ಕನ್ನಡ ನಾಡು | Kannada Naadu

ಅತಿಥ್ಯ ರತ್ನ ಮತ್ತು ಉದ್ಯಮ ರತ್ನ' ಪ್ರಶಸ್ತಿ ಪ್ರಧಾನ ಮಾಡಿದ ರಾಜ್ಯಪಾಲರು

30 May, 2025

 


ಬೆಂಗಳೂರು : ಕರ್ನಾಟಕ ರಾಜ್ಯ ಹೋಟೆಲ್‍ಗಳ ಸಂಘದ 70 ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಹೊಟೇಲ್ ಅಸೋಸಿಯೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಹೋಟೆಲ್ ಉದ್ಯಮದಲ್ಲಿ ಸಾಧನೆ ಮಾಡಿದ ಗಣ್ಯರಿಗೆ 'ಅತಿಥ್ಯ ರತ್ನ ಮತ್ತು ಉದ್ಯಮ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ರಾಜ್ಯ ಮತ್ತು ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಪ್ರಗತಿಯಲ್ಲಿ ಹೋಟೆಲ್ ವ್ಯವಹಾರವು ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಈ ಉದ್ಯಮವು ಉದ್ಯೋಗ ಸೃಷ್ಟಿಸುವ, ವಿದೇಶಿ ವಿನಿಮಯಗಳಿಸುವ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಬೆಂಬಲಿಸುವ ಮೂಲಕ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುತ್ತಿದೆ" ಎಂದರು.

"ಹೋಟೆಲ್ ವ್ಯವಹಾರವು ಕಾರ್ಮಿಕರನ್ನು ಹೆಚ್ಚಾಗಿ ಅವಲಂಬಿಸಿರುವ ವಲಯವಾಗಿದ್ದು, ಹೆಚ್ಚಿನ ಸಂಖ್ಯೆಯ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಸ್ಥಳೀಯ ರೈತರು, ಕುಶಲಕರ್ಮಿಗಳು, ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರ ಉತ್ಪನ್ನಗಳು ಮತ್ತು ಸೇವೆಗಳನ್ನು ಹೋಟೆಲ್‍ಗಳು ಬಳಸಿಕೊಳ್ಳುತ್ತವೆ, ಇದರಿಂದಾಗಿ ವಿವಿಧ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಹೋಟೆಲ್ ಉದ್ಯಮವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶಾಶ್ವತ ಉದ್ಯೋಗದ ಮೂಲವಾಗಿದೆ. ಇದರೊಂದಿಗೆ, ಇದು ಮಹಿಳೆಯರು ಮತ್ತು ಯುವಕರಿಗೆ ಸ್ವ-ಉದ್ಯೋಗ ಮತ್ತು ವೃತ್ತಿ ಅಭಿವೃದ್ಧಿ ಅವಕಾಶಗಳನ್ನು ಸಹ ಒದಗಿಸುತ್ತಿದೆ. ಈ ಉದ್ಯಮವು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಆರ್ಥಿಕ ವೈವಿಧ್ಯತೆಯ ಪ್ರಬಲ ಮಾಧ್ಯಮವಾಗಿದೆ. ಹೋಟೆಲ್ ವ್ಯವಹಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಸಾಮಾಜಿಕ ಸೇರ್ಪಡೆಗೆ ಕೊಡುಗೆ ನೀಡುತ್ತಿದೆ" ಎಂದು ತಿಳಿಸಿದರು.

"ಹೋಟೆಲ್ ವ್ಯವಹಾರವು ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿದ್ದು, ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಪ್ರವಾಸವನ್ನು ಆಹ್ಲಾದಕರ ಮತ್ತು ಆರಾಮದಾಯಕವಾಗಿಸಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ಸಂಪ್ರದಾಯಗಳನ್ನು ಅವರಿಗೆ ಪರಿಚಯಿಸಲು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ ಹೋಟೆಲ್ ವ್ಯವಹಾರವು ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉತ್ತೇಜಿಸುತ್ತಿದೆ ಮತ್ತು ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (GSDP) ಶೇ. 14.8 ರಷ್ಟು ಕೊಡುಗೆ ನೀಡುತ್ತಿದೆ ಮತ್ತು 30 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ಒದಗಿಸುತ್ತಿದೆ. ಹೋಟೆಲ್ ವ್ಯವಹಾರದ ವಿಸ್ತರಣೆಯು ಮೂಲಸೌಕರ್ಯಗಳಾದ ರಸ್ತೆಗಳು, ಸಾರಿಗೆ ಮತ್ತು ಸಂವಹನ ಸೇವೆಗಳ ಅಭಿವೃದ್ಧಿಗೆ ಕಾರಣವಾಗುತ್ತಿದೆ, ಇದು ಒಟ್ಟಾರೆ ರಾಜ್ಯದ ಪ್ರಗತಿಗೆ ಸಹಾಯ ಮಾಡುತ್ತಿದೆ" ಎಂದು ಹೇಳಿದರು.

"ಕರ್ನಾಟಕದಲ್ಲಿ ಹೋಟೆಲ್ ವ್ಯವಹಾರವು ನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿಯೂ ವಿಸ್ತರಿಸುತ್ತಿದೆ. ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಪ್ರದೇಶಗಳಲ್ಲಿ ಹೋಂಸ್ಟೇಗಳು ಮತ್ತು ಬೊಟಿಕ್ ಹೋಟೆಲ್‍ಗಳು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿವೆ. ಇದರಿಂದಾಗಿ ಗ್ರಾಮೀಣ ಯುವಕರು ಸ್ವ-ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ದೀರ್ಘಾವಧಿಯಲ್ಲಿ, ಭಾರತದಲ್ಲಿ ಹೋಟೆಲ್ ವ್ಯವಹಾರ ಮತ್ತು ಪ್ರವಾಸೋದ್ಯಮ ಉದ್ಯಮದ ನಡುವಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವು ಹೆಚ್ಚುತ್ತಿದೆ, ಕಾಲಾನಂತರದಲ್ಲಿ ಹೆಚ್ಚಿನ ಹೋಟೆಲ್‍ಗಳ ಅಗತ್ಯವಿರುತ್ತದೆ. ಹೋಟೆಲ್ ಉದ್ಯಮ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಂದು ಪ್ರಮಾಣಿತ ಬಜೆಟ್ ಮತ್ತು ಮಧ್ಯಮ-ಮಾರುಕಟ್ಟೆ ಹೋಟೆಲ್‍ಗಳ ಅವಶ್ಯಕತೆಯಿದೆ. ಇದಕ್ಕಾಗಿ ನಾವು ಹೋಟೆಲ್ ಉದ್ಯಮ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿರುವ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ ಮತ್ತು ಕರ್ನಾಟಕ ಪ್ರವಾಸೋದ್ಯಮ ನೀತಿಯ ಲಾಭವನ್ನು ಪಡೆದುಕೊಳ್ಳಬೇಕು" ಎಂದು ತಿಳಿಸಿದರು.

"ಕರ್ನಾಟಕ ರಾಜ್ಯ ಹೋಟೆಲ್ ಸಂಸ್ಥೆಯು ಕಳೆದ 70 ವರ್ಷಗಳಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ವಲಯವನ್ನು ಒಗ್ಗೂಡಿಸುವ ಮೂಲಕ, ಹೋಟೆಲ್ ಉದ್ಯಮದ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕ, ನೀತಿ ಮಧ್ಯಸ್ಥಿಕೆಗಳು, ತೆರಿಗೆ ವ್ಯವಸ್ಥೆ, ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ ಮತ್ತು ಕೆಲಸದ ಸಮಯವನ್ನು ರಕ್ಷಿಸುವ ಮೂಲಕ ಮತ್ತು ಕರ್ನಾಟಕ ರಾಜ್ಯದಲ್ಲಿ ಹೋಟೆಲ್ ಉದ್ಯಮಕ್ಕೆ ಹೊಸ ದಿಕ್ಕನ್ನು ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಸಂತಸವಾಗಿದೆ. ಈ ಸಂಸ್ಥೆ "ಅತಿಥಿ ರತ್ನ" ಮತ್ತು "ಉದ್ಯಮ ರತ್ನ" ದಂತಹ ಪ್ರಶಸ್ತಿಗಳ ಮೂಲಕ, ಹೋಟೆಲ್ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಗೌರವಿಸುವ ಶ್ಲಾಘನೀಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ದಿನ ಪ್ರಶಸ್ತಿ ಸ್ವೀಕರಿಸಿದ ಸಾಧಕರ ಸೇವೆ ನಿರಂತರವಾಗಿರಲಿ" ಎಂದು ಆಶಿಸುತ್ತೇನೆಂದರು.
ಆದಿಚುಂಚುನಗಿರಿ ಮಠದ ಮಹಾಸ್ವಾಮಿಗಳಾದ ಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಶಾಸಕರಾದ ಸನ್ಮಾನ್ಯ ಡಾ. ಅಶ್ವತ್ಥ ನಾರಾಯಣ್, ಕರ್ನಾಟಕ ರಾಜ್ಯ ಹೋಟೆಲ್‍ಗಳ ಸಂಘದ ಅಧ್ಯಕ್ಷರಾದ ಜಿ.ಕೆ. ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by