ಕನ್ನಡ ನಾಡು | Kannada Naadu

ಹೈಕೋರ್ಟ್ ಹೇಳಿದರೂ ಕ್ಷಮೆ ಕೇಳಲು ನಿರಾಕರಿಸಿದ ಕಮಲ್ ಹಾಸನ್ : ಕರ್ನಾಟಕದಲ್ಲಿ ಸಿನೆಮಾ ಬಿಡುಗಡೆ ಇಲ್ಲ…!!

04 Jun, 2025

ಬೆಂಗಳೂರು : ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ನಟ ಕಮಲ್ ಹಾಸನ್ ಗೆ ಹೈಕೋರ್ಟ್ ನಲ್ಲೂ ಮುಖಭಂಗವಾಗಿದೆ. ಹೈಕೋರ್ಟ್ ಕ್ಷಮೆ ಕೇಳಿ ಎಂಬ ಮೌಖಿಕ ಆದೇಶವನ್ನು ದಿಕ್ಕರಿಸಿದ ಪರಿಣಾಮ ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನೆಮಾ ಬಿಡುಗಡೆ ಮುಂದೂಡಲಾಗಿದೆ.

ನಟ ಕಮಲ್ ಹಾಸನ್ ತಮ್ಮ ಥಗ್ ಲೈಫ್ ಚಿತ್ರದ ಪ್ರಚಾರ ಸಂದರ್ಭ ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡಿದ್ದರು. ಇಂದು ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ಕಟ್ಟೆ ಹೊಡೆದಿತ್ತು. ಅಲ್ಲದೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಕಮಲ್ ಹಾಸನ್ ಉದ್ಧಟತನ ಮೆರೆದಿದ್ದು ಇದಕ್ಕೆ ಇದೀಗ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.

ಹೌದು… ಥಗ್ ಲೈಫ್ ಚಿತ್ರ ಜೂನ್ 5ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದ್ದರಿಂದ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಹಿನ್ನಡೆಯಾಗಿದೆ.

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಚಿತ್ರತಂಡ ಹೈಕೋರ್ಟ್ ಮೊರೆ ಹೋಗಿದ್ದತ್ತು. ಏನೇ ಆದರೂ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಮೊಂಡಾಟ ಮೆರೆದಿದ್ದರು. ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯಾಚಿಸುವುದಿಲ್ಲ, ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ರಾಜಕೀಯ ಅಜೆಂಡಾ ಇಟ್ಟುಕೊಂಡು ಮಾಡುತ್ತಿದ್ದಾರೆ ಎಂದಿದ್ದರು. ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಹೇಳಿತ್ತು.

ಇಂದು ಹೈಕೋರ್ಟ್ ನಲ್ಲಿ ಚಿತ್ರತಂಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ಸಿ.ರಾಜಗೋಪಾಲಾಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸ್ತೇವೆ ಎಂದು ಹೇಳಿದರು. ಇದಕ್ಕೆ ಕಮಲ್ ಹಾಸನ್ ಪರ ವಕೀಲರು ಪ್ರತಿಕ್ರಿಯೆ ನೀಡಲು ಮಧ್ಯಾಹ್ನ 2.30ರವರೆಗೆ ಸಮಯಾವಕಾಶ ಕೋರಿದರು.

ಇದೀಗ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ಥಗ್ ಲೈಫ್ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧವಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಹೀಗಾಗಿ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by