ಕನ್ನಡ ನಾಡು | Kannada Naadu

ಮೂರು ದಿನಗಳ ಸಾವಯವ ಮಾವು ಮತ್ತು ಹಲಸಿನ ಮೇಳ ಸಾರ್ವಜನಿಕರು ಮೇಳದ ಸದುಪಯೋಗಪಡೆದುಕೊಳ್ಳಿ – ಡಾ.ಶಮ್ಲಾ ಇಕ್ಬಾಲ್

23 May, 2025

 

ಬೆಂಗಳೂರು, : ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆಯು ಜೈವಿಕ್ ಕೃಷಿಕ್ ಸೊಸೈಟಿಯ ಸಹಯೋಗದಲ್ಲಿ ಲಾಲ್ ಬಾಗ್ ನ ಡಾ.ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ಇಂದಿನಿಂದ 25 ರವರೆಗೆ ಮೂರು ದಿನಗಳ ಕಾಲ ಸಾವಯವ ಮಾವು ಮತ್ತು ಹಲಸಿನ ಮೇಳ ಆಯೋಜಿಸಲಾಗಿದ್ದು, ಸಾರ್ವಜನಿಕರು ಮೇಳದ ಸದುಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಬಾಲ್  ಅವರು ತಿಳಿಸಿದರು.

ಇಂದು ಲಾಲ್‍ಬಾಗ್‍ನ ಡಾ.ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಸಾವಯವ ಮಾವು ಮತ್ತು ಹಲಸಿನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ವಿವಿಧ ಭಾಗಗಳಿಂದ ಸಾವಯವ ಮಾವು ಮತ್ತು ಹಲಸಿನ ಬೆಳೆಗಾರರು ವೈವಿಧ್ಯಮಯ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದ್ದು, ಈ ಮೇಳದಿಂದ ಕೃಷಿಕರಿಗೂ ಹಾಗೂ ಸಾರ್ವಜನಿಕರು ಅನುಕೂಲವಾಗುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ.

ಸಾವಯವ ಮಾವು ಮತ್ತು ಹಲಸು ಬಳಸುವುದರಿಂದ ಯಾವುದೇ ರೀತಿ ವ್ಯತಿರಿಕ್ತ ಪರಿಣಾಮಗಳು ಬೀರುವುದಿಲ್ಲ. ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ಮಾವಿನ ತಳಿ “ಮಿಯಾಜಕಿ ಮಾವು” ಪ್ರದರ್ಶನದಲ್ಲಿದ್ದು, ಅಪರೂಪವಾಗುತ್ತಿರುವ ಅಪ್ಪೆ ಮಿಡಿ, ಟಿಪ್ಪುಸುಲ್ತಾನ ಕಾಲದ ಮಾವಿನ ತಳಿಗಳ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಇದೇ ರೀತಿ ಹಲಸಿನ ಮಹತ್ವ ಮತ್ತು ವೈವಿಧ್ಯತೆಯನ್ನು ಸಹ ಈ ಹಬ್ಬದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದರು.

ಸಾವಯವ ವಿವಿಧ ರೀತಿಯ ಮಾವಿನ ಹಣ್ಣು, ಹಲಸಿನ ಹಣ್ಣನ್ನು ಸಾರ್ವಜನಿಕರಿಗೆ ತಲುಪಿಸುವ ಹಾಗೂ ಕೃಷಿ ಸಂಬಂಧಿ ವಸ್ತುಗಳಿಗೆ ಒಂದೇ ಸೂರಿನಡಿ ಮಾರುಕಟ್ಟೆಯನ್ನು ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ, ಕೃಷಿ ಉತ್ಪನ್ನ / ಪರಿಕರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 1.5 ಲಕ್ಷಕ್ಕೂ ಮಿಗಿಲಾದ ಸಹಜ ಕೃಷಿಕರಿದ್ದು ಅವರುಗಳು ಬೆಳೆಯುವ ಹಣ್ಣು ತರಕಾರಿ, ದವಸ ಧಾನ್ಯಗಳು ಮತ್ತು ಬೆಲ್ಲ, ತೈಲ ಇತ್ಯಾದಿ ಮೌಲ್ಯವರ್ಧಿತ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತೋಟಕಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ವಿಶ್ವನಾಥ್, ಶ್ರೀಮತಿ ಹೇಮಾ ಹಾಗೂ ಸಹಾಯಕ ನಿರ್ದೇಶಕರಾದ ಪರಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by