ಸಪ್ತ ಸಾಗರದಾಚೆ ಕನ್ನಡ ನಾಡಿನ ಒಕ್ಕಲಿಗ ಸಂಸ್ಕೃತಿ, ಪರಂಪರೆಯ ಅದ್ಭುತ ಪ್ರದರ್ಶನ
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ
ಸ್ಯಾನ್‌ಹೋಸೆ, : ಅಮೆರಿಕದ ಸ್ಯಾನ್‌ಹೋಸೆ ನಗರದ ಮೆಕನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ದಿನಗಳ (ಜು.3-5) 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರಕಿತು.
ಸಪ್ತ ಸಾಗರದಾಚೆ ಕನ್ನಡ ಮಣ್ಣಿನ ಮಕ್ಕಳ ಸಾಂಸ್ಕೃತಿಕ ಮಹಾಸಮ್ಮೇಳನವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ದಿವ್ಯ ಆಶೀರ್ವಾದದೊಂದಿಗೆ ಉದ್ಘಾಟಿಸಿದರು.
ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಹಬ್ಬವಾಗಿ ರೂಪುಗೊಂಡಿರುವ ಈ ಕಾರ್ಯಕ್ರಮವು ವಿಶ್ವದ ವಿವಿಧೆಡೆ ನೆಲೆಸಿರುವ ಒಕ್ಕಲಿಗ ಸಮುದಾಯದ ಬಂಧುಗಳನ್ನು ಒಂದೆಡೆ ಸೇರಿಸಿರುವ ಅಪೂರ್ವ ಸನ್ನಿವೇಶವಾಗಿದೆ.
ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ, ಸಂಸದರಾದ ಡಾ. ಕೆ. ಸುಧಾಕರ್, ಶಾಸಕರಾದ ಸಿ.ಎಸ್. ಪುಟ್ಟರಾಜು, ಎಸ್.ಟಿ. ಸೋಮಶೇಖರ್, ಸತೀಶ್ ರೆಡ್ಡಿ, ಗುಬ್ಬಿ ಶ್ರೀನಿವಾಸ್ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರಾದ ಸಚ್ಚಿದಾನಂದ, ಒಕ್ಕಲಿಗ ಪರಿಷತ್ ಆಫ್ ಅಮೆರಿಕ ಅಧ್ಯಕ್ಷರಾದ ಧನಂಜಯ್ ಕೆಂಗಯ್ಯ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಸಮ್ಮೇಳನಕ್ಕೆ ಕಳೆ ತಂದಿದ್ದಾರೆ.
ಸಾಂಸ್ಕೃತಿಕ ವೈಭವ
ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ ಸಮುದಾಯದ ಸದಸ್ಯರು, ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಉತ್ಸವವನ್ನು ಇಲ್ಲಿ ಜಗತ್ತಿಗೆ ತೋರಿಸಿದ್ದಾರೆ. ಒಕ್ಕಲಿಗರ ಸಂಸ್ಕೃತಿಯ ಬಣ್ಣನೆ, ಭಕ್ತಿಯ ಮೆರವಣಿಗೆ, ಸುಗ್ಗಿ ಕುಣಿತ, ದೇವರ ಉತ್ಸವ, ಕೋಲಾಟ, ವೇಷ ಭೂಷಣಗಳ ಪ್ರದರ್ಶನಗಳು ಸ್ಯಾನ್‌ಹೋಸೆ ರಸ್ತೆಗಳಲ್ಲಿ ಜಾತ್ರಾ ಉತ್ಸವದ ಅನುಭವವನ್ನು ನೀಡಿದವು.
ಸಾಂಸ್ಕೃತಿಕ, ಕಲಾ ಪ್ರದರ್ಶನಗಳ ಜೊತೆಗೆ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿಶಿಷ್ಟ ಭೋಜನ ವ್ಯವಸ್ಥೆ, ಸಮುದಾಯ ವಧು-ವರರ ಪರಿಚಯ ವೇದಿಕೆ, ಉದ್ಯಮಿಗಳಿಗೆ ‘ಬಿಸಿನೆಸ್ ಫೋರಂ’, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳು, ಮಹಿಳಾ ಚಟುವಟಿಕೆಗಳು ಸೇರಿದಂತೆ ಹಲವು ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಕ್ಕಲಿಗ ಸಮುದಾಯದ ಬಲವರ್ಧನೆಗೆ ಪರಸ್ಪರ ಸಹಕಾರಕ್ಕೆ ನಾಂದಿಯಾಗಿವೆ.
ಅಮೆರಿಕದ ವಿವಿಧ ರಾಜ್ಯಗಳು ಹಾಗೂ ಇತರ ದೇಶಗಳಿಂದ ಸಾವಿರಾರು ಕುಟುಂಬಗಳು ಭಾಗವಹಿಸಿದ್ದ ಈ ಸಮ್ಮೇಳನ, ವಿದೇಶಿ ನೆಲದಲ್ಲಿ ಸಮುದಾಯದ ಹೆಗ್ಗಳಿಕೆಯನ್ನು ಅನಾವರಣಗೊಳಿಸಿದೆ. “ಒಕ್ಕಲಿಗ ಸಮಾಜ – ಜಗತ್ತಿನ ಮೂಲೆಮೂಲೆಗೂ ತಲುಪಿದೆ” ಎಂಬುದನ್ನು ಸಮರ್ಥವಾಗಿ ಸಾರುತ್ತಿದೆ.
Publisher: ಕನ್ನಡ ನಾಡು | Kannada Naadu