ಕನ್ನಡ ನಾಡು | Kannada Naadu

ಜೈನರಿಗೆ ಪ್ರತ್ಯೇಕ ನಿಗಮ ರಚಿಸದಿದ್ದರೆ ಸಲ್ಲೇಖನ ವ್ರತ: ಸರ್ಕಾರಕ್ಕೆ ಗುಣಧರನಂದಿ ಮಹಾರಾಜರ ಎಚ್ಚರಿಕೆ

09 Jun, 2025

ಬೆಳಗಾವಿ: ಜೈನ ಸಮುದಾಯದ ಮಕ್ಕಳು ಹಾಗೂ ಮಹಿಳೆಯರ ಭವಿಷ್ಯದ ದೃಷ್ಟಿಯಿಂದ ಒಂದು ವರ್ಷದೊಳಗೆ ಜೈನ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚಿಸದಿದ್ದರೆ ಸಲ್ಲೇಖನ ವೃತ ಕೈಗೊಳ್ಳುವುದಾಗಿ ರಾಷ್ಟ್ರಸಂತ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.‌
ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ 1008 ಭಟ್ಟಾರಕ ಶ್ರೀ ಆದಿನಾಥ ದಿಗಂಬರ ಜೈನ ಸಮಾಜ ಟ್ರಸ್ಟ್ ಆಯೋಜಿಸಿದ್ದ ಜೈನ ಸಮ್ಮೇಳನ ನೇತೃತ್ವ ವಹಿಸಿ ಮಾತನಾಡಿದ ಇವರು, ಈ ಹಿಂದೆ ಅನೇಕಬಾರಿ ಸಮುದಾಯದ ಬೇಡಿಕೆ ಈಡೇರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ಒಂದು ವರ್ಷದೊಳಗೆ ಜೈನರಿಗೆ ಪ್ರತ್ಯೇಕ ನಿಗಮ ಮಂಡಳಿ ರಚಿಸುವುದು ಸೇರಿದಂತೆ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಜೈನ ಸಮುದಾಯದ ವಿವಿಧ ಬೇಡಿಕೆಗಳ ಮನವಿಪತ್ರ ಸ್ವೀಕರಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಜೈನ ಧರ್ಮದ ಅನುಯಾಯಿಗಳು ಕಾಲಕಾಲಕ್ಕೆ ವಿವಿಧ ಸಮ್ಮೇಳನಗಳು, ಧಾರ್ಮಿಕ ಸಭೆಗಳು ಮತ್ತು ಸಮಾರಂಭಗಳ ಮೂಲಕ ತಮ್ಮ ಆಲೋಚನೆಗಳು ಮತ್ತು ನಂಬಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅಂತಹ ಒಂದು ಸಮಾರಂಭವನ್ನು ಇಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಸಮುದಾಯದ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಅಹಿಂಸೆಯನ್ನೇ ಪರಮ ಧರ್ಮವಾಗಿಸಿಕೊಂಡ ಜೈನ ಸಮುದಾಯ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ. ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸಮುದಾಯದ ಸೇವೆ ಸ್ಮರಣೀಯ. ಜೈನ ಸಮ್ಮೇಳನದ ಮೂಲಕ ಧರ್ಮ, ಸಂಸ್ಕೃತಿ, ಸಮಾಜಸೇವೆಯಂತಹ ಸಾರ್ಥಕ ಕಾರ್ಯ ಕೈಗೊಂಡಿದೆ. ಜೈನ ಸಮುದಾಯದ ಸಮಸ್ಯೆಗಳನ್ನು ನನ್ನ ಮುಂದೆ ತಿಳಿಸಿದ್ದು ಈ ಕುರಿತು ಪರಿಹಾರ ಒದಗಿಸಲಾಗುತ್ತದೆ ಎಂದರು.
ಇಂದಿನ ಕಾಲದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಪ ಮತ್ತು ಹಿಂಸೆ ಹೆಚ್ಚುತ್ತಿರುವಾಗ, ಮಹಾವೀರ ಸ್ವಾಮಿಯ ಈ ಸಂದೇಶವು ನಮ್ಮನ್ನು ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯ ಕಡೆಗೆ ಕರೆದೊಯ್ಯುತ್ತದೆ. ಅಹಿಂಸೆಯ ಮನೋಭಾವವನ್ನು ಕಾಪಾಡಿಕೊಳ್ಳಲು ನಾವು ಒಗ್ಗಟ್ಟಿನಿಂದ ಇರಬೇಕು. ಭಗವಾನ್ ಮಹಾವೀರರು “ಬದುಕಿ ಬದುಕಲು ಬಿಡಿ” ಎಂಬ ದೈವಿಕ ಸಂದೇಶವನ್ನು ನಮಗೆ ನೀಡಿದರು. ನಾವು ಅವರ ದೈವಿಕ ಸಂದೇಶಗಳಿಂದ ಸ್ಫೂರ್ತಿ ಪಡೆದು ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ವಿಶ್ವ ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by