ಕನ್ನಡ ನಾಡು | Kannada Naadu

ಗೃಹ ಸಾಲದಾರರಿಗೆ ಗುಡ್‌ನ್ಯೂಸ್‌ : ಸತತ 3ನೇ ಬಾರಿ ರೆಪೋ ದರ ಇಳಿಕೆ

06 Jun, 2025

ನವದೆಹಲಿ: ದೇಶದ ಜಿಡಿಪಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸತತ 3ನೇ ಬಾರಿಗೆ ರೆಪೋ ದರ (Repo Rate) ಕಡಿತಗೊಳಿಸಿದೆ. ನಿರೀಕ್ಷೆಗೂ ಮೀರಿ 50 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದು ರೆಪೋ ಬಡ್ಡಿ ದರ ಶೇ.6 ರಿಂದ ಶೇ.5.50ಕ್ಕೆ ಇಳಿಕೆಯಾಗಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಸಭೆಯ ಬಳಿಕ 50 ಮೂಲಾಂಶದಷ್ಟು (ಬೇಸಿಸ್‌ ಪಾಯಿಂಟ್‌) ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ಇದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ. ಜೊತೆಗೆ ಹೊಸ ಸಾಲಗಾರರಿಗೆ ಗೃಹ ಸಾಲಗಳು, ವಾಹನದ ಮೇಲಿನ ಸಾಲಗಳು ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ. ಆಟೊ ಮೋಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿಯೂ ಇಳಿಕೆಯಾಗುವ ನಿರೀಕ್ಷೆ ಇದೆ.

ರೆಪೋ ದರದಲ್ಲಿ ಶೇ 0.25ರಷ್ಟು ಇಳಿಕೆ ಆಗಬಹುದೆಂದು ತಜ್ಞರು ನಿರೀಕ್ಷಿಸಿದ್ದರು. ಆದ್ರೆ ಆರ್‌ಸಿಬಿ ನಿರೀಕ್ಷೆಗೂ ಮೀರಿ ಇಳಿಕೆ ಮಾಡಿದೆ. ಜಿಡಿಪಿಯು 4 ವರ್ಷದ ಕನಿಷ್ಠ ಮಟ್ಟ ಶೇ 6.5ಕ್ಕೆ ಕುಸಿದಿತ್ತು. ಹೀಗಾಗಿ ಜಿಡಿಪಿ ಉತ್ತೇಜನಕ್ಕೆ ಕ್ರಮ ಕೈಗೊಳ್ಳುವ ಭಾಗವಾಗಿ ರೆಪೋ ದರ ಕಡಿತಗೊಳಿಸಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಇಳಿಕೆ ಕೂಡ ಆಗಿದೆ ಎಂದು ತಿಳಿದುಬಂದಿದೆ. 2022ರ ಆಗಸ್ಟ್ 5 ರಂದು ರೆಪೋ ದರವು ಶೇ 5.40ರಷ್ಟಿತ್ತು.

ಈ ವರ್ಷದ ಫೆಬ್ರವರಿಯಿಂದ ಆರ್‌ಬಿಐ ರೆಪೋ ದರದಲ್ಲಿ 100 ಮೂಲಾಂಶದಷ್ಟು ಕಡಿತ ಮಾಡಿದೆ. ಏಪ್ರಿಲ್‌ನಲ್ಲಿ 25 ಬೇಸಿಸ್‌ ಪಾಯಿಂಟ್‌ ಕಡಿತಗೊಳಿಸಲಾಗಿತ್ತು. ಆಗ ರೆಪೋ ದರ ಶೇ. 6ಕ್ಕೆ ಇಳಿದಿತ್ತು.

ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

ಉದಾಹರಣೆಗೆ:
HDFC ಬ್ಯಾಂಕಿನಿಂದ 8.70% ಬಡ್ಡಿದರದಲ್ಲಿ 30 ವರ್ಷಗಳಿಗೆ 50 ಲಕ್ಷ ರೂ. ಗೃಹಸಾಲ ಪಡೆದರೆ
ಪ್ರಸ್ತುತ EMI: 39,136 ರೂ. ಇದೆ

ಹೊಸ ರೆಪೋ ದರ ಇಳಿಕೆ ನಂತರ
ಹೊಸ EMI: 37,346 ರೂ. ಇರಲಿದೆ
ಮಾಸಿಕ ಉಳಿತಾಯ: 1,790 ರೂ.
ವಾರ್ಷಿಕ ಉಳಿತಾಯ: 21,480 ರೂ.

Publisher: ಕನ್ನಡ ನಾಡು | Kannada Naadu

Login to Give your comment
Powered by