ಕನ್ನಡ ನಾಡು | Kannada Naadu

ಯೋಧರ ಕ್ಯಾಂಟೀನ್‍ಗೆ ಅಬಕಾರಿ ಸುಂಕ ಇಲ್ಲ : ಮುಖ್ಯಮಂತ್ರಿಗಳಿಂದ ಮಹತ್ವದ ಘೋಷಣೆ

28 May, 2025

ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ ತಾಯಿಯಷ್ಟೇ ಸ್ಮರಣೀಯರು – ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿಷ್ಟ ರಕ್ಷಣೆ-ದುಷ್ಟರ ಸಂಹಾರದ ವಿಚಾರದಲ್ಲಿ ರಾಜಿ ಆಗಬಾರದು

ಬೆಂಗಳೂರು : ಸೈನಿಕರು, ರೈತರು, ವೈದ್ಯರು, ಶಿಕ್ಷಕರು ನಮ್ಮ ತಂದೆ ತಾಯಿಯಷ್ಟೇ ಸ್ಮರಣೀಯರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಇಂದು ಟೌನ್ ಹಾಲ್‍ನಲ್ಲಿ ಆಯೋಜಿಸಿದ್ದ ಬೃಹತ್ "ಜೈ ಹಿಂದ್ ಸಭಾ" ಕಾರ್ಯಕ್ರಮದಲ್ಲಿ ಭಾರತೀಯ ಯೋಧರ ಪರಂಪರೆಯನ್ನು ಶ್ಲಾಘಿಸಿ, ನಿವೃತ್ತ ಯೋಧ ಸಮೂಹವನ್ನು ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಪುರಸ್ಕರಿಸಿ ಮಾತನಾಡಿದ ಅವರು, ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ 140 ಕೋಟಿ ಭಾರತೀಯರ ಜವಾಬ್ದಾರಿ ಎಂದರು.

ಶಿಷ್ಟ ರಕ್ಷಣೆ-ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ತನ್ನ ಇತಿಹಾಸದಲ್ಲೇ  ಯಾವತ್ತೂ ರಾಜಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ ಎಂದು ಶ್ಲಾಘಿಸಿದರು.

ಯೋಧರ ಕ್ಯಾಂಟೀನ್‍ಗೆ ಅಬಕಾರಿ ಸುಂಕ ಹಾಕುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಘೋಷಣೆ ಮಾಡಿದರು. ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by