ಕನ್ನಡ ನಾಡು | Kannada Naadu

ವಿಶ್ವೇಶ್ವರಯ್ಯ ಜಲ ನಿಗಮದ ವಿವಿಧ ಯೋಜನೆಗಳಿಂದ ರೈತರಿಗೆ, ಜಾನುವಾರುಗಳಿಗೆ ಅನುಕೂಲ

30 May, 2025

 

ಬೆಂಗಳೂರು, :

ವಿಶ್ವೇಶ್ವರಯ್ಯ ಜಲ ನಿಗಮದಡಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಾದ ಭದ್ರಾ ಮೇಲ್ದಂಡ ಯೋಜನೆ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ತರೀಕೆರೆ-ಚಿಕ್ಕಮಗಳೂರು-ಕಡೂರು ಕೆರೆ ತುಂಬಿಸುವ ಯೋಜನೆಗಳಿಂದ ರೈತರಿಗೆ ಜಾನುವಾರುಗಳಿಗೆ ಅನುಕೂಲವಾಗುತ್ತಿದೆ.
 
ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳ ಪ್ರವಾಹದಿಂದ ದೊರೆಯಬಹುದಾದ ನೀರಿನ ಪೈಕಿ 24.01 ಟಿ.ಎಂ.ಸಿ ನೀರನ್ನು ಇವುಗಳಿಗೆ ಅಡ್ಡಲಾಗಿ 8 ವಿಯರ್ ಗಳನ್ನು ನಿರ್ಮಿಸಿ ಮುಂಗಾರಿನ ಅವಧಿಯಲ್ಲಿ ಪೂರ್ವಾಭಿಮುಖವಾಗಿ ತಿರುಗಿಸಿ, ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ 527 ಕೆರೆಗಳನ್ನು ತುಂಬಿಸುವುದು ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು 7 ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 (Projected population for 2023-24) ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವುದಾಗಿದೆ. ಇದರ ಅಂದಾಜು ಮೊತ್ತ ರೂ.23,251.66 ಕೋಟಿಗಳು ಹಾಗೂ ಬಳಸಿಕೊಳ್ಳುವ ನೀರಿನ ಪ್ರಮಾಣ 24.01 ಟಿ.ಎಂ.ಸಿ ಯಾಗಿರುತ್ತದೆ.

ಯೋಜನಾ ಕಾಮಗಾರಿಗಳ ಪ್ರಸ್ತುತ ಹಂತ:

ಹಂತ-1 ರಲ್ಲಿ ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ (ವಿಯರ್-3ರ ವಿದ್ಯುತ್ ಕಾಮಗಾರಿಗಳನ್ನು ಹೊರತುಪಡಿಸಿ) ಉಪ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿದೆ. ಹಂತ-2ರಲ್ಲಿ ಗುರುತ್ವ ಕಾಲುವೆಯಲ್ಲಿ ಒಟ್ಟು ಕಾಲುವೆ ಉದ್ದ 252.61 ಕಿ.ಮೀ ಗಳಾಗಿದ್ದು, 174.78 ಕಿ.ಮೀ (10.47 ಕಿ.ಮೀ ಬೃಹತ್ ಮೇಲ್ಗಾಲುವೆ ಒಳಗೊಂಡಂತೆ) ಕಾಮಗಾರಿಗಳು ಪೂರ್ಣಗೊಂಡಿರುತ್ತದೆ. 51.35 ಕಿ.ಮೀ. ಪ್ರಗತಿಯಲ್ಲಿದೆ. ಮಧುಗಿರಿ-ಪಾವಗಡ ಫೀಡರ್, ಟಿ.ಜಿ.ಹಳ್ಳಿ-ರಾಮನಗರ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಪೈಪ್ ಲೈನ್ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ.

ಸಮತೋಲನಾ ಜಲಾಶಯ: 1.88 ಟಿ.ಎಂ.ಸಿ ಸಂಗ್ರಹಣಾ ಸಾಮಥ್ರ್ಯದ ಸಮತೋಲನಾ ಜಲಾಶಯ ನಿರ್ಮಾಣ ಕಾಮಗಾರಿಯನ್ನು ಬದಲಾದ ಕಾಮಗಾರಿಯ ಸ್ವರೂಪಕ್ಕನುಗುಣವಾಗಿ ಆರಂಭಿಸಲು ಭೂ-ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅಕ್ಟೋಬರ್ 31ರ ಅಂತ್ಯಕ್ಕೆ 240.0 ಕಿಮೀ ವರೆಗೆ (ತುಮಕೂರು ವರೆಗೆ) ನೀರನ್ನು ಹರಿಸಲು ಉದ್ದೇಶಿಸಲಾಗಿದೆ. ಸದರಿ ಯೋಜನೆಯನ್ನು 2026-27ನೇ ಸಾಲಿನಲ್ಲಿ 31 ಮಾರ್ಚ್ 2027ರ ವೇಳೆಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.

ನಾವೀನ್ಯ ತಂತ್ರಜ್ಞಾನ: ಎತ್ತಿನಹೊಳೆ ಯೋಜನೆಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿರುವ 8 ವಿಯರ್ಗಳ ಹತ್ತಿರ ನೀರಿನ ಹರಿವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ Real time discharge measurement ಎಂಬ ತಂತ್ರಜ್ಞಾನವನ್ನೊಳಗೊಂಡ Telemetry ವ್ಯವಸ್ಥೆಯನ್ನು 2018ರಲ್ಲಿ ಸ್ಥಾಪಿಸಲಾಗಿದೆ. 2024ನೇ ಸಾಲಿನ ಮುಂಗಾರಿನ ಹಂಗಾಮಿನಲ್ಲಿ ಜೂನ್ -1 ರಿಂದ ನವೆಂಬರ್-30 ರವರೆಗೆ 16.540ಟಿ.ಎಂ.ಸಿ ನೀರು ದಾಖಲಾಗಿರುತ್ತದೆ. ಸದರಿ ತಂತ್ರಜ್ಞಾನದಲ್ಲಿ ಉನ್ನತ ತಂತ್ರಜ್ಞಾನ ಹೊಂದಿದ ಉಪಕರಣಗಳನ್ನು (Sensors, radars, Acoustic Doppler Current Profiler etc.,) ಬಳಸಿ ನೀರಿನ ಹರಿವನ್ನು ಲೆಕ್ಕ ಹಾಕಬಹುದಾಗಿದ್ದು ಹಿಂದಿನ ಮಾಪನ ವ್ಯವಸ್ಥೆಗಿಂತ ಪರಿಣಾಮಕಾರಿ ಮತ್ತು ನಿಖರವಾಗಿರುತ್ತದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ಮಧ್ಯ ಕರ್ನಾಟಕದ ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿನ 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ 367 ಕೆರೆಗಳಿಗೆ ಅವುಗಳ ಸಾಮಥ್ರ್ಯದ ಶೇ.50 ರಷ್ಟು ನೀರನ್ನು ತುಂಬಿಸಲು ಉದ್ದೇಶಿಸಿ ರೂಪಿಸಲಾಗಿದೆ. ಯೋಜನೆಯ ಅಂದಾಜು ಮೊತ್ತ ರೂ.21,473.67 ಕೋಟಿಗಳು.

ಪ್ರಥಮ ಹಂತದ ಕಾಮಗಾರಿಗಳು: ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡುವ (ಪ್ಯಾಕೇಜ್-1) ಕಾಮಗಾರಿಯು ಪ್ರಗತಿಯಲ್ಲಿದ್ದು, ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ 29.90 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡುವ (ಪ್ಯಾಕೇಜ್-2) ಮತ್ತು ಅಜ್ಜಂಪುರ ಸುರಂಗ ನಿರ್ಮಾಣ ಮಾಡುವ (ಪ್ಯಾಕೇಜ್-3) ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದ ಮೂಲಕ 2019-2020ನೇ ಸಾಲಿನಿಂದ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗಿರುತ್ತದೆ.

ಎರಡನೇ ಹಂತದ ಕಾಮಗಾರಿಗಳು: ಕಾಲುವೆ ನಿರ್ಮಾಣ ಕಾಮಗಾರಿಗಳಡಿ ಬರುವ ತರೀಕೆರೆ ಏತ ನೀರಾವರಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಚಿತ್ರದುರ್ಗ ಶಾಖಾ ಕಾಲುವೆಯ ಒಟ್ಟು 134.597 ಕಿ.ಮೀ ಕಾಲುವೆ ಕಾಮಗಾರಿಯ ಪೈಕಿ 133.137 ಕಿ.ಮೀ ಕಾಲುವೆ ಅಗೆತ (120.488 ಕಿ.ಮೀ ಸಿ.ಬಿ.ಎಲ್ ವರೆಗೆ ಕಾಲುವೆ ಅಗೆತ) ಹಾಗೂ 104.921 ಕಿ.ಮೀ ಕಾಲುವೆ ಲೈನಿಂಗ್ ಕಾಮಗಾರಿಗಳು ಮತ್ತು ತುಮಕೂರು ಶಾಖಾ ಕಾಲುವೆಯ ಒಟ್ಟು 159.684 ಕಿ.ಮೀ. ಕಾಲುವೆ ಕಾಮಗಾರಿಯ ಪೈಕಿ 79.735 ಕಿ.ಮೀ ಕಾಲುವೆ ಅಗೆತ, 42.175 ಕಿ.ಮೀ ಸಿ.ಬಿ.ಎಲ್ ವರೆಗೆ ಕಾಲುವೆ ಅಗೆತ ಹಾಗೂ 34.255 ಕಿ.ಮೀ ಕಾಲುವೆ ಲೈನಿಂಗ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ.

ಸೂಕ್ಷ್ಮ ನೀರಾವರಿ: ಚಿತ್ರದುರ್ಗ ಶಾಖಾ ಕಾಲುವೆಯಡಿ 40749 ಹೆಕ್ಟೇರ್, ತುಮಕೂರು ಶಾಖಾ ಕಾಲುವೆಯಡಿ 84900 ಹೆಕ್ಟೇರ್ ಮತ್ತು ಜಗಳೂರು ಶಾಖಾ ಕಾಲುವೆಯಡಿ 13200 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳನ್ನು 14 ಪ್ಯಾಕೇಜ್ಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ. ಚಿತ್ರದುರ್ಗ ಶಾಖಾ ಕಾಲುವೆಯಡಿ ಬಾಕಿ ಉಳಿದ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಕಾಮಗಾರಿಗಳನ್ನು ಟೆಂಡರ್ ಮುಖಾಂತರ ಕೈಗೆತ್ತಿಕೊಳ್ಳಲು ಕ್ರಮ ಜರುಗಿಸಲಾಗುತ್ತಿದೆ.
ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಕೂರು, ಪಾವಗಡ, ಚಿಕ್ಕನಾಯಕನಹಳ್ಳಿ, ಶಿರಾ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಕೆರೆ ತುಂಬಿಸುವ ಕಾಮಗಾರಿಗಳನ್ನು 10 ಪ್ಯಾಕೇಜ್ ಗಳಲ್ಲಿ ಕೈಗೆತ್ತಿಕೊಂಡಿದ್ದು, ಇವು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by