ಬೆಂಗಳೂರು: ಕನ್ನಡ ಭಾವಗೀತೆಗಳ ಭವ್ಯ ಪರಂಪರೆಯ ಪ್ರತಿನಿಧಿ ಚಚಚಚ ಅವರ ನಿಧನ ಕನ್ನಡ ಕಾವ್ಯ ಲೋಕಕ್ಕೆಅತಿ ದೊಡ್ಡ ಆಘಾತ ತಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇಂದು ಮುಂಜಾನೆ ಡಾ. ಎಚ್ಎಸ್ ವಿ ಅವರ ನಿಧನದ ಸುದ್ದಿ ಬಂದ ಕೂಡಲೇ ದಿಗ್ಭ್ರಮೆ ಆಯಿತು. ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಗೆ ಹೊಸ ಭಾಷ್ಯ ಬರೆದ ಕವಿ ಎಚ್ಎಸ್ ವಿ ಅವರು. ಸದಾ ನಮ್ಮ ಕಿವಿಗಳಲ್ಲಿ ಅನುರಣಿಸುವ ಅವರ ಗೀತೆಗಳು ಸೊಗಸು ಅನನ್ಯವಾದದ್ದು, ಅದು ತೂಗು ಮಂಚದಲ್ಲಿ, ಅಮ್ಮ ನಾನು ದೇವರಾಣೆ, ಲೋಕದ ಕಣ್ಣಿಗೆ ರಾಧೆಯು ಕೂಡ, ಹುಚ್ಚು ಕೋಡಿ ಮನಸು, ಇಂತಹ ಯಾವುದೇ ಗೀತೆಗಳು ನಮ್ಮನ್ನು ಬೇರೊಂದು ಲೋಕದ ಭಾವಲಹರಿಗೆ ಕೊಂಡೊಯ್ಯುತ್ತವೆ.
ಇಂತಹ ಗೀತೆಗಳನ್ನು ಕೊಟ್ಟ ಕವಿ ನಮ್ಮನ್ನು ಇಂದು ಅಗಲಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಡಾ. ಎಚ್ ಎಸ್ ವಿ ಬರೀ ಕವಿಯಾಗಿಯಲ್ಲ, ನಾಟಕಕಾರರಾಗಿ, ಅಂಕಣಕಾರರಾಗಿ, ಅನುವಾದ ,ಶಿಶು ಸಾಹಿತ್ಯ, ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ಬುದ್ಧ ಚರಣ ಮಹಾ ಕಾವ್ಯದ ಮೂಲಕ ಅವರು ಸಾಹಿತ್ಯದ ಮತ್ತೊಂದು ಮಜಲನ್ನು ಸ್ಪರ್ಶಿಸಿದ್ದಾರೆ.
ಕನ್ನಡ ಸಾಹಿತ್ಯ ಅದರಲ್ಲಿಯೂ ವಿಶೇಷವಾಗಿ ಭಾವಗೀತೆಗಳ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅದ್ಭುತವಾದದ್ದು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ನೂರಾರು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದ
ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಮಹತ್ವದ ಚೇತನವೊಂದನ್ನು ಕಳೆದುಕೊಂಡಿದೆ .
ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಸರಳ ಸಜ್ಜನಿಕೆಯ ಡಾ.ಹೆಚ್.ಎಸ್.ವಿ- ಪುರುಷೋತ್ತಮ ಬಿಳಿಮಲೆ ನುಡಿ ನಮನ
ಕನ್ನಡಿಗರ ಜೀವನೋತ್ಸಾಹವನ್ನು ಹೆಚ್ಚಿಸಿದ ಕವಿ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಗೌರವಪೂರ್ವಕ ನಮನಗಳು
ಎಚ್.ಎಸ್.ವೆಂಕಟೇಶಮೂರ್ತಿ (ಜೂನ್ ೨೩,೧೯೪೪ – ಮೇ ೩೦, ೨೦೨೫) ಅಂದರೆ ಕನ್ನಡಿಗರಿಗೆ ಬಹಳ ಪ್ರೀತಿ. ಅವರ ಕವಿತೆಗಳೆಲ್ಲ ಹಾಡುಗಳಾಗಿ ಕನ್ನಡಿಗರ ಮನೆ ಮನೆ ತಲುಪಿದ್ದು ನಮಗೆ ಗೊತ್ತೇ ಇದೆ. ಯಾವುದೇ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ವೆಂಕಟೇಶಮೂರ್ತಿಯವರ ಕವಿತೆಗಳನ್ನು ಹಾಡದಿದ್ದರೆ ಕಲಾವಿದರಿಗೂ ಸಮಾಧಾನ ಇಲ್ಲ. ಪೌರಾಣಿಕ ಪ್ರತಿಮೆಗಳನ್ನು ಆಧುನಿಕತೆಗೆ ಒಗ್ಗಿಸಿ ಬರೆಯುವ ಅವರ ಶೈಲಿ ಮೋಹಕವಾದುದು. ಈ ವಿಷಯದಲ್ಲಿ ʼ ನಾನು ನಿಸಾರ್ ಅಹಮದ್ ಅವರಿಂದ ಪ್ರೇರಣೆ ಪಡೆದೆʼ ಎಂದು ಅವರು ಹೇಳುತ್ತಿದ್ದರು.
ವೆಂಟೇಶಮೂರ್ತಿಯವರ ಬರೆಹದ ವಿಸ್ತಾರ ದೊಡ್ಡದು. ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಹಳಗನ್ನಡ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ʼಕನ್ನಡದಲ್ಲಿ ಕಥನ ಕವನಗಳುʼ ಅವರಿಗೆ ಡಾಕ್ಟರೇಟ್ ಪದವಿ ತಂದುಕೊಟ್ಟ ಮಹಾಪ್ರಬಂಧ. ಅವರು ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ ಅನೇಕರಿಗೆ ಕನ್ನಡದಲ್ಲಿ ಬರೆಯಲು ಪ್ರೇರಣೆ ನೀಡಿದರು.
ಪರಿವೃತ್ತ, ಬಾಗಿಲು ಬಡಿವ ಜನಗಳು, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಸೌಗಂಧಿಕ, ಇಂದುಮುಖಿ, ಎಲೆಗಳು ನೂರಾರು, ಭೂಮಿಯೂ ಒಂದು ಆಕಾಶ, ಮೊದಲಾದುವು ಅವರ ಪ್ರಮುಖ ಕವನ ಸಂಕಲನಗಳು. ಬಾಣಸವಾಡಿಯ ಬೆಂಕಿ, ಮತ್ತು ಪುಟ್ಟಾರಿಯ ಮತಾಂತರ ಕತ ಸಂಕಲನಗಳು. ತಾಪಿ, ಅಮಾನುಷರು, ಕದಿರನ ಕೋಟೆ ಮತ್ತು ಅಗ್ನಿಮುಖಿ ಅವರ ಜನಪ್ರಿಯ ಕಾದಂಬರಿಗಳು. ನೂರು ಮರ, ನೂರು ಸ್ವರ, ಮೇಘದೂತ, ಮತ್ತು ಆಕಾಶದ ಹಕ್ಕು ವಿಮರ್ಶಾ ಸಂಕಲನಗಳು. ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಗ್ನಿವರ್ಣ ಅವರ ಪ್ರಸಿದ್ಧ ನಾಟಕಗಳು. ಕಾಳಿದಾಸನ ಋತುಸಂಹಾರವನ್ನು ಋತುವಿಲಾಸ ಹೆಸರಲ್ಲಿ ಸೊಗಸಾಗಿ ಅನುವಾದಿಸಿದ್ದಾರೆ. ಹಕ್ಕಿಸಾಲು ಮತ್ತು ಹೂವಿನ ಶಾಲೆ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಮಕ್ಕಳ ಕವಿತೆಗಳ ಸಂಕಲನ. ಇಲ್ಲಿಯ ಕವಿತೆಗಳು ಕ್ಯಾಸೆಟ್ಟಲ್ಲಿ ಬಂದಾಗ ಮಾರಾಟದಲ್ಲಿ ಇತಿಹಾಸವನ್ನೇ ನಿರ್ಮಿಸಿತ್ತು.
ಮೂರ್ತಿಯವರು ಒಳ್ಳೆಯ ಭಾಷಣಕಾರರಾಗಿದ್ದರು. ಸ್ನೇಹಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು. ಅವರಿಗೆ ಅಂತಿಮ ನಮನಗಳು.
Publisher: ಕನ್ನಡ ನಾಡು | Kannada Naadu