ಕನ್ನಡ ನಾಡು | Kannada Naadu

ಭಾರತದ ಸಂಸ್ಕೃತಿ ಇಡೀ‌ ವಿಶ್ವಕ್ಕೆ ಮಾದರಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

05 Jun, 2025

 

 ಗದಗ: ಭಾರತ ಪುಣ್ಯ ಭೂಮಿ, ಈ ನಾಡಿನಲ್ಲಿ ಅದೆಷ್ಟೋ ಸಾಧು ಸಂತರು, ಪುಣ್ಯ ಪುರುಷರು, ಮಠಾಧೀಶರು ಬದುಕಿ ಈ ಭೂಮಿಯನ್ನು ಪಾವನವಾಗಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ‌

ಇತಿಹಾಸ ಪ್ರಸಿದ್ಧ ಮುಳಗುಂದದ  ಶ್ರೀ ಗ್ರಾಮದೇವತೆಯ ಟೋಪ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಸಂಜೆ ಪಾಲ್ಗೊಂಡು ಮಾತನಾಡಿದ ಸಚಿವರು, ಭಾರತದ ಸಂಸ್ಕೃತಿ ಶ್ರೀಮಂತವಾದದ್ದು, ಇಂತಹ ಭೂಮಿಯಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಇಂತಹ ಜಾತ್ರೆಗಳನ್ನು ಆಚರಿಸಲಾಗುತ್ತಿದೆ ಎಂದರು. 

ಮಹಿಳೆ ಶಕ್ತಿಯ ದ್ಯೋತಕ, ಸಮೃದ್ಧಿಯ ಸಂಕೇತ. ಹಾಗಾಗಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಅಂಬೇಡ್ಕರ್, ಬುದ್ದ, ಬಸವಣ್ಣನವರ ತತ್ವಗಳನ್ನು ಆರ್ದಶವಾಗಿಟ್ಟುಕೊಂಡು, ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ. ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ, ಅದರಂತೆ ಜಾತಿ- ಧರ್ಮ ಭೇದ ಮಾಡದೆ ಸಾಗುತ್ತಿದ್ದೇವೆ ಎಂದು ಸಚಿವರು ಹೇಳಿದರು. 
ಈ ಭಾಗದ ಶಾಸಕರಾಗಿರುವ ಎಚ್.ಕೆ. ಪಾಟೀಲರು ನಮ್ಮ ಸರಕಾರದ ಅತ್ಯಂತ ಬುದ್ದಿವಂತ ಮತ್ತು ಪ್ರಜ್ಞಾವಂತ ಸಚಿವರು. ಅವರನ್ನು ಪಡೆದಿರುವ ಈ ಭಾಗದ ಜನರೇ ಭಾಗ್ಯವಂತರು. ಈ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಸವದತ್ತಿ ಯಲ್ಲಮ್ಮ ಪ್ರಾಧಿಕಾರ ರಚನೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಅಭಿದ್ಧಿಗೂ ಕಾಳಜಿ ತೋರುತ್ತಿದ್ದಾರೆ. ಜೊತೆಗೆ, ದೇವಸ್ಥಾನದ ಅಭಿವೃದ್ಧಿಗಗೆ ಸತತ ಪ್ರಯತ್ನ ಮಾಡಿ ಕೇಂದ್ರ ಸರ್ಕಾರದಿಂದ 110 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ  ಎಂದು ಸಚಿವರು ಶ್ಲಾಘಿಸಿದರು.

 ಕಾರ್ಯಕ್ರಮದಲ್ಲಿ ಬಳಗಾನೂರದ ಪರಮಪೂಜ್ಯ ಶಿವಶಾಂತ ವೀರ ಶರಣರು, ನೀಲಗುಂದದ ಶ್ರೀ ಪ್ರಭುಲಿಂಗ ದೇವರು, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಜಾತ್ರಾ ಕಮೀಟಿಯ ಅಧ್ಯಕ್ಷರಾದ ಎಂ.ಡಿ.ಬಟ್ಟೂರ್, ಉಪಾಧ್ಯಕ್ಷರಾದ ಅನಸೂಯಾ ಸೋಮಗಿರಿ, ರಾಮಣ್ಣ ಕಮೊಜಿ, ನಾಗರಾಜ ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಚಿವರು ಜಾತ್ರೆ ಗದ್ದುಗೆಗೆ ತೆರಳಿ ದೇವಿಯ ದರ್ಶನ ಪಡೆದರು. ಜಾತ್ರಾ ಸಮಿತಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು

Publisher: ಕನ್ನಡ ನಾಡು | Kannada Naadu

Login to Give your comment
Powered by