ಕನ್ನಡ ನಾಡು | Kannada Naadu

ರಕ್ತದಾನದಿಂದ ಜೀವದಾನ - ಸಚಿವ ದಿನೇಶ್ ಗುಂಡೂರಾವ್

16 Jun, 2025

 

ಬೆಂಗಳೂರು :  ಅಪಘಾತಗಳ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ಬಹಳಷ್ಟು ಜನ ಜೀವಗಳನ್ನೇ ಕಳೆದುಕೊಳ್ಳುತ್ತಾರೆ. ಕಾರಣ ಸಕಾದಲ್ಲಿ ರಕ್ತ ದೊರೆಯದೇ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇದನ್ನು ಪ್ರತಿಯೊಬ್ಬರು ಮನಗಂಡು, ರಕ್ತದಾನ ಮಾಡಿದಲ್ಲಿ ಎಷ್ಟೋ ಜೀವಗಳ ರಕ್ಷಣೆ ಮಾಡಬಹುದು. ರಕ್ತದಾನವು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇಂದು ಶೇμÁದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ರಕ್ತ ಚಾಲನಾ ಪರಿಷತ್, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಬೆಂಗಳೂರು ನಗರ ಮತ್ತು ಬಿಬಿಎಂಪಿ ಹಾಗೂ ವಿವಿಧ ಸಂಘ ಸಂಸ್ಥೆಗಳಾದ ಲಯನ್ಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸ್ವಾಮಿ ವಿವೇಕಾನಂದ, ರೋಟರಿ ಟಿಟಿಕೆ ಹಾಗೂ ಬೆಳಗಾಂ ರಕ್ತ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ “ವಿಶ್ವ ರಕ್ತದಾನಿಗಳ ದಿನಾಚರಣೆ 2025” ಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ರಕ್ತವನ್ನು ನೀಡುವುದಕ್ಕೆ ರಕ್ತದಾನ ಎನ್ನುತ್ತಾರೆ. ಇದೊಂದು ಪವಿತ್ರವಾದ ದಾನವಾಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂಪ್ರೇರಣೆಯಿಂದ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಮಾಡಿದಾಗ ಅವರಿಗೆ ಆತ್ಮತೃಪ್ತಿ ಸಿಗುತ್ತದೆ.

ರಕ್ತದಾನವು ಆರೋಗ್ಯಕರವಾಗಿರಲು ಸಹಾಯ ಮಾಡುವುದರ ಜೊತೆಗೆ ಮಾನಸಿಕ ಸಂತೋಷ ನೀಡುತ್ತದೆ. ರಕ್ತದಾನದ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಆದರೆ ರಕ್ತದಾನವು ಸುರಕ್ಷಿತ ಮತ್ತು ಪ್ರಯೋಜನಕಾರಿಯಾಗಿದೆ. 18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ಕನಿಷ್ಟ 45 ಕೆ.ಜಿ. ದೇಹದ ತೂಕವಿರುವ ಮತ್ತು ರಕ್ತದಲ್ಲಿ ಹಿಮಗ್ಲೋಬಿನ್ ಪ್ರಮಾಣ ಕನಿಷ್ಟ 12.5% ಇರುವ ವ್ಯಕ್ತಿಯು ಪುರುಷರಾಗಿದ್ದಲ್ಲಿ ವರ್ಷಕ್ಕೆ 4 ಬಾರಿ ಮತ್ತು ಮಹಿಳೆಯರು ವರ್ಷಕ್ಕೆ 3 ಬಾರಿ ರಕ್ತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಖಡ 1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 2024-25ರಲ್ಲಿ 8,15,402 ರಕ್ತದ ಯುನಿಟ್‍ಗಳನ್ನು ಸಂಗ್ರಹಿಸುವ ಗುರಿಯಿದ್ದು ಸದರಿ ಸಾಲಿನಲ್ಲಿ 10,11,073 ರಕ್ತದ ಯುನಿಟ್ ಗಳನ್ನು ಸಂಗ್ರಹಿಸಿ ಶೇ.124% ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ 4 ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ರಕ್ತ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಅನುಮೋದಿಸಿದೆ. ಸರ್ಕಾರದ ವತಿಯಿಂದ 9 ರಕ್ತ ಸಾಗಣಿಕೆ ವಾಹನಗಳು ಚಾಲನೆಯಲ್ಲಿದೆ. 7 ರಕ್ತ ಸಾಗಣಿಕ ಮತ್ತು ರಕ್ತ ಸಂಗ್ರಹಣಾ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳೊಂದಿಗೆ 1 ದೊಡ್ಡ ಮೊಬೈಲ್ ಬಸ್ಸು ಸಹ ಕಾರ್ಯನಿರ್ವಹಿಸುತ್ತಿವೆ ಒಟ್ಟು 17 ವಾಹನಗಳ ಸಹಾಯದಿಂದ ರಕ್ತ ಮತ್ತದರ ಅಂಗಾಂಶಗಳನ್ನು ಸಂಗ್ರಹಿಸಲು ಮತ್ತು ಅವುಗಳ ಅವಶ್ಯಕತೆಗನುಗುಣವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ರಾಜ್ಯದಾದ್ಯಂತ ಸಾಗಿಸಲು ಸಾಧ್ಯವಾಗುತ್ತಿದೆ. 4 ಹೊಸ ರಕ್ತ ಸಾಗಣಿಕ ಮತ್ತು ರಕ್ತ ಸಂಗ್ರಹಣಾ ವಾಹನಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರದಲ್ಲೇ ರಕ್ತ ಸಂಗ್ರಹಣೆ ಮತ್ತು ಸಾಗಣಿಕೆ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಪ್ಲಾಸ್ಮಾದ ಕೊರತೆಯಿಂದ ಪ್ರಸವವಾದ ನಂತರ ಬಾಣಂತಿಯರು ಮರಣ ಹೊಂದುತ್ತಿರುವುದರಿಂದ ಈ ವರ್ಷ ಸರ್ಕಾರಿ ಆಸ್ಪತ್ರೆಯ 147 ತಾಲ್ಲೂಕುಗಳಲ್ಲಿ ಪ್ಲಾಸ್ಮಾ ಖರೀದಿಸಲು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂದು ಸಚಿವ ದಿನೇಶ್ ಗುಂಡೂರಾವ್ ಅವರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದದು ವಿಶೇಷವಾಗಿತ್ತು.

ಕರ್ನಾಟಕ ರಾಜ್ಯ ರಕ್ತಚಲನ ಪರಿಷತ್ ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಶ್ರೀಮತಿ ವಿನೋತ್ ಪ್ರಿಯಾ ಆರ್ ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತ ಕೇಂದ್ರವು ಆಸ್ಪತ್ರೆಯ ಒಂದು ಮುಖ್ಯವಾದ ಅಂಗವಾಗಿದೆ. ಇದು ರಕ್ತ ದಾನಿಯ ನೊಂದಣಿ, ದೈಹಿಕ ತಪಾಸಣೆ, ರಕ್ತದ ಮಾದರಿ, ವಿವಿಧ ಮಾದರಿಯ ರೋಗಗಳನ್ನು ಪತ್ತೆ ಹಚ್ಚುವ ಪರೀಕ್ಷೆಗಳು, ರಕ್ತದಲ್ಲಿರುವ ಅದರ ಅಂಗಾಂಶಗಳನ್ನು ಬೇರ್ಪಡಿಸಿ ಶೇಖರಿಸಿರುವುದು, ರಕ್ತದ ಬೇಡಿಕೆಗಳ ವಿವರದ ಪಟ್ಟಿಯನ್ನು ತಯಾರಿಸುವುದು, ರಕ್ತದ ಲಭ್ಯತೆಯ ವಿವರವನ್ನು ನೀಡುವುದು. ರಕ್ತದ ಬೇಡಿಕೆ ಬಂದಾಗ ರಕ್ತದ ಮಾದರಿಗಳನ್ನು ತುಲನೆ ಮಾಡಿ ವಿತರಿಸುವುದು, ತುರ್ತು ಪರಿಸ್ಥಿತಿಯಲ್ಲಿ ರಕ್ತದ ಪೂರೈಕೆಗಾಗಿ ರಕ್ತದಾನಿಗಳ ಲಭ್ಯತೆಯ ವಿವರವನ್ನು ನೀಡುವುದು. ಸಂಗ್ರಹಿಸಿರುವ ರಕ್ತದ ಗುಣಮಟ್ಟದ ಜೊತೆಗೆ ಜೀವಿತಾವಧಿಯನ್ನು ಕಾಯ್ದುಕೊಳ್ಳುವುದು ರಕ್ತ ಕೇಂದ್ರಗಳ ಪ್ರಮುಖ ಕಾರ್ಯಗಳಾಗಿವೆ ಎಂದು ತಿಳಿಸಿದರು.

ಸರ್ಕಾರಿ ರಕ್ತನಿಧಿ ಕೇಂದ್ರಗಳು 43, ದತ್ತಿ ರಕ್ತನಿಧಿ ಕೇಂದ್ರಗಳು 97, ಖಾಸಗಿ ಆಸ್ಪತ್ರೆಗೆ ಹೊಂದಿಕೊಂಡಿರುವ ರಕ್ತ ನಿಧಿ ಕೇಂದ್ರಗಳು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ರಕ್ತನಿಧಿ ಕೇಂದ್ರಗಳು 8 ಒಟ್ಟು ರಾಜ್ಯದಲ್ಲಿ 260 ರಕ್ತಕೇಂದ್ರಗಳಿವೆ.

ರಾಜ್ಯದಲ್ಲಿರುವ 43 ಸರ್ಕಾರಿ ರಕ್ತ ಕೇಂದ್ರಗಳ ಪೈಕಿ 38 ರಕ್ತ ಕೇಂದ್ರಗಳಲ್ಲಿ ರಕ್ತ ವಿಧಳನಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಲ್ಲವೂ ಪ್ರಸ್ತು ಕಾರ್ಯನಿರ್ವಹಿಸುತ್ತಿವೆ. ಇದರಿಂದ ರಾಜ್ಯದ ಜನರಿಗೆ ರಕ್ತ ಮತ್ತದರ ಅಂಗಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 11 ಪ್ರಾದೇಶಿಕ ರಕ್ತ ವರ್ಗಾವಣಾ ಕೇಂದ್ರಗಳಿವೆ. ಇವುಗಳು ರಾಜ್ಯದ ಎಲ್ಲಾ ರಕ್ತ ಕೇಂದ್ರಗಳಿಗೆ ಮದರ್ ಬ್ಲಡ್ ಬ್ಯಾಂಕ್ ರೀತಿ ಕಾರ್ಯ ನಿರ್ವಹಿಸುತ್ತಿವೆ. ಸದರಿ ರಕ್ತ ಕೇಂದ್ರಗಳು ರಕ್ತ ಕೊರತೆ ಇರುವ ಜಿಲ್ಲೆಗಳಿಗೆ/ರಕ್ತ ಕೇಂದ್ರಗಳಿಗೆ ರಕ್ತ ಪೂರೈಸುವ ಕಾರ್ಯವನ್ನು ಮಾಡುತ್ತದೆ ಎಂದು ತಿಳಿಸಿದರು.

ವೈಟ್ ಪೀಲ್ಡ್ ಪೊಲೀಸ್ ಠಾಣೆಯ ಎ.ಸಿ.ಪಿ ರೀನಾ ಸುವರ್ಣ ಮಾತನಾಡಿ ವಿಶ್ವ ರಕ್ತದಾನಿಗಳ ದಿನಾಚರಣೆಯು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ತಂದೆಯವರಿಗೆ ಪ್ಲೇಟ್ ರೇಟ್ಸ್ ಕಡಿಮೆಯಿದ್ದ ಸಂದರ್ಭದಲ್ಲಿ ರಕ್ತದ ಅವಶ್ಯಾಕತೆ ಇತ್ತು. ಮತ್ತೊಬ್ಬರ ಜೀವ ಉಳಿಸಲು ರಕ್ತದ ಅವಶ್ಯಕತೆ ಇದೆ. ಆದ್ದರಿಂದ ನಾನು 2018 ರಿಂದ ರಕ್ತದಾನ ಮಾಡಲು ಪ್ರಾರಂಭ ಮಾಡಿದ್ದೇನೆ. ನಾನು ಇರುವ ಸ್ಟೇಷನ್‍ನಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಅಧಿಕಾರಿ ಸಿಬ್ಬಂದಿಗಳಿಂದ 200 ಜನರಿಂದ ರಕ್ತ ಸಂಗ್ರಹಣೆ ಮಾಡಲಾಗಿದೆ. ಸಾಮಾನ್ಯವಾಗಿ ಮುಹಿಳೆಯರಿಗೆ ಕಬ್ಬಿಣಾಂಶದ ಕೊರತೆ ಇರುತ್ತದೆ. ಆದ್ದರಿಂದ ಮಹಿಳೆಯರು ಎಬಿಸಿ ಜ್ಯೂಸ್, ನುಗ್ಗೆಕಾಯಿ ಪೌಡರ್ ಸೇವನೆ ಮಾಡಿ ಎಂದು ಕಿವಿಮಾತು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರು ವಿಶ್ವ ರಕ್ತದಾನಿಗಳ ದಿನ 2025ರ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.

ಇದೇ ಸಂದರ್ಭದಲ್ಲಿ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳು ಹಾಗೂ ಪೆÇೀಸ್ಟರ್ ಮೇಕಿಂಗ್ ಕಾರ್ಯಕ್ರಮದಲ್ಲಿ ಬಹುಮಾನ ವಿಜೇತರನ್ನು ಸನ್ಮಾನಿಸಲಾಯಿತು.

ಇದೇ ರೇರ್ ಡೋನರ್ ಕಾರ್ಯಕ್ರಮದ ವರದಿ ಅಕ್ಟೋಬರ್ 1ರಿಂದ ಮೇ 2025 ಹಾಗೂ ಐ.ಇ.ಸಿ. ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ರಕ್ತ ಸುರಕ್ಷತೆ ಮತ್ತು ರಾಜ್ಯ ರಕ್ತ ಕೋಶ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಉಪ ನಿರ್ದೇಶಕರಾದ ಡಾ. ಶಕೀಲಾ ಎನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ಉಮಾ ಬುಗ್ಗೆ ಸೇರಿದಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by