ಕನ್ನಡ ಚಳುವಳಿಯ ಕಟ್ಟಾಳು, ಕನ್ನಡ ಬಾವುಟ ಸೃಷ್ಟಿಸಿದ್ದ ಮ. ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ(100) ಇಂದು ನಮ್ಮನ್ನು ಅಗಲಿದ್ದಾರೆ. ನಾಡಿನ ಹಲವು ಕಾಲಘಟ್ಟದ ನೆನಪುಗಳ ಸಾಕ್ಷಿಪ್ರಜ್ಞೆಯಂತಿದ್ದ ಕಮಲಮ್ಮನವರ ಇನ್ನಿಲ್ಲ ಎನ್ನುವ ಸಂಗತಿ ಕನ್ನಡಾಭಿಮಾನಿಗಳ ಕಣ್ಣಂಚಲ್ಲಿ ನೀರು ತಂದಿದೆ.
ಕನ್ನಡ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಅವರು ಸುಭದ್ರ ಕನ್ನಡ ನಾಡಿನ ಕನಸು ಕಾಣುತ್ತಲೇ ಇದ್ದವರು. ತನ್ನ ಜೀವನ ಕೊನೆಯ ಕಾಲದಲ್ಲಿ ಬನಶಂಕರಿ ಸೇವಾಕ್ಷೇತ್ರದ ಶಾರದಾ ಕುಟೀರದಲ್ಲಿ ವಾಸವಾಗಿದ್ದರು. ಕಳೆದ ಹಲವು ವರ್ಷಗಳಿಂದ ಸಮಯ ಸಿಕ್ಕಾಗ ಅಮ್ಮನನ್ನು ಕಂಡು ಮಾತನಾಡಿಸಿಕೊಂಡು ಬರುತ್ತಿದ್ದೆ. ಕನ್ನಡಕ್ಕಾಗಿ ತನ್ನ ಸರ್ವಸ್ವವನ್ನೇ ಕಳೆದು ಕೊಂಡ ಕನ್ನಡದ ಮಹಾಸಂತ ಮ.ರಾಮಮೂರ್ತಿ ಅವರ ಧರ್ಮಪತ್ನಿ ಕಮಲಮ್ಮನವರು ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ನಂಜನಗೂಡಿನವರಾದ ಕಮಲಮ್ಮ ಅವರು ಕನ್ನಡದ ಖ್ಯಾತ ಕಾದಂಬರಿಗಾರ, ಕನ್ನಡದ ಸೇನಾನಿ ಮ. ರಾಮಮೂರ್ತಿ ಅವರನ್ನು ಮದುವೆಯಾಗಿ ಬಂದಾಗಿನಿಂದ ತನ್ನ ಗಂಡ ಸಾಗುತ್ತಿದ್ದ ದಾರಿಯಲ್ಲಿಯೇ ಕನ್ನಡಮ್ಮ ಸೇವೆಗೆ ಅಣಿಯಾಗಿ ನಿಂತಿದ್ದರು. 60ರ ದಶಕದ ಆರಂಭದಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹಳದಿ-ಕೆಂಪು ಕನ್ನಡ ಧ್ವಜದ ಕಲ್ಪನೆ ಮ. ರಾಮಮೂರ್ತಿ ಅವರದ್ದಾಗಿತ್ತು. ಅದನ್ನು ಅವರ ಧರ್ಮಪತ್ನಿ ಕಮಲಮ್ಮ ನವರು ಅರಿಶಿಣ-ಕುಂಕುಮದ ಬಣ್ಣದಲ್ಲಿಯೇ ಕನ್ನಡದ ಧ್ವಜ ಇರಬೇಕು ಎನ್ನುವ ದೂರದೃಷ್ಟಿಯಲ್ಲಿ ಅವರೇ ವಿನ್ಯಾಸಗೊಳಿಸಿದರು. ಅದನ್ನು ಜನಪ್ರೀಯಗೊಳಿಸುವಲ್ಲಿ ರಾಮಮೂರ್ತಿ ಅವರ ಶ್ರಮ ವರ್ಣನೆಗೂ ನಿಲಕದ್ದು. ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜವನ್ನು ಹಿಡಿದು ಮ. ರಾಮಮೂರ್ತಿ ಅವರು ಪ್ರತಿದಿನವೂ ನಗರದಾದ್ಯಂತ ಸಂಚರಿಸುತ್ತಿದ್ದರು.
ಕನ್ನಡ ಚಳವಳಿಗಳ ಹರಿಕಾರರು ಎಂದೆ ಪ್ರಸಿದ್ಧರಾಗಿರುವ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಗುರುತಿಸಿಕೊಂಡವರು ಮ.ರಾಮಮೂರ್ತಿ.ಗಾಂಧೀಜಿಯವರ ವಿಚಾರಧಾರೆಳಿಂದ ಮನಸೋತ ತಂದೆ ಸೀತಾರಾಮಶಾಸ್ತ್ರಿಗಳು ಚಳವಳಿ ಹಾದಿಹಿಡಿದರು.ಚಳುವಳಿ ಪ್ರಚಾರಕ್ಕಾಗಿ ‘ವೀರಕೇಸರಿ’ಯೆಂಬ ಪತ್ರಿಕೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದರು.ತಂದೆಯಿಂದ ಪ್ರೇರಿತರಾದ ರಾಮಮೂರ್ತಿಯವರು ಮುಂದೆ ಅದ್ವಿತೀಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳುವಳಿಯ ಅಧ್ವರ್ಯು, ಕನ್ನಡ ಸೇನಾನಿಯೆಂದೆ ಪ್ರಚಲಿತರಾದ ರಾಮಮೂರ್ತಿಗಳ ಬೆನ್ನಿಗೆ ನಿಂತ ಸಹಧರ್ಮಿಣಿಯೇ ಕಮಲಮ್ಮ.
ರಾಮಮೂರ್ತಿಗಳ ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಗೆ ಕೈಜೋಡಿಸಿದರು. ಇದಕ್ಕಾಗಿ ಇಂಗ್ಲಿಷ್ ಭಾಷೆಯನ್ನು ನಾರಾಯಣಸ್ವಾಮಿ ಅಯ್ಯರ್‌ರವರಿಂದ ಕಲಿತು, ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸುದ್ದಿ ಸಂಗ್ರಹಗಳನ್ನು ಪತ್ರಿಕೆಗಾಗಿ ಅನುವಾದಿಸತೊಡಗಿದರು. ವೀರಕೇಸರಿ ಪತ್ರಿಕೆಯು ಕಾರಣಾಂತರದಿಂದ ನಿಲ್ಲಿಸಿದ್ದರಿಂದ ರಾಮಮೂರ್ತಿಯವರು ಕಮಲಮ್ಮನವರ ಸ್ಪೂರ್ತಿಯಿಂದ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು.
ನಾಡಿನಾದ್ಯಂತ ಕನ್ನಡದ ವಾತಾವರಣ ಮೂಡಿಸುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಜ್ಯೋತ್ಸವದಂತ ಕಾರ್ಯಕ್ರಮಗಳನ್ನು ನಿರಂತರ ಮಾಡಿಕೊಂಡು ಬಂದಿದ್ದರು. ಕನ್ನಡ ಕಲಾವಿದರಿಗೆ ಮನ್ನಣೆ ದೊರಕಿಸಲು, ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಥಿಯೇಟರುಗಳು ದೊರೆಯುವಂತೆ ಮಾಡಲು, ಚಲನಚಿತ್ರ ನಿರ್ಮಾಣದಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವಂತಾಗಲು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ದೊರೆಯುವಂತಾಗಲು ‘ಕನ್ನಡ ಸಂಯುಕ್ತರಂಗ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಆ ಸಂಸ್ಥೆಗೆ ಸ್ವತಃ ಅ.ನ.ಕೃ. ರವರು ಅಧ್ಯಕ್ಷರಾಗಿ ಮ.ರಾಮಮೂರ್ತಿಗಳೆ ಕಾರ್ಯದರ್ಶಿಗಳಾಗಿದ್ದರು. ಆಗ ಕಮಲಮ್ಮನವರ ಸೂಚನೆಯ ಮೇರೆಗೆ ಕನ್ನಡ ಹೋರಾಟಗಾರರ ಮುಖವಾಣಿಯಾಗಿ ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ನಾಡಿಗೆ ನೀಡಿದ್ದರು.
ಕನ್ನಡದ ಮೊದಲ ಪತ್ತೆದಾರಿ ಕಾದಂಬರಿಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಮಮೂರ್ತಿ ಅವರು ಹಲವಾರು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಪ್ರತಿ ಕೃತಿಯ ಹಿಂದೆ ಅವರ ಧರ್ಮಪತ್ನಿಯ ಪ್ರೋತ್ಸಾಹ ಹಾಗೂ ಸಹಕಾರದ ಕಾರಣವೇ ತನ್ನ ಬರವಣಿಗೆ ಹೋರಾಟ ನಿಂತಿದೆ ಎನ್ನುತ್ತಿದ್ದರಂತೆ. ಈ ಬಗ್ಗೆ ಸ್ವತಃ ಕಮಲಮ್ಮನವರು ಸಿಕ್ಕಾಗಲೆಲ್ಲಾ ಹೇಳಿಕೊಳ್ಳುತ್ತಿದ್ದರು. ಅವರು ಬರೆದ ಕಾದಂಬರಿಗಳ ಕಥೆಯ ಬಗ್ಗೆ ಮಾತನಾಡಿದ ಅಮ್ಮ‘ಭಾಗ್ಯದ ಮದುವೆ’ ಯಲ್ಲಿ ಮಾಗಡಿ ಸಮೀಪದ ಸಾವನದುರ್ಗದಲ್ಲಿ ನಡೆದ ಘಟನೆಗಳನ್ನು ರಸವತ್ತಾಗಿ ವರ್ಣಿಸಿದ್ದರು. ಬಾಗೇಪಲ್ಲಿ ಪಾಳೆಗಾರಿಕೆಯ ಸುತ್ತ ಹೆಣೆದ ಕೋಟೆ ಕೊತ್ತಲಗಳ ವರ್ಣನೆಯನ್ನು ಮಾಡುತ್ತಾ, ‘ಪ್ರೇಮಮಂದಿರ’ ಕಾದಂಬರಿಯ ಕಥೆ ಹೇಳಿದ್ದರು. ಅದರ ಜೊತೆಗೆ ‘ಹಿಪ್ಪರಗಿ’ ಸೀಮೆ ಮತ್ತು ‘ಇಬ್ಬರು ರಾಣಿಯರು’ ಕಾದಂಬರಿ ರಚಿಸಿದ ಕಾಲ ಘಟ್ಟವನ್ನು ವಿವರಿಸಿದ್ದರು. ಶಿವಮೊಗ್ಗ ಜಿಲ್ಲೆಯ ‘ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತು ಬರೆದ ಕಾದಂಬರಿಯೇ ‘ರಾಜದಂಡ’ ಎಂದು ಕಮಲಮ್ಮ ವಿವರಿಸಿದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ.
ಕಮಲಮ್ಮ ಅವರನ್ನು ಕಂಡಾಗ ಅದೆನೋ ಮನಸ್ಸಿನಲ್ಲಿ ಮಾತೃಭಾವ ಬಂದು ಬಿಡುತ್ತಿತ್ತು. ಅವರ ಪಕ್ಕದಲ್ಲಿ ಕುಳಿತು ಗಂಟೆಗಟ್ಟಲೆ ಮಾತನಾಡಿದ ನೆನಪುಗಳು ಮಾಸುವುದಕ್ಕೆ ಸಾಧ್ಯವೇ ಇಲ್ಲ.೧೯೬೭ರ ಡಿಸೆಂಬರ್ ೨೫ರಂದು ನಡೆದ ಅವರ ಜೀವನದ ಕರಾಳ ದಿನ. ಅವರ ಪತಿ ಮ. ರಾಮಮೂರ್ತಿ ಅವರು ಬೆಂಗಳೂರು ಸಮೀಪದ ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ಬಾವಿ ತೋಡಿಸುತ್ತಿದ್ದರು. ಬಾವಿಯಲ್ಲಿ ನೀರು ಬಂದಿತೆಂಬ ಸುದ್ದಿಯಿಂದ ಸಂತಸಗೊಂಡು ಮಡದಿ ಕಮಲಮ್ಮಳಿಗೆ ಬಾವಿಯಲ್ಲಿ ನೀರು ಬಂದಿದೆ ಎಂದು ತಿಳಿಸಿ, ತಮ್ಮ ಮಕ್ಕಳಾದ ದಿವಾಕರ ಮತ್ತು ಮಂಜುನಾಥ ಅವರ ಜೊತೆ ಬಾವಿ ನೋಡುವುದಕ್ಕೆ ತೆರಳಿದ್ದರು. ಕಮಲಮ್ಮ ತಮ್ಮ ಗಂಡ - ಮಕ್ಕಳ ಮುಖ ನೋಡಿದ್ದು ಅದೇ ಕೊನೆ. ಮ. ರಾಮಮೂರ್ತಿಯವರು ತನ್ನ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಮೂವರೂ ದುರ್ಮರಣಕ್ಕೀಡಾದರು. ಈ ಕರಾಳ ಘಟನೆ ಕಮಲಮ್ಮನ ಮನಸ್ಸಿನಲ್ಲಿ ಕೊನೆಯವರೆಗೂ ಅಚ್ಚಳಿಯದಂತೆ ಇತ್ತು.
ತನ್ನ ಗಂಡ - ಮಕ್ಕಳನ್ನು ಕಳೆದುಕೊಂಡ ದುಖಃದಲ್ಲಿ ಇದ್ದಅವರಿಗೆ ಕನ್ನಡ ನಾಡೆ ಮನೆಯಾಗಿತ್ತು. ಕನ್ನಡಿಗರೆಲ್ಲಾ ತಮ್ಮ ಮಕ್ಕಳಲ್ಲವೇ.. ? ಎನ್ನುವ ಪ್ರಶ್ನೆಯನ್ನು ಕೇಳುತ್ತಲೇ ತನ್ನ ಜೀವನದ ನೂರು ವರ್ಷ ಕಳೆದು ಬಿಟ್ಟಿದ್ದರು.
ತಮ್ಮ ಜೀವನದಲ್ಲಿ ಸದಾ ಕನ್ನಡ ಎನ್ನುವ ಜೀವ ಕಮಲಮ್ಮಅವರ ಕೊನೆಯ ಕಾಲದಲ್ಲಿ ಅವರಿಗೆ ವೈದ್ಯಕೀಯ ವೆಚ್ಚಕ್ಕೆ, ಆರ್ಥಿಕ ನೆರವಿಗೆ ಸರಕಾರ ಮುಂದೆ ಬಾರದೆ ಇರುವುದು ವಿಪರ್ಯಾಸವಾಗಿತ್ತು. ಕನ್ನಡ ಹೋರಾಟಗಾರರು, ಕನ್ನಡಾಭಿಮಾನಿಗಳು ಸೇರಿದಂತೆ ಕೆಲವೇ ಕೆಲವು ಜನರು ಅಮ್ಮನ ನೆರವಿಗೆ ನಿಂತಿದ್ದು ಇಲ್ಲಿ ಗಮನಿಸಲೇ ಬೇಕು. ಕಮಲಮ್ಮನವರನ್ನು ಸಾಂಸ್ಕೃತಿಕ ರೂವಾರಿಯಾಗಿ ನೇಮಿಸಬೇಕು ಎನ್ನುವ ಕೆಲವರ ಕನಸು ಕೊನೆಗೂ ಕನಸಾಗಿಯೇ ಉಳಿದುಕೊಂಡಿತು. ಇನ್ನೂ ಕೆಲವು ಸಂಘ ಸಂಸ್ಥೆಯವರು ನವೆಂಬರ್ ತಿಂಗಳಲ್ಲಿ ಕಮಲಮ್ಮನವರನ್ನು ಕಂಡು ಅವರಿಗೆ ಶಾಲು ಹಣ್ಣು ನೀಡಿ ಏನಾದರೂ ಕೈಲಾದ ಸಹಾಯ ಮಾಡಿ ಫೋಟೋ ಕ್ಲಿಕಿಸಿಕೊಂಡು ಭಾರಿ ಪ್ರಚಾರಪಡೆದವರ ಸಂಖ್ಯೆಯೂ ಕಡಿಮೆಯಿಲ್ಲ.
ಕನ್ನಡ ಎಂದು ಬದುಕಿದ ಹಿರಿಯ ಜೀವ ಇಂದು ತನ್ನ ನೂರನೇ ವರ್ಷದಲ್ಲಿ ನಮ್ಮನ್ನು ಅಗಲಿದ್ದಾರೆ. ಕನ್ನಡದ ಮಹಾನ್ ಸೇನಾನಿಯನ್ನು ರೂಪಿಸುವಲ್ಲಿ ಸಿಂಹಪಾಲು ವಹಿಸಿದ ಸಿಂಹಿಣಿ ಇಂದು ಕಣ್ಣು ಮುಚ್ಚಿದ್ದಾರೆ. ಅವರು ಪಟ್ಟ ಕಷ್ಟ, ದುಃಖ,ದುಮ್ಮಾನ ನೋವು ಯಾವುದೇ ಕನ್ನಡಿಗರಿಗೆ ಬರಬಾರದು ಎನ್ನುವ ಮಹಾತಾಯಿಗೊಂದು ಅಂತಿಮ ನಮನ. ಅಮ್ಮಾ ನಿನ್ನ ಮಾತುಗಳು ಎಂದಿಗೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಲೇ ಇರುವುದು.
ಶ್ರೀನಾಥ್ ಜೋಶಿ ಸಿದ್ದರ
9060188081
Publisher: ಕನ್ನಡ ನಾಡು | Kannada Naadu