ಭಾರತದ ಅತಿ ಪುರಾತನ ಗೋತಳಿಗಳಲ್ಲಿ ಗೀರ್ ಕೂಡಾ ಒಂದು. ಗೀರ್ ಎಂಬ ಕಾಡಿನಲ್ಲಿ ಹುಟ್ಟಿ ಬೆಳೆದು ಬಂದಿರುವುದರಿಂದ ಈ ದನಗಳಿಗೆ ಗೀರ್ ಜಾತಿಯ ದನಗಳೆಂದು ಹೆಸರು ಬಂದಿದೆ. ಈ ದನಗಳನ್ನು ಸಾಕುವುದೊಂದೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಅಂದಿನ ಪಶುಪಾಲಕರು ಮೂಲತಃ ಕಾಡಿನಲ್ಲಿಯೇ ವಾಸವಾಗಿದ್ದರು. ಹಾಗೆಯೇ ಗುಜರಾತಿನ ಅಂದಿನ ಪಶುಪಾಲಕರು ವಂಶಪಾರಂಪರ್ಯವಾಗಿ ಈ ಹಾಲಿನ ತಳಿಯನ್ನು ಉತ್ತಮವಾಗಿ ಸಂವರ್ಧನೆ ಮಾಡಿದುದಲ್ಲದೆ ಬಹಳ ಶ್ರದ್ಧೆಯೊಂದಿಗೆ ಸಾಕಿ ಬೆಳೆಸುದುದರ ಪರಿಣಾಮ ಈ ತಳಿಗಳು ಇಂದಿಗೂ ಶುದ್ಧ ಹೈನ ತಳಿಗಳಾಗಿಯೇ ಉಳಿದುಕೊಂಡಿವೆ. ಅಷ್ಟೇ ಅಲ್ಲದೆ ಈ ತಳಿಯನ್ನು ಸಾಕಿ ಬೆಳೆಸುವುದರಲ್ಲಿ ಅಲ್ಲಿಯ ಕೆಲ ಸ್ಥಳೀಯ ಅರಸರ ಪಾಲೂ ಸಹ ಇದೆ ಎನ್ನಲಾಗುತ್ತದೆ.
ದೇಶದ ಒಳಗೆ ಮತ್ತು ಹೊರಗೆ ಅತಿ ಹೆಚ್ಚು ಬೇಡಿಕೆ ಇರುವ ಹಾಲಿನ ತಳಿಯಿದು. ಇಂದಿಗೂ ಉತ್ತರ ಪ್ರದೇಶದ ಕೆಲ ಮನೆಗಳಲ್ಲಿ ದಿನಕ್ಕೆ 40 ರಿಂದ 50 ಲೀಟರ್ ಹಾಲನ್ನು ಕೊಡುವ ಈ ತಳಿಗಳನ್ನು ಕಾಣಬಹುದಾಗಿದೆ. ಉತ್ತಮವಾದ ಈ ತಳಿ ಬೇಕೆಂದರೆ ಕಡಿಮೆ ಎಂದರೂ ಜೇಬಲ್ಲಿ ಒಂದು ಲಕ್ಷ ರೂಪಾಯಿ ಇಟ್ಟುಕೊಳ್ಳಲೇ ಬೇಕು. ಸದ್ಯಕ್ಕೆ ಭಾರತದ ತಳಿಗಳ ಪೈಕಿ ದುಬಾರಿ ತಳಿ ಎಂದೇ ಇದನ್ನು ಹೇಳಬಹುದು. ಆದರೆ ಎಷ್ಟು ಬೆಲೆ ಕೊಟ್ಟರು ಇದರ ಹಾಲಿನ ಪ್ರಮಾಣ ಮತ್ತು ಸತ್ವದ ವಿಚಾರದಲ್ಲಿ ಬೇರ್‍ಯಾವುದೇ ವಿದೇಶಿ ಹಸುಗಳು ಇಂದಿಗೂ ಇದಕ್ಕೆ ಸಾಟಿಯಿಲ್ಲ.
ತೂಕದಲ್ಲಿ ಈ ಹೋರಿಗಳು 450 ರಿಂದ 500 ಕೆ.ಜಿ. ಹಾಗೂ ಆಕಳುಗಳು 375 ರಿಂದ 450 ಕೆ.ಜಿ. ತೂಕವಿರುತ್ತವೆ. ಇವುಗಳು ಬಿಸಿಲು, ಚಳಿ, ಮಳೆ, ಗಾಳಿಯ ವಾತಾವರಣಗಳಲ್ಲಿ ಬೆಳೆದುದುರ ಪರಿಣಾಮ ರೋಗನಿರೋಧಕ ಶಕ್ತಿ ಇವುಗಳಲ್ಲಿ ಹೆಚ್ಚು. ಇವುಗಳು ಧೈರ್ಯಸ್ತ ತಳಿಗಳೆಂದೇ ಹೆಸರು ಪಡೆದವು. ಸುಮಾರು ಐದಾರು ದನಗಳು ಸೇರಿಕೊಂಡು ಒಂದು ಕ್ರೂರ ಪ್ರಾಣಿಯನ್ನು ಎದುರಿಸಿ ಹಿಮ್ಮೆಟ್ಟಿಸುವ ಶಕ್ತಿ ಹಾಗೂ ಧೈರ್ಯವನ್ನು ಇವುಗಳು ಹೊಂದಿವೆ. ಇಂತಹ ಗೀರ್ ತಳಿಯೊಂದೇ ಅಲ್ಲ. ಭಾರತದ ಹಲವು ಪ್ರಮುಖ ಹಾಲಿನ ತಳಿಗಳು ಇಂದು ನಮ್ಮಲ್ಲಿರುವುದಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿ ಅಭಿವೃದ್ಧಿ ಹೊಂದುತ್ತಿವೆ, ಪರಿಶುದ್ಧ ಹಾಲನ್ನೂ ಸಹ ನೀಡುತ್ತಿವೆ. ಆದರೆ ನಾವು ಮಾತ್ರ ನಮ್ಮ ದೇಶಿ ತಳಿಯ ಮಹತ್ವವನ್ನು ಅರಿಯದೇ ಕಡೆಗಣಿಸಿದ್ದೇವೆ.
ವಿಶ್ವದ ಬಹುತೇಕ ದೇಶಗಳಲ್ಲಿ ಇಂದು ಭಾರತೀಯ ತಳಿಯ ದನಗಳು ಅಭಿವೃದ್ಧಿ ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ನಮ್ಮಲ್ಲೇ ಆ ದನಗಳು ಕಡೆಗಣಿಸಲ್ಪಟ್ಟಿವೆ. ಅದೇ ರೀತಿ ಭಾರತದಿಂದ ಕೊಂಡೊಯ್ದ ಗೀರ್ ತಳಿಯೊಂದು ಬ್ರೆಜಿಲ್‌ನಲ್ಲಿ ಪ್ರಖ್ಯಾತ ತಳಿಯಾಗಿ ಸಂವರ್ಧನೆಗೊಂಡಿದೆ. ಹೀಗೆ ನಮ್ಮ ದೇಶದಿಂದ ಹೆಚ್ಚಾಗಿ ರಫ್ತಾದ ತಳಿಗಳಲ್ಲಿ ಗೀರ್ ಸಹ ಒಂದು. ಇದು ಭಾರತದಲ್ಲೇ ಅತಿ ಹೆಚ್ಚು ಹಾಲನ್ನು ನೀಡುವ ತಳಿಯೆಂದೇ ಹೇಳಲಾಗುತ್ತದೆ. ದೇಶದಲ್ಲಷ್ಟೇ ಅಲ್ಲದೆ ಈಗ ಇವು ವಿದೇಶಗಳಲ್ಲೂ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿವೆ. ಬ್ರೆಜಿಲ್‌ನಲ್ಲಿ ಅತ್ಯುತ್ತಮವಾಗಿ ಸಂವರ್ಧನೆಗೊಂಡಿರುವ ಇದೇ ಜಾತಿಯ ಮತ್ತೊಂದು ಗೀರ್ ಅತಿ ಹೆಚ್ಚು ಹಾಲನ್ನು ನೀಡುವುದರ ಮೂಲಕ ಗಿನ್ನಿಸ್ ದಾಖಲೆಯನ್ನೇ ಮಾಡಿದೆ. ಮೇ 14, 2012ರಂದು ಬ್ರೆಜಿಲ್‌ನ ಜಟಾಯಿಯಲ್ಲಿ ನಡೆದ 40ನೇ ಕೃಷಿ ಪ್ರದರ್ಶನದಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಶಿರಾ ಫಿಜ್ಮಾ ಎಂಬ ಹೆಸರಿನ ಗೀರ್ ಗೋವು ತಾನು ಮೊದಲು ಮಾಡಿದ್ದ ತನ್ನದೇ ದಾಖಲೆಯನ್ನು ಮುರಿದು ಹಾಕಿ ಗಿನ್ನಿಸ್ ದಾಖಲೆ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಅಲ್ಲಿ ನಡೆದ ಹೆಚ್ಚಿನ ಹಾಲು ನೀಡುವ ಸ್ಪರ್ಧೆಯಲ್ಲಿ ಈ ಗೀರ್ ಹಸು 62 ಲೀಟರ್ ಹಾಲು ನೀಡುವ ಮೂಲಕ, ಹಿಂದಿನ ವರ್ಷ ತಾನೇ ಬರೆದಿದ್ದ 60 ಲೀಟರ್ ಹಾಲಿನ ದಾಖಲೆಯನ್ನು ಅಳಿಸಿ ಹಾಕಿತ್ತು. ಅಂದಿನಿಂದಲೂ ಇದೇ ದಾಖಲೆ ವಿಶ್ವ ದಾಖಲೆಯಾಗಿ ಉಳಿದುಕೊಂಡಿದೆ.
ಬಣ್ಣದಿಂದಲೇ ಈ ಜಾತಿಯ ದನಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಶುದ್ಧ ಈ ತಳಿಗಳ ಮೈ ಬಣ್ಣ ಯಾವುದೇ ಮಿಶ್ರಣವಿಲ್ಲದೆ ಒಂದೇ ಬಣ್ಣದಿಂದ ಕೂಡಿರುತ್ತದೆ. ಅದು ಇಡೀ ಕೆಂಪು ಬಣ್ಣದ್ದಾಗಿರಬಹುದು, ಇಲ್ಲವೇ ಮಸುಕು ಬಿಳಿಯ ಬಣ್ಣದ್ದಾಗಿರಬಹುದು. ಆದರೆ ಇಂದಿನ ದಿನಗಳಲ್ಲಿ ನಾಗರೀಕತೆಯ ಪ್ರಭಾವದಿಂದ ರಸ್ತೆಗಳು, ರೈಲು ಮತ್ತು ವಾಹನ ಸಾರಿಗೆಗಳ ಸೌಲಭ್ಯದಿಂದ ದನಗಳ ಚಲನವಲನಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಹಳ ಸುಲಭವಾಗಿ ಬೆರೆಯುವಂತೆ ಮಾಡಿದೆ. ಇದರಿಂದ ಈ ದನಗಳು ಇಂದು ಕೆಂಪು ಮತ್ತು ಬಿಳುಪು, ಕಪ್ಪು ಮತ್ತು ಬಿಳುಪು ಹಾಗೂ ನರೆ ಮಸುಕು, ಬಿಳಿ ಬಣ್ಣ ಮುಂತಾದ ಮಿಶ್ರಣ ಬಣ್ಣದಿಂದ ಕೂಡಿದ ಮಚ್ಚೆಗಳನ್ನೊಳಗೊಂಡಿರುವುದನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಈ ದನಗಳ ಮೈಬಣ್ಣ ಒಂದು ಬಿಳಿಯ ಬಟ್ಟೆಯ ಮೇಲೆ ಕೆಂಪು ಅಥವಾ ಕಪ್ಪು ಬಣ್ಣವನ್ನು ಸಿಡಿಸಿದರೆ ಅದು ಹೇಗೆ ಕೆಂಪು ಅಥವಾ ಕಪ್ಪು ಚುಕ್ಕೆಗಳಿಂದ ಕೂಡಿರುತ್ತದೆಯೋ ಹಾಗೆ ಈ ದನಗಳ ಮೈ ಚುಕ್ಕೆಗಳಿಂದ ಕೂಡಿರುತ್ತದೆ. ಹೀಗೆ ಕಪ್ಪು, ಕೆಂಪು, ಬಿಳಿಯ ಚುಕ್ಕೆಗಳಿಂದ ಕೂಡಿರುವುದರಿಂದ ಇದನ್ನು ಚಿಂಚಬಣ್ಣ(ಹಂಡಬಂಡ)ದ ಜಾತಿಯ ದನ ಎಂದು ಕರೆಯುವುದು ವಾಡಿಕೆಯಲ್ಲಿದೆ. ಹೊಟ್ಟೆಯ ಉಭಯ ಪಾರ್ಶ್ವಗಳಲ್ಲಿ ಅಥವಾ ಒಂದು ಕಡೆ ಗಾಢವಾದ ಅಥವಾ ತಿಳಿಯಾದ ಬಣ್ಣದ ಮಚ್ಚೆಯೊಂದು ಇದ್ದೇ ಇರುವುದು ಸ್ವಾಭಾವಿಕ. ಇದು ಈ ಜಾತಿಯ ದನಗಳ ವೈಶಿಷ್ಟ್ಯವು ಹೌದು.
1850ರಲ್ಲಿ ಕೃಷಿ ಮತ್ತು ಮಾಂಸಕ್ಕಾಗಿ ಭಾರತದ ಗೀರ್, ಕಾಂಕ್ರೇಜ್ ಮತ್ತು ಓಂಗೋಲ್ ತಳಿಗಳನ್ನು ಇಲ್ಲಿಂದ ಬ್ರೆಜಿಲ್‌ಗೆ ತೆಗೆದುಕೊಂಡು ಹೋಗಲಾಗಿತ್ತು. ನಂತರ ಅದು ಈ ತಳಿಗಳನ್ನು ಉತ್ತಮ ರೀತಿಯಲ್ಲಿ ಸಂವಽಸಿ ಇಂದು ನಮಗೆ ಮಾರಾಟ ಮಾಡುವುದಕ್ಕೆ ಸಿದ್ಧತೆ ಮಾಡುತ್ತಿದೆ. ಈಗಾಗಲೇ ಬ್ರೆಜಿಲ್ ದೇಶದವರು ಗೀರ್ ಮತ್ತು ಓಂಗೋಲ್ ತಳಿಯನ್ನು ಅತ್ಯುತ್ತಮವಾಗಿ ಅಭಿವೃದ್ಧಿಗೊಳಿಸಿ ಇಡೀ ಪ್ರಪಂಚಕ್ಕೆ ಮಾರಾಟ ಮಾಡುತ್ತಿದ್ದಾರೆ. ನಮ್ಮಿಂದ 1960ರ ಇಸವಿಯವರೆಗೂ ಸಾಕಷ್ಟು ಈ ಜಾತಿಯ ಗೋವುಗಳನ್ನು ಇವರು ತೆಗೆದುಕೊಂಡು ಹೋಗಿದ್ದರು. ನಂತರದ ದಿನಗಳಲ್ಲಿ ಕೆಲ ಕಾನೂನು ಅಡೆತಡೆ ಗಳ ಕಾರಣ ಹಸುಗಳ ಸಾಗಾಟ ನಿಂತಿದೆ ಅಷ್ಟೆ. ಹಾಗೆಯೇ ಇತ್ತೀಚೆಗೆ ಭಾರತ
ದಿಂದ ಎರಡು ಕಂಟೈನರ್‌ನಲ್ಲಿ ಗೀರ್ ತಳಿಯ ಭ್ರೂಣಗಳನ್ನು ಬ್ರೆಜಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಷ್ಟೇ ಅಲ್ಲದೆ ಗುಜರಾತ್‌ನ ಭಾವನಗರ
ದಲ್ಲಿರುವ ಒಂದು ಲ್ಯಾಬೋರೇಟರಿಗೆ ಈ ಭ್ರೂಣಗಳನ್ನು ಅಭಿವೃದ್ಧಿಗೊಳಿಸ
ಲಿಕ್ಕಾಗಿ ಸುಮಾರು 2 ಕೋಟಿ ವ್ಯಯಮಾಡಲಾಗಿತ್ತು. ಅಲ್ಲಿ ಅವುಗಳನ್ನು ಅಭಿವೃದ್ಧಿ
ಗೊಳಿಸಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಲಾಗಿತ್ತು.
ಬ್ರೆಜಿಲ್‌ನಂತೆ ಅಮೆರಿಕಾ ಖಂಡದ ಉಷ್ಣ ಪ್ರದೇಶಗಳಿಗೆ ಹೆಚ್ಚಾಗಿ ಟೆಕ್ಸಾಸ್, ಮೆಕ್ಸಿಕೋ, ಇಸ್ರೇಲ್ ಮೊದಲಾದ ದೇಶಗಳಿಗೂ ಈ ಗೀರ್ ತಳಿ ಭಾರತದಿಂದ ಸಾಗಾಟವಾಗಿದೆ. ಅಲ್ಲಿಯ ಸ್ಥಳೀಯ ಮಾಂಸದ ತಳಿಗಳನ್ನು ಅಭಿವೃದ್ಧಿಗೊಳಿಸುವುದರ ಸಲುವಾಗಿ ಈ ಗೀರ್ ತಳಿಯನ್ನು ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಮಾಂಸಕ್ಕೆ ಹೆಚ್ಚು ಉಪಯುಕ್ತವಾದ ದನವಿದು ಎಂದು ಅಂದಾಜಿಸಲಾಗಿದೆ. ಹಾಗೆಯೇ ವಿದೇಶಗಳಿಗೆ ಅತ್ಯಂತ ಹೆಚ್ಚು ರಫ್ತಾದ ಅತ್ಯುತ್ತಮ ಹಾಲಿನ ತಳಿ ಕೂಡ ಇದೇ ಆಗಿದೆ. ಕೇವಲ ಗೀರ್ ತಳಿಯೊಂದಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಇಲ್ಲಿಯ ಹಾಲಿನ ತಳಿಗಳು ಇಂದು ನಮ್ಮಲ್ಲಿರುವುದಕ್ಕಿಂತ ಹೆಚ್ಚಾಗಿ ಮತ್ತು ಪರಿಶುದ್ಧವಾಗಿ ವಿದೇಶಗಳಲ್ಲಿ ಕಂಡುಬರುತ್ತವೆ. ಅವರುಗಳು ನಮ್ಮ ತಳಿಗಳ ಮಹತ್ವವನ್ನು ಅರಿತು ಅಲ್ಲಿಯ ತಳಿಗಳನ್ನು ಕಡೆಗಣಿಸಿ ಈ ತಳಿಗಳ ಸಂಖ್ಯೆಯನ್ನು ಹೆಚ್ಚೆಚ್ಚು ಮಾಡಿಕೊಳ್ಳುತ್ತಿದ್ದರೆ, ನಾವು ಇಂದಿಗೂ ಅವರಿಗೆ ಬೇಡವಾದ ಈ ವಿದೇಶಿ ತಳಿಗಳನ್ನು ಸಾಕುವುದರಲ್ಲೇ ಆಸಕ್ತಿ ತೋರಿಸುತ್ತಿದ್ದೇವೆ. ಇದು ಈ ದೇಶದ ರೈತರ ಹಾಗೂ ಪಶುಪಾಲಕರ ದೌರ್ಭಾಗ್ಯವೆಂದೇ ಹೇಳಬಹುದು.
ಹಿತ್ತಲ ಗಿಡ ಮದ್ದಲ್ಲ ಎನ್ನುವುದು ನಮ್ಮಲ್ಲಿ ಜನಪ್ರಿಯ ಗಾದೆ. ನಮ್ಮಲ್ಲಿನ ಯಾವುದೇ ಮದ್ದು ಉತ್ತಮವಲ್ಲ ಎಂಬ ಕೀಳು ಭಾವನೆ ಇಷ್ಟು ವರ್ಷವಾದರೂ ನಮ್ಮ ಜನಮಾನಸದಿಂದ ದೂರವಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಈ ಗೀರ್ ಸೇರಿದಂತೆ ಇಲ್ಲಿಯ ಹಾಲು ಕೊಡುವ ಬಹುತೇಕ ತಳಿಗಳನ್ನು ನಾವು ನಿರ್ಲಕ್ಷಿಸಿರುವುದೇ ಆಗಿದೆ. ನಾವಿಂದು ಅತಿ ಹೆಚ್ಚು ಹಾಲು ಕೊಡುತ್ತವೆ ಎಂದು ಯಾವ ವಿದೇಶಿ ತಳಿಗಳ ಮೊರೆ ಹೋಗಿದ್ದೇವೆಯೋ, ಅದಕ್ಕಿಂತಲೂ ಹೆಚ್ಚಿನ ಹಾಲು ನೀಡುವ ಗೋವಿನ ತಳಿಗಳು ನಮ್ಮ ದೇಶದಲ್ಲೇ ಕಂಡುಬರುತ್ತವೆ. ಆದರೆ ಅವುಗಳನ್ನೆಲ್ಲಾ ನಾವು ಕಡೆಗಣಿಸಿದ್ದೇವೆ ಎನ್ನುವುದೇ ವಿಪರ್ಯಾಸ.
-ಕೆ. ಎನ್. ಶೈಲೇಶ್ ಹೊಳ್ಳ
Publisher: ಕನ್ನಡ ನಾಡು | Kannada Naadu