ಬೆಂಗಳೂರು,: ಕಾವೇರಿ ನೀರಾವರಿ ನಿಗಮದಿಂದ ಚನ್ನರಾಯಪಟ್ಟಣ ಹೇಮಾವತಿ ನಾಲಾ ಜಲಾಶಯದಿಂದ 2025-26 ನೇ ಸಾಲಿಗೆ ಖಾರೀಫ್ ಅವಧಿಯ ಬೆಳೆಗಳಿಗೆ ನೀರನ್ನು ಸರಬರಾಜು ಮಾಡಲಾಗುವುದು.
ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದ ಮೇರೆಗೆ 2025 ನೇ ಜುಲೈ 16 ರಿಂದ 2025 ನೇ ನವೆಂಬರ್ 30 ರವರೆಗೆ ಹೇಮಾವತಿ ಎಡದಂಡೆ ನಾಲೆ ಹಾಗೂ ನದಿ ಅಣೆಕಟ್ಟು ನಾಲೆಗಳಾದ ಶ್ರೀರಾಮದೇವರ ಉತ್ತರ ನಾಲೆ, ಹೇಮಗಿರಿ ನಾಲೆ, ಅಕ್ಕಿಹೆಬ್ಬಾಳು ನಾಲೆ, ಮಂದಗೆರೆ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಖುಷ್ಕಿ ಹಾಗೂ ಭತ್ತದ ಬೆಳೆಗಾಗಿ ನೀರನ್ನು ಹರಿಸಲಾಗುತ್ತದೆ.
ನೀರಿನ ನಿಯಂತ್ರಣವನ್ನು ಹೇಮಾವತಿ ಜಲಾಶಯದಲ್ಲಿ ಇರುವ ನೀರಿನ ಶೇಖರಣೆ ಮತ್ತು ಜಲಾಶಯಕ್ಕೆ ಮಳೆ ಆಧರಿಸಿ ಬರುವ ನೀರಿನ ಅಂದಾಜಿನ ಪ್ರಮಾಣದ ಮೇಲೆ ಮಾಡಲಾಗಿ ಇಂತಹ ನಿಯಂತ್ರಣ ಪ್ರಾಕೃತಿಕ ಅಥವಾ ನೈಸರ್ಗಿಕ ವ್ಯತ್ಯಾಸದಿಂದ ನೀರಿನ ಕೊರತೆ ಉಂಟಾಗಿ ಬೆಳೆ ನಷ್ಟವಾದಲ್ಲಿ ಇಲಾಖೆಯವರು ಜವಾಬ್ದಾರರಲ್ಲ ಹಾಗೂ ರೈತ ಬಾಂಧವರಿಗೆ ಇದರಿಂದ ಯಾವ ಪರಿಹಾರ ಕೇಳುವ ಹಕ್ಕು ಇರುವುದಿಲ್ಲ.
ನೀರಿನ ನಿಯಂತ್ರಣ ಸೌಲಭ್ಯವನ್ನು ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಪ್ರಕಟಣೆಯಲ್ಲಿ ಸೂಚಿಸಿರುವ ಸೂಕ್ತ ಬೆಳೆಗಳನ್ನು ಅಳವಡಿಸಿ ಸದುಪಯೋಗ ಪಡೆಯಬೇಕೆಂದು ಈ ಮೂಲಕ ತಿಳಿಸಲಾಗಿದೆ.
ರೈತ ಬಾಂಧವರು ನಿಗಧಿತ ಬೆಳೆಯನ್ನೇ ಬೆಳೆಯತಕ್ಕದ್ದು. ವಿರುದ್ಧವಾಗಿ ಬೇರೆ ಬೆಳೆ ಬೆಳೆದ ಪಕ್ಷದಲ್ಲಿ ಕರ್ನಾಟಕ ನೀರಾವರಿ ಕಾಯ್ದೆಯ ಹಾಗೂ ಚಾಲ್ತಿಯಲ್ಲಿರುವ ನಿಯಾಮಾವಳಿಗಳ ಪ್ರಕಾರ ದಂಡ ಕರವನ್ನು ವಿಧಿಸಲಾಗುವುದು ಹಾಗೂ ಆಗಬಹುದಾದ ನೀರಿನ ಕೊರತೆ ಮತ್ತು ಬೆಳೆ ನಷ್ಟಕ್ಕೆ ರೈತರೇ ಜವಾಬ್ದಾರರು.
ವಿವಿಧ ವಿತರಣಾ ನಾಲೆಗಳಲ್ಲಿ ನೀರು ಬಿಡುವ ಮತ್ತು ನಿಲ್ಲಿಸುವ ಅವಧಿಯ ದಿನಾಂಕವನ್ನು ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ಕಾರ್ಯಪಾಲಕ ಇಂಜಿನಿಯರುಗಳು ಪ್ರತ್ಯೇಕವಾಗಿ ಪ್ರಕಟಣೆ ಹೊರಡಿಸಿ ಅಚ್ಚುಕಟ್ಟು ಪ್ರದೇಶದ ಗ್ರಾಮ ಪಂಚಾಯಿತಿಗಳಿಗೆ ಹಾಗೂ ರೈತ ಬಾಂಧವರಿಗೆ ತಲುಪಿಸಿ ಸೂಕ್ತ ತಿಳುವಳಿಕೆ ನೀಡುವುದು.
ನೀರಾವರಿಗೆ ಸಂಬಂಧಪಟ್ಟ ವಿತರಣಾ ನಾಲಾವಾರು, ಗ್ರಾಮವಾರು, ಸರ್ವೆ ನಂಬರು ಮುಂತಾದ ಮಾಹಿತಿಗೆ ಸಂಬಂಧಿಸಿದಂತೆ ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಲ್ಲಿ ತಿಳಿಯುವುದು. ನೀರನ್ನು ನಿಲ್ಲಿಸುವ ಅವಧಿಯನ್ನು ಯಾವ ಸಂದರ್ಭದಲ್ಲಿ ಅಥವಾ ಯಾವ ಕಾರಣಗಳಿಗಾಗಿಯೂ ಮುಂದುವರಿಸಲಾಗುವುದಿಲ್ಲ ಎಂದು ಚನ್ನರಾಯಪಟ್ಟಣ ಹೇಮಾವತಿ ನಾಲಾ ವೃತ್ತದ ಪ್ರಭಾರ ಸೂಪರಿಂಟೆಂಡಿಂಗ್ ಇಂಜಿನಿಯರ್ ಆರ್.ಡಿ.ಗಂಗಾಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu