ಬೆಂಗಳೂರು: ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕರೆ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತದೆ. ಸರ್ಕಾರಿ ಶಾಲೆಗಳಲ್ಲೂ ಸಹ ಅತ್ಯುತ್ತಮ ಶಿಕ್ಷಣ ನೀಡುವುದು ಸರ್ಕಾರದ ಗುರಿ. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಬರೀ ಜ್ಞಾನ ಕೊಡುವ ಕ್ಷೇತ್ರವಲ್ಲ ಅದು ವ್ಯಕ್ತಿತ್ವ ರೂಪಿಸುತ್ತದೆ ಎನ್ನುವ ಉದ್ದೇಶದಿಂದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಎರಡು ವರ್ಷಗಳಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಲ್ಲರಿಗೂ ಸಮಾನ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಇಂದು ಆಡುಗೋಡಿ ಪಟೇಲ್ ಮುನಿಚಿನ್ನಪ್ಪ ಪ್ರೌಢ ಶಾಲೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಪ್ರಾರಂಭೊತ್ಸವ 2025-26 ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮಕ್ಕಳೊಂದಿಗೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರತಿಯೊಬ್ಬರಿಗೂ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು.
ಶಿಕ್ಷಣ ಪಡೆದರೆ ಜ್ಞಾನ ವಿಕಾಸವಾಗುವುದರ ಜೊತೆಗೆ ದೇಶವು ಮುನ್ನಡೆಯುತ್ತದೆ. ಎಲ್ಲರೂ ಶಿಕ್ಷಿತರಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ನಡೆಯುವುದರ ಜೊತೆಗೆ ಇತರರಿಗೂ ಮಾದರಿಯಾಗಬೇಕು. ನಾವು ಹುಟ್ಟಿದ ಮೇಲೆ ಸಮಾಜ ಏನು ಮಾಡಿತು ಅನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಅನ್ನುವುದು ಮುಖ್ಯ. ಉದಾಹರಣೆಗೆ ಡಾ: ಬಿ.ಆರ್.ಅಂಬೇಡ್ಕರ್ ಅವರು ದಲಿತ ಸಮದಾಯದಲ್ಲಿ ಹುಟ್ಟಿದ ದೇಶ ಕಂಡ ಮಹಾನ್ ವಿದ್ವಾಂಸರಲ್ಲಿ ಒಬ್ಬರು. ಆದ್ದರಿಂದ ಪ್ರತಿಯೊಬ್ಬರಿಗೂ ಅವಕಾಶ ಸಿಕ್ಕಿದರೆ ಎಲ್ಲರೂ ಪ್ರತಿಭಾವಂತರಾಗಲು ಸಾಧ್ಯ ಎಂದರು.
ಸರ್ಕಾರಿ ಶಾಲೆಯಲ್ಲಿ ಓದಿ 100ಕ್ಕೆ 100 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಇಂದು ಸನ್ಮಾನ ಮಾಡಿದ್ದೇವೆ. ಎಲ್ಲರಲ್ಲಿಯೂ ಸಾಮಥ್ರ್ಯವಿದೆ. ಸಮಾನ ಅವಕಾಶ ಸಿಕ್ಕಿದರೆ ಪ್ರತಿಯೊಬ್ಬರು ತಮ್ಮ ಸಾಮಥ್ರ್ಯ ಹೊರಹಾಕಲು ಸಾಧ್ಯವಾಗುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕಲಿತ ವಿದ್ಯೆಯಿಂದ ನಮ್ಮ ದೇಶಕ್ಕೆ ವಿಶ್ವದಲ್ಲಿಯೇ ಎಲ್ಲರಿಗೂ ಮಾದರಿಯಾಗುವಂತಹ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಲು ಸಾಧ್ಯವಾಯಿತು. ಅವರು ಹಾಕಿಕೊಟ್ಟಿರುವ ಸಂವಿಧಾನದ ರೀತಿಯಲ್ಲಿ ಸರ್ಕಾರ ಮತ್ತು ನಾವು ನಡೆಯಬೇಕು ಎನ್ನುವ ಬದ್ಧತೆಯಿಂದ ಇಂದು ನಾವು ಪ್ರತೀ ಶಾಲೆಯಲ್ಲೂ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಲಾಗುತ್ತದೆ. 1ನೇ ತರಗತಿಯ ರಾಕೇಶ್ ಎಂಬ ವಿದ್ಯಾರ್ಥಿ ಸಂವಿಧಾನದ ಪ್ರಸ್ತಾವನೆಯನ್ನು ಕರಗತ ಮಾಡಿಕೊಂಡು ಇಂದು ನಮ್ಮ ಮುಂದೆ ಬೋದಿಸಿದ್ದಾನೆ. ಇದು ಹೆಮ್ಮೆಯ ವಿಷಯ. ಅದೇ ರೀತಿ ಇಡೀ ದೇಶಕ್ಕೆ ಸಂವಿಧಾನ ಕರಗತÀವಾಗಬೇಕು. ಆಗ ಮಾತ್ರ ಸಮ-ಸಮಾಜ, ಸಮಾನತೆ ಸಾಧ್ಯ ಎಂದರು.
ಶಿಕ್ಷಕರ ಕೊರತೆ ಇದ್ದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ನಾನು 1994 ರಿಂದ 1999 ರಲ್ಲಿ ಹಣಕಾಸಿನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು 80 ರಿಂದ 90 ಸಾವಿರ ಶಿಕ್ಷಕರ ಕೊರತೆ ಇತ್ತು. ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರ ಕಾಲದಲ್ಲಿ ಪ್ರತಿ ವರ್ಷ 20 ಸಾವಿರ ಶಿಕ್ಷಕರಂತೆ, 5 ವರ್ಷದಲ್ಲಿ 1 ಲಕ್ಷ ಶಿಕ್ಷಕರನ್ನು ನೇಮಕ ಮಾಡಲಾಯಿತು. 2013 ರಿಂದ 2018ರ ವರೆಗೆ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಶಿಕ್ಷಕರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ. ಸಂವಿಧಾನ ಜಾರಿಯಾಗಿ 75ವರ್ಷ ಕಳೆದರೂ ಸಹ 100 ಕ್ಕೆ 100ರಷ್ಟು ಜನ ವಿದ್ಯಾವಂತರಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 13 ರಷ್ಟಿದ್ದ ಶಿಕ್ಷಣ ಇಂದು ಶೇ.80 ಕ್ಕಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ ಎಂದರು.
ಯಾರೂ ಶಾಲೆ ಬಿಟ್ಟು ಹೋಗಬಾರದು. ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಾಗಬೇಕು. ಖಾಸಗಿ ಶಾಲೆಗಳಲ್ಲಿ ದೊರೆಯುವಂತಹ ಶಿಕ್ಷಣದಂತೆ ಇಂದು ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇವೆ. ಮಕ್ಕಳಿಗೆ ಪ್ರತಿ ದಿನ ಹಾಲು ಮತ್ತು ಎರಡು ಮೊಟ್ಟೆ ನೀಡುತ್ತೇವೆ. ಮಕ್ಕಳಲ್ಲಿ ಶ್ರೀಮಂತರು ಮತ್ತು ಬಡವರು, ಕೆಳವರ್ಗ, ಮೇಲ್ವರ್ಗ ಎಂಬ ತಾರತಮ್ಯ, ಬೇಧಬಾವ ಹೋಗಲಾಡಿಸಲು ಷೂ, ಸಾಕ್ಸ್, ಪಠ್ಯ-ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಗುತ್ತಿದೆ ಎಂದರು.
ಕಂದಾಚಾರ-ಮೌಡ್ಯತೆ ಬಿಟ್ಟು ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಮಾತೃ ಭಾಷೆ, ಜಲ-ನೆಲದ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಕನ್ನಡ ಮತ್ತು ಆಂಗ್ಲ ಭಾಷೆ ಎರಡೂ ಭಾಷೆಯಲ್ಲೂ ಕಲಿಯಬೇಕು. ಎಲ್ಲಾ ಭಾಷೆ ಕಲಿತರೂ ಮಾತೃ ಭಾಷೆ ಬಿಟ್ಟು ಕೊಡಬಾರದು. ಕೆಲವು ಪೋಷಕರು ಆಂಗ್ಲ ಭಾಷೆಯಲ್ಲಿ ಕಲಿತರೆÀ ಮಾತ್ರ ಪ್ರತಿಭಾವಂತರಾಗುತ್ತಾರೆ ಎಂದು ಭಾವಿಸಿದ್ದರೆ ಅದು ಸುಳ್ಳು. ನಾನು ಸರ್ಕಾರಿ ಶಾಲೆಯಲ್ಲಿ ಓದಿ ಇಂದು ಮುಖ್ಯಮಂತ್ರಿಯಾಗಿದ್ದೇನೆ. ಯಾವ ಮಕ್ಕಳು ಸಹ ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಕರು ಎಚ್ಚರವಹಿಸಬೇಕು. ರಾಜ್ಯದಲ್ಲಿ ಒಟ್ಟು 841 ವಸತಿ ಶಾಲೆಗಳನ್ನು ತೆರೆಯಲಾಗಿದೆ. ಪ್ರತೀ ಹೋಬಳಿಯಲ್ಲಿಯೂ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ 625ಕ್ಕೆ 625 ಅಂಕ ಪಡೆದ 40 ವಿದ್ಯಾರ್ಥಿಗಳನ್ನು ಹಾಗೂ ಶೇ.100 ರಷ್ಟು ಫಲಿತಾಂಶ ಪಡೆದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ 06 ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ವಿದ್ಯಾ ವಿಕಾಸ ಯೋಜನೆಯಡಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಿದರು. ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಕಾರ್ಪೋರೇಟರ್ ಸಂಸ್ಥೆಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.
ಶಿಕ್ಷಿತರಾದಲ್ಲಿ ಎಲ್ಲಾ ರಾಜನಾಗಿ ರೂಪುಗೊಳ್ಳಬಹದು – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಚೆನ್ನಾಗಿ ಓದಿದರೆ ಎಲ್ಲಾ ರಂಗದಲ್ಲೂ ರಾಜನಾಗಿ ರೂಪುಗೊಳ್ಳಬಹುದು. ಇಲ್ಲವಾದರೆ ಸೇವಕನಾಗಿ ಇರಬೇಕಾಗುತ್ತದೆ. ಇವೆರಡರ ಆಯ್ಕೆ ನಿಮ್ಮದು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ ಎಂದು ಸರ್ಕಾರಿ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ಇಷ್ಟು ದಿನ ಮಕ್ಕಳು ರಜೆಯಲ್ಲಿ ನಲಿದಾಡಿದ್ದೀರಿ. ಈಗ ನಲಿಯುವುದರ ಜತೆಗೆ ಕಲಿಯಿರಿ ಎಂದು ಶಾಲೆಗಳಿಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೆÇೀಷಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ವರ್ಷ ಬಾಗಲಕೋಟೆ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು. ಈ ವರ್ಷ ಬೆಳಗಾವಿಯ ಬೈಲಹೊಂಗಲದ ದೇವಲಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರೂಪಾ ಪಾಟೀಲ್ ಅವರು ಅಗ್ರಸ್ಥಾನ ಪಡೆದಿದ್ದಾರೆ. 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಪೆÇೀಷಕರು ಹಾಗೂ ಶಿಕ್ಷಕರಿಗೆ ಸರ್ಕಾರ ಅಭಿನಂದಿಸುತ್ತಿದೆ ಎಂದರು.
ಬೀಜ ಬಿತ್ತಿದರೆ ಉತ್ತಮ ಬೆಳೆ ಬೆಳೆಯುತ್ತದೆ. ಜ್ಞಾನವನ್ನು ಬಿತ್ತಿದರೆ ಉತ್ತಮ ಪ್ರಜೆಗಳಾಗುತ್ತಾರೆ. ನೀವೆಲ್ಲರೂ ದೇಶದ ಆಸ್ತಿ ಎಂದು ನಮ್ಮ ಸರ್ಕಾರ ಹೆಚ್ಚಿನ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಣದ ಬೇರು ಕಹಿಯಾಗಿದ್ದರೂ ಫಲ ಸಿಕ್ಕಾಗ ಬಹಳ ಸಿಹಿಯಾಗಿರುತ್ತದೆ. ಬೇಸಿಗೆ ರಜೆ ಮುಗಿಸಿರುವ ನೀವು ಈಗ ಶಾಲೆಗೆ ಬಂದು ಕಲಿತು ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ಉದ್ಯೋಗ ಪಡೆಯುವುದಷ್ಟೇ ಕನಸಾಗಬಾರದು :
ನೀವು ಜೀವನದಲ್ಲಿ ಯಶಸ್ಸು ಸಾಧಿಸಲು ಕನಸು ಕಾಣಬೇಕು, ಕನಸು ಈಡೇರಿಸಿಕೊಳ್ಳಲು ಬಯಸಬೇಕು. ಕನಸಿಗಾಗಿ ಬದ್ಧತೆ ಹೊಂದಿರಬೇಕು, ಅದಕ್ಕಾಗಿ ಶಿಸ್ತು ಹೊಂದಿರಬೇಕು. ನಿಮ್ಮ ಕನಸು ಗಗನದೆತ್ತರಕ್ಕೆ ಇರಬೇಕು. ಉದ್ಯೋಗ ಪಡೆಯುವುದμÉ್ಟೀ ನಿಮ್ಮ ಕನಸಾಗಬಾರದು. ಬೇರೆಯವರಿಗೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ನೀವು ಬೆಳೆಯುವುದು ನಿಮ್ಮ ಕನಸಾಗಬೇಕು. ಈ ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರ್‍ಗಳು, ವೈದ್ಯರು, ಮಾನವ ಸಂಪನ್ಮೂಲ ತಯಾರಾಗುತ್ತಿರುವುದು ಕರ್ನಾಟಕ ರಾಜ್ಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಬೆಂಗಳೂರಿಗೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಐಟಿ ಬಿಟಿ, ಸಂಶೋಧನೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಬೆಂಗಳೂರು ಯಶಸ್ಸು ಸಾಧಿಸಿದೆ. ಕೃಷ್ಣರಾಜ ಒಡೆಯರ್ ಅವರ ಕಾಲದಿಂದ ವಿವಿಧ ಸರ್ಕಾರಗಳು ಇಲ್ಲಿ ಶೈಕ್ಷಣಿಕವಾಗಿ ಅಡಿಪಾಯ ಹಾಕಿದ ಪರಿಣಾಮ ನಮ್ಮ ರಾಜ್ಯ ಹಾಗೂ ಬೆಂಗಳೂರು ಈ ಸಾಧನೆ ಮಾಡಿದೆ ಎಂದು ತಿಳಿಸಿದರು.
ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಮಕ್ಕಳನ್ನು ದೇಶದ ನಿಧಿ ಎಂದು ಪರಿಗಣಿಸಿದ್ದರು, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ಈ ವಿದ್ಯೆಯನ್ನು ನೀವು ಸರಿಯಾದ ರೀತಿ ಧಕ್ಕಿಸಿಕೊಳ್ಳಬೇಕು. ಆಮೂಲಕ ನೀವು ದೇಶದ ಆಸ್ತಿಯಾಗಬೇಕು. ನಾನು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಪ್ರವೇಶಿಸಿದೆ. ಹೀಗಾಗಿ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಲಿಲ್ಲ. ನಾನು ವಿಧಾನಸೌಧಕ್ಕೆ ಹೋದಾಗ ಅಲ್ಲಿದ್ದ ಹಿರಿಯ ನಾಯಕರು ಭಾಷಣ ಕೇಳಿದ ನಂತರ ನನಗೆ ವಿದ್ಯೆ ಕೊರತೆ ಇದೆ ಎಂದು ಅರಿವಾಯಿತು. ಹೀಗಾಗಿ ನಾನು 47ನೇ ವಯಸ್ಸಿಗೆ ಮೈಸೂರು ಮುಕ್ತ ವಿವಿಯಲ್ಲಿ ಪದವಿ ಪಡೆದೆ. ನಾನು ಸಚಿವ ಸಂಪುಟ ಸದಸ್ಯನಾದಾಗ ಸಿಕ್ಕ ಸಂತೋಷಕ್ಕಿಂತ ಪದವಿ ಪಡೆದಾಗ ಹೆಚ್ಚು ಸಂತೋಷವಾಯಿತು” ಎಂದರು.
ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಲು 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡು ಶಿಕ್ಷಕರ ಕೊರತೆ ಇರುವ ಕಡೆ ಅವರಿಂದ ಶಿಕ್ಷಕರನ್ನು ಪೂರೈಸಲಾಗುವುದು. ಅನೇಕ ಸಂಸ್ಥೆಗಳು ಈಗಾಗಲೇ ಪಂಚಾಯ್ತಿ ಮಟ್ಟದಲ್ಲಿ ಈ ಶಾಲೆ ನಿರ್ಮಾಣಕ್ಕೆ ಮುಂದಾಗಿವೆ. ರಾಮಲಿಂಗಾರೆಡ್ಡಿ ಅವರು ಬಿಟಿಎಂ ಕ್ಷೇತ್ರದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಆಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು - ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಈ ವರ್ಷ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು. ಆದರೆ ಸ್ವಾತಂತ್ರ್ಯ ಬಂದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇಂದಿರಾಗಾಂಧಿ, ಜವಾಹರ ಲಾಲ್ ನೆಹರು ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡದ್ದರು. ರಾಜೀವ್ ಗಾಂಧಿ ಅವರು ಬ್ಲಾಕ್ ಬೋರ್ಡ್ ಕಾರ್ಯಕ್ರಮದಡಿ ಪ್ರತಿ ತರಗತಿಗೆ ಒಬ್ಬ ಶಿಕ್ಷಕರು ಇರಬೇಕು ಎಂದು ಜಾರಿ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕೆ ಪ್ರತಿ ವರ್ಷ ಸಹಸ್ರಾರು ಕೋಟಿ ಹಣ ಖರ್ಚು ಮಾಡುತ್ತಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಶಾಲೆ ಬಿಟ್ಟು ಹೋದವರನ್ನು ಮರಳಿ ಶಾಲೆಗೆ ಸೇರಿಸಲಾಗುತ್ತದೆ. ಎಲ್ಲಾ ಮಕ್ಕಳು ಚಿಕ್ಕಂದಿನಿಂದಲೇ ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದಿಂದ ಹೆಚ್ಚಿನ ಒತ್ತು - ಸಚಿವ ಮಧು ಬಂಗಾರಪ್ಪ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮಕ್ಕಳು ಶಾಲೆಗೆ ಓಡೋಡಿ ಬಂದು ಪ್ರವೇಶ ಪಡೆಯಬೇಕು ಎನ್ನುವ ಉದ್ದೇಶದಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತ ನೀಡಿದ್ದಾರೆ. 10 ತಿಂಗಳಲ್ಲಿ 13 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿ ಬಂದ ನಂತರ ಎರಡು ತಿಂಗಳಲ್ಲಿ ಸುಮಾರು 17 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಶಿಕ್ಷಣಕ್ಕೆ ಕೊರತೆಯಾಗಬಾರದು ಎಂದು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಮಕ್ಕಳಿಗೆ ಪೌಷ್ಠಿಕತೆಯ ಶಕ್ತಿ ತುಂಬಲು 10ನೇ ತರಗತಿಯವರೆಗೆ 2 ಮೊಟ್ಟ ನೀಡಲಾಗುವುದು. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಮತ್ತು ಚಿಕ್ಕಿ ನೀಡಲಾಗುವುದು ಎಂದರು.
ದೇಶದಲ್ಲೇ ಪ್ರಥಮ ಬಾರಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ 3 ಪರೀಕ್ಷೆ ಮಾಡಲಾಗುತ್ತಿದೆ. ಪಿಯುಸಿ ಪರೀಕ್ಷೆಯಲ್ಲಿ ಎರಡನೇ ಬಾರಿಗೆ ಶೇಕಡ 85ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದು, 70 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 2ನೇ ಪರೀಕ್ಷೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ಸದಸ್ಯರಾದ ರಾಮೋಜಿಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಆಯುಕ್ತರಾದ ಡಾ. ಕೆ.ವಿ ತ್ರಿಲೋಕಚಂದ್ರ, ಅಜೀಮ್‍ಜಿ ಪೌಂಡೇಷನ್ ಪ್ರತಿನಿಧಿಗಳು ಸೇರಿದಂತೆ ಶಾಲಾ ಶಿಕ್ಷಣ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu