ಬೆಳಗಾವಿ: ರೈತರು ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿಕೊಂಡಿರುವ ಜಿಲ್ಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪಿರುತ್ತಿರುವ ಘಟನೆಗಳನ್ನು ತಡೆಗಟ್ಟುನ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಹೊಂಡದಲ್ಲಿ ಮಕ್ಕಳು ಸಾವನ್ನಪ್ಪಿರುವ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ರೈತ ಬಾಂದವರು ತಂತಿ ಬೇಲಿ ನಿರ್ಮಾಣ ಮಾಡುವುದು. ಕೃಷಿ ಹೊಂಡಗಳ ಮುಂದೆ ಅಪಾಯ ಮುನ್ಸೂಚನೆ ಕುರಿತು ನಾಮಫಲಕ ಅಳವಡಿಸುವುದು. ಜತೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿಯ ಮೂಲಕ ಗ್ರಾಮೀಣ ಭಾಗದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿ ಗ್ರಾಮ ಪಂಚಾಯತಿಯ ಮುಂದೆ ಈ ವಿಷಯದ ಕುರಿತಾಗಿ ಬ್ಯಾನರ್ ಪ್ರದರ್ಶಿಸುವುದು, ಕೃಷಿ ಹೊಂಡದ ಒಳಗೆ ಏರ್ ತುಂಬಿದ ಟೂಬ್ ಹಾಕುವುದು, ಹಗ್ಗಗಳನ್ನು ಹೊಂಡದಲ್ಲಿ ಬಿಡುವುದು ಸೇರಿದಂತೆ, ಕೃಷಿ, ತೋಟಗಾರಿಕೆ ಹಾಗೂ ಆರ್.ಡಿ.ಪಿ.ಆರ್. ಇಲಾಖೆಯ ವಿವಿಧ ಯೋಜನೆಗಳಿಂದ ಸಹಾಯಧನ ಪಡೆದು ಕೃಷಿ ಹೊಂಡ ನಿರ್ಮಾಣ ಮಾಡಿದ್ದಲ್ಲಿ ಸಂಬಂಧಿಸಿದ ಇಲಾಖೆಯವರು ಸದರಿ ವಿಷಯದ ಕುರಿತಾಗಿ ರೈತ ಸಮೂದಾಯದಲ್ಲಿ ಹೆಚ್ಚಿನ ಪ್ರಚಾರ ನೀಡುವುದು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಮನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ನೀಡುವ ಮೂಲಕ ಮಾನವ ದಿನಗಳ ಸೃಜನೆ ಮಾಡಿ ಕೂಲಿಕಾರರಿಗೆ ಕೂಲಿ ಪಾವತಿಯಾಗುವಂತೆ ಸರಿಯಾಗಿ ಮೇಲ್ವಿಚಾರಣೆ ಮಾಡುವುದು, ಜಿಲ್ಲೆಯ ಆದ್ಯತಾ ಕಾಮಗಾರಿಗಳಾದ ಶಾಲಾ ಅಭಿವೃದ್ಧಿ, ಸ್ವಸಹಾಯ ಸಂಘಗಳ ಶೆಡ್ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಜೊತೆಗೆ ಯೋಜನೆಯಡಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ವೆಚ್ಚ ಭರಿಸಲು ತಿಳಿಸಿದರು. ಅಲ್ಲದೇ ಸಾಮಾಜಿಕ ಪರಿಶೋದನೆಯಡಿ ಬಾಕಿ ಇರುವ ಪ್ರಕರಣಗಳನ್ನು ಒಂದು ವಾರದೊಳಗಾಗಿ ತಿರುವಳಿಗೊಳಿಸುವಂತೆ ತಾಲ್ಲೂಕಿನ ಇಒ ಗಳಿಗೆ ತಿಳಿಸಿದರು. ನಲ್ವತೈದು ದಿನಗಳಲ್ಲಿ 11099 ಕಾಮಗಾರಿಗಳನ್ನು ಪೂರ್ಣಗೊಳಿಸಿದ ಪ್ರಗತಿ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಇದೇ ರೀತಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.
Publisher: ಕನ್ನಡ ನಾಡು | Kannada Naadu