ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ):
ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಬದಲಾವಣೆ ತರುವ ಪ್ರಯತ್ನವನ್ನು ಆದಿ ಕರ್ಮಯೋಗಿ ಅಭಿಯಾನದಿಂದ ಸಾಕಾರಗೊಳಿಸಲಿದ್ದೇವೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳಾದ ವಿಭು ನಾಯರ್ ತಿಳಿಸಿದರು.
ಅವರು ಇಂದು ಖಾಸಗಿ ಹೋಟೆಲ್‍ನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಕರ್ನಾಟಕ ಬುಡಕಟ್ಟು ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಆದಿ ಕರ್ಮಯೋಗಿ ಅಭಿಯಾನದ ರಾಷ್ಟ್ರೀಯ ಪ್ರತಿಕ್ರಿಯಾಶೀಲ ಆಡಳಿತ ಮಿಷನ್ ರಾಜ್ಯ ಪ್ರಕ್ರಿಯೆ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿದರು.
ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಿ, ಅವರಿಗೆ ರಾಜ್ಯ, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಆದಿ ಕರ್ಮಯೋಗಿ ಅಭಿಯಾನದ ಮೂಲಕ ಇವರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಬುಡಕಟ್ಟು ಪ್ರದೇಶದಲ್ಲಿ ಕೆಲಸ ನಿರ್ವಹಿಸುವವರು ತ್ವರಿತಗತಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಬೇಕು. ಇದರಿಂದ ಸಮಾಜ ಪರಿವರ್ತನೆಯ ಜೊತೆಗೆ ದೇಶದ ಅಭಿವೃದ್ಧಿ ಸಹ ಸಾಧ್ಯವಾಗುತ್ತದೆ.
ಈ ಅಭಿಯಾನದಡಿ ಬುಡಕಟ್ಟು ಕಲ್ಯಾಣ ಜೊತೆಗೆ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮಾಸ್ಟರ್ ಟ್ರೈನರ್‍ಗಳಿಂದ ತರಬೇತಿ ಪಡೆದುಕೊಂಡು ಇದರ ಪ್ರತಿಫಲದೊಂದಿಗೆ ಜಿಲ್ಲಾ, ಗ್ರಾಮೀಣ ಬ್ಲಾಕ್ ಹಂತದಲ್ಲೂ ತಮ್ಮ ಸೇವೆಯನ್ನು ನೀಡುವ ಸಾಮಥ್ರ್ಯ ಹೊಂದಬಲ್ಲವರಾಗಿರುತ್ತಾರೆ. ಇದರಿಂದ ವಸತಿ ಮುಂತಾದ ಯೋಜನೆಗಳು ಪರಿಶಿಷ್ಟ ಜಾತಿ/ಪಂಗಡದ ಅರ್ಹರಿಗೆ ಸಿಗುವಂತಾಗುತ್ತದೆ. ಅಲ್ಲದೆ ಸಾಮಾಜಿಕ ಬದಲಾವಣೆಗೆ ಸಹ ಬುನಾದಿ ಹಾಕುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬುಡಕಟ್ಟು ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ರಂದೀಪ್ ಡಿ, ಸರ್ಕಾರದ ಯೋಜನೆಯನ್ನು ಅರ್ಹರಿಗೆ ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಆಡಳಿತದಲ್ಲಿ ಚುರುಕು ಹಾಗೂ ಕ್ರಿಯಾಶೀಲತೆ ತರಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಆಡಳಿತದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯದ ಏಳು ಜಿಲ್ಲೆಗಳ ಬುಡಕಟ್ಟು ಕಲ್ಯಾಣ ಇಲಾಖೆ ಸೇರಿದಂತೆ ಇತರ ಪ್ರಮುಖ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಆಡಳಿತ, ವ್ಯಕ್ತಿ ವಿಕಸನ, ಕಾರ್ಯತಂತ್ರ, ಸಾಮಥ್ರ್ಯ ನಿರ್ಮಾಣ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಅವರು ಮುಂದೆ ತಮ್ಮ ಕಾರ್ಯ ವೈಖರಿಯಲ್ಲಿ ಹಲವು ಬದಲಾವಣೆಗಳನ್ನು ತರಲು ಸಮರ್ಥರಾಗುತ್ತಾರೆ. ಪಿಎಂ ಜನ್‍ಧನ್, ದರ್ತಿ ಅಭಿಯಾನ್ ಮುಂತಾದ ಕೇಂದ್ರ ಸರ್ಕಾರದ ಯೋಜನೆಗಳೂ ಸಹ ಜನರನ್ನು ತಲುಪುವುದಕ್ಕೆ ಇದು ಸಹಕಾರಿಯಾಗಿದೆ. ಇದರಿಂದ ವಿಕಸಿತ ಭಾರತದ ಪರಿಕಲ್ಪನೆಯು ನನಸಾಗಲಿದೆ ಎಂದರು.
ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕರಾದ ಯೋಗೀಶ್ ಮಾತನಾಡಿ, ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳನ್ನು ಗುರುತಿಸಲಾಗಿದ್ದು ಇವರಿಗೆ ವಿದ್ಯಾರ್ಥಿವೇತನ, ಶಿಕ್ಷಣ, ವಸತಿಶಾಲೆ, ವಸತಿ ಹಾಗೂ ಇನ್ನಿತರ ಯೋಜನೆಗಳನ್ನು ತಲುಪಿಸುವುದು ಸರ್ಕಾರದ ಹೊಣೆಯಾಗಿದೆ. ವಿಧವಾ ವಿವಾಹ, ಅಂತರಜಾತೀಯ ವಿವಾಹಗಳಿಗೆ ಸಹ ಪ್ರೋತ್ಸಾಹ ಧನ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 119 ಆಶ್ರಮ ಶಾಲೆಗಳಿದ್ದು, ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಬುಡಕಟ್ಟು ಕಲ್ಯಾಣ ಇಲಾಖೆ ಜೊತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮುಂತಾದ ಇಲಾಖೆಗಳು ಜೊತೆಗೂಡಿದರೆ, ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತದೆ. ಈ ನಿಟ್ಟಿನಲ್ಲಿ ಆದಿ ಕರ್ಮಯೋಗಿ ಅಭಿಯಾನದಡಿ ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕೆ ಆಡಳಿತ ಮುಂತಾದ ವಿಷಯಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ 4 ದಿನಗಳ ತರಬೇತಿಯನ್ನು ಇದೇ ಜುಲೈ 23 ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕಲಬುರಗಿ, ಬಳ್ಳಾರಿ, ಕೊಪ್ಪಳ, ದಾವಣಗೆರೆ, ರಾಯಚೂರು ಉತ್ತರಕನ್ನಡ ಹಾಗೂ ತುಮಕೂರು ಜಿಲ್ಲೆಗಳನ್ನು ಆಯ್ದ ಆಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಸ್ಟರ್ ಟ್ರೈನರ್‍ಗಳು ಹಾಗೂ ವಿವಿಧ ಜಿಲ್ಲೆಗಳ ಶಿಬಿರಾರ್ಥಿಗಳು ಹಾಜರಿದ್ದರು.
Publisher: ಕನ್ನಡ ನಾಡು | Kannada Naadu