೆ ಆಗುವ ಸಂದರ್ಭ ಹೆಚ್ಚಾಗದಂತೆ ತಡೆಯಬಹುದು. ನವಜಾತ ಶಿಶು ಆಸ್ಪತ್ರೆಯಲ್ಲಿ ಇರಬೇಕಾದ ಸಮಯ ಕಡಿಮೆಯಾಗುತ್ತದೆ. ಪೋಷಕರಿಗೆ ಖರ್ಚಿನ ಭಾರ ಕಡಿಮೆಯಾಗುತ್ತದೆ. ಎದೆಹಾಲು ನೀಡುವುದರಿಂದ ಮಗುವಿಗೆ ಪೋಷಕಾಂಶಗಳು, ಮೆದುಳು ಚುರುಕು ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ 'ಅಮೃತಧಾರೆ' ಸಹ ಒಂದು. ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ. ಇದು ನವಜಾತ ಶಿಶುವಿನ ಎಲ್ಲಾ ಅಗತ್ಯಗಳನ್ನು ಅತ್ಯುತ್ತಮ ಪೋಷಣೆ ಮತ್ತು ರಕ್ಷಣಾತ್ಮಕ ಸೋಂಕುನಿವಾರಕ ವಸ್ತುಗಳನ್ನು ಒದಗಿಸುವ ಮೂಲಕ ಪೂರೈಸುತ್ತದೆ. ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ, ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಹಾಲನ್ನು ಹೊಂದಿರುವುದಿಲ್ಲ. ಎಲ್ಲಾ ಶಿಶುಗಳಿಗೆ ಎದೆಹಾಲು ನಿರಂತರ ಪೂರೈಕೆಯನ್ನು ಒದಗಿಸುವ ಅವಶ್ಯಕತೆಯಿದೆ. ಮಾನವ ಹಾಲಿನ ಬ್ಯಾಂಕ್ ತಾಯಂದಿರಿಂದ ನೈಸರ್ಗಿಕ ಹಾಲುಣಿಸುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಎಲ್ಲಾ ಶಿಶುಗಳಿಗೆ ಉಚಿತ, ಪಾಸ್ಟರೈಸ್ ಮಾಡಿದ ಎದೆಹಾಲನ್ನು ಒದಗಿಸುವ ಪ್ರಯತ್ನವಾಗಿದೆ.
ಹ್ಯೂಮನ್ ಮಿಲ್ಕ್ ಬ್ಯಾಂಕ್ ಎನ್ನುವುದು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಚಾಲನೆಯಲ್ಲಿ ಇದ್ದು ಅವುಗಳು ಯಶಸ್ಸಿಯಾಗಿ ನಡೆಯುತ್ತಿವೆ. ಮಗುವಿನ ಬೌದ್ಧಿಕ ಅಂಶವನ್ನು ಹೆಚ್ಚಿಸುವಲ್ಲಿ ತಾಯಿಯ ಎದೆ ಹಾಲಿನ ಕೊಡುಗೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಭಾರತದಲ್ಲಿ ಪ್ರತಿ ವರ್ಷ 27 ಮಿಲಿಯನ್ ಶಿಶುಗಳು ಜನಿಸುತ್ತವೆ, ಅದರಲ್ಲಿ 3.5 ಮಿಲಿಯನ್ ಅವಧಿಪೂರ್ವ ಮತ್ತು 7.5 ಮಿಲಿಯನ್ ಕಡಿಮೆ ತೂಕದ ಮಗುವು ಜನನವಾಗುತ್ತವೆ. ಭಾರತದಲ್ಲಿ ಜನಿಸಿದ ಸುಮಾರು 47 ಪ್ರತಿಶತದಷ್ಟು ಶಿಶುಗಳು ಗರ್ಭಾವಸ್ಥೆಯ ವಯಸ್ಸಿಗೂ ಚಿಕ್ಕದಾದ ತಾಯಂದಿರಿಗೆ ಹುಟ್ಟಿರುತ್ತವೆ.

ಈ ಎಲ್ಲಾ ಶಿಶುಗಳು ಬದುಕುಳಿಯುವಿಕೆ ಮತ್ತು ಅರಿವಿನ ಬೆಳವಣಿಗೆಯ ವಿಷಯದಲ್ಲಿ ದುರ್ಬಲವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಅವರ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಆಹಾರ ಸಮಸ್ಯೆಗಳನ್ನು ಹೊಂದಿರುತ್ತಾರೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ 186 ಲೀಟರ್ ಎದೆಹಾಲು ಸಂಗ್ರಹಣೆ ಮಾಡಲಾಗಿದೆ. ಇದರಲ್ಲಿ 123 ಲೀಟರ್ ಬಳಕೆ ಮಾಡಲಾಗಿದೆ. 886 ಮಕ್ಕಳಿಗೆ ಈ ಬ್ಯಾಂಕ್ ಹಾಲನ್ನು ಒದಗಿಸಿ ದಾಖಲೆ ಮಾಡಿತ್ತು. ಈಗ ಈ ಲಾಭವನ್ನು ಶಿವಮೊಗ್ಗಕ್ಕೂ ವಿಸ್ತರಿಸಿರುವುದು ಹೆಮ್ಮೆಯ ಸಂಗತಿ. ʻಅಮೃತಧಾರೆʼ ತಾಯಿಯ ಎದೆ ಹಾಲಿನ ಘಟಕ ಸಮರ್ಪಕವಾಗಿ ನಡೆದಲ್ಲಿ ಸಾಕಷ್ಟು ಅಶಕ್ತ ಮಗುವು ಸಶಕ್ತವಾಗಬಹುದು ಎಂದು ಹೇಳಲಾಗುತ್ತಿದೆ. ಸಸಸ
Publisher: ಕನ್ನಡ ನಾಡು | Kannada Naadu