ಕನ್ನಡ ನಾಡು | Kannada Naadu

 ಕೇಂದ್ರಾಡಳಿತ ಪ್ರದೇಶದಿಂದ ಬೆಂಗಳೂರಿಗೆ ವಿಮಾನ ಸೌಲಭ್ಯಕ್ಕೆ ಅಸ್ತು.

06 May, 2024

 
            ಬೆಂಗಳೂರು : ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನೂ ಮುಂದೆ ಸಿಲಿಕಾನ್‌ ಸಿಟಿ  ಬೆಂಗಳೂರು ತೀರಾ ಹತ್ತಿರವಾಗಲಿದೆ. ಬೆಂಗಳೂರಿನ ಜೊತೆ ವಿವಿಧ ಹಂತಗಳಲ್ಲಿ  ಪ್ರಪಂಚದ ಎಲ್ಲಾ ಭಾಗಗಳು ಸಂಬಂಧ ಹೊಂದಿವೆ. ಅದರಂತೆ ದೇಶದ ಕೇಂದ್ರಾಡಳಿತ ಪ್ರದೇಶಗಳು ಸಹ ಬೆಂಗಳೂರಿನೊಂದಿಗೆ ನಿರಂತರ ಸಂಬಂಧ ಹೊಂದಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ವಾಯು ಮಾರ್ಗದಿಂದ ಕೇಂದ್ರಾಡಳಿತ ಪ್ರದೇಶದಿಂದ ಬೆಂಗಳೂರಿಗೆ ಬರುವ ವ್ಯವಸ್ಥೆ ಜಾರಿಗೆ ಬರುತ್ತಿದೆ.
              ಕೇಂದ್ರಾಡಳಿತ ಪ್ರದೇಶ ಮತ್ತು ಪ್ರವಾಸಿ ತಾಣವಾದ ಪುದುಚೇರಿಯಿಂದ ಉದ್ಯಾನ ನಗರಿ ಬೆಂಗಳೂರಿಗೆ ವಿಮಾನ ಸೇವೆ ಆರಂಭವಾಗಲಿದೆ. ಈಗಾಗಲೇ ಇಂಡಿಗೋ ವಿಮಾನ ಸೇವೆ ಆರಂಭಿಸುವ ಕುರಿತು ಪುದುಚೇರಿ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದೆ.
            ಪುದುಚೇರಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಆರಂಭಿಸಲು ಇಂಡಿಗೋ ವಿಮಾನಯಾನ ಸಂಸ್ಥೆ ಆಸಕ್ತಿ ತೋರಿದೆ. ಈ ಬಗ್ಗೆ ಇಂಡಿಗೋ ಅಧಿಕಾರಿಗಳು ಕಳೆದ ವಾರ ಪುದುಚೇರಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಮೊದಲ ಹಂತದಲ್ಲಿ ಇಂಡಿಗೋ ಬೆಂಗಳೂರು-ಪುದುಚೇರಿ, ಪುದುಚೇರಿ-ಹೈದರಾಬಾದ್ ನಡುವೆ ವಿಮಾನ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದರೆ ಜುಲೈ 1ರಿಂದಲೇ ವಿಮಾನ ಸೇವೆ ಆರಂಭವಾಗಲಿದೆ.
                   ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನ ಸುರಕ್ಷತೆ, ಕಾರ್ಯಾಚರಣೆ ವಿಭಾಗದ ಹಿರಿಯ ಮ್ಯಾನೇಜರ್  ರಾಮ್ ಬಾಬು ಮಹತೋ ನೇತೃತ್ವದ ಅಧಿಕಾರಿಗಳ ತಂಡ ಪುದುಚೇರಿ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಕಾರ್ಯ ಮುಗಿಸಿದೆ. ವಿಮಾನ ನಿಲ್ದಾಣದಿಂದ ಎಟಿಆರ್-72 ಮಾದರಿಯ ವಿಮಾನವನ್ನು ಹಾರಾಟ ನಡೆಸುವ ಸಾಧ್ಯತೆಗಳ ಕುರಿತು ಮಾಹಿತಿ ಸಂಗ್ರಹ ಮಾಡಿದೆ. ಪುದುಚೇರಿಯಿಂದ ಸ್ಪೈಸ್‌ ಜೆಟ್ ವಿಮಾನಯಾನ ಸಂಸ್ಥೆ ಮಾತ್ರ ಸೇವೆಯನ್ನು ಆರಂಭಿಸಿತ್ತು. ಸ್ಪೈಸ್ ಜೆಟ್ ಪುದುಚೇರಿ-ಬೆಂಗಳೂರು, ಪುದುಚೇರಿ-ಹೈದರಾಬಾದ್ ಮಾರ್ಗದಲ್ಲಿ ಪ್ರತಿದಿನದ ವಿಮಾನ ಸೇವೆ ನೀಡುತ್ತಿತ್ತು. ಆದರೆ ಕೆಲವು ಕಾರಣಗಳಿಂದ ಈ ಸೇವೆಗಳು ಮಾರ್ಚ್‌ನಿಂದ ರದ್ದಾಗಿದ್ದು, ಈಗ ಇಂಡಿಗೋ ವಿಮಾನ ಸಂಪರ್ಕ ಕಲ್ಪಿಸಲು ಆಸಕ್ತಿ ತೋರಿದೆ. 
              ಈ ಕುರಿತು ಮಾಹಿತಿ ನೀಡಿದ ಪುದುಚೇರಿ ವಿಮಾನ ನಿಲ್ದಾಣದ ನಿರ್ದೇಶಕ ರಾಜಶೇಖರ ರೆಡ್ಡಿ"ಇಂಡಿಗೋ ಅಧಿಕಾರಿಗಳ ತಂಡ ಟರ್ಮಿನಲ್, ರನ್‌ವೇ, ಏರ್ ಟ್ರಾಫಿಕ್ ಕಂಟ್ರೋಲ್, ಕಛೇರಿಗಳು ಸೇರಿ ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ಸಂಗ್ರಹ ಮಾಡಿದೆ" ಎಂದಿದ್ದಾರೆ. "ಈಗ ಇರುವ ಸೇವೆಗಳ ಮೂಲಕ ವಿಮಾನಗಳ ವಾಣಿಜ್ಯ ಸಂಚಾರ ಆರಂಭಿಸಬಹುದು ಎಂದು ತಂಡ ತೃಪ್ತಿ ವ್ಯಕ್ತಪಡಿಸಿದೆ. ಜುಲೈ 1 ರಿಂದ ಇಂಡಿಗೂ ಬೆಂಗಳೂರು, ಹೈದರಾಬಾದ್ ನಡುವೆ ವಿಮಾನ ಸೇವೆ ಆರಂಭಿಸುವ ಚಿಂತನೆಯಲ್ಲಿದೆ" ಎಂದು ತಿಳಿಸಿದ್ದಾರೆ. 
              ಪುದುಚೇರಿ ಲೆಫ್ಟಿನೆಂಟ್ ಗೌರ್ನರ್, ಮುಖ್ಯಮಂತ್ರಿಗಳು ಮತ್ತು ಪ್ರವಾಸೋದ್ಯಮ ಸಚಿವರು ಎಲ್ಲಾ ವಿಮಾನಯಾನ ಕಂಪನಿಗಳಿಗೆ ಪುದುಚೇರಿ ಮತ್ತು ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ವಿಮಾನ ಸೇವೆ ಆರಂಭಿಸಬೇಕು ಎಂದು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಏಪ್ರಿಲ್ 16ರಂದು ಇಂಡಿಗೋ ವಿಮಾನಯಾನ ಕಂಪನಿ ತಂಡ ಪುದುಚೇರಿಗೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿತ್ತು. ಈಗ ವಿಮಾನ ಹಾರಾಟ, ಕಾರ್ಯಾಚರಣೆ ವಿಭಾಗದ ತಂಡ ವಿಮಾನ ನಿಲ್ದಾಣದ ಕುರಿತು ಪರಿಶೀಲನೆ ನಡೆಸಿ ವಿಮಾನ ಹಾರಾಟ ಆರಂಭಿಸಬಹುದು ಎಂದು ಹೇಳಿದೆ. 
                1989ರಲ್ಲಿಯೇ ಪುದುಚೇರಿಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿತು. ಸಣ್ಣ ದೇಶಿಯ ವಿಮಾನಗಳ ಹಾರಾಟವನ್ನು ಮೊದಲು ಆರಂಭಿಸಲಾಗಿತ್ತು. ಬಳಿಕ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವಿಮಾನ ನಿಲ್ದಾಣ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿತು. ಹೊಸ ಟರ್ಮಿನಲ್ ಕಟ್ಟಡ, ರನ್ ವೇ ವಿಸ್ತರಣೆ ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಿ 2013ರ ಜನವರಿಯಲ್ಲಿ ಅಭಿವೃದ್ಧಿಗೊಂಡ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿತು. 2017ರ ತನಕ ಬೆಂಗಳೂರು-ಪುದುಚೇರಿ ನಡುವೆ ಮಾತ್ರ ವಿಮಾನ ಸೇವೆ ಇತ್ತು. ಬಳಿಕ ಹೈದರಾಬಾದ್‌ಗೆ ಸಹ ಸೇವೆ ಆರಂಭಗೊಂಡಿತು. ಆದರೆ ಈಗ ಎರಡೂ ಮಾರ್ಗದ ಸೇವೆಗಳು ಕೆಲ ಕಾರಣದಿಂದ ರದ್ದಾಗಿದೆ.
                    ಪ್ರಸ್ತುತ ನಿರ್ಧಾರವು ದೇಶದ ಉನ್ನತಿಗೆ ದಕ್ಕಿದ ಇನ್ನೊಂದು ಗರಿಯಾಗಿದೆ. ಕೇಂದ್ರಾಡಳಿತ ಪ್ರದೇಶದಿಂದ ಬೆಂಗಳೂರು ಬರುವ ಉದ್ಯಮಮಿಗಳಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲಾ ವರ್ಗದವರಿಗೂ ಇದು ಲಾಭವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.  

Publisher: ಕನ್ನಡ ನಾಡು | Kannada Naadu

Login to Give your comment
Powered by