ಬೆಂಗಳೂರು: ಅಮೆರಿಕಾದಲ್ಲಿ ಮನೆಯ ಗರಾಜಿನಲ್ಲಿ ಒಂದು ಹೊಲಿಗೆ ಯಂತ್ರದ ಮೂಲಕ ಅರಂಭವಾದ ಅಪಾರೆಲ್ ವಹಿವಾಟಿನ ಮೂಲಕ 250 ಮಳಿಗೆಗಳನ್ನು ತೆರೆದ ಮಹಿಳೆಯ ಯಶೋಗಾಥೆಯನ್ನು ವಿವರಿಸಿದ ರೋಟರಿ ಡಿಸ್ಟಿçಕ್ಟ್ ಗವರ್ನರ್ ಸತೀಶ ಮಾಧವನ್ ಅವರು ಒಂದು ಹೊಸ ಕೌಶಲ್ಯದ ಕಲಿಕೆಯು ಬದುಕನ್ನು ಬದಲಿಸಬಲ್ಲದು ಎಂದು ಹೇಳಿದರು. ನಗರದ ಉದಯಭಾನು ಕಲಾಸಂಘದ ವೃತ್ತಿಕೌಶಲ್ಯ ಕೇಂದ್ರದಲ್ಲಿ ತರಬೇತಿ ಪೂರೈಸಿದ ನಲವತ್ತು ಮಹಿಳೆಯರಿಗೆ ಪೂರಕ ಅನುದಾನ ಯೋಜನೆಯಡಿ ರೋಟರಿ ಕ್ಲಬ್ ನೆರವಿನಿಂದ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ನಿಯೋಜಿತ ಜಿಲ್ಲಾ ಗವರ್ನರ್ ಬಿ ಆರ್ ಶ್ರೀಧರ್ ಅವರು ಮಾತನಾಡುತ್ತಾ, ತಮ್ಮ ತೋಟದಲ್ಲಿ ಕೂಲಿ ಮಾಡುವ ಗಂಡನ ಜೊತೆ ಇದ್ದ ರಾಯಚೂರಿನ ಮಹಿಳೆಯು ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರವನ್ನು ದೊರಕಿಸಿಕೊಟ್ಟಾಗ, ಹಳ್ಳಿಯಲ್ಲಿ ಕುಳಿತು ತನ್ನ ಹೊಲಿಗೆಯ ಕೌಶಲ್ಯದಿಂದ ಹಳ್ಳಿಗರ ಕುಬುಸ ಮತ್ತು ವಸ್ತ್ರಗಳನ್ನು ಹೊಲಿದು ತನ್ನ ಗಂಡನ ಸಮಕ್ಕೆ ಹಣ ಸಂಪಾದನೆ ಮಾಡಿ ಕುಟುಂಬವು ಆರ್ಥಿಕ ಸಬಲತೆಯನ್ನು ಸಾಧಿಸಿದ ಕಥನವನ್ನು ತಿಳಿಸಿದರು. ಮುಂದುವರೆದು ಗ್ರಾಮಾಂತರ ಪ್ರದೇಶಗಳಲ್ಲಿ ಹೊಲಿಗೆ-ಕಸೂತಿ ತರಗತಿಗಳನ್ನು ನಡೆಸುವ ಶಿಕ್ಷಕರನ್ನು ತರಬೇತುಗೊಳಿಸಿ, ಕನಿಷ್ಠ ಹತ್ತಿಪ್ಪತ್ತು ಹಳ್ಳಿಗಳಲ್ಲಿ ಹೊಲಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉದಯಭಾನು ಕಲಾಸಂಘವು ಮುಂದಾದರೆ ರೋಟರಿ ಕ್ಲಬ್ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಉದಯಭಾನು ಕಲಾಸಂಘದ ಬಹುಮುಖೀ ಸೇವಾ ಕಾರ್ಯಗಳು ಸಮಾಜ ಏಳಿಗೆಯಲ್ಲಿ ಮಹತ್ವಪೂರ್ಣವಾದುದು ಎಂದು ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಆರ್ ರಾಮಚಂದ್ರ ಶ್ಲಾಘಿಸಿದರು.
ಸಂಘದ ಅಧ್ಯಕ್ಷ ಶ್ರೀರಾಮೇಗೌಡ, ರೋಟರಿ ಪ್ರಾಜೆಕ್ಟ್ ಕೋ-ಡೈರೆಕ್ಟರ್ ರೊ ಎಸ್ ರಾಮಕೃಷ್ಣ ಮತ್ತು ಕೆ ಆರ್ ವೆಂಕಟೇಶ್ ಅವರುಗಳು ಹಾಜರಿದ್ದರು. ಉದಯಭಾನು ಕಲಾಸಂಘದ ಗೌರವ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಶ್ರೀ ಪ್ರಭುದೇವ್ ಅವರು ವಂದಿಸಿದರು.
Publisher: ಕನ್ನಡ ನಾಡು | Kannada Naadu