ಕನ್ನಡ ನಾಡು | Kannada Naadu

ಸಸ್ಯ ಪ್ರಭೇದದ ಮಾಹಿತಿ ಅರಿಯಲು ಕ್ಯೂಆರ್ ಕೋಡ್ ಅಭಿವೃದ್ಧಿ – ಶಮ್ಲಾ ಇಕ್ಭಾಲ್

05 Jun, 2025

ಬೆಂಗಳೂರು : ಲಾಲ್ ಬಾಗ್ ಸಸ್ಯತೋಟದ ಆಯ್ದ ಸಸ್ಯ ಪ್ರಭೇದದ ಮರಗಳಿಗೆ ಸಸ್ಯ ಶಾಸ್ತ್ರೀಯ ವಿವರಗಳನ್ನು ಒದಗಿಸಬಲ್ಲ ಕ್ಯೂಆರ್ ಕೋಡ್ ಅಭಿವೃದ್ಧಿಪಡಿಸಿ ಮರಗಳ ಮೇಲೆ ಅಳವಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಅವರು ತಿಳಿಸಿದರು.

ಇಂದು ಲಾಲ್ ಬಾಗ್‍ನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ  ಚಾಲನೆ ನೀಡಿ ಮಾತನಾಡಿದ ಅವರು ಲಾಲ್‍ಬಾಗ್ ಉದ್ಯಾನವನದಲ್ಲಿ ಸಸ್ಯ ಸಂಪತ್ತು ಸಮೃದ್ಧವಾಗಿದ್ದು ಮರಗಳ ಹೆಸರು, ಯಾವ ಕುಟುಂಬಕ್ಕೆ ಸೇರಿರುತ್ತದೆ, ವೈವಿಧ್ಯತೆ ಕುರಿತ ವಿವಿಧ ಮಾಹಿತಿ ಸಾರ್ವಜನಿಕರಿಗೆ ತಿಳಿಯುವುದು ಕಷ್ಟವಾಗಿತ್ತು. ಆದ್ದರಿಂದ ಆಯ್ದ ಸಸ್ಯ ಪ್ರಭೇದದ ಮರಗಳಿಗೆ ಕ್ಯೂರ್ ಕೋಡ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಲಾಲ್ ಬಾಗ್ ಸಸ್ಯತೋಟದ ಸುತ್ತಲಿನ ಕಾಂಪೌಂಡ್ ಗೋಡೆಯ ಒಳಭಾಗದ ಉದ್ದಕ್ಕೂ ಅಪರೂಪದ ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಡುವ ಕಾರ್ಯಕ್ರಮ, ಲಾಲ್ ಬಾಗ್‍ನ ಸಸ್ಯತೋಟದ ಆಯ್ದ ಸಸ್ಯ ಪ್ರಭೇದದ ಮರಗಳಿಗೆ ಸಸ್ಯ ಶಾಸ್ತ್ರೀಯ ವಿವರಗಳನ್ನು ಒದಗಿಸಬಲ್ಲ ಕ್ಯೂಆರ್ ಕೋಡ್ ಅಳವಡಿಕೆ, ಲಾಲ್‍ಬಾಗ್‍ಗೆ ಪ್ರಪ್ರಥಮ ಬಾರಿಗೆ ಬೈಸಿಕಲ್/ಟ್ರ್ರೈಸಿಕಲ್‍ಗಳ ಪರಿಚಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಲಾಲ್ ಬಾಗ್‍ನ ಸಸ್ಯತೋಟದಲ್ಲಿ 2800ಕ್ಕೂ ಹೆಚ್ಚು ದೇಶ, ವಿದೇಶಗಳ ಅಮೂಲ್ಯ ಸಸ್ಯ ಸಂಗ್ರಹವಿದೆ. ವಿದ್ಯಾರ್ಥಿಗಳು, ಸಸ್ಯಶಾಸ್ತ್ರೀಯ ಆಸಕ್ತರು, ಪರಿಸರ ಪ್ರಿಯರು, ಸಂಶೋಧಕರು ಹಾಗೂ ಸಾಮಾನ್ಯರಿಗೆ ವೈವಿಧ್ಯಮಯ ಸಸ್ಯ ಪ್ರಭೇದಗಳ ಬಗ್ಗೆ ಅಭ್ಯಸಿಸಲು ಲಾಲ್ ಒಂದು ವೈಜ್ಞಾನಿಕ ವೇದಿಕೆಯಾಗಿದೆ.
 
ಪ್ರಸ್ತುತ ಸಸ್ಯಪ್ರಭೇದಗಳಿಗೆ ಸಾಮಾನ್ಯ ಹೆಸರು, ವೈಜ್ಞಾನಿಕ ಹೆಸರು, ಮೂಲ ಇತ್ಯಾದಿ ವಿವರಗಳನ್ನು ಒದಗಿಸು ನಾಮ ಫಲಕಗಳನ್ನು ಅಳವಡಿಸಲಾಗಿದೆ. ಮಾರ್ಗದರ್ಶಕರ ಸಹಾಯವಿಲ್ಲದೆ ಪ್ರತಿಯೊಂದು ಸಸ್ಯ ಪ್ರಭೇದಗಳ ಬಗ್ಗೆ ಸಂಪೂರ್ಣವಾದ ವಿವರಗಳಾದ ಉಗಮ ಹರಡುವಿಕೆ, ಹೂವು-ಹಣ್ಣು ಬಿಡುವ ಕಾಲ, ಸಾಮಾನ್ಯ ಹೆಸರು ವೈಜ್ಞಾನಿಕ ಹೆಸರು, ಉಪಯೋಗಗಳು ಹಾಗೂ ಪೂರ್ಣ ಮಾಹಿತಿಯನ್ನು ನೀಡಬಲ್ಲ ಕ್ಯೂಆರ್ ಕೋಡ್ಗಳನ್ನು ಪ್ರಾರಂಭಿಕವಾಗಿ ಆಯ್ದ 50ಸಸ್ಯ ಪ್ರಭೇದಗಳಿಗೆ ಅಳವಡಿಸಿ ಸರ್ವರೂ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಎಲ್ಲಾ ಸಸ್ಯ ಪ್ರಭೇದಗಳಿಗೂ ಸಹ ಕ್ಯೂಆರ್ ಕೋಡ್ಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

240 ಎಕರೆ ವಿಸ್ತೀರ್ಣವಿರುವ ಲಾಲ್ ಬಾಗ್‍ನ ಸಸ್ಯಶಾಸ್ತ್ರೀಯ ತೋಟದ ಸುತ್ತಲೂ 5 ಕಿ. ಮೀ. ಉದ್ದದ ಕಾಂಪೌಂಡ್ ಗೋಡೆ ಇರುತ್ತದೆ.ಕಾಂಪೌಂಡ್‍ಗೆ ಹೊಂದಿಕೊಂಡಂತೆ ಲಾಲ್ ಬಾಗ್‍ನ ಸಸ್ಯಶಾಸ್ತ್ರೀಯ ತೋಟದ ಒಳಭಾಗದಲ್ಲಿ ಬ್ರಿಟೀμï ಕಾಲಘಟ್ಟ ಹಾಗೂ ಡಾ. ಎಂ.ಹೆಚ್. ಮರೀಗೌಡರ ಕಾಲಾವಧಿಯಲಿ 40-45 ವಿವಿಧ ಸಸ್ಯಪ್ರಭೇದಗಳಿಗೆ ಸೇರಿರುವ 850 ಸಂಖ್ಯೆಯ ಮರಗಳನ್ನು ನೆಟ್ಟು ಸಂರಕ್ಷಿಸಲಾಗಿದೆ. ವಯಸ್ಸಿನ ಕಾರಣ, ರೋಗಗಳ ಬಾದೆ ಹಾಗೂ ಮಳೆಗಾಳಿಯಿಂದಾಗಿ ಈವರೆಗೆ 320 ಮರಗಳು ಧರೆಗುರುಳಿದೆ. ಕಾಂಪೌಂಡ್‍ಗೆ ಹೊಂದಿಕೊಂಡತೆ 5 ಕಿ.ಮೀ. ಉದ್ದದ ಖಾಲಿಯಿರುವ ಜಾಗದಲ್ಲಿ ಒಟ್ಟಾರೆ 341 ಮರಗಳನ್ನು ವಿಶ್ವಪರಿಸ ದಿನಾಚರಣೆಯ ಪ್ರಯುಕ್ತ ನೆಡಲಾಗುತ್ತಿದೆ. ಹಾಲಿ ನೆಡಲಾಗುತ್ತಿರುವ ಮರಗಳು ಸ್ಥಳೀಯ ಸಸ್ಯ ಪ್ರಭೇದಗಳಾಗಿದ್ದು ಒಟ್ಟಾರೆ 110 ಸಸ್ಯ ಪ್ರಭೇದಗಳಿಗೆ ಸೇರಿರುವ 341 ಮರ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.

ಲಾಲ್ ಬಾಗ್‍ನಲ್ಲಿ ಪ್ರಪ್ರಥಮ ಬಾರಿಗೆ ಬೈಸಿಕಲ್/ಟ್ರೈಸಿಕಲ್‍ಗಳ ಪರಿಚಯ:
ಹಾಲೆಂಡ್, ಜರ್ಮನಿ ಇತ್ಯಾದಿ ಪಾಶ್ಚಿಮಾತ್ಯ ದೇಶಗಳಲ್ಲಿ ವಿಫುಲವಾಗಿ ಸಾರ್ವಜನಿಕ ಬಳಕೆಯಲ್ಲಿರುವ ಎಲೆಕ್ಟ್ರಿಕ್ ಟ್ರೈಸೈಕಲ್ಲುಗಳನ್ನು ಇನ್ನು ಮುಂದೆ ಲಾಲ್ ಬಾಗ್ ಶಾಸ್ತ್ರೀಯ ತೋಟದಲ್ಲಿ ಆಸಕ್ತರು ಬಳಸುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ಟ್ರೈಸಿಕಲ್ಲುಗಳು ಸ್ವತಂತ್ರವಾಗಿ ಚಲಿಸುವುದರೊಂದಿಗೆ ಆಹ್ಲಾದಕರವಾದ ಅನುಭವವನ್ನು ನೀಡುತ್ತದೆ. ಫೆಚ್‍ಮೊಬಿಲಿಟಿ ಸಂಸ್ಥೆ ವತಿಯಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಟ್ರೈಕ್‍ಗಳು ಮತ್ತು ಸ್ಕೂಟರ್‍ಗಳನ್ನು ಸಾರ್ವಜನಿಕ ಬಳಕೆಗೆ ಪರಿಚಯಿಸಿದ್ದಾರೆ. 3 ತಿಂಗಳ ಕಾಲ ಪ್ರಾಯೋಗಿಕವಾಗಿ ಟ್ರೈಸೈಕಲ್ಲುಗಳನ್ನು ಚಾಲನೆ ಮಾಡಲಾಗುತ್ತಿದೆ. ಸಾರ್ವಜನಿಕರ ಬಳಕೆಗೆ ಮತ್ತು ಪ್ರತಿಕ್ರಿಯೆಗೆ ಅನುಗುಣವಾಗಿ ಟ್ರೈಸೈಕಲ್ಲುಗಳ ಶಾಶ್ವತ ಚಾಲನೆಗೆ ಚಿಂತಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ನಿರ್ದೇಶಕ ಡಿ.ಎಸ್ ರಮೇಶ್, ಅಪರ ನಿರ್ದೇಶಕ ಪಿ.ಎಂ. ಸೊಬರದ, ಜಂಟಿ ನಿರ್ದೇಶಕರುಗಳಾದ ಎಂ.ಜಗದೀಶ್, ಧನರಾಜ್, ಪ್ರಸಾದ, ಡಾ.ನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by