ಬೆಂಗಳೂರು : ಮಕ್ಕಳಲ್ಲಿ ಕರೋನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚಗುತ್ತಿರುವ ಬಗ್ಗೆ ಮಾತನಾಡುತ್ತಾ, ಅಂಗನವಾಡಿ, ವಸತಿ ಶಾಲೆಗಳು ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳಿಗೆ ಶುದ್ಧವಾದ ಆಹಾರ, ನೀರು ಹಾಗೂ ಇತರ ಮೂಲಭೂತ ಸೌಕರ್ಯ ಒದಗಿಸಬೇಕು. ಮಕ್ಕಳಲ್ಲಿ ಕೆಮ್ಮು, ನೆಗಡಿ, ಜ್ವರ ಬಂದಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತನಾಡಿ ಕರೋನಾ ತೀವ್ರತೆ ಈಗ ಮೊದಲಿನಷ್ಟು ಇಲ್ಲ. ಆದರೂ ನಿರ್ಲಕ್ಷಿಸದೆ ಎಲ್ಲರೂ ಸ್ವಚ್ಛತೆ ಕಾಪಾಡಿ, ಆರೋಗ್ಯ ಸಮಸ್ಯೆ ಉಂಟಾದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಶಾಲಾ ಮಕ್ಕಳಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಬೇಕು. ಆರೋಗ್ಯ ಸಚಿವರು, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈಗಾಗಲೇ ಕರೋನಾ ನಿಯಂತ್ರಣ ಕುರಿತಾದ ಸಭೆ ನಡೆದಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ, ಶಶಿಧರ ಕೊಸಂಬೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu