ಕನ್ನಡ ನಾಡು | Kannada Naadu

ಬೆಳಗಾವಿಯಲ್ಲಿ ಓದಿದ್ದ ವೈದ್ಯ ಕುಟುಂಬ ಏರ್ ಇಂಡಿಯಾ ವಿಮಾನ ದುರಂತದಲ್ಲಿ ದುರ್ಮರಣ

13 Jun, 2025

ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 246 ಜನರು ಸಾವನ್ನಪ್ಪಿದ್ದು, ಇದರಲ್ಲಿ ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ರಾಜಸ್ಥಾನ ಮೂಲದ ವೈದ್ಯನ ಕುಟುಂಬ ಕೂಡ ಮೃತಪಟ್ಟಿದೆ.

ಡಾ. ಪ್ರತೀಕ್ ಜೋಶಿ, ಪತ್ನಿ ಕಾಮಿನಿ ಜೋಶಿ ಹಾಗೂ ಮೂವರು ಮಕ್ಕಳು ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಉದಯಪುರದವರಾದ ಡಾ.ಪ್ರತೀಕ್ ಜೋಶಿ ಬೆಳಗಾವಿಯಲ್ಲಿ ಓದಿದ್ದರು. ಈ ಬಗ್ಗೆ ಕೆ ಎಲ್ ಇ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಸಿಬ್ಬಂದಿ ತಿಳಿಸಿದ್ದಾರೆ.

2000-2005ರ ಬ್ಯಾಚ್ ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಜೋಶಿ ಬಳಿಕ ಕೋಲಾರದ ದೇವರಾಜ್ ಅರಸು ವೈದ್ಯಕೀಯ ಕಾಲೇಜಿನಲ್ಲಿ ರೆಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2021ರಲ್ಲಿ ಲಂಡನ್ ಗೆ ತೆರಳಿದರು. ಆದರೆ ಅವರ ಪತ್ನಿ ಹಾಗೂ ಮಕ್ಕಳು ರಾಜಸ್ಥಾನದಲ್ಲಿದ್ದರು. ಕೆಲ ದಿನಗಳ ಹಿಂದಷ್ಟೇ ಪತ್ನಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಪತಿಯೊಂದಿಗೆ ಲಂಡನ್ ನಲ್ಲಿಯೇ ಇರಲು ನಿರ್ಧರಿಸಿದ್ದರು. ಹಾಗಾಗಿ ಈ ಬಾರಿ ಡಾ.ಪ್ರತೀಕ್ ತನ್ನ ಪತ್ನಿ ಡಾ.ಕಾಮಿನಿ ಜೋಶಿ ಹಾಗೂ ಮೂವರು ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯಲು ಬಂದಿದ್ದರು.

ಅದರಂತೆ ಅಹಮದಾಬಾದ್ ಏರ್ ಪೋರ್ಟ್ ನಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ ಪ್ರಯಾಣ ಬೆಳೆಸಿದ್ದರು. ಆದರೆ ದುರದೃಷ್ಟವಶಾತ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲ ನಿಮಿಷಗಳಲ್ಲೇ ಪತನಗೊಂಡು ಸುಟ್ಟು ಭಸ್ಮವಾಗಿದೆ. ಡಾ. ಜೋಶಿ ಕುಟುಂಬ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬ ಸಮೇತ ಲಂಡನ್ ನಲ್ಲಿ ನೆಲೆಸಬೇಕೆಂಬ ಮಹದಾಸೆಯೊಂದಿಗೆ ಹೊರಟಿದ್ದ ವೈದ್ಯ ಕುಟುಂಬ ದುರಂತ ಅಂತ್ಯಕಂಡಿದೆ. ವಿಮಾನದಲ್ಲಿ ಕುಳಿತು ಕುಟುಂಬ ಸಮೇತರಾಗಿ ಖುಷಿ ಖುಷಿಯಾಗಿ ಕೊನೇ ಬಾರಿಗೆ ಕ್ಲಿಕ್ಕಿಸಿದ್ದ ಫೋಟೋವನ್ನು ಡಾ.ಜೋಶಿ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಡಾ.ಜೋಶಿ ಕುಟುಂಬ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಸುದ್ದಿ ಸ್ನೇಹಿತರಿಗೆ, ಸಂಬಂಧಿಕರಿಗೆ ತಿಳಿದು ಆಘಾತವನ್ನುಂಟುಮಾಡಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by