ಕನ್ನಡ ನಾಡು | Kannada Naadu

ಕಾಲ್ತುಳಿತ ಮಧ್ಯೆ ದಾಖಲೆ ಬರೆದ ಮೆಟ್ರೋ: ನಿನ್ನೆ ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

05 Jun, 2025

ಬೆಂಗಳೂರು, ಜೂನ್ 05: 'ನಮ್ಮ ಮೆಟ್ರೋ' ಬೆಂಗಳೂರಿನ ಜೀವನಾಡಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕರನ್ನು ಕಣ್ತುಂಬಿಕೊಳ್ಳಲು ಬಂದ ಅಭಿಮಾನಿಗಳಲ್ಲಿ ಅನೇಕ ಮಂದಿ ನಮ್ಮ ಮೆಟ್ರೋ ಸಂಚಾರ ಅವಲಂಬಿಸಿದ್ದಾರೆ. ನೂಕು ನೂಗ್ಗಲು ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ನಮ್ಮ ಮೆಟ್ರೋದಲ್ಲಿ ನೆನ್ನೆ ಜೂನ್ 04ರಂದು ಒಂದೇ ದಿನ 9 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣ ಮಾಡಿದ್ದಾರೆ ಎಂದು BMRCL ಮಾಹಿತಿ ನೀಡಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿರುವ ಮಾಹಿತಿ ಪ್ರಕಾರ, ಜೂನ್ 4 ನಮ್ಮ ಮೆಟ್ರೋ ದಾಖಲೆಯ ಪ್ರಯಾಣಿಕರಿಗೆ ಸೇವೆ ನೀಡಿದೆ. ಒಟ್ಟು 9,66,732 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಒಟ್ಟು ಅತ್ಯಧಿಕ ಬೋರ್ಡಿಂಗ್ ಸಂಖ್ಯೆಯನ್ನು ನೋಂದಾಯಿಸುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು ಮೆಟ್ರೋ ಅಧಿಕಾರಿಗಳು ಬಣ್ಣಿಸಿದ್ದಾರೆ.

ಒಟ್ಟಾರೆ ನಿನ್ನೇ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಹಿಂದೆ 8.7 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ನಮ್ಮ ಮೆಟ್ರೋ ದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ಮೆಟ್ರೋ ಹಿಂದಿಕ್ಕಿದೆ.

ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿತ್ತು ಎಂದು ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ನಿನ್ನೆ ಆರ್​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದು, ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಸದ್ಯ ಈ ದುರಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಮ್ಮ ಮೆಟ್ರೋ ವಿಷಾದ ವ್ಯಕ್ತಪಡಿಸಿದೆ.

ನೇರಳೆ ಮಾರ್ಗದಲ್ಲಿ ಅತ್ಯಧಿಕ ಪ್ರಯಾಣ ನಮ್ಮ ಮೆಟ್ರೋ ಚಲಘಟ್ಟ-ವೈಟ್‌ಫಿಲ್ಡ್‌ನೇರಳೆ ಮಾರ್ಗದಲ್ಲಿ (ಮಾರ್ಗ 1) ಬರೋಬ್ಬರಿ ಹೆಚ್ಚು ಮಂದಿ 4,78,334 ಪ್ರಯಾಣಿಕರು ಸಂಚರಿಸಿದ್ದಾರೆ. ಇನ್ನು ಮಾದಾವರ-ರೇಷ್ಮೆ ಸಂಸ್ಥೆವರೆಗಿನ ಹಸಿರು ಮಾರ್ಗದಲ್ಲಿ (ಮಾರ್ಗ 2) ಒಟ್ಟು 2,84,674 ಮಂದಿ ಪ್ರಯಾಣಿಸಿದ್ದಾರೆ. ಇಂಟರ್‌ಚೇಂಜ್ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣದಲ್ಲಿ ನೆನ್ನೆ ಒಂದೇ ದಿನ 2,03,724 ಪ್ರಯಾಣಿಕರು ಸಂಚರಿಸಿದ್ದಾರೆ, ಮಾರ್ಗ ಬದಲಾಯಿಸಿಕೊಂಡಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಂಕಿ ಅಂಶಗಳನ್ನು ನೀಡಿದೆ.

ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಿಲ್ದಾಣಗಳಲ್ಲಿನ ಪ್ರಯಾಣಿಕರ ದಟ್ಟಣೆ ಈ ಸಂಚಾರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

 ಕಾಲ್ತುಳಿತದಲ್ಲಿ 11 ಮಂದಿ ಮೃತ: ಮೆಟ್ರೋ ಸಂತಾಪ ನಿನ್ನೆ ಸಂಭವಿಸಿದ ದುರದೃಷ್ಟಕರ ಘಟನೆಯಿಂದ, ನಾವು ಅತೀವವಾಗಿ ದುಃಖಿತರಾಗಿದ್ದೇವೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಅಮಿಟೆಡ್ (BMRCL) ನಲ್ಲಿ, ನಾವು ಶೋಕಾಚರಣೆ ಮಾಡುತ್ತೇವೆ ಮತ್ತು ಈ ದುರಂತದಿಂದ ಬಾಧಿತರಾದ ಕುಟುಂಬಗಳಿಗೆ ನಮ್ಮ ಹೃದಯಪೂರ್ವಕ ಸಂತಾಪವನ್ನು ಸೂಚಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ನಮ್ಮ ಮೆಟ್ರೋ ಕಾಲ್ತುಳಿತದಲ್ಲಿ ಮೃತಪಟ್ಟ ಆರ್‌ಸಿಬಿ ಅಭಿಮಾನಿಗಳಿಗೆ ಸಂತಾಪ ಸೂಚಿಸಿದೆ.

 

Publisher: ಕನ್ನಡ ನಾಡು | Kannada Naadu

Login to Give your comment
Powered by