ಬೆಂಗಳೂರು : ಜಿಲ್ಲಾಧಿಕಾರಿ ಹಾಗೂ ಸಿಇಒಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಆದರೆ ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಗುರಿಯನ್ನು ಸಾಧಿಸಿರುವುದಿಲ್ಲ. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿಷ್ಠುರವಾಗಿ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಡಿಸಿ, ಎಸ್ಪಿ ಮತ್ತು ಸಿಇಒ ಹುದ್ದೆಗಳು ಪ್ರಮುಖವಾಗಿವೆ. ಅವರು ತಮ್ಮ ಅಹಂ ಬದಿಗೊತ್ತಿ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಜಿಲ್ಲೆ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ರಾಜ್ಯದ ಪ್ರಗತಿಗೆ ಸಂಬಂಧಿಸಿದಂತೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಗಳಲ್ಲಿ ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ, ಅವರನ್ನು ಮಟ್ಟ ಹಾಕುವುದು ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ಡಿಸಿ, ಸಿಇಒ, ಎಸ್ಪಿಗಳ ಜವಾಬ್ದಾರಿ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಡಿಸಿ, ಸಿಇಒ ಮತ್ತು ಎಸ್ಪಿಗಳೇ ನೇರ ಹೊಣೆ:
ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಜಿಲ್ಲೆಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆಗಳು ಅಭಿವೃದ್ಧಿಗೂ ನೇರ ಸಂಬಂಧವಿದೆ. ಹದಗೆಟ್ಟರೆ ಅದಕ್ಕೆ ಡಿಸಿ, ಸಿಇಒ ಮತ್ತು ಎಸ್ಪಿಗಳೇ ನೇರ ಹೊಣೆ. ಚಾಚೂ ತಪ್ಪದೇ ನಿಮ್ಮ ಜವಾಬ್ದಾರಿಯನ್ನು ಜಿಲ್ಲೆಗಳಲ್ಲಿ ನಿರ್ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಶಾಂತಿ ಕಾಪಾಡಲು ಎಲ್ಲಾ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕು. ಘಟನೆ ನಡೆದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮೊದಲೇ ಶಾಂತಿ ಸಮಿತಿ ಸಭೆಗಳನ್ನು ನಡೆಸಿ, ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು. ಜನಪರವಾದ ಧೋರಣೆಯನ್ನು ಅನುಸರಿಸಬೇಕು. ನಾವು ಜನರಿಗಾಗಿ ಇರುವವರು, ಅವರ ತೆರಿಗೆಯಿಂದ ಸಂಬಳ ಪಡೆಯುವವರು ಎಂಬುವುದು ನೆನಪಿರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. .
ಬಾಲ್ಯ ವಿವಾಹ ತಡೆಗಟ್ಟಿ:
ಬಾಲ್ಯ ವಿವಾಹದಂತಹ ಘಟನೆಗಳನ್ನು ತಡೆಯುವಲ್ಲಿ ನೀವು ವಿಫಲರಾದರೆ ನಿಮ್ಮ ದಕ್ಷತೆ ಪ್ರಶ್ನಾರ್ಹವಾಗುತ್ತದೆ. 2024-25ನೇ ಸಾಲಿನಲ್ಲಿ 700 ಬಾಲ್ಯ ವಿವಾಹ ಘಟನೆಗಳು ನಡೆದಿರುವುದು ನಿಮ್ಮ ವೈಫಲ್ಯವನ್ನು ತೋರಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲೇ ಮಾಡಿಲ್ಲ. ಈ ಕಾಲದಲ್ಲೂ, ಬಾಲ್ಯ ವಿವಾಹದ ವಿರುದ್ಧ ಕಾನೂನು ಇದ್ದರೂ, ಇಷ್ಟು ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಡಿಸಿ, ಎಸ್ಪಿ, ಸಿಇಒಗಳು ತಮ್ಮ ಕರ್ತವ್ಯ ಪಾಲನೆಯಲ್ಲಿ ವಿಫಲರಾಗಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಎಷ್ಟು ಮಂದಿಯ ಮೇಲೆ ಕ್ರಮ ಕೈಗೊಂಡಿದ್ದೀರಿ, ಅಂತಹ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾಡಿದ್ದೀರಾ? ಎಂದು ಆತ್ಮಾವಲೋಕನ ಮಾಡಿ. ಬಾಲ್ಯ ವಿವಾಹ ತಡೆಗಟ್ಟುವುದರೊಂದಿಗೆ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ:
ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಪ್ರವಾಸ ಕಾರ್ಯಕ್ರಮ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ತಪಾಸಣಾ ವರದಿಗಳನ್ನು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಶಾಲೆಗಳು, ಹಾಸ್ಟೆಲ್ ಗಳು, ವಸತಿ ಶಾಲೆಗಳು, ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ನಿರಂತರವಾಗಿ ಭೇಟಿ ನೀಡಬೇಕು. ಮುನ್ಸೂಚನೆ ಇಲ್ಲದೇ ಇಂತಹ ಭೇಟಿಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು. ನಿಮ್ಮ ಅಧೀನದಲ್ಲಿರುವ ಇಲಾಖೆಗಳು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವುದು ನಿಮ್ಮ ಜವಾಬ್ದಾರಿ. ನೀವು ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಅಧೀನ ಅಧಿಕಾರಿಗಳು ಕಾರ್ಯನಿರ್ವಹಿಸುವುದನ್ನು ಹೇಗೆ ನಿರೀಕ್ಷಿಸಬಹುದು? ಎಂದು ಹೇಳಿದರು.
ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ, ಸಾರಿಗೆ ಸಂಚಾರದಂತಹ ಮೂಲಭೂತ ಸೌಕರ್ಯಗಳು ಲಭಿಸದಿದ್ದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗಿದೆ. ಹಾಡಿಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಲಭ್ಯ ಒದಗಿಸಲು ಇಂದಿಗೂ ಸರಿಯಾಗಿ ಯಾಕೆ ಸಾಧ್ಯವಾಗಿಲ್ಲ; ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸರಿಯಾಗಿ ಹಕ್ಕು ಒದಗಿಸಲು ಯಾಕೆ ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು, ಸಿಇಒಗಳು ಇಂತಹ ಹಾಡಿಗಳಿಗೆ ನಿರಂತರ ಭೇಟಿ ನೀಡಬೇಕು ಎಂದು ಸೂಚಿಸಿದರು.
ಕೆಲವು ಜಿಲ್ಲಾಧಿಕಾರಿಗಳು, ಸಿಇಒಗಳು ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಭೇಟಿಯ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ಶೋಷಿತರು, ಬಡವರು, ಜನಸಾಮಾನ್ಯರು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಬರುತ್ತಾರೆ. ಅಂತವರ ಸಂಕಷ್ಟಗಳನ್ನು ನೀವೇ ಆಲಿಸದಿದ್ದರೆ ಅದನ್ನು ಬಗೆಹರಿಸುವವರು ಯಾರು? ಯಾರ ಬಳಿ ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು? ಎಂದು ಪ್ರಶ್ನಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ವಾಸವಿರಬೇಕು:
ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ವಾಸವಿರಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಜನರಿಗೆ ಲಭ್ಯವಿರಬೇಕು. ಇದನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು. ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನನಗೆ ವರದಿ ನೀಡಬೇಕು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಟ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕು. ಅದರೊಂದಿಗೆ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು.
ಸಾವಯವ ಕೃಷಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ:
ರಾಜ್ಯದಲ್ಲಿ ರಸಗೊಬ್ಬರ ಬಳಕೆ ಹೆಚ್ಚಳದಿಂದ ಮಣ್ಣಿನ ಸವಕಳಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಸಾವಯವ ಕೃಷಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಡಿಐಪಿಯಂತಹ ರಸಗೊಬ್ಬರಗಳಿಗೆ ಪರ್ಯಾಯ ಗೊಬ್ಬರಗಳ ಬಳಕೆ ಬಗ್ಗೆ ರೈತರಿಗೆ ಮನವರಿಕೆ ಮಾಡಬೇಕು.
ರೈತರ ಆತ್ಮಹತ್ಯೆ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿದೆ. 983 ರೈತರ ಆತ್ಮಹತ್ಯೆ ಪ್ರಕರಣಗಳು ಕಳೆದ ಸಾಲಿನಲ್ಲಿ ದಾಖಲಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕೆರೆಗಳ ಒತ್ತುವರಿ ತೆರವುಗೊಳಿಸಿ:
ರಾಜ್ಯದಲ್ಲಿ 10931 ಕೆರೆಗಳು ಒತ್ತುವರಿಯಾಗಿವೆ. ಇದುವರೆಗೆ 6065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಈ ವರ್ಷ 1395 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಪೆÇೀಕ್ಸೋ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗುವಂತೆ ನೋಡಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಸಿಂಧುತ್ವ ಪ್ರಮಾಣ ಪತ್ರವನ್ನು ನಿಗದಿತವಾಗಿ ಒಂದು ತಿಂಗಳ ಒಳಗಾಗಿ ನೀಡಬೇಕಿದ್ದರೂ, ಅದನ್ನು ಕೆಲವು ಜಿಲ್ಲೆಗಳಲ್ಲಿ ತಿಂಗಳುಗಟ್ಟಲೆ ವಿಲೇವಾರಿ ಮಾಡದೆ ಸತಾಯಿಸುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ವಿಳಂಬ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಸಿಂಧುತ್ವ ಪ್ರಮಾಣ ಪತ್ರಗಳನ್ನು ನಿಗದಿತ ಸಮಯದಲ್ಲಿ ನೀಡಲು ಕ್ರಮ ವಹಿಸುವಂತೆ ತಿಳಿಸಿದರು.
ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಫಲಿತಾಂಶ ಕಳಪೆ: ಆತ್ಮಾವಲೋಕ ಮಾಡಿಕೊಳ್ಳಿ:
ಸರ್ಕಾರಿ ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡದರೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಫಲಿತಾಂಶ ಕಳಪೆಯಾಗಿರಲು ಕಾರಣವೇನು? ಈ ಬಗ್ಗೆ ಆತ್ಮಾವಲೋಕನ ನಡೆಸಬೇಕು. ತಮ್ಮ ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಿಸುವುದು ಆಯಾ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜವಾಬ್ದಾರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದರೂ, ಫಲಿತಾಂಶದಲ್ಲಿ ಯಾವಾಗಲೂ ಹಿಂದಿರಲು ಕಾರಣವೇನು? ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ, ಸಿಇಒಗಳು ನಿರಂತರ ಗಮನ ಹರಿಸಬೇಕು ಎಂದು ತಿಳಿಸಿದರು.
6 ತಿಂಗಳ ಒಳಗಾಗಿ ಕಂದಾಯ ಗ್ರಾಮಗಳನ್ನು ಘೋಷಿಸುವ ಕಾರ್ಯ ಪೂರ್ಣಗೊಳಿಸಲು ಸೂಚನೆ:
ರಾಜ್ಯದಲ್ಲಿ ಕಂದಾಯ ಗ್ರಾಮಗಳ ಘೋಷಣೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ ಇನ್ನೂ ಬಾಕಿಯುಳಿದಿರುವ ಕಂದಾಯ ಗ್ರಾಮಗಳನ್ನು ಘೋಷಿಸುವ ಕಾರ್ಯ ಮುಂದಿನ 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಬಗರ್ ಹುಕುಂ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸಬೇಕು. ಇದು ಯಾಕೆ ಕಡಿಮೆಯಾಗುತ್ತಿದೆ? ಪೆÇೀಡಿಮುಕ್ತ ಅಭಿಯಾನ ನಿರಂತರವಾಗಿ ಮುಂದುವರೆಸಬೇಕು. ಶೇ.63 ಪೆÇೀಡಿಮುಕ್ತ ಆಗಿದ್ದು, ಇದರಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ರುದ್ರಭೂಮಿ, ಕಬರಸ್ಥಾನಗಳಿಗೆ ಜಮೀನು ಒದಗಿಸುವಲ್ಲಿ ವಿಳಂಬ ಕೂಡದು:
ಶಾಲೆ, ಆಸ್ಪತ್ರೆ, ಅಂಗನವಾಡಿ, ಸ್ಮಶಾನ, ಕಬರಸ್ತಾನಗಳಿಗೆ ನಿವೇಶನ ಒದಗಿಸುವುದನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರುದ್ರಭೂಮಿ, ಕಬರಸ್ಥಾನಗಳಿಗೆ ಜಮೀನು ಒದಗಿಸುವುದನ್ನು ವಿಳಂಬ ಮಾಡಬಾರದು. ನಿವೇಶನಗಳು ಅಗತ್ಯವಿರುವ ಇಲಾಖೆಗಳಿಗೆ ನಿವೇಶನಗಳನ್ನು ಆದ್ಯತೆ ಮೇರೆಗೆ ಒದಗಿಸಬೇಕು. 1858 ಗ್ರಾಮೀಣ ಅಂಗನವಾಡಿಗಳಿಗೆ 5187 ನಗರ ಅಂಗನವಾಡಿಗಳಿಗೆ ನಿವೇಶನ ಅಗತ್ಯವಿದೆ. 14 ಸರ್ಕಾರಿ ಕಾಲೇಜು ನಿವೇಶನ ಹಂಚಿಕೆಯಾಗಿಲ್ಲ.
ಅರಣ್ಯ ಹಕ್ಕುಗಳಿಗಾಗಿ 295176 ಅರ್ಜಿಗಳು ಸಲ್ಲಿಕೆಯಾಗಿದ್ದು, 16700 ಮಾತ್ರ ಅರಣ್ಯ ಹಕ್ಕು ಪತ್ರ ಒದಗಿಸಲಾಗಿದೆ. ಇದನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್, ಎಸಿ ಕೋರ್ಟ್ ಗಳಲ್ಲಿ ಪ್ರಕರಣಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಮೆರಿಟ್ ಮೇಲೆ ತೀರ್ಮಾನ ಮಾಡಬೇಕು. ಪ್ರಕರಣಗಳನ್ನು ಮುಂದಕ್ಕೆ ಹಾಕುವ ಪ್ರವೃತ್ತಿ ಇರಬಾರದು.
ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ. 74 ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಕಾರ್ಯ ನಡೆಯಬೇಕಿದೆ.
ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಿ:
ಇಂದಿರಾ ಕ್ಯಾಂಟೀನ್‍ಗಳಿಗೆ ಇನ್ನೂ 5 ಕಡೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು. ಹೊಸದಾಗಿ ಘೋಷಣೆ ಮಾಡಲಾಗಿರುವ 186 ಇಂದಿರಾ ಕ್ಯಾಂಟೀನ್‍ಗಳ ಪೈಕಿ ಕೇವಲ 103 ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್‍ಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು.
ಸಭೆಯಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಚೆಲುವರಾಯಸ್ವಾಮಿ, ಶಿವನಂದ ಪಾಟೀಲ್, ತಿಮ್ಮಪುರ್, ವೆಂಕಟೇಶ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಭೋಸರಾಜ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu