ಕನ್ನಡ ನಾಡು | Kannada Naadu

ಪ್ರೀತಿಯ ಮಹಾ ಕಡಲು ಸ್ತಬ್ದವಾಗಿದೆ. ಎಲ್ಲೆಲ್ಲಿಯೂ ಖಾಲಿತನದ ಅನುಭವ ಕಾಡುತ್ತಿದೆ. 

30 May, 2025

 


ಎಚ್.ಎಸ್.ವಿ ನನ್ನ ಬಾಲ್ಯದ ಹೀರೋ. ಅವರ ಕಾವ್ಯವನ್ನು ಓದುತ್ತಲೇ ಬೆಳೆದವರು ನಾವು, ಅವರ ನಿಕಟ ಒಡನಾಟ..ಅದೂ ಸರಿ ಸುಮಾರು ನಲವತ್ತು ವರ್ಷಗಳ ಕಾಲ ಸಿಕ್ಕಿದ್ದು ಅದೃಷ್ಟ. ಅವರು ಪಂಪ, ಕುಮಾರ ವ್ಯಾಸರನ್ನು ಓದಲು ಕಲಿಸಿ ಕೊಟ್ಟರು, ಕಾವ್ಯದ ಒಳ ಸುಳಿಗಳನ್ನು ತೋರಿಸಿ  ಕೊಟ್ಟರು, ಭಗವದ್ಗೀತೆಯನ್ನು ‘ಆಪ್ತಗೀತೆ’ಯನ್ನಾಗಿಸುವ ಯೋಜನೆಯಲ್ಲಿ ಅವರ ಜೊತೆ ಕೆಲಸ ಮಾಡಿದ್ದು ಸುಯೋಗ.. ಅದರ ಮುನ್ನಡಿಯಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದು ಕಂಡಾಗ ಧನ್ಯತೆ, ಬಹಳ ಇಷ್ಟಪಟ್ಟಿದ್ದ ಅವರ ‘ವೇದಾವತಿ ನದಿಯಲ್ಲ’ ಕಾದಂಬರಿಗೆ ಬಹು ಕಿರಿಯನಾದ ನನ್ನಿಂದ ಮುನ್ನುಡಿ ಬರೆಸಿದ್ದು ಅವರು  ನನ್ನ ಮೇಲೆ ಇಟ್ಟಿದ್ದ ಪ್ರೀತಿಗೆ ದ್ಯೋತಕ. ‘ನನ್ನ ಚಿತ್ರಗೀತೆಗಳ ಮೇಲೆ ನೀನೊಂದು ಪುಸ್ತಕ ಬರೆಯ ಬೇಕು’ ಎಂದು ಸದಾ ಹೇಳುತ್ತಿದ್ದರು. ಈ ಪುಸ್ತಕ ‘ಹಾಡು ಮುಗಿಯುವುದಿಲ್ಲ’ ತುರಾತರಿಯಲ್ಲಿ ರೂಪುಗೊಂಡು ಅವರು ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಅದನ್ನು ಬರೆಯುವಾಗ ನನಗೆ ಅವರ ಜೊತೆ ಸಿಕ್ಕ ಒಡನಾಟದ್ದೇ ವಿಶೇಷ ಕತೆ.. 


.  ‘ನನ್ನ ಎಲ್ಲಾ ಅನುಭವಗಳನ್ನು ಸೂಕ್ಷ್ಮಗಳನ್ನು ಕವಿತೆಯ ಮೂಲಕವೇ ಹೇಳಿಕೊಂಡು ಬಂದೆ. ಹಾಗಾಗಿ ಇದನ್ನು ನಿಲ್ಲಿಸಿದರೆ ನನ್ನ ಮಾತೂ ನಿಂತು ಹೋದಂತೆ. ಇದು ಆದರ್ಶ ಇರಬಹುದು. ನನ್ನ ಮಟ್ಟಿಗೆ ಇದು ಅನಿವಾರ್ಯ ಕ್ರಿಯೆ’ ಎಂದು ಅವರು ಹೇಳಿಕೊಂಡಿರುವುದು ಇಲ್ಲಿ ಗಮನಾರ್ಹ ಎಚ್.ಎಸ್.ವಿಯವರ ಬದುಕಿನ ಯಾನದತ್ತ  ಒಮ್ಮೆ ಕಣ್ಣು ಹಾಯಿಸಿದರೆ ಪ್ರತಿ ಹಂತವೂ ಹೋರಾಟವೇ, ಹುಟ್ಟುವ ಮುನ್ನವೇ ತಂದೆಯನ್ನು ಕಳೆದು ಕೊಂಡ ನತದೃಷ್ಟ, ತಾಯಿಯ ಛಲದ ಬದುಕಿನ ನೆರಳಲ್ಲಿ ಸಾಗಿದ ಬಾಲ್ಯ, ತುಂಬು ಸಂಸಾರದ ಚೊಕ್ಕಾಣಿ ಹಿಡಿಯಲು ಕಿರಿಯ ವಯಸ್ಸಿನಲ್ಲಿಯೇ ಉದ್ಯೋಗ ಹಿಡಿಯುವ  ಅನಿವಾರ್ಯತೆ, ಛಲ ಬಿಡದೆ ಸ್ನಾತಕೊತ್ತರ ಪದವಿ ಓದಿದ ಕಾರಣ ಬೆಂಗಳೂರು ತಲುಪಿದ ಬದುಕು, ಇಲ್ಲಿ ಸ್ವಯಂ ಪರಿಶ್ರಮದಿಂದ  ಎತ್ತರಕ್ಕೆ ಏರಿ ಇನ್ನೇನು ಬದುಕು ಸಹನೀಯ ಎನ್ನುವಾಗ ಮಡದಿಯ ಅಗಲುವಿಕೆ ಉತ್ತರಾಯಣದಲ್ಲಿ ಸಂಸಾರದ ನೆಲೆ ಅರಸುವಾಗ  ಮಗನ ಅನಾರೋಗ್ಯ ಹೀಗೆ  ಶೋಕದ ನೆಲೆಗಳು ಅವರನ್ನು ಬೆನ್ನಟ್ಟಿವೆ, ಆದರೆ ಶೋಕ ಅವರನ್ನು ಮಾಗಿಸುತ್ತದೆ. ಅವರ ಕಾವ್ಯಕ್ಕೆ ಶೋಕ  ಅನಿವಾರ್ಯ ಎನ್ನುವ ಅರಿವಿದೆ. ಅದನ್ನು ಸಹನೀಯವಾಗಿಸಿ ಬದುಕಿನ ‘ಸ್ಥಿತಿ’ಯನ್ನಾಗಿಸುವುದು ಎಚ್.ಎಸ್.ವಿ ಕಾವ್ಯದ ಹೆಚ್ಚುಗಾರಿಕೆ. ನೋವನ್ನೋ ನಲಿವನ್ನೋ  ಕಾಡುವ ಭಾಗವಾಗಿ ಉಳಿಸದೆ ಅರಿವಿನ ಸಾಧನವನ್ನಾಗಿಸುವ ಮೂಲಕ ಎಚ್.ಎಸ್.ವಿ ಎಂದೆಂದಿಗೂ ಕನ್ನಡದ ಮಹತ್ವದ ಕವಿಯಾಗಿ ಉಳಿಯುತ್ತಾರೆ.

ಅವರಿಲ್ಲದ ಈ ಹೊತ್ತು.. ಹಲವು ನೆನಪುಗಳು ಕಾಡುತ್ತಿವೆ. ಅವರ ‘ಅಮಾನುಷರು’ ಕಾದಂಬರಿಯನ್ನು ಕಳೆದ ವರ್ಷ ಸಿನಿಮಾ ಆಗಿಸಲು ಹೊರಟಿದ್ದು, ನಿರ್ಮಾಪಕರ ಬಿಗು ಧೋರಣೆಯಿಂದ ಅದಕ್ಕೆ ತಡೆ ಬಂದಿದ್ದು ಕಿರಿಕಿರಿಯಾಗಿ ಕಾಡುತ್ತದೆ. 

ಅವರ ಮನೆಯಲ್ಲಿ ಕಳೆದ ಗಂಟೆಗಳು, ಆತ್ಮೀಯ ಕ್ಷಣಗಳು ಅದೆಷ್ಟೋ.. ಚರ್ಚೆ, ವಾದಗಳ ಆಚೆಗೂ ಅದು ತುಂಬು ಕಡಲು, ಅವರ ಇಡೀ ಕುಟುಂಬ ನನ್ನ ಕುರಿತು ಇಷ್ಟು ಕೊಂಡಿರುವ ವಿಶ್ವಾಸ ಅಳತೆಗೆ ಮೀರಿದ್ದು.. ಪ್ರತಿ ಭೇಟಿಯಲ್ಲಿ ಏನಿಲ್ಲವೆಂದರೂ ಐದು ನಿಮಿಷ ನನ್ನ ಕೈಯನ್ನು ಅವರು ಬಿಗಿಯಾಗಿ ಹಿಡಿದು ಕೊಂಡು ತಮ್ಮ ಆಪ್ತತೆಯನ್ನು ತೋರುತ್ತಿದ್ದರು. ಆ ಮಧುರ ಸ್ಪರ್ಶವನ್ನು ಅವರು ನನ್ನ ಪಾಲಿಗೆ ಬಿಟ್ಟು ಹೋಗಿದ್ದಾರೆ… ಅದು ನನ್ನ ಅಮೂಲ್ಯ ಆಸ್ತಿ!!

-ಎನ್.ಎಸ್.ಶ್ರೀಧರ ಮೂರ್ತಿ

Publisher: ಕನ್ನಡ ನಾಡು | Kannada Naadu

Login to Give your comment
Powered by