10 ವರ್ಷಗಳಲ್ಲೇ ಕಂಡು ಕಾಣದ ಬಿಸಿಲಿನ ಝಳಕ್ಕೆ ರಾಜಧಾನಿ ತತ್ತರ..
30 Apr, 2024
ಬೆಂಗಳೂರು : ಸಾಕಪ್ಪ.. ಸಾಕು... ಬೆಂಗಳೂರು ಸಹವಾಸ..! ಎನ್ನವ ಸ್ಥಿತಿಗೆ ಬಂದಿದೆವೆ. ಈ ಬಾರಿಯ ಬೇಸಿಗೆಗೆ ಗಾರ್ಡ್‌ನ್ ಸಿಟಿ, ಲೆಕ್ ಸಿಟಿ ಎಂದೆಲ್ಲಾ ಕೆರೆಸಿಕೊಂಡ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದೆ. ಬಿಸಿಲಿನ ಝಳಕ್ಕೆ ಬೆಂದಕಾಳೂರಿನ ಜನ ಬೆಂದು ಹೋಗುತ್ತಿದ್ದಾರೆ.
ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸುಡು ಬಿಸಿಲು, ಸೆಕೆ, ಧಗೆಗೆ ಬೆಂಗಳೂರಿನ ಜನ ಚಡಪಡಿಸಿ ಹೋಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಜನರು ಕಂಡು ಕೇಳರಿಯದ ಬಿಸಿಲಿನ ತಾಪವನ್ನು ಈ ಬಾರಿ ಎದುರಿಸುವಂತಾಗಿದೆ.
ಏಪ್ರಿಲ್ ತಿಂಗಳ ಕೊನೆಯವರೆಗೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸೋಮವಾರ ಕ್ರಮವಾಗಿ 37.8 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಂಡುಬರುವ ಕನಿಷ್ಠ ತಾಪಮಾನಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಹೆಚ್ಚು ಪ್ರಮಾಣದ ಕನಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ವರದಿಮಾಡಿದೆ.
ಸಾಮಾನ್ಯವಾಗಿ ರಾಜ್ಯಾದ್ಯಂತ ಏಪ್ರಿಲ್ ತಿಂಗಳಲ್ಲಿ ತಾಪಮಾನ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ಬಾರಿಯ ತಾಪಮಾನದಂತೆ ಹಿಂದೆ ಎಂದೂ ಇರಲಿಲ್ಲ. ಈ ಬಾರಿ ಬಿಸಿ ವಾತಾವರಣ ನಿರಂತರ ಮುಂದುವರಿಯುತ್ತಿದೆ. ಈ ಹಿಂದೆ 2016 ರ ಏಪ್ರಿಲ್ 25 ರಂದು ಬೆಂಗಳೂರು ನಗರದಲ್ಲಿ 39.2 ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ, ಈ ರೀತಿಯ ತಾಪಮಾನ ಸತತವಾಗಿ ಮುಂದುವರಿದಿರಲಿಲ್ಲ. ಇನ್ನು ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚೆಂದರೆ ಒಂದೆರಡು ದಿನ ಇರುತ್ತದೆ. ಆದರೆ ಈ ಬಾರಿ ಆಗಸದಲ್ಲಿ ಮೋಡಗಳು ಮಾಯವಾಗಿದ್ದು, ವರುಣ ಕೃಪೆ ತೋರದ ಕಾರಣ ಗರಿಷ್ಠ ತಾಪಮಾನ ಏರಿಕೆಯಾಗಿ ಅದೇ ರೀತಿಯಲ್ಲಿ ಮುಂದುವರಿಯುತ್ತಿದೆ. ಪರಿಣಾಮ ಎಲ್ಲೆಡೆ ಬಿಸಿಗಾಳಿ ಕೂಡ ಹೆಚ್ಚಾಗುತ್ತಿದ್ದು, ಜನ ಮಳೆಗಾಗಿ ಆಕಾಶದತ್ತ ಮುಖಮಾಡುವ ಸ್ಥಿತಿ ಬಂದು ಬಿಟ್ಟಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ 38 ರಿಂದ 39 ಉಷ್ಣಾಂಶ ದಾಖಲಾಗುತ್ತಿದ್ದು, ಒಂದು ವೇಳೆ ಮಳೆ ಬಾರದೇ ಇದ್ದರೆ, ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.
ಇನ್ನು ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವುದರಿಂದ ಇಲ್ಲಿನ ಉದ್ಯಮ, ವ್ಯಾಪಾರ-ವಹಿವಾಟಿನ ಸೇರಿದಂತೆ ಇಲ್ಲಿನ ಜನ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಬಿಸಿಲಿನ ಧಗೆಗೆ ಹೈರಾಣಾಗಿರುವ ಜನರು ಮನೆಯಿಂದ ಹೊರಗೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ. ಈಗ ಬಿಸಿಲು ಜಾಸ್ತಿ ಇರುವ ಪರಿಣಾಮ ಟೀ ಕಾಫಿ ಕುಡಿಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಹಾಗೂ ಮಧ್ಯಾಹ್ನದ ಹೊತ್ತು ಹೋಟೆಲ್‌ಗಳಿಗೆ ಹೋಗಿ ಬಿಸಿ ಬಿಸಿ ಊಟ ತಿನ್ನುವವರ ಸಂಖ್ಯೆ ಕಡಿಮೆಯಾಗಿರುವ ಕಾರಣ ಹೋಟೆಲ್ಗಳ ವಹಿವಾಟಿನಲ್ಲಿ ಶೇ 30 ರಷ್ಟು ಕುಸಿತವಾಗಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ನವರು ಈ ಬಿಸಿಲಿನ ಝಳಕ್ಕೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Publisher: ಕನ್ನಡ ನಾಡು | Kannada Naadu