ಬೆಂಗಳೂರು, : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವಶೈಲಿ) ದೃಷ್ಠಿಕೋನದ ಅನುಗುಣವಾಗಿ “ಏಕ್ ಪೇಡ್ ಮಾ ಕೆ ನಾಮ್-2.0” ಅಭಿಯಾನವನ್ನು ಕೇಂದ್ರ ಸರ್ಕಾರ ಇದೇ ಜೂನ್ 5 ವಿಶ್ವ ಪರಿಸರ ದಿನಾಚರಣೆಯಂದು ದೇಶಾದ್ಯಂತ ಪ್ರಾರಂಭಿಸಿದೆ.
ಇಡೀ ಸರ್ಕಾರ ಹಾಗೂ ಸಮಾಜದ ಸಹಭಾಗಿತ್ವದಲ್ಲಿ, ವಿವಿಧ ಇಲಾಖೆಗಳು, ಶಾಲಾ ಕಾಲೇಜುಗಳು, ಸಂಸ್ಥೆಗಳು ಒಳಗೊಂಡಂತೆ ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಕೈ ಜೋಡಿಸಿವೆ. ಕರ್ನಾಟಕದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ವಿವಿಧ ಇಲಾಖಾ ಮುಖ್ಯಸ್ಥರು, ಸಂಘ ಸಂಸ್ಥೆಗಳಿಗೆ ಕ್ರಮಕೈಗೊಳ್ಳುವ ಕುರಿತಂತೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಈ ಕಾರ್ಯಕ್ರಮವನ್ನು 2025ನೇ ಜೂನ್ 05 ರಿಂದ ಸೆಪ್ಟೆಂಬರ್ 30 ರ ವರೆಗೆ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಸುಮಾರು 10 ಕೋಟಿ ಮರಗಳನ್ನು ನೆಡುವ ಗುರಿ ಹೊಂದಲಾಗಿದೆ. ಇದರಿಂದ ನಾವು ಪ್ರಕೃತಿ ಮಾತೆಯಾದ ಭೂಮಿತಾಯಿ ಹಾಗೂ ನಮ್ಮ ಹೆತ್ತ ತಾಯಿ ಇಬ್ಬರಿಗೂ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಪ್ರಧಾನ ಮಂತ್ರಿಗಳು ತಮ್ಮ ಸಂದೇಶದಲ್ಲಿ ತಿಳಿಸಿರುತ್ತಾರೆ.
“ಏಕ್ ಪೇಡ್ ಮಾ ಕೆ ನಾಮ್” ಅಭಿಯಾನ ನಮ್ಮ ಪರಿಸರದ ಜೊತೆಗಿನ ಭಾವನಾತ್ಮಕ ಜವಬ್ದಾರಿಯನ್ನು ಅನಾವರಣಗೊಳಿಸಲಿದೆ. ಮರದಿಂದ ದೇಶದಲ್ಲಿ ಸಮೃದ್ಧಿ ನೆಲೆಸುತ್ತದೆ. ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಓರ್ವ ನೋಡಲ್ ಅಧಿಕಾರಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೇಮಿಸಲು ತಿಳಿಸಲಾಗಿದೆ. ಇದಕ್ಕೆ ಸಂಕ್ಷಿಪ್ತ ಕ್ರಿಯಾ ಯೋಜನೆಯನ್ನು ಆಯಾ ಜಿಲ್ಲೆಯವರು ರೂಪಿಸಿ ತಮ್ಮಲ್ಲಿ ಲಭ್ಯವಿರುವ ಕಿರು ಅರಣ್ಯ ಪ್ರದೇಶಗಳ ಕುರಿತು ಸಹ ಮಾಹಿತಿ ನೀಡಬೇಕಿದೆ. ಈ ಕಾರ್ಯಕ್ರಮದಲ್ಲಿ ನಾಗರಿಕರು ಅದರಲ್ಲೂ ಯುವಜನತೆಯನ್ನು ಪಾಲ್ಗೊಳ್ಳುವಂತೆ ಮಾಡುವುದರಿಂದ ನಮ್ಮ ದೇಶ, ರಾಜ್ಯ ಹಸಿರಿನಿಂದ ಕಂಗೊಳಿಸುವುದರಲ್ಲಿ ಅನುಮಾನವಿಲ್ಲ.
ಹೆಚ್ಚಿನ ವಿವರಗಳಿಗೆ ಮೆರಿ ಲೈಪ್ ಪೋರ್ಟಲ್ https://merilife.nic.in ನ್ನು ವೀಕ್ಷಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ
Publisher: ಕನ್ನಡ ನಾಡು | Kannada Naadu