ಕನ್ನಡ ನಾಡು | Kannada Naadu

ಇಲ್ಲಿನ ಜನರ ನರ ನಾಡಿಯಲ್ಲಿ ಕನ್ನಡ  ಎದ್ದು ಕಾಣುತ್ತದೆ,  ಎಂದ  ಅರುಣು ಕುಮಾರ್ ದೇಸಾಯಿ, ಕಡ್ಡಾಯ ಮತದಾನ ಮಾಡುವಂತೆ ಮನವ

01 May, 2024



ಸಿಂಧನೂರು : ಸ್ಥಳೀಯ ಲೋಕಸಭಾ ಕ್ಷೇತ್ರದಲ್ಲಿ 2019 ರ  ಚುನಾವಣೆಯಲ್ಲಿ ಶೇ.63.1 ರಷ್ಟು ಮಾತ್ರ ಮತದಾನವಾಗಿತ್ತು. ಈ ತಾಲೂಕಿನಲ್ಲಿ 2 ಲಕ್ಷ 45 ಸಾವಿರ ಮತದಾರರಿದ್ದು, ಈ ಬಾರಿ ಶೇ.80 ರಷ್ಟು ಮತದಾನ ಮಾಡುವ ಮೂಲಕ ಒಬ್ಬ ಸಮರ್ಥ ಅಭ್ಯರ್ಥಿಯನ್ನ ಆಯ್ಕೆ ಮಾಡಬೇಕೆಂದು ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

       ನಗರದ ನಗರಸಭೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ನಗರಸಭೆ, ಹಾಗೂ ತಾಲೂಕಾ ಆಡಳಿತದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದಾರ್ಶನಿಕರ ಮಾಸಿಕ ಕವಿಗೋಷ್ಠಿ ಸರಣಿ 25 ರ ಮತದಾನ ಜಾಗೃತಿ ಅಭಿಯಾನ ಮತದಾನದ ಮಹತ್ವದ ಕುರಿತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 
ದೂರದ ಕೂಡ್ಲಿಗಿ, ಹರಪನಹಳ್ಳಿ , ಬಳ್ಳಾರಿ , ಕೊಪ್ಪಳ, ರಾಯಚೂರು, ಲಿಂಗಸ್ಗೂರು, ಹೀಗೆ ಅನೇಕ ಊರುಗಳಿಂದ 25 ಆಯ್ದ ಕವಿಗಳು ಬಂದಿದ್ದು ವಿಶೇಷ

        ನಿಮಗೆ ಕರ್ನಾಟಕ ಮತ್ತು ಕನ್ನಡದ ಮೇಲೆ ಇರುವ ಪ್ರೀತಿ, ಭಾಷಾಭಿಮಾನ, ನಮ್ಮ ಪರಂಪರೆಯನ್ನು ಉಳಿಸಲಿಕ್ಕೆ ಈ ಕವಿಗೋಷ್ಠಯಲ್ಲಿ ಪಾಲ್ಗೊಂಡಿದ್ದೀರಿ, ನಿಮ್ಮ ಮುಂದಿನ ಜನಾಂಗಕ್ಕೆ ನಿಮ್ಮ ಮಕ್ಕಳಿಗೆ ಕನ್ನಡ ಭಾಷೆ, ಹೃದಯದ ಭಾಷೆ ಮಾತ್ರವಲ್ಲ ಇದೊಂದು ಶ್ರೀಮಂತ ಭಾಷೆ, ರನ್ನನ ಗದಾಯುದ್ಧ, ವಿಕ್ರಮಾರ್ಜುನ ವಿಜಯ, ಯಶೋಧರ ಚರಿತೆ, ರತ್ನನ ಪದಗಳು, ಸರ್ವಜ್ಞನ ತ್ರಿಪದಿಗಳು, ಬಸವಣ್ಣನವರ ವಚನಗಳು, ಕುವೆಂಪು, ಬೇಂದ್ರೆ, ಕಾರಂತ, ಕಾರ್ನಾಡ್, ಕಂಬಾರರ ಕಾದಂಬರಿಗಳನ್ನು ಓದಿಸಿ, ಮನಸ್ಸು ವಿಕಾಸವಾಗಿ ಸಂಪನ್ನವಾಗಿ ಬೆಳೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆಂದು ಕಿವಿಮಾತು ಹೇಳಿದರು.

        ತಾಲೂಕಿನಲ್ಲಿ 5 ಸಖೀ ಬೂತ್ ಮಾಡಿದ್ದೇವೆ. ನಗರದಲ್ಲಿ 3 ಮತ್ತು ಗ್ರಾಮಗಳಲ್ಲಿ 2 ಬೂತ್ ನಿರ್ಮಾಣ ಮಾಡಿದ್ದೇವೆ, 1ಯೂತ್ ಪ್ರೆಂಡ್ಲಿ ಬೂತ್, ವಿಶೇಷ ವಿಕಲಚೇತನರ ಮತದಾನದ ಬೂತ್, ಹಾಗೂ ಯತ್ನಿಕ್ ಬೂತ್, ಮಾದರಿ ಬೂತ್, ತೀಮ್ ವೇಸ್ಟ್‌ ಬೂತ್,ಗಳನ್ನ ನಿರ್ಮಾಣ ಮಾಡಿದ್ದು, ಹೆಚ್ಚೆಚ್ಚು ಮತದಾನವಾಗಲಿ ಎಂದು, ಹೀಗಾಗಿ ಸಮರ್ಥ, ಸದೃಢ, ಭಾರತಕ್ಕಾಗಿ ಪ್ರತಿಯೊಬ್ಬರು ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದರು.

          ನಂತರ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ನಾವು ನವೆಂಬರ್‌ 1 ಕನ್ನಡಿಗರಾಗದೆ ಕರ್ನಾಟಕದ ನಂಬರ್‌ 1 ಕನ್ನಡಿಗರಾಗುವ ರೀತಿಯಲ್ಲಿ ಪ್ರತಿಬಿಂಬಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಯಾವಾಗಲೂ ಸೃಜನಶೀಲತೆಯಿಂದ ಕೂಡಿರುತ್ತದೆ. ಪ್ರತಿಯೊಬ್ಬರ ಜಯಂತಿಯ ದಾರ್ಶನಿಕರ ಮಹತ್ವ ತೆಗೆದುಕೊಂಡು ಕವಿಗೋಷ್ಠಿ ಮಾಡುತ್ತಾರೆ. ಇಂತಹ ಕಾರ್ಯಕ್ರಮಕ್ಕೆ ಎಲ್ಲಿಂದಲೋ ಬಂದು ಕವನ ವಾಚನ ಮಾಡುತ್ತಾರೆಂದರೆ ಅದು ಕನ್ನಡಕ್ಕೆ ಇರುವ ತಾಕತ್ತು ಎಂದರು. 

             ಯಾವ ಕವಿಗೂ ಮಡಿ ಇರುವುದಿಲ್ಲ ಮಡಿ ಇರುವವನು ಕವಿಯಲ್ಲ. ಕವಿಗಳು ಸತ್ಯವನ್ನೆ ಹೇಳುತ್ತಾರೆ. ರವಿ ಕಾಣದ್ದನ್ನ ಕವಿ ಕಂಡ ಅನ್ನುವ ಮಾತು ನಿಜವಾದದು. ಹೀಗೆ ಕನ್ನಡವನ್ನು ಬೆಳೆಸುವ, ಕಟ್ಟುವ, ಬಿತ್ತುವ, ಕನ್ನಡದ ಕನಸನ್ನು ಹೊತ್ತು ಕನ್ನಡ ತಾಯಿಯ ತೇರನ್ನು ಎಳೆಯುವ ಕವಿಗಳು ಬರಬೇಕೆಂದು ಹೇಳಿ ಮತದಾನದ ಕುರಿತು ಕವನ ವಾಚನ ಮಾಡಿದರು.

            ನಂತರ ಉದ್ಘಾಟಕರಾಗಿ ಬಂದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಚುನಾವಣೆ ಅಧಿಕಾರಿಗಳಾದ ಮಹೇಶ ಪೋತದಾರ್ ಕನ್ನಡವನ್ನು ಪ್ರತಿಬಿಂಬಿಸುವ ಕನ್ನಡ ಗೀತೆ ಮತ್ತು ಮತದಾನದ ಕುರಿತು ಸ್ವರಚಿತ ಹಾಡೊಂದನ್ನು ಹಾಡಿ ಕೇಳುಗರ ಮನಸೋರೆಗೊಂಡರು. ಈ ಸಂದರ್ಭದಲ್ಲಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.

          ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ, ಕವಿಗೋಷ್ಠಿ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಬೀರಪ್ಪ ಶಂಭೋಜಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೆ,  ತಾಲೂಕು ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಕಸಾಪದ ಗೌರವ ಕಾರ್ಯದರ್ಶಿ ಮೌಲಪ್ಪ ಮಾಡಶಿರವಾರ ಮಾತನಾಡಿದರು. ಶಿಕ್ಷಕ ಶಂಕರ ದೇವರು ಹಿರೇಮಠ ನಿರೂಪಣೆ ಮಾಡಿದರು. ದಾರ್ಶನಿಕರ ಮಾಸಿಕ ಕವಿಗೋಷ್ಢಿ ಸರಣಿ 25 ರಲ್ಲಿ 25 ಕವಿಗಳು ಭಾಗವಹಿಸಿದ್ದರು

Publisher: ಕನ್ನಡ ನಾಡು | Kannada Naadu

Login to Give your comment
Powered by