ಕನ್ನಡ ನಾಡು | Kannada Naadu

ಗಾಂಧೀ ಭವನದಲ್ಲಿ ಕೆಯುಡಬ್ಲೂೃಜೆ ಅರ್ಥಪೂರ್ಣ ಕಾರ್ಯಕ್ರಮ ಹೊರಟಾಗ ನಿರೀಕ್ಷೆ ಇರಲಿಲ್ಲ, ಅಲ್ಲಿದ್ದಾಗ ಪ್ರಶಸ್ತಿ ಪಡೆಯಬೇಕೆನಿಸಿತು ಲಂಡನ್‌ನಲ್ಲೂ ಪುಸ್ತಕಗಳಿಗೆ ಕನ್ನಡದಲ್ಲೇ ಸಹಿ ಮಾಡಿದೆ: ಬಾನುಮುಷ್ತಾಕ್

30 May, 2025

 

ಬೆಂಗಳೂರು: ನಾನು ಇಲ್ಲಿಂದ ಹೊರಟಾಗ ಆ ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಆದರೆ, ಲಂಡನ್‌ನಲ್ಲಿ ದಿನ ಕಳೆದಂತೆ ಕನ್ನಡತಿಯಾಗಿ ಬೂಕರ್ ಪ್ರಶಸ್ತಿ ಪಡೆಯಲೇಬೇಕು ಎನ್ನುವ ಹಂಬಲ ಹುಟ್ಟಿಕೊಂಡಿತ್ತು. ಕನ್ನಡ ಮನಸ್ಸುಗಳ ಹಾರೈಕೆಯಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಪ್ರಕಾಶನ ಮತ್ತು ಪತ್ರಕರ್ತೆಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾರತಕ್ಕೆ ಕಾಲಿಡುತ್ತಲೇ ನಡೆದ ಮೊದಲ ಕಾರ್ಯಕ್ರಮದಲ್ಲಿ ಅವರ ಮಾತಾಗಿದೆ. ಕಳೆದ ೆಬ್ರವರಿಯಲ್ಲಿ ಬೂಕರ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಆರಂಭವಾಗಿ ಪ್ರಶಸ್ತಿ ದೊರೆತ ಕ್ಷಣದವರೆಗಿ ರೋಚಕ, ರೋಮಾಂಚಕ ಕ್ಷಣಗಳನ್ನು ತೆರೆದಿಟ್ಟರು.
ಇಲ್ಲಿಯವರೆಗೂ ನಾವು ಪಾಶ್ಚಾತ್ಯ ಕತೆ, ಕಾದಂಬರಿಗಳನ್ನು ಓದಿದ್ದೇವೆ. ಅವರ ಜೀವನಕ್ರಮಗಳನ್ನು ಅಭ್ಯಾಸ ಮಾಡಿದ್ದೇವೆ. ಆದರೆ, ಈಗ ನಾವು ನಮ್ಮ ಕತೆ, ಕಾದಂಬರಿಗಳನ್ನು ಮತ್ತು ಜೀವನ ಕ್ರಮಗಳನ್ನು ಪಾಶ್ಚಾತ್ಯರಿಗೆ ತಿಳಿಸುವ, ನಮ್ಮ ಪಾತ್ರ, ಸಂದರ್ಭಗಳನ್ನು ಪರಿಚಯ ಮಾಡಿಸುವ ಅಗತ್ಯವಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಹ ಅವರು ಸಿದ್ಧರಿದ್ದಾರೆ. ನಮ್ಮಲ್ಲಿರುವ ಸತ್ವವನ್ನು ಅವರಿಗೆ ಪರಿಚಯ ಮಾಡಿಸಬೇಕಿದೆ ಎಂದರು.
ನನಗೆ ಪ್ರಶಸ್ತಿ ದೊರೆತ ಬಳಿಕ ಹಲವು ವೇದಿಕೆ ಚರ್ಚೆಗಳು, 10ಕ್ಕೂ ಹೆಚ್ಚು ಮಾಧ್ಯಮ ಸಂದರ್ಶನಗಳು, ಪುಸ್ತಕ ಮಳಿಗೆಳಲ್ಲಿ ಭಾಷಣಗಳು ಹೀಗೆ ಹಲವು ಕಾರ್ಯಕ್ರಮಗಳಲ್ಲಿ ನಾನು ಮತ್ತು ದೀಪಾ ಭಾಸ್ತಿ ಭಾಗವಹಿಸಿದ್ದೇವು. ಅಲ್ಲಿ ಕಲಿಸುವ ಮೂಲಭೂತ ಪಾಠವೇನೆಂದರೆ ಕತೆಗಳಲ್ಲಿ ಪಾತ್ರಗಳು ಜಡ್ಜ್‌ಗಳಾಗಬಾರದು. ಯಾರ ಪರವಾಗಿಯೂ ಬದ್ಧತೆಯಿಂದ ನಿಲ್ಲಬಾರದು ಎಂಬುದು ಅವರ ನಿಲುವಾಗಿದೆ. ಅದು ನಮಗೂ ಅವರಿಗೂ ತದ್ವಿರುದ್ಧವಾಗಿದೆ ಎನಿಸಿತು. ನಾವು ಬದ್ಧತೆಯಿಂದ ಒಂದು ಕಡೆ ನಿಲ್ಲುತ್ತೇವೆ. ಶೋಷಿತರು, ಇಲ್ಲದವರ ಪರವಾಗಿ ಶತಾಯಗತಾಯ ನಿಂತಿರುತ್ತೇವೆ. ಅವರು ನಿಲ್ಲಬಾರದೆಂದು ಹೇಳುತ್ತಾರೆ.
ಕನ್ನಡ ಲೇಖಕರಿಗೆ ಬದ್ಧತೆ ಎನ್ನುವುದು ಮೂಲಭುತ ಗುಣವಾಗಿದೆ. ಅದನ್ನು ಹೇಗೆ ಅಳವಡಿಸಿಕೊಂಡಿದ್ದೇನೆ ಮತ್ತು ಅದರ ಅಗತ್ಯತೆ ಏನು ಎಂಬುದನ್ನು ಅವರಿಗೆ ತಿಳಿಸಿದೆ. ಅದಾದ ನಂತರ ಅವರು ಹೇಳಿದರು. ಇಲ್ಲಿಯವರೆಗೂ ನಾವು ಬದ್ಧತೆ ಮತ್ತು ಜಡ್ಜ್‌ಮೆಂಟ್ ನೀಡುವವರಾಗಿರಬಾರದು ಎಂಬ ನಿಲುವಾಗಿತ್ತು. ಬೂಕರ್ ಪ್ರಶಸ್ತಿಯಿಂದ ಇದೊಂದು ಚರ್ಚಾಸ್ಪದ ವಿಷಯವಾಗಿದೆ. ಇದನ್ನು ಮುಕ್ತವಾಗಿ ಸ್ವೀಕರಲಿಸಲಿದ್ದೇವೆ ಎಂದು ತಿಳಿಸಿದರು.

ಬಂಡಾಯ ಸಾಹಿತ್ಯ ತುಂಬಿದೆ
ನನಗೆ ಏಕೆ ಕನ್ನಡ ಬಹಳ ಪ್ರಸ್ತುತ ಎನಿಸಲಿದೆ ಎಂದರೆ , ಕನ್ನಡ ಆಲೋಚನೆ, ಜೀನವ ಕ್ರಮ, ಕೊಡು-ಕೊಳ್ಳುವಿಕೆ, ವ್ಯಾವಹಾರಿಕ ಭಾಷೆಯಾಗಿ, ರಾಜಕಾರಣವಾಗಿ ಮುಖ್ಯ ಎನಿಸಿತು. ಪ್ರಶಸ್ತಿ ಪಡೆದ ಬಳಿಕ ನಡೆದ ವೇದಿಕೆ ಕಾರ್ಯಕ್ರಮಗಳಲ್ಲಿ ನಾನು ಅವರಿಗೆ ಪಾಠ ಮಾಡಲು ಶುರು ಮಾಡಿದೆ. ನಮ್ಮ ಸಾಮಾಜಿಕ ಚಳವಳಿ, ರೈತ ಚಳವಳಿ, ದಲಿತ, ಭಾಷಾ ಚಳವಳಿ, ಬಂಡಾಯ ಸಾಹಿತ್ಯದ ಬಗ್ಗೆ ತಿಳಿಸಿದೆ. ಇಂದು ಅವರ ಬಾಯಲ್ಲಿ ಬಂಡಾಯ ಸಾಹಿತ್ಯವೇ ತುಂಬಿದೆ.
ಕನ್ನಡ ಸಾಹಿತ್ಯ ಚರಿತ್ರೆ, ದಲಿತ ಸಾಹಿತ್ಯ, ಸೀವಾದಿ ಸಾಹಿತ್ಯ ಮತ್ತು ಮುಸ್ಲಿಂ ಸಂವೇದನೆಯ ಸಾಹಿತ್ಯಗಳಾಗಿ ಮೂರು ಕವಲು ಒಡೆದದ್ದನ್ನು ತಿಳಿಸಿದೆ. ಇದರ ಬಗ್ಗೆ ಪಾಠ ಮಾಡಿ ಬಂದೆ. ನನಗೆ ಹಿಡಿತ ಸಿಕ್ಕ ಮೇಲೆ ಅವರನ್ನು ಆವರಿಸಿಬಿಟ್ಟೆ.

35 ಭಾಷೆಗೆ ಅನುವಾದ
‘ಎದೆಯ ಹಣತೆ’ ಕೃತಿಯು ಭಾರತಿದ 12 ಭಾಷೆ ಸೇರಿ ಜಗತ್ತಿನ 35 ಭಾಷೆಗಳಿಗೆ ಅನುವಾದವಾಗಲಿದೆ. ಆಡಿಯೋ ಹಕ್ಕು ಮತ್ತು ಚಲನಚಿತ್ರದ ಹಕ್ಕುಗಳನ್ನು ಕೂಡ ಪಡೆದಿದ್ದಾರೆ ಎಂದು ತಿಳಿಸಿದರು.

ಪ್ರವಾಸ ನಿಗದಿ
ಬೂಕರ್ ಪ್ರಶಸ್ತಿ ಬಂದ ನಂತರ ದೇಶ ವಿದೇಶ ಸುತ್ತಾಟದ ಲಿಸ್ಟೇ ಇದೆ. ಜೂ.13ಕ್ಕೆ ಲಂಡನ್‌ಗೆ ಹೋಗುತ್ತಿದ್ದೇನೆ. ಆಗಸ್ಟ್‌ನಲ್ಲಿ ೆಸ್ಟಿವಲ್ ಇದೆ. ಸಿಲೋನ್, ಆಸ್ಟ್ರೇಲಿಯಾ, ಬಾಲಿ, ನ್ಯೂಯಾರ್ಕ್ ಸೇರಿ ಹಲವು ಕಡೆ ಈಗಾಗಲೇ ಕಾರ್ಯಕ್ರಮಗಳು ನಿಗದಿಯಾಗಿವೆ. 2026ರ ಆಗಸ್ಟ್‌ವರೆಗೂ ುಲ್ ಬ್ಯುಸಿ ಶೆಡ್ಯೂಲ್ಡ್ ಇದೆ. ನನ್ನ ಪುಸ್ತಕದ ಬಗ್ಗೆ ಮಾತನಾಡುವುದರಿಂದ ನನ್ನ ಕೆಲಸಕ್ಕೆ ಉತ್ತೇಜನ ಸಿಗಲಿದೆ.

ಅಲ್ಲಿನ ಪುಸ್ತಕ ಸಂಸ್ಕೃತಿ ವಿಶಿಷ್ಟ
ಲಂಡನ್ ಸಾಂಸ್ಕೃತಿಕ ನಗರವಾಗಿದೆ. ಮುಕ್ತವಾಗಿ ಹಲವು ಜನರು ವಾಸವಿದ್ದಾರೆ. ಅಲ್ಲಿನ ಪುಸ್ತಕ ಸಂಸ್ಕೃತಿ ವಿಶಿಷ್ಟವಾಗಿದೆ. ಒಂದೊಂದು ಪುಸ್ತಕ ಮಳಿಗೆಯೂ ತುಂಬಾ ವಿಶಾಲವಾಗಿರುತ್ತದೆ. 4ರಿಂದ 5 ಅಂತಸ್ತುಗಳಿರುತ್ತವೆ. ಕಾಫಿ ಬೂತ್‌ಗಳಿರುತ್ತವೆ. ಅಲ್ಲಿ ಪುಸ್ತಕ ಓದಿ ಬರಬಹುದು. ಓದುಗರು ಪುಸ್ತಕ ಖರೀದಿಸಿ ಸಹಿ ಮಾಡಿಸಿಕೊಂಡೇ ಹೋಗುತ್ತಾರೆ. ಸಹಿ ಮಾಡದೆ ಪುಸ್ತಕವನ್ನು ಖರೀದಿಸುವುದಿಲ್ಲ.

ಕಾರ್ಯಕ್ರಮದ ಬಗ್ಗೆ ಮೊದಲೇ ಪ್ರಚಾರ ಮಾಡಿರುತ್ತಾರೆ. ಪುಸ್ತಕ ಮಳಿಗೆಗಳಲ್ಲಿ ವಿಶಾಲವಾದ ಸಭಾಂಗಣಗಳಿರುತ್ತವೆ. ಅಲ್ಲಿ ನೂರಾರು ಜನರು ಟಿಕೆಟ್ ಪಡೆದು ಲೇಖಕರ ಮಾತುಗಳನ್ನು ಕೇಳಲು ಬಂದಿದ್ದರು. ಅನೇಕರಿಗೆ ಟಿಕೆಟ್ ಕೂಡ ಸಿಗುವುದಿಲ್ಲ.
ಕಾರ್ಯಕ್ರಮದ ನಂತರ ಜನರು ದಿಢೀರ್ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಹಾರ್ಟ್ ಲ್ಯಾಂಪ್ ಪುಸ್ತಕ ಕೊಂಡು 200ರಿಂದ 300 ಜನ ಪುಸ್ತಕ ಖರೀದಿಸಿ ಆಟೋಗ್ರ್ಾ ಪಡೆದರು. ಇದು ನಿಜಕ್ಕೂ ಖುಷಿಯಾಯ್ತು.
ಬೂಕರ್ ಪ್ರಶಸ್ತಿ ಬಳಿಕ ನನ್ನ ಮತ್ತು ದೀಪಾ ಭಾಸ್ತಿ ಅವರನ್ನು ಹಲವು ಬುಕ್ ಸ್ಟೋರ್‌ಗಳಿಗೆ ಕರೆದುಕೊಂಡು ಹೋಗಿದ್ದರು. ಪುಸ್ತಕ ಖರೀದಿ ಮಾಡಿರುವವರೆಲ್ಲರಿಗೂ ಕನ್ನಡದಲ್ಲಿಯೇ ಸಹಿ ಮಾಡಿದ್ದೇನೆ ಎಂದು ಸಂತಸದ ಕ್ಷಣಗಳನ್ನು ಹಂಚಿಕೊಂಡರು.

ಇಂಡಿಯಾದಲ್ಲಿ ಗುದ್ದಾಟವಿದೆ, ಇಂಗ್ಲೆಂಡ್‌ಗೆ ಬಂದುಬಿಡಿ ಅಂದ್ರು,
ಹೀಗೆ ಮಾತುಕೆಯಲ್ಲಿರುವ ವೇಳೆ ಅಲ್ಲಿನ ಮಹಿಳೆಯೊಬ್ಬರು ವಿಶ್ವಾಸದಿಂದ ‘ನಿಮ್ಮ ದೇಶದಲ್ಲಿ (ಭಾರತ) ಮುಸ್ಲಿಮರಿಗೆ ತುಂಬಾ ಸಮಸ್ಯೆಯಿದೆ. ಒಂದು ವೇಳೆ ಇಲ್ಲಿಗೆ (ಇಂಗ್ಲೆಂಡ್) ಬಂದುಬಿಡಿ ಅಂದ್ರು. ಅದಕ್ಕೆ ನಾನು ಬೇಡ ನಾನು ಅಲ್ಲಿಯೇ ಗುದ್ದಾಡಿಕೊಂಡು ಬದುಕುತ್ತೇವೆ. ಅಲ್ಲಿಯೇ ಚೆನ್ನಾಗಿದ್ದೇವೆ. ಈ ವಿಚಾರವನ್ನೆಲ್ಲಾ ಯಾರು ಹೇಳಿದ್ರು ಎಂದು ವಿಶ್ವಾಸದಿಂದಲೇ ಹೇಳಿದೆ ಎಂದು ನಕ್ಕರು.

6 ಕೋಟಿ ರೂ. ವ್ಯವಹಾರ
ಅಂದಾಜು ಲೆಕ್ಕಚಾರದ ಪ್ರಕಾರ ಸುಮಾರು 6 ಕೋಟಿ ರೂ. ಮೊತ್ತದಷ್ಟು ಬೂಕರ್ ಪ್ರಶಸ್ತಿ ಪಡೆದ ‘ಹಾರ್ಟ್‌ಲ್ಯಾಂಪ್’ ಕೃತಿ ಮಾರಾಟವಾಗಿದೆ ಎಂದು ಅಲ್ಲಿನ ಪ್ರಕಾಶಕರು ಮಾಹಿತಿ ಹಂಚಿಕೊಂಡಿದ್ದಾರೆ ಎಂದರು.

ಬೂಕರ್ ಭಾಷಣಕ್ಕೆ ಮೆಚ್ಚುಗೆ
ಪ್ರಶಸ್ತಿ ಪಡೆದು ನಾನು ಮಾಡಿದ ಭಾಷಣ ಬೂಕರ್ ಪ್ರಶಸ್ತಿ ಜ್ಯೂರಿ ಅಧ್ಯಕ್ಷ ಮ್ಯಾಕ್ಸ್ ಪೋರ್ಟ್ ಅವರ ಭಾಷಣಕ್ಕೆ ಸಮನಾಗಿತ್ತು. ಭಾಷಣದ ಬಗ್ಗೆ ಅಲ್ಲಿ ಬಂದ ವಿದ್ವಾಂಸರು, ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.
ಈ ಅದ್ಬುತ ಅನುಭವ, ನನ್ನ ವೈಯಕ್ತಿಕವಾದದ್ದು. ಆದರೂ, ಅದು ಆಮುದಾಯಿಕ ಪರಿಣಾಮ ಬೀರಿದೆ ಎಂದು ಈಗ ಅರ್ಥವಾಗಿದೆ. ಜಾತಿ, ಧರ್ಮ, ಭಾಷೆ ಆಧಾರಿತವಾಗಿ ಯಾವುದೇ ದ್ವೇಷ, ಭೇದ ಕಾಣದೆ, ಕನ್ನಡಕ್ಕೆ ಈ ರೀತಿ ಅಪಾರ ಗೌರವ ಸಿಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವೇದಿಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಬಹುರೂಪಿ ಪ್ರಕಾಶನದ ಮುಖ್ಯಸ್ಥ ಜಿ.ಎನ್. ಮೋಹನ್, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ ಶಿವಮೊಗ್ಗ ಮತ್ತು ಗಾಂಧಿ ಭವನದ ಪರವಾಗಿ ದಿನೇಶ್ ಉಪಸ್ಥಿತರಿದ್ದರು.

*ಕನ್ನಡದ ಸಾಹಿತಿ ಬಾನುಮುಷ್ತಾಕ್ ಬೂಕರ್ ಪ್ರಶಸ್ತಿ ಪಡೆದು ತವರಿಗೆ ಮರಳುವ ಹೊತ್ತಿನಲ್ಲಿ ಅವರನ್ನು ಎಲ್ಲಾ ಸಾಹಿತಿ, ಚಿಂತಕರು, ಗಣ್ಯರ ಸಮ್ಮುಖದಲ್ಲಿ ಸ್ವಾಗತಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದೆವು. ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನಾಡಿಗೆ ಬಾನು ಅವರನ್ನು ಸ್ವಾಗತಿಸಿದ್ದು ಸಂತಸದ ಸಂಗತಿ.
-ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ

Publisher: ಕನ್ನಡ ನಾಡು | Kannada Naadu

Login to Give your comment
Powered by