ಬೆಂಗಳೂರು : ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದಿಂದ ಜೀವನದಲ್ಲಿ ಯಶಸ್ಸು ಗಳಿಸಿ ತಂದೆ ತಾಯಿಗಳಿಗೆ ಹಾಗೂ ದೇಶಕ್ಕೆ ಕೀರ್ತಿ ತರಬೇಕು ಎಂದು ವಸತಿ ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರು ತಿಳಿಸಿದರು.
ಇಂದು ಡಾ.ಬಿ.ಆರ್. ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2025-26ನೇ ಸಾಲಿನ ಶೈಕ್ಷಣಿಕ ಕಾಂiÀರ್iಗಾರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ತಂದೆ-ತಾಯಂದಿರು ಕಷ್ಟಪಟ್ಟು ಓದಿಸುತ್ತಾರೆ. ಮುಂದೆ ಮಕ್ಕಳು ಕಷ್ಟಪಡಬಾರದು ಮುಂದಿನ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂಬುದು ಅವರ ಆಸೆಯಾಗಿರುತ್ತದೆ. ಮಕ್ಕಳು ಓದುವ ವಯಸ್ಸಿನಲ್ಲಿ ಚೆನ್ನಾಗಿ ವಿದ್ಯಾಭ್ಯಾಸವನ್ನು ಮಾಡಿ ತಂದೆ- ತಾಯಿಗಳಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ನನ್ನ ತಂದೆ ತಾಯಿಗಳು ಕಾನ್ವೆಂಟ್ ಸ್ಕೂಲ್ನಲ್ಲಿ ಓದಿಸಿದರು. ಆದರೆ ನಾನು ಹತ್ತನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸವನ್ನು ಮಾಡಿದೆ. ನಂತರ ವಿದ್ಯಾಭ್ಯಾಸವನ್ನು ಮುಂದುವರೆಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಆದ್ದರಿಂದ ನಾನು ಹೆಚ್ಚಾಗಿ ಓದಿಲ್ಲ. ಮಕ್ಕಳು ಚೆನ್ನಾಗಿ ಓದಲಿ ಎಂದು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಿದ್ದೇನೆ. ಪ್ರಯತ್ನ ಪಟ್ಟರೆ ಮುಂದೆ ನೀವು ಏನು ಬೇಕಾದರೂ ಸಾಧಿಸಬಹುದು. ನಾನು 5 ಬಾರಿ ಶಾಸಕ, 3 ಬಾರಿ ಸಚಿವರಾಗಿದ್ದೇನೆ ಎಂದು ತಿಳಿಸಿದರು.
ನನಗೆ ರಾಜಕೀಯದ ಗುರು ಮಾಜಿ ಪ್ರಧಾನಿ ದೇವೇಗೌಡರು. ರಾಜಕೀಯವಾಗಿ ಬೆಳೆಯಲು ಅವರು ಸಹಾಯ ಮಾಡಿದರು. ಅವರು ಬಡತನದಿಂದ ಹುಟ್ಟಿ ರೈತರ ಮಗನಾಗಿ ನಂತರ ಪ್ರಧಾನಿಯಾದರು. ಮುಂದೆ ನಿಮ್ಮಲ್ಲಿ ಯಾರಾದರೂ ಪ್ರಧಾನಿಯಾಗಬಹುದು ಎಂದು ತಿಳಿಸಿದರು.
2023ನೇ ಸಾಲಿನಲ್ಲಿ 1,20,350 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದರು. ಪ್ರಸ್ತುತ 2,08,065 ವಿದ್ಯಾರ್ಥಿಗಳಿದ್ದಾರೆ. ಮುಂದಿನ 3 ವರ್ಷದಲ್ಲಿ 5 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ಹೊಂದುವ ಗುರಿ ಇದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗಿತ್ತಿರುವ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನವನ್ನು 2025-26ನೇ ಸಾಲಿನಿಂದ ರೂ.20 ಲಕ್ಷಗಳಿಂದ 30 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ. 2023-24ನೇ ಸಾಲಿನಲ್ಲಿ ಬೆಂಗಳೂರು ನಗರದ ಹಜ್ ಭವನದಲ್ಲಿ ವಸತಿ ಸಹಿತ ಐಎಎಸ್/ಕೆಎಎಸ್ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ತರಬೇತಿಯನ್ನು ಪಡೆದ ಕೆಲವು ವಿದ್ಯಾರ್ಥಿಗಳು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 2022-23ರಲ್ಲಿ 850 ಕೋಟಿ ಅನುದಾನ ಮಂಜೂರಾಗಿದ್ದು, 2025-26ರಲ್ಲಿ 4537 ಕೋಟಿ ಅನುದಾನ ಮಂಜೂರಾಗಿದೆ. ಒಟ್ಟು 12,72,912 ವಿದ್ಯಾರ್ಥಿಗಳಿಗೆ 416.39 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ.
ಬಡ ಮಕ್ಕಳು ವಸತಿ ಶಾಲೆಯಲ್ಲಿ ಕಲೆಯುತ್ತಿರುತ್ತಾರೆ. ಅವರು ತಂದೆ, ತಾಯಿಯನ್ನು ಬಿಟ್ಟು ಶಾಲೆಗೆ ಬಂದಿರುತ್ತಾರೆ ಅವರನ್ನು ನಿಮ್ಮ ಮಕ್ಕಳ ರೀತಿ ನೋಡಿಕೊಳ್ಳಿ. ಅವರ ಹತ್ತಿರ ಕಠಿಣವಾಗಿ ನಡೆದುಕೊಳ್ಳಬೇಡಿ. ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಉತ್ತಮ ವಿದ್ಯಾಭ್ಯಾಸ ನೀಡಿ ಎಂದು ಶಿಕ್ಷಕರು, ಪ್ರಾಂಶುಪಾಲರು, ವಾರ್ಡನ್ ಅವರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು 2025-26ನೇ ಸಾಲಿನ ಶೈಕ್ಷಣಿಕ ಕ್ರಿಯಾ ಯೋಜನೆ ಪುಸ್ತಕ, 2025-26ನೇ ಸಾಲಿನ ಕ್ರಿಯಾ ಯೋಜನೆ ಪುಸ್ತಕ, ಕಾಫಿ ಟೇಬಲ್ ಪುಸ್ತಕ, ಇಲಾಖಾ ಯೋಜನೆಗಳ ಕೈಪಿಡಿ, 02 ವರ್ಷಗಳ ಇಲಾಖಾ ಸಾಧನೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಆರು ಮೆಡಲ್ಗಳನ್ನು ಪಡೆದ ಕುಮಾರಿ. ಕೆ.ಎಂ ರೂಫಿಯಾ ಅವರಿಗೆ 1 ಲಕ್ಷ ಬಹುಮಾನ ನೀಡಲಾಯಿತು ಅಲ್ಲದೆ ಎಂ.ಬಿ.ಬಿ.ಎಸ್. ಸೀಟ್ ಪಡೆದ ಕುಮಾರಿ ಎ.ಆರ್. ರಿದಾ ಇವರಿಗೆ ಡಾಕ್ಟರ್ ಆಗುವವರೆಗಿನ ವೆಚ್ಚವನ್ನು ಸ್ವತ: ಸಚಿವರೇ ಭರಿಸುವುದಾಗಿ ತಿಳಿಸಿದರು.
ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ವಿಸ್ತರಣಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರನ್ನು ಸಚಿವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಬಿ.ಕೆ. ಅಲ್ತಫ್ ಖಾನ್, ವಸತಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಡಾ. ಎಸ್. ಜಾಫೆಟ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ (ನಿವೃತ್ತ) ಯು. ನಿಸ್ಸಾರ್ ಅಹಮದ್ ಸೇರಿದಂತೆ ಹಿರಿಯ ಗಣ್ಯರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu