ಕನ್ನಡ ನಾಡು | Kannada Naadu

ದೇಶದ ಮೊದಲ 'ವಂದೇ ಭಾರತ್ ಮೆಟ್ರೋ ರೈಲು' ಕಾರ್ಯಾಚರಣೆಗೆ ಕ್ಷಣ ಗಣನೆ

08 May, 2024

            ನವದೆಹಲಿ : ಜಾಗತಿಕ ಮಟ್ಟದಲ್ಲಿ ದೇಶವು ಒಂದಿಲ್ಲೊಂದು ರೀತಿಯಲ್ಲಿ ಹೆಸರು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ವ್ಯವಸ್ಥೆಯಲ್ಲಿ ದೇಶವು ಸಾಕಷ್ಟು ಅಭಿವೃದ್ಧಿ ಮಾಡುತ್ತಿದೆ.  ಆ ಪೈಕಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ದೇಶದ ಮೊದಲ ವಂದೇ ಭಾರತ್‌ ಮೆಟ್ರೋ ರೈಲು ಸಹ ಸೇರಿಕೊಂಡಿದೆ. ಭಾರತವು ರೈಲು ಸಾರಿಗೆಯಲ್ಲಿ ಮಹತ್ವದ ಯೋಜನೆಗಳನ್ನು ತರುವುದು ಪ್ರಪಂಚದ ಜನ ನಮ್ಮತ್ತ ನೋಡುವಂತಾಗಿದೆ.
              ವಂದೇ ಭಾರತ್ ಮೆಟ್ರೋ ರೈಲು ಯೋಜನೆಯ ಅಧಿಕಾರಿಗಳ  ಮಾಹಿತಿ ಪ್ರಕಾರ, ಭಾರತೀಯ ರೈಲ್ವೇಸ್‌ನ ʻಪುರ್ತಲಾ ರೈಲು ಕೋಚ್ ಫ್ಯಾಕ್ಟರಿʼಯಿಂದ ಈ ರೈಲುಗಳು ಡಿಸೆಂಬರ್‌ನಲ್ಲಿ ಹೊರಡುವ ಸಾಧ್ಯತೆ ಇದೆ. ರೈಲಿನ ಮೂಲ ಮಾದರಿಯು ಪ್ರಯೋಗ ನಡೆಸಲು ಇಲಾಖೆ ಈಗಾಗಲೇ ಸಜ್ಜಾಗಿದ್ದು, ಸದ್ಯದಲ್ಲಿಯೇ ಈ ಪ್ರಯೋಗವು ನಡೆಸುವ ಬಗ್ಗೆ ಮಾಹಿತಿ ನೀಡಿದಾರೆ.
                ಪ್ರಸ್ತುತ  ವಂದೇ ಭಾರತ್ ಮೆಟ್ರೋ ರೈಲುಗಳು ಅಂತರ-ನಗರ ಮತ್ತು ಉಪನಗರ ಮಾರ್ಗಗಳಲ್ಲಿ ಸೇವೆ ಸಲ್ಲಿಸಲಿವೆ. ಈ ರೈಲುಗಳು ಅತೀ ವೇಗದ ರೈಲುಗಳಾಗಿದ್ದು, ಸಾಮಾನ್ಯವಾಗಿ 12-ಕೋಚ್ ಗಳಲ್ಲಿ ಇರಲಿದೆ.  ಅಗತ್ಯ ಬಿದ್ದಲ್ಲಿ 16 ಕೋಚ್‌ಗಳಿಗೆ ಈ ರೈಲನ್ನು ವಿಸ್ತರಣೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಹೊಸ ರೈಲುಗಳ ಮೂಲ ಮಾದರಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಹಲವು ಪರೀಕ್ಷೆಗಳು ನಡೆಯುತ್ತಿದ್ದು, ದೇಶದ ವಿವಿಧ ಕಡೆಗಳಲ್ಲಿ ಒಟ್ಟು 50 ರೈಲುಗಳನ್ನು ಪರಿಚಯಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ.
             ಮೇಡ್-ಇನ್-ಇಂಡಿಯಾದ ಈ ವಂದೇ ಭಾರತ್ ಮೆಟ್ರೋ ರೈಲುಗಳ ಪರಿಚಯದಿಂದ 'ಯುರೋಪ್, ಚೀನಾ, ದಕ್ಷಿಣ ಕೊರಿಯಾ ಮತ್ತು ಕೆನಡಾ ದೇಶಗಳ ಪ್ರಾಬಲ್ಯ ಹೊಂದಿರುವ ಮೆಟ್ರೋ ರೈಲು ರೋಲಿಂಗ್ ಸ್ಟಾಕ್ ತಯಾರಕರ ಆಯ್ದ ಜಾಗತಿಕ ಕ್ಲಬ್‌ಗೆ ಭಾರತ ಸೇರಲಿದೆ.
              ದೇಶದ ವಿವಿಧ ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಕೋಚ್‌ಗಳು ಜಾಗತಿಕ ರೈಲು ತಯಾರಕರಿಂದ ಅಂದರೆ ವಿದೇಶಗಳಿಂದ ಬಂದಂತವುಗಳಾಗಿವೆ. ತಾಂತ್ರಿಕ ಒಪ್ಪಂದ, ವರ್ಗಾವಣೆ ಆಧಾರದಲ್ಲಿ ರೈಲು, ಕೋಚ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಭಾರತೀಯ ರೈಲ್ವೇಯು ಬೃಹತ್ ಸಂಖ್ಯೆಯಲ್ಲಿ ಅಂದರೆ 400 ಕ್ಕೂ ಹೆಚ್ಚು ರೈಲುಗಳ ಆರ್ಡರ್‌ ಮಾಡಿದೆ. ಮುಂದಿನ ಕೆಲವು ವರ್ಷಗಳಲ್ಲಿ ರೈಲ್ವೆ ಉತ್ಪಾದನಾ ವಲಯದಲ್ಲಿ ₹50,000 ಕೋಟಿ ಮೌಲ್ಯದ ಹೂಡಿಕೆಯ ಅಗತ್ಯತೆ ಬೀಳಲಿದೆ. 12 ಬೋಗಿ ಇರುವ ವಂದೇ ಭಾರತ್ ಮೆಟ್ರೋ ರೈಲಿಗೆ ಸದ್ಯ ₹100-120 ಕೋಟಿ ವೆಚ್ಚ ತಗುಲಲಿದೆ. ಸ್ವದೇಶೀಯವಾಗಿ ಉತ್ಪಾದಿಸಿದರೆ ಈ ಹಣದಲ್ಲಿ ನಾಲ್ಕನೇ ಒಂದು ಭಾಗ ಮಾತ್ರ ತಗುಲುತ್ತದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.
              ಈ ಮೆಟ್ರೋ ರೈಲುಗಳನ್ನು ಪ್ರತಿ ಗಂಟೆಗೆ 100-250 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವಂತೆ ದೇಶೀಯ ಬಳಕೆಗಾಗಿ ಉತ್ಪಾದಿಸಲಾಗುತ್ತಿದೆ. ದೇಶದ 125 ನಗರಗಳಿಗೆ ಸಂಪರ್ಕ ಕಲ್ಪಿಸಲು ಯೋಚನೆ ಹೊಂದಿದ್ದು, ಉತ್ಪಾದಿತ ಮೊದಲ ಸೆಟ್ (51 ರೈಲುಗಳು) ರೈಲುಗಳನ್ನು ಲಕ್ನೋ, ಕಾನ್ಪುರ, ವಾರಣಾಸಿ, ತಿರುಪತಿ, ಚೆನ್ನೈ ಆಗ್ರಾ, ಮಥುರಾ, ವಾರಣಾಸಿ, ಚೆನ್ನೈ ಮತ್ತು ತಿರುಪತಿ ಸೇರಿದಂತೆ 12 ಪ್ರಮುಖ ನಗರಗಳ ಮಧ್ಯೆ ಸೇವೆ ನೀಡಲಿವೆ.
                ದೇಶಿಯ ಪೂರೈಕೆ ಬಳಿಕ ಈ ರೈಲುಗಳನ್ನು ರಫ್ತು ಮಾಡಲು ಸಹ ಭಾರತೀಯ ರೈಲ್ವೆಯು ಪ್ಲಾನ್ ಮಾಡಿಕೊಂಡಿದೆ. ಈ ರೈಲುಗಳು ಹಾಲಿ ಟಾಪ್ ರೈಲಿನಲ್ಲಿರುವ ಎಲ್ಲಾ ಆಧುನಿಕ ಮೂಲ ಸೌಲಭ್ಯಗಳನ್ನು ಹೊಂದಿರಲಿವೆ. ಪ್ರತಿ ಗಂಟೆಗೆ ಗರಿಷ್ಠ 120-160 ಕಿ.ಮೀ ವೇಗದಲ್ಲಿ ಸಂಚರಿಲಿದೆ. ವಂದೇ ಭಾರತ್‌ನ ಮೊದಲ ಆವೃತ್ತಿಯು 2019ರ ಫೆಬ್ರವರಿಯಲ್ಲಿ ಹೊರ ತರಲಾಯಿತು.
 
  

Publisher: ಕನ್ನಡ ನಾಡು | Kannada Naadu

Login to Give your comment
Powered by