ಬೆಂಗಳೂರು : ಇಂದು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‍ನಲ್ಲಿ ಹೆಚ್ಚು ಸಂಪರ್ಕ ಹೊಂದಿದ್ದು, ಇದು ಮಕ್ಕಳ ಮೇಲೆ ಗಮನಾರ್ಹ ದುಷ್ಪರಿಣಾಮ ಬೀರುತ್ತಿರುವುದರಿಂದ ಮಕ್ಕಳ ಬಗ್ಗೆ ತಂದೆ ತಾಯಿಗಳು ಹೆಚ್ಚಿನ ಚಿಂತನೆ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ ತಿಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಚೈಲ್ಡ್‍ಫಂಡ್ ಇಂಡಿಯಾ ರವರ ಸಹಯೋಗದಲ್ಲಿ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಗಳಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತ ವಿಶೇಷ ಅಧ್ಯಯನದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಮಕ್ಕಳ ಆಯೋಗವು ಮಕ್ಕಳ ರಕ್ಷಣೆಗಾಗಿ ಉತ್ತಮವಾದ ಕೆಲಸ ಮಾಡುತ್ತಿದೆ ಎಂದರು.
ಮಕ್ಕಳು ಹಠ ಮಾಡುತ್ತಾರೆ ಎಂದು ತಂದೆ-ತಾಯಿಗಳು ಮಕ್ಕಳಿಗೆ ಮೊಬೈಲ್ ತೋರಿಸುತ್ತಾರೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಒಂದು ಘಟನೆ ತಂದೆ-ತಾಯಿ ಮಕ್ಕಳನ್ನು ಬಿಟ್ಟು ಊರಿಗೆ ಹೋಗುತ್ತಾರೆ. ಮಕ್ಕಳು ಸ್ನೇಹಿತರ ಜೊತೆ ಸಾಮಾಜಿಕ ಜಾಲತಾಣಗಳನ್ನು ನೋಡುವ ಪದ್ಧತಿ ರೂಢಿಸಿಕೊಂಡಿರುತ್ತಾರೆ. ಅಂತಹ ಸಮಯದಲ್ಲಿ 10 ರಿಂದ 12 ಮಕ್ಕಳು ಒಟ್ಟಿಗೆ ಜೊತೆಗೂಡಿಕೊಂಡು ವಿವಿಧ ರೀತಿಯ ಧೂಪಪಾನ ಸೇವನೆ, ಮದ್ಯ ಸೇವನೆ ಮಾಡುವುದನ್ನು ಕಲಿಯುತ್ತಾರೆ. ಒಟ್ಟಾಗಿ ಜೊತೆಗೂಡುವ ಮಕ್ಕಳು ಕುಡಿಯಲು ಮದ್ಯಪಾನ ಇತರ ತಿಂಡಿ ತಿನಿಸುಗಳನ್ನು ತರಿಸಿಕೊಂಡು, ಕುಡಿದು ತಿಂದು, ಪ್ರಜ್ಞೆ ತಪ್ಪುತ್ತಾರೆ. ತಂದೆ-ತಾಯಿ ಮನೆಗೆ ಬಂದು ನೋಡುವಷ್ಟರಲ್ಲಿ ಮಕ್ಕಳು ಪೂರ್ತಿ ಪ್ರಜ್ಞೆ ತಪ್ಪಿರುತ್ತಾರೆ ಎಂದು ಉದಾಹರಣೆ ನೀಡಿದರು.
ಇತ್ತೀಚೆಗೆ ಪೋಷಕರು ಶೈಕ್ಷಣಿಕ ಉದ್ದೇಶದಿಂದ ತಮ್ಮ ಮಕ್ಕಳನ್ನು ದೂರ ಇಟ್ಟರೆ ಎಲ್ಲಾ ಚಟಗಳನ್ನು ತೊರೆದು ಒಳ್ಳೆಯವರಾಗುತ್ತಾರೆ ಎಂದು ಹಾಸ್ಟೆಲ್‍ಗಳಿಗೆ ಸೇರಿಸುತ್ತಾರೆ. ಪೋಷಕರ ಉದ್ದೇಶ ಸರಿ ಇದ್ದರೂ ಸಹ ಕೆಲವೊಂದು ಸಮಯದಲ್ಲಿ ಮಕ್ಕಳು ತಾವು ಮಾಡುವ ಕೃತ್ಯಗಳು ತಂದೆ ತಾಯಿಗಳಿತೆ ತಿಳಿಯುವುದಿಲ್ಲ ಎಂದು ಭಾವಿಸಿ, ಅಲ್ಲಿಯೂ ಸಹ ಹಲವಾರು ಚಟಗಳಿಗೆ ಒಳಗಾಗುತ್ತಾರೆ. ಕೆಲವೊಂದು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿ ತಂದೆ ತಾಯಿಯ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾಗಿ ಮೊದ ಮೊದಲಿಗೆ ಸಣ್ಣ ಸಣ್ಣ ಅಪರಾದಗಳನ್ನು ಮಾಡುತ್ತಾ, ಮುಂದೊಂದು ದಿನ ಸಮಾಜದಲ್ಲಿ ದೊಡ್ಡ ಅಪರಾಧಿಗಳಾಗಿ ಬೆಳೆಯುತ್ತಾರೆ. ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತಂದೆ ತಾಯಿಗಳಿಂದ ದೊರೆಯಬೇಕೆ ಹೊರತು ಬೇರೆ ಯಾರಿಂದಲೂ ಅಲ್ಲ. ಆದ್ದರಿಂದ ಆದಷ್ಟು ಪೋಷಕರು ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಪ್ರೀತಿ ವಾತ್ಸಲ್ಯ ತುಂಬಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ತಿಳಿಸಿಕೊಟ್ಟಲ್ಲಿ ಸಮಾಜದಲ್ಲಿ ಒಳ್ಳಯ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ.
ಮಕ್ಕಳ ರಕ್ಷಣಾ ಆಯೋಗವು ಸಹ ಪೋಷಕರಿಗೆ ಮತ್ತು ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯಿಂದಾಗಿ ಆಗುವ ಪರಿಣಾಮಗಳ ಬಗ್ಗೆ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಮಾದ್ಯಮದವರು ಈ ಕುರಿತು ತಿಳುವಳಿಕೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಆಯೋಗಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲಾಗುವುದು. ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡೋಣ. ಮಕ್ಕಳ ಸುಧಾರಣೆಗೆ ಪ್ರಯತ್ನಿಸೋಣ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳ ಅಭಿಪ್ರಾಯ ಕೇಳಿದಾಗ ಆನ್‍ಲೈನ್ ತರಗತಿಯಿಂದ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಿ ಮೊದಲಿನ ಹಾಗೆ ಪಠ್ಯ ಪುಸ್ತಕದ ಮೂಲಕ ತರಗತಿ ನಡೆಸಬೇಕೆಂದು ಮಕ್ಕಳು ಅಭಿಪ್ರಾಯಪಟ್ಟರು. ಇದಕ್ಕೆ ಸ್ಪಂದಿಸಿದ ಸಭಾಪತಿಗಳು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಇನ್ನು ಮುಂದೆ ಆನ್‍ಲೈನ್ ತರಗತಿ ನಿಲ್ಲಿಸಿ, ಪಠ್ಯ ಪುಸ್ತಕಗಳ ಮೂಲಕ ತರಗತಿಗಳನ್ನು ನಡೆಸುವಂತೆ ಪತ್ರ ಬರೆಯಲು ಮಕ್ಕಳ ರಕ್ಷಣಾ ಆಯೋಗಕ್ಕೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮತಿಯ ಅಧ್ಯಕ್ಷರಾದ ಎನ್.ಎಚ್.ಕೋನರೆಡ್ಡಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣದಿಂದ ನಮ್ಮ ಮಕ್ಕಳು ಏನೇನು ಅಪಾಯ ಎದುರಿಸುತ್ತಿದ್ದಾರೆ ಎಂಬ ಬಗ್ಗೆ ಪೋಷಕರಾದ ನಾವು ಮೊದಲು ಅರಿತುಕೊಳ್ಳಬೇಕು. ಸಾಮಾಜಕ ಜಾಲತಾಣದಲ್ಲಿ ಉತ್ತಮ ವಿಷಯವು ಇದೆ. ಕೆಟ್ಟ ವಿಷಯವು ಇದೆ. ಈ ಬಗ್ಗೆ ಮಕ್ಕಳಿಗೆ ಯಾವುದೇ ಅರಿವು ಇರುವುದಿಲ್ಲ. ಈ ಬಗ್ಗೆ ಪೋಷಕರಾದ ನಾವು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ತಾಯಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಮೊಬೈಲ್ ತೋರಿಸುವುದನ್ನು ಬಿಡಬೇಕು. ಸಮಿತಿಯು ಈ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದು, ಮೊದಲಿಗೆ ಪಾಲಕರ ಸುಧಾರಣೆಯಾಬೇಕು ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಅವರ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ, ಮಕ್ಕಳ ಶಿಕ್ಷಣದ ಬಗ್ಗೆ 45 ವರ್ಷಗಳ ಅನುಭವ ಹೊಂದಿರುವ ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರಿಂದ ಮಕ್ಕಳ ಆನ್‍ಲೈನ್ ಅಪಾಯಗಳ ಕುರಿತು ವೀಶೇಷ ಅಧ್ಯಯನ ಸಾರಾಂಶದ ವರದಿಯನ್ನು ಬಿಡುಗಡೆ ಮಾಡಿಸಲಾಗಿದೆ. “ಆನ್‍ಲೈನ್ ಲೈಂಗಿಕ ಶೋಷಣೆ ಮತ್ತು ಮಕ್ಕಳ ಮೇಲಿನ ದೌರ್ಜಣ್ಯದ ಮೇಲೆ ಕೇಂದ್ರೀಕರಿಸಿ ಮಕ್ಕಳ ಆನ್‍ಲೈನ್ ಅಪಾಯಗಳ ಕುರಿತು ರಾಜ್ಯ ಮಟ್ಟದ ಅಧ್ಯಯನ” ಎಂಬುದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಚೈಲ್ಡ್ ಫಂಡ್ ಇಂಡಿಯಾದ ಸಹಯೋಗದೊಂದಿಗೆ ಕೈಗೊಂಡ ವರದಿಯಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳು, ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆ. ಈಗಿನ ಮಕ್ಕಳು ನಮ್ಮ ಕಾಲದ ರೀತಿ ಯಾವ ಆಟವನ್ನು ಆಡುವುದಿಲ್ಲ. ಅಲ್ಲದೆ ಮನೆಗಳಲ್ಲಿನ ಕಾಂಪೌಂಡ್‍ಗಳು ಮಕ್ಕಳ ಜೊತೆಗೂಡಿ ಆಟ ಆಡುವ ಸಂಪರ್ಕವನ್ನು ಕಳೆದುಕೊಂಡಿರುವುದರಿಂದ ಟಿ.ವಿ, ಮೊಬೈಲ್ ನೋಡುವುದನ್ನು ಕಲಿತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚೈಲ್ಡ್‍ಫಂಡ್ ಇಂಡಿಯಾ ಬೋರ್ಡ್ ಸದಸ್ಯರಾದ ರಾಜೇಶ್ ರಂಜನ್ ಸಿಂಗ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು, ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu