ಕೊಪ್ಪಳ: ದಿನಗೂಲಿ ನೌಕರನ ಹತ್ತಿರ ಕೋಟಿ ಕೋಟಿ ಆಸ್ತಿ ಪತ್ತೆ ಆಗಿದೆ. ಇದನ್ನು ನೋಡಿದ ಲೋಕಾತುಕ್ತ ಅಧಿಕಾರಿಗಳು ಸಹ ಒಂದು ಕ್ಷಣ ಶಾಕ್ ಗೆ ಒಳಗಾಗಿದ್ದಾರೆ.
ಹೌದು..ಕೊಪ್ಪಳದ ಕೆಆರ್‌ಐಡಿಎಲ್ ನಲ್ಲಿ ದಿನಗೂಲಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ ದಿನಗೂಲಿ ನೌಕರನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವಾಗ ಈ ವಿಷಯ ಬೆಳಕಿಗೆ ಬಂದಿದೆ.
ಕೊಪ್ಪಳದ ಕೆಆರ್‌ಐಡಿಎಲ್ ಕಚೇರಿಯಲ್ಲಿ ಸಹಾಯಕನಾಗಿದ್ದ ಕಳಕಪ್ಪ ನಿಡಗುಂದಿ ಅವರ ಮನೆ ಮೇಲೆ ನಿನ್ನೆ ಲೋಕಾಯುಕ್ತ ದಾಳಿ ನಡೆಸಿದೆ. ಈ ವೇಳೆ ಸುಮಾರು 100 ಕೋಟಿ ಮೌಲ್ಯದ ಆಸ್ತಿ ಪತ್ತೆ. ಕೆಆರ್‌ಐಡಿಎಲ್ ನಲ್ಲಿ ಕಾಮಗಾರಿ ಮಾಡದೆ ಬಿಲ್ ಪಡೆದ ಆರೋಪ ಇವರ ಮೇಲಿದೆ.
ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದ ವೇಳೆ ನಿಡಗುಂದಿ ಅವರಿಗೆ ಸಂಬಂಧಿಸಿದ ಅಪಾರ್ಟ್‌ಮೆಂಟ್ ಒಳಗೊಂಡು ಸುಮಾರು 24 ಮನೆ, ಕೊಪ್ಪಳದ ಪ್ರತಿಷ್ಠಿತ ವಿವಿಧ ಕಾಲೊನಿಯಲ್ಲಿ 30ಕ್ಕೂ ಹೆಚ್ಚು ನಿವೇಶನ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣದ ಜೊತೆಗೆ ನಗದು ಸಿಕ್ಕಿದೆ. ದಿನಗೂಲಿ ನೌಕರನ ಬಳಿ ಇಷ್ಟೊಂದು ಪ್ರಮಾಣ ಆಸ್ತಿ ಪತ್ತೆಯಾಗಿರುವುದು ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.
Publisher: ಕನ್ನಡ ನಾಡು | Kannada Naadu