9060188081
ನಾನು ಕೃಷ್ಣ ಸುಂದರಿ.. ನನಗೆ ನಾಚಿಕೆ ತುಸು ಜಾಸ್ತಿನೇ..ಅದಕ್ಕೆ ಜನ ವಸತಿಯಿಂದ ದೂರ ಇದ್ದೆನೆ. ಎಲ್ಲರಂತೆ ಬೆಳ್ಳನೆಯ ಮೈಮಾಟ ನನ್ನದಲ್ಲವೇ ಅಲ್ಲ. ಹಾಗಂತ ಕಪ್ಪು ವಿಕಾರ ದಡೂತಿಯೂ ನಾನಲ್ಲ. ಕಪ್ಪಾದರೂ ಕನಿಷ್ಟವಲ್ಲದ ಆಸಕ್ತರನ್ನು ಕದ್ದು ಕೈಬಿಸಿ ಕರೆಯುವ ನನ್ನಲ್ಲಿ ಆಗಾಗ ಬರುವವರು ನನ್ನ ಬಗ್ಗೆ ಪಕ್ಕಾ ಅರಿತವರೇ. ಇನ್ನೂ ಕೆಲವರು ನನ್ನ ಬಗ್ಗೆ ಅಲ್ಪ ಸ್ವಲ್ಪ ಅರಿತು ಕುತೂಹಲಕ್ಕೊಮ್ಮೆ ನೋಡಿ ಅನುಭವಿಸೋಣ ಎಂದು ಬರುವವರೆ ಜಾಸ್ತಿ.
ನಾನಿರುವಲ್ಲಿ ಬರುವುದಕ್ಕೆ ಎರಡು ದಾರಿ ಇದೆ. ಹಾಗಂತ ಅವೆರಡೂ ರಾಜ ಮಾರ್ಗವಲ್ಲ. ಒಂದು ರೀತಿಯಲ್ಲಿ ಎರಡೂ ಕಳ್ಳದಾರಿ. ನನ್ನ ನೋಡುವುದಕ್ಕೆ ನಡೆದುಕೊಂಡೇ ಬರಬೇಕು ಎನ್ನುವುದು ನನ್ನಲ್ಲಿ ಬಂದು ಹೋದವರಿಗೆ ತಿಳಿದಿರುವ ಕಟು ಸತ್ಯ. ಜಗತ್ತಿನಾದ್ಯಂತ ಇರುವ ನನ್ನ ಜೊತೆಗಾರ್ತಿಯರೆಲ್ಲಾ ಒಂದಲ್ಲ ಒಂದು ರೀತಿಯ ಸೌಂರ್ಯದ ಕಣಿಗಳೆ. ಕೆಲವರು ಸೌಮ್ಯ ಸುಂದಿರಿಯರಾದರೆ ಇನ್ನೂ ಕೆಲವರು ರುದ್ರ ಭಯಂಕರಿಯರು. ಬಹುತೇಕರು ಬೆಳ್ಳನೆಯ ಬೆಡಗಿಯರು. ಅವರಲ್ಲಿ ಬರುವವರ ಸಂಖ್ಯೆ ಅಬ್ಬಬ್ಬಾ ಲೆಕ್ಕವಿಡುವುದೇ ಕಷ್ಟವಂತೆ. ಜಗತ್ತಿನಲ್ಲಿ ನನ್ನಂತೆ ಇರುವ ಕಪ್ಪು ಸುಂದರಿಯರು ಇನ್ನಿಬ್ಬರಿದ್ದಾರಂತೆ. ಅವರ ಬಗ್ಗೆ ನಾನಂತೂ ಅರಿಯೆ. ನನಲ್ಲಿ ಬಂದು ನನ್ನ ಕಪ್ಪು ಅಂದವನ್ನು ಅನುಭವಿಸಿದ ಕೆಲವರು ಆ ರೀತಿ ಹೇಳಿದ್ದುಂಟು.
ನಾನು ಹುಟ್ಟು ನತದೃಷ್ಟೆ.. ಒಂದು ತರಹದಲ್ಲಿ ಪಾಪಿ. ಅದ್ಯಾವ ಶಾಪವೂ ಗೊತ್ತಿಲ್ಲ, ಜನ್ಮತಾಳುತ್ತಲೇ ಕಪ್ಪಾಗಿಬಿಟ್ಟೆ. ಹೊಗಲಿ ನನ್ನ ಅಪರೂಪದ ಬಣ್ಣದಿಂದಲೇ ಜನರನ್ನು ಆಕರ್ಷಿಸೊಣ ಎಂದರೆ ನಾನು ಹುಟ್ಟಿದ್ದು ಎರಡು ರಾಜ್ಯದ ಗಡಿಯಲ್ಲಿ. ನಾನಿರುವುದು ಕರ್ನಾಟಕದಲ್ಲಾದರೂ ಹತ್ತಿರವಾಗಿರುವುದು ಗೋವೆಯವರಿಗೆ. ನನ್ನ ಕುರಿತು ಜನ್ಮ ದಾಖಲೆಯೂ ಇಲ್ಲಾ..! ನನ್ನ ರಹವಾಸಿ ದಾಖಲೆಯೂ ಇಲ್ಲ...! ಕಾರಣ ಉಭಯ ರಾಜ್ಯಗಳು ನನನ್ನು ತೀರಾ ಕಡೆಗಣಿಸಿದ್ದಾರೆ. ಅದೇನು ನನ್ನ ಹಣೆಬರಹವೋ ಅರ್ಥವಾಗುತ್ತಿಲ್ಲ ನನ್ನ ಅಕ್ಕ ಪಕ್ಕ ಇದ್ದ ನನ್ನಂತಹ ಬೆಡಗಿರಲ್ಲಿ ಬರುವರನ್ನು ನೋಡಿದಾಗ ನನಗೆ ಹೊಟ್ಟೆಯುತ್ತದೆ. ಅದನ್ನು ಯಾರಲ್ಲಿ ಅಂತ ಹೇಳಲಿ..? ನನ್ನ ಭಾಗದಲ್ಲಿ ನನ್ನನ್ನೇ ನಂಬಿದವರೂ ಅಂತಲೂ ಯಾರೂ ಇಲ್ಲ. ಅಂಥವರ್ಯಾರು ಇದ್ದಿದ್ದರೆ ನನ್ನ ಬಗ್ಗೆ ಕನಿಕರ ತೋರಿ ಏನಾದರೂ ಮಾಡಿ ಸ್ವಾಮಿ ಎಂದು ಆಡಳಿತ ಪಕ್ಷಕ್ಕೋ, ಅಧಿಕಾರಿಶಾಹಿಗಳಿಗೋ ಗೊಗರಿಯುತ್ತಿದ್ದರು.
ಇನ್ನ ನನ್ನ ಮಡಿಲಲ್ಲಿ ಶಾಶ್ವತವಾಗಿ ಯಾರೂ ಇಲ್ಲದಿರುವುದರಿಂದ ಮನುಷ್ಯನಿಗೆ ಬೇಕಾದ ಕನಿಷ್ಟ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಕೊನೆಯದಾಗಿ ನಾನಿದ್ದಲ್ಲಿಗೆ ಬಂದು ಹೊಗುವುದಕ್ಕೆ ಒಂದು ಚಿಕ್ಕ ದಾರಿಯೂ ಇಲ್ಲ ಅಂದರೆ ನಂಬುತ್ತಿರಾ..? ಅದೆಷ್ಟೋಜನ ನನ್ನನ್ನು ನೋಡಿ ಅನಂದಿಸಬೇಕು ಎಂದು ಬರುತಾರೆ. ಜನ ಬರ್ತಿರುವುದು ನೋಡಿ ನನಗೆ ಒಂದು ರೀತಿಯಲ್ಲಿ ಖುಷಿಯೇನೂ ಆಗುತ್ತದೆ. ಇನ್ನೂ ಅಷ್ಟೇ ಭಯವೂ ಆಗುವುದು. ಬಂದು ಹೊಗುವವರಿಗೆ ಏನೂ ತೊಂದರೆ ಆಗದಿರುವಂತೆ ನೋಡಿಕೊಳ್ಳುವುದಕ್ಕೆ ನಾನು ದೇವರಲ್ಲಿ ಪ್ರಾರ್ಥಿಸುತ್ತಲೇ ಇರುತ್ತೇನೆ. ಯಾರೇ ಬಂದರೂ, ಬಂದವರು ನನ್ನ ಕಪ್ಪು ಮೈಮಾಟವನ್ನು ಯಥೇಚ್ಛವಾಗಿ ಅನುಭವಿಸಿ ಹೋಗಲಿ ಎನ್ನುವುದು ನನ್ನ ಆಸೆ. ಆದರೆ ಬಂದಿರುವ ಕೆಲವರು ನನ್ನ ಮೈಮಾಟದ ಆನಂದವನ್ನು ಹಿರಿ ಕುಣಿದು ಕುಪ್ಪಳಿಸಿ ನನ್ನ ಅಂದ ಬಗ್ಗೆ ಕಾಳಜಿಯೇ ಇಲ್ಲದೆ ನಡೆದುಕೊಳ್ಳುವವರು ಇದ್ದಾರೆ.
ತುಂಡು ಗುಂಡುಗಳಿಲ್ಲಿದೆ ನನ್ನಲ್ಲಿ ಆನಂದಿಸುವುದಕ್ಕೆ ಆಗುವುದೇ ಇಲ್ಲ ಎನ್ನುವ ತೆರದಲ್ಲಿ ಕೆಲವರು ನನ್ನಲ್ಲಿ ಬರುವುದೇ ಪಾರ್ಟಿಮಾಡುವುದಕ್ಕೆ. ಅದನ್ನು ಮಾಡಿದರೂ ನನ್ನದೇನೂ ಅಭ್ಯಂತರವಿಲ್ಲ. ಹೊಗುವಾಗ ಕೆಲವು ಅಸಹ್ಯಗಳನ್ನು ನನ್ನ ಮಡಿಲಲ್ಲಿ ಎಸದು ಹೋಗ್ತಾರೆ. ನಾನು ಮೊದಲೇ ಹೇಳಿದ್ನಲ್ಲ ನನ್ನಲ್ಲಿ ಯಾರೂ ಇರುವುದಿಲ್ಲ ಎಂದು ಹಾಗಾಗಿ ನನ್ನ ಮಡಿಲನ್ನು ಸ್ವಚ್ಛಮಾಡುವವರು ಯಾರೂ ಇಲ್ಲ. ನನ್ನನ್ನು ನೋಡಲು ಬರುವ ಅಭಿಮಾನಿಗಳು ಮಾಡಿರುವ ಗಬ್ಬು ಗಲಿಜನ್ನು ನಾನು ಅನಿವಾರ್ಯವಾಗಿ ಅನುಭವಿಸಲೇ ಬೇಕು.
ಅದೇನು ಕಪ್ಪು ಎಳ್ಳುಗಳಿಗೆ ನನ್ನ ಮೇಲ್ಮೈ ಹೊಂದುತ್ತದೆಯಂತೆ. ನನ್ನ ಮಡಿಲಲ್ಲಿ ಇರುವ ಮಣ್ಣೆಲ್ಲವೂ ಕರಿ ಎಳ್ಳಿನಂತೆ ಇದೆ. ಅದಕ್ಕೆ ನನಗೆ ʻತಿಳಮಾತಿʼ ಎಂದು ಕರೆಯುತ್ತಾರೆ. ʻತಿಳಿʼ ಅಂದರೆ ʻಎಳ್ಳುʼ ಎಂದು ಅರ್ಥ.. ʻಮಾತಿʼ ಅಂದರೆ ʻಮಣ್ಣುʼ ಎಂದರ್ಥ. ಇಡಿ ಹೆಸರು ʻಕೊಂಕಣಿʼ ಭಾಷೆಯದ್ದಾಗಿರುವುದರಿಂದ ನನ್ನನ್ನು ಕೆಲವರು ನಾನಿರುವುದು ಗೋವಾದಲ್ಲಿ ಎಂದು ಕೊಂಡಿದ್ದಾರೆ. ಈ ಮಾತಿಗೆ ಪುಷ್ಟಿಕೊಡುವುದಕ್ಕೆ ನಾನಿದ್ದಲ್ಲಿಗೆ ಬಂದು ಹೋಗಲು ಗೋವಾದ ಪೊಲೇಂ ಕಡೆಯಿಂದ ಒಂದು ದಾರಿಯೂ ಇದೆ. ಆದರೆ ಅದು ಅನಧಿಕೃತ ದಾರಿಯೇ ಹೊರತು ರಾಜಮಾರ್ಗವಲ್ಲ. ವಾಸ್ತವದಲ್ಲಿ ನಾನಿರುವುದು ಕರ್ನಾಟಕ ರಾಜ್ಯದಲ್ಲಿಯೇ! ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಉತ್ತರದ ಕಟ್ಟಕಡೆಯ ಹಳ್ಳಿ ಮಾಜಾಳಿಯ ಮಗ್ಗಲಲ್ಲಿಯೇ ನಾನು ಇರುವುದು.
ಅದೇ ನಾನು ಈ ರೀತಿ ನನ್ನ ಸಮಸ್ಯೆಯನ್ನು ಗೋಗರಿತಾ ಇರುವುದು ʻತಿಳಮಾತಿ ಬಿಚ್ʼ ..! ನಾನು ನನ್ನ ಪಾಡಿಗೆ ಇರೋಣ ಎಂದರೆ ನನ್ನ ಸೌಂದರ್ಯ ಸುಮ್ಮನೆ ಇರುವುದಕ್ಕೆ ಬಿಡುವುದೇ ಇಲ್ಲ. ಜನರನ್ನು ತನ್ನತಾನೇ ಕೈ ಬೀಸಿ ಕರೆಯುತ್ತದೆ. ಬರುವವರ ಕಷ್ಟ ನೋಡಿದರೆ ನನಗೆ ಅಯೋ ಅನಿಸುತ್ತದೆ. ಹೊಲ ಮೆಟ್ಟಿ, ಗುಡ್ಡ ಹತ್ತಿ, ಬಂಡೆ ಇಳಿದು ಹುಸಪ್ಪ ಎಂದು ನನ್ನಲ್ಲಿ ಬರ್ತಾರೆ ಮಾಜಾಳಿ ಕಡೆಯಿಂದ. ಇನ್ನೂ ಪೊಲೇಂ ಕಡೆಯಿಂದ ಬರುವರು ಕಾಡು ಮೇಡು ದಾಟಿ ಮುಳ್ಳು ಚುಚ್ಚಿಕೊಂಡು ಮೈ ಪರಚಿಕೊಂಡು ಬರಲೇ ಬೇಕು ಅಂತ ಪರಸ್ಥಿತಿ ಇದೆ.
ನನ್ನಲ್ಲಿ ಬಂದವರಿಗೆ ಒಂದು ಗುಟುಕು ನೀರು ಸಿಗೋದಿಲ್ಲ ಎನ್ನುವ ಸಂಗತಿ ಮತ್ತೊಮ್ಮೆ ನಾನು ನೆನಪಿಸಲೇ ಬೇಕು. ನಾನಿರುವ ಸ್ಥಾನದಿಂದ ತುಸು ದೂರ ಒಂದು ಸಿಹಿ ನೀರಿನ ಭಾವಿ ಇದೆ. ಆದರೆ ಅದರಲ್ಲಿ ಇರುವ ನೀರು ಕೆಲವು ಕಾಲಗಳ ಹಿಂದೆ ಸ್ವಚ್ಛವಾಗಿಯೇ ಇತ್ತು. ಇತ್ತೀಚ್ಚೆಗೆ ಸಿಕ್ಕ ಸಿಕ್ಕವರು ಅದನ್ನು ಬಳಸುವ ನೆಪದಲ್ಲಿ ಸ್ವಲ್ಪ ಗಲಿಜು ಮಾಡಿಟ್ಟಿದ್ದಾರೆ. ನೀರಿದ್ದರೂ ಕುಡಿಯವುದು ಕಷ್ಟವೆ. ಇನ್ನೂ ನೀರೇ ಇಲ್ಲ ಅಂದ ಮೇಲೆ ತಿಂಡಿ ತಿನಿಸುಗಳು ಏನೂ ಸಿಗೋದಿಲ್ಲ. ನಾನು ನಿರಾಭರಣ ಕಪ್ಪು ಸುಂದರಿ ಅಲ್ಲವಾ. ಅದಕ್ಕೆ ನಾನು ಇದ್ದಲ್ಲಿ ಬೇರೆನೂ ಇರೋದಿಲ್ಲ. ಏನು ಬೇಕಾದ್ರೂ ನೀವು ಹೊತ್ತೊಂಡು ಬಂದು ತಿಂದು ಕುಡಿದು ನನ್ನ ಮಡಿಲಲ್ಲಿ ಆಟಾ ಆಡಬಹುದು. ಪೋಟೋ ಕ್ಲಿಕ್ಕಿಸಿಕೊಳ್ಳಬಹುದು ಮೋಜು ಮಸ್ತಿ ಮಾಡಬಹುದು. ಆದರೆ ಪ್ಲಾಸ್ಟಿಕ್ ಎಸೆದು ಗಲಿಜು ಮಾಡಿ ನನ್ನ ಅಂದ ಕೆಡಿಸಬೇಡಿ.. ನಾನು ಮಾತಾಡೋದಿಲ್ಲಾ ಅಂತ ಏನಬೇಕಾದ್ರೂ ಮಾಡಿದ್ರೂ ನಡೆದು ಹೊಗುತ್ತೆ ಎಂದು ಅಂದುಕೊಳ್ಳಬೇಡಿ. ನನ್ನನ್ನು ಕಾಯೋದಕ್ಕೆ ಯಾರೂ ಇಲ್ಲ ನಿಜ.. ಆದ್ರೂ ಪ್ರಕೃತಿಯೇ ನನ್ನನ್ನು ಬೆಳೆಸೆಸಿದ್ದು..ಆ ಪ್ರಕೃತಿಯೇ ನನ್ನನ್ನು ಉಳಿಸಿಕೊಳ್ಳುವುದು. ನನ್ನ ನೋಡಿ ಆನಂದಿಸಿ ಪ್ರಕೃತಿಗೂ ಸಂತೋಷವಾಗುವುದು. ನಿಮಗೂ ಸಂತಸವಾಗುವುದು ಎನ್ನುವ ಭರವಸೆ ನನ್ನದು. ನನ್ನ ಮಡಿಲು ಹಾಳುಮಾಡುವ ಪ್ರಯತ್ನ ಮಾಡದಿರಿ.. ಕಾರಣ ಪ್ರಕೃತಿ ಕೊಪಿಸಿಕೊಂಡರೆ ಕಷ್ಟ.. ಆಗ ನಾನೂ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ, ಕ್ಷಮಿಸಿ ಬಿಡಿ ಎನ್ನುವ ಮಾತು ಬಿಟ್ಟರೆ. ಇರಲಿ ಬನ್ನಿ ಒಮ್ಮೆ.. ಅದೇಷ್ಟೋ ಬೆಳ್ಳನೆಯ ಸುಂದರಿಯರನ್ನು ನೋಡಿದ ನೀವು ಒಮ್ಮೆ ನನ್ನ ಕಪ್ಪು ಸೌಂದರ್ಯವನ್ನು ನೋಡ ಬೇಡವೇ..?
ನಿಮ್ಮ ಬಿಡುವಿನ ಸಂದರ್ಭದಲ್ಲಿ ಬೇರೆ ಏನೋ ಕಾರ್ಯದಲ್ಲಿ ತೊಡಗಿ ಕೊಳ್ಳುವುದರ ಬದಲಿ ಪ್ರಕೃತಿಯ ಮಡಿಲಿಗೆ ಬರುವುದು ಸಂತೋಷದ ಸಂಗತಿಯೇ.. ಎಲ್ಲೋ ಹೋಗುವ ಬದಲು ನನ್ನಲ್ಲಿಗೆ ಬನ್ನಿ! ನನ್ನನ್ನು ಉಭಯ ರಾಜ್ಯಗಳೂ ಮರೆತಿವೆ, ಪ್ರವಾಸೋದ್ಯಮ ಇಲಾಖೆಯಷ್ಟೇ ಅಲ್ಲ ..ಸ್ಥಳೀಯರೂ ಮರೆತಿದ್ದಾರೆ, ನೀವು ಮರೆಯ ಬೇಡಿ… ಆದರೆ ನಿಮ್ಮ ಸಂಭ್ರಮ ನನ್ನ ನೆಮ್ಮದಿಗೆ ಭಂಗ ತಾರದಂತಿರಲಿ.
Publisher: shrinath joshi | Knobly